ಹೀಗೆಯೇ ಒಂದಷ್ಟು: ವ್ಯಕ್ತಿತ್ವಗಳ ಸೂಕ್ಷ್ಮಗಳನ್ನು ಮುಟ್ಟುವ ಬರಹಗಳು

Update: 2017-03-24 18:42 GMT

 ಲಂಕೇಶ್, ಅನಂತಮೂರ್ತಿ, ನಾಗರಾಜ್ ಕಾಲಘಟ್ಟದ ಕೊನೆಯ ಕೊಂಡಿಯಂತಿರುವ ಶೂದ್ರ ಶ್ರೀನಿವಾಸ್, ಹೆಣ್ಣು ಮನಸ್ಸಿನಿಂದ ಬದುಕನ್ನು ಗ್ರಹಿಸುತ್ತಾ ಬಂದವರು, ಬರೆಯುತ್ತಾ ಬಂದವರು. ಪತ್ರಕರ್ತರಾಗಿ, ಅಂಕಣಕಾರರಾಗಿ ಈಗಲೂ ಸಕ್ರಿಯವಾಗಿದ್ದುಕೊಂಡು ಬರೆಯುವ ಶೂದ್ರ ಅವರ ಇನ್ನೊಂದು ಮುಖ್ಯ ಕೃತಿ ‘ಹೀಗೆಯೇ ಒಂದಷ್ಟು’ ಅಂಕಣ ಬರಹಗಳು. ಮುನ್ನುಡಿಯಲ್ಲಿ ಹೇಳುವಂತೆ ಸುಂದರವಾದದ್ದನ್ನು, ಬದುಕಿಗೆ ಬೇಕಾದದ್ದನ್ನು ಕಾಣುವುದು ಹೀಗೆಯೇ ಇರಬೇಕಲ್ಲವೇ? ಎನ್ನುವಂತೆ ಒಟ್ಟು ಇಲ್ಲಿಯ ಬರಹಗಳ ಗುಣ ಎದ್ದು ಕಾಣುತ್ತದೆ. ಹಲವು ವಿಶಿಷ್ಟ ವ್ಯಕ್ತಿತ್ವಗಳನ್ನು ಶೂದ್ರರು ಗುರುತಿಸಿ ಅವರನ್ನು ಮಮತೆಯ ಕಣ್ಣುಗಳಲ್ಲಿ ಕಟ್ಟಿಕೊಡುತ್ತಾರೆ ಶೂದ್ರ. ಗೋರೂರು, ಮೂರ್ತಿರಾಯರು, ಡಾವಿನ್ಸಿ, ರಾಜಾಜಿ, ಬಿ. ವಿ. ಕಾರಂತ, ಖಾಸನೀಸ, ಮಾಸ್ತಿ, ದೇಸಾಯಿ...ಹೀಗೆ ಸೃಜನಶೀಲ ಜಗತ್ತನ್ನು ತಮ್ಮ ಬೊಗಸೆಯಲ್ಲಿ ತುಂಬಿಕೊಡುವ ಕೆಲಸ ಮಾಡುತ್ತಾರೆ. ಗೋರೂರರ ಸರಳತೆ ಮತ್ತು ಸಾಮಾನ್ಯತೆ, ಮೂರ್ತಿರಾಯರ ಬರಹ, ಬದುಕಿನ ಸೌಂದರ್ಯ, ಗಾಂಧಿಬಜಾರು ಮತ್ತು ಸಾಹಿತ್ಯಲೋಕದ ಅದರ ನಂಟು, ವರ್ತಮಾನವನ್ನು ಕಾಯುತ್ತಿರುವ ಗಂಗೂಬಾಯಿಯವರ ಹಾಡು ಮತ್ತು ಬದುಕು, ಉದಯರವಿ ಕುವೆಂಪು ಅವರ ಮನೋಲೋಕದ ಕಡೆಗೆ ತೆರೆದ ಬಾಗಿಲ ವ್ಯಾಪಕತೆ, ಕಾಲಕ್ಕೆ ಮಹತ್ವ ಕೊಟ್ಟ ಕಾರಂತರ ವಿಶಿಷ್ಟ ವ್ಯಕ್ತಿತ್ವ, ಬೇಂದ್ರೆಯ ಸಾಧನ ಕೇರಿ, ಡಾವಿನ್ಸಿಯ ಭವ್ಯತೆ...ಶೂದ್ರರು ಬರೆಯುತ್ತಾ ಹೋದಂತೆ ನಾವು ಆ ಬೇರೆ ಬೇರೆ ವ್ಯಕ್ತಿತ್ವದೊಳಗೆ ಕಳೆದು ಹೋಗಿ ಬಿಡುತ್ತೇವೆ.
ತಮ್ಮ ಬರಹಗಳ ಮೂಲಕ ಕಾಲವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಶೂದ್ರರಿಗಿದೆ ಎನ್ನುವುದು ಪ್ರತೀ ಲೇಖನದಲ್ಲೂ ನಮ್ಮ ಗಮನಕ್ಕೆ ಬರುತ್ತದೆ. ಅಭಿನವ ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 172. ಮುಖಬೆಲೆ 150 ರೂ. ಆಸಕ್ತರು 94488 04905 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News