ಇದು ತ್ಯಾಜ್ಯ ನಿರ್ಮಿತ ಪಾರ್ಕ್

Update: 2017-03-26 18:32 GMT

ಇತ್ತೀಚೆಗೆ ಯಾರಾದರೂ ದಿಲ್ಲಿ ಪ್ರಯಾಣ ಮಾಡಿದ್ದರೆ, ಅತ್ತಿತ್ತ ಸುತ್ತಾಡಿದ್ದರೆ ಅವರಿಗೆ ಖಂಡಿತಾ ಈ ವಿಶೇಷ ಪಾರ್ಕ್‌ಗೆ ಒಮ್ಮೆ ಭೇಟಿ ನೀಡಿರುತ್ತಾರೆ. ಇದರ ಹೆಸರು ಪ್ರಕೃತಿ ಮೆಟ್ರೋ ಪಾರ್ಕ್. ಇಲ್ಲಿನ ಶಾಸ್ತ್ರಿ ಪಾರ್ಕ್ ಮೆಟ್ರೋ ನಿಲ್ದಾಣದ ಬಗಲಲ್ಲೇ ಈ ಪಾರ್ಕ್ ನಿರ್ಮಾಣವಾಗಿದೆ. ವಿಶೇಷವೆಂದರೆ, ದಿಲ್ಲಿ ಮೆಟ್ರೋ ರೈಲ್ವೆ ಕಾರ್ಪೊರೇಷನ್, ಮೆಟ್ರೋಗಾಗಿ ಕೆಲಸ ಮಾಡುತ್ತಿರುವಾಗ ವಿವಿಧೆಡೆಗಳಲ್ಲಿ ಉಳಿದ ಕಾಮಗಾರಿಯ ತ್ಯಾಜ್ಯವನ್ನೇ ಉಪಯೋಗಿಸಿ ಈ ಪಾರ್ಕ್‌ನ್ನು ನಿರ್ಮಿಸಲಾಗಿದೆ.

ವಿವಿಧ ಮೆಟ್ರೋ ಸೈಟುಗಳಲ್ಲಿದ್ದ ಸುಮಾರು 25 ಟನ್ನುಗಳಷ್ಟು ಗುಜರಿ ಉಪಯೋಗಿಸಿದ ಈ ಪಾರ್ಕ್ ನಿರ್ಮಾಣಕ್ಕೆ ಒಂಬತ್ತು ತಿಂಗಳ ಕಾಲಾವಧಿಯನ್ನು ತೆಗೆದುಕೊಳ್ಳಲಾಗಿದೆ. ಸುಮಾರು 10 ಎಕರೆ ವಿಸ್ತಾರವಿರುವ ಈ ಪಾರ್ಕ್‌ನಲ್ಲಿ ಸಭಾಂಗಣ, ಬಯಲು ರಂಗಮಂದಿರ, ಧ್ಯಾನತಾಣ, ಮಕ್ಕಳ ಆಟದ ಮೈದಾನ ಹಾಗೂ ವ್ಯಾಯಾಮ ಶಾಲೆಯನ್ನೂ ಒಳಗೊಂಡಿದೆ. ಇವೆಲ್ಲವನ್ನೂ ಸಾರ್ವಜನಿಕರ ಉಪಯೋಗಕ್ಕೆ ಬಳಸಬಹುದಾಗಿದೆ. ಜೊತೆಗೆ ಕಾರಂಜಿಯುಕ್ತ ಕೊಳ, ಮಳೆಕಾಡಿನ ಪ್ರತಿರೂಪವನ್ನೂ ಇಲ್ಲಿ ನಿರ್ಮಿಸಲಾಗಿದೆ.

ವಿಶೇಷವೆಂದರೆ, ಇಲ್ಲಿ ಎಲ್ಲವನ್ನೂ ಪರಿಸರ ಸ್ನೇಹಿಯಾಗಿ ರೂಪಿಸಲಾಗಿದೆ. ಚರಂಡಿ ಹಾಗೂ ಇತರ ಕಲುಷಿತ ನೀರಿನ ಮರುಬಳಕೆ ಮೂಲಕ ಇಲ್ಲಿನ ಉದ್ಯಾನವನದಲ್ಲಿನ ಗಿಡಗಳಿಗೆ ಅಗತ್ಯವಿರುವ ನೀರನ್ನು ಒದಗಿಸಲಾಗುತ್ತದೆ. ಜೊತೆಗೆ ಮಳೆ ನೀರು ಕೊಯ್ಲಿಗೆ ವ್ಯವಸ್ಥೆಯೂ ಇಲ್ಲಿದೆ. ಸಭಾಂಗಣದ ಮೇಲಿರುವ ಸೋಲಾರ್ ಪ್ಯಾನೆಲ್‌ಗಳ ಮೂಲಕ ಅಗತ್ಯವಿರುವ ವಿದ್ಯುತ್ ಉತ್ಪಾದನೆಯೂ ಸಾಧ್ಯವಾಗಿದೆ. ತರಗೆಲೆ ಹಾಗೂ ಕಳೆಹುಲ್ಲನ್ನು ಬಳಸಿಕೊಂಡು ನೈಸರ್ಗಿಕ ಗೊಬ್ಬರವನ್ನೂ ತಯಾರಿಸಲಾಗುತ್ತಿದ್ದು ಅದನ್ನು ಇಲ್ಲಿನ ಸಸ್ಯಗಳಿಗೆ ಹಾಕಲಾಗುತ್ತದೆ.

ದಕ್ಷಿಣ ಕೊರಿಯದ ಕೆಲವು ಕಲಾವಿದರ ಜೊತೆ ನಮ್ಮ ದೇಶದ ವಿವಿಧೆಡೆಯ ಕಲಾವಿದರು ಜೊತೆಗೂಡಿ ಇಲ್ಲಿ ತ್ಯಾಜ್ಯದಿಂದಲೇ ಹಲವು ಕಲಾಕೃತಿಗಳನ್ನೂ ರಚಿಸಿದ್ದಲ್ಲದೆ, ಸುಮಾರು 72 ಕಾರುಗಳನ್ನು ನಿಲ್ಲಿಸಬಲ್ಲ ಪಾರ್ಕಿಂಗ್ ವ್ಯವಸ್ಥೆಯನ್ನೂ ನಿರ್ಮಾಣ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News