ಮತ್ತೊಮ್ಮೆ ಕನ್ನಡಕ್ಕೆ ಅನ್ನಾ ಕರೆನಿನ
ಅನುವಾದವೆನ್ನುವುದು ಬಹುಸೂಕ್ಷ್ಮವಾದ ಕೆಲಸ. ಒಂದು ಭಾಷೆಯನ್ನು ಇನ್ನೊಂದು ಭಾಷೆಗೆ ತರುವುದಷ್ಟೇ ಅನುವಾದವಲ್ಲ. ಒಂದು ಸೃಜನಶೀಲ ಕೃತಿಯನ್ನು ಅನುವಾದಿಸುವಾಗ ಆ ಕೃತಿಯ ಜೀವಕ್ಕೆ ಧಕ್ಕೆಯಾಗದ ಹಾಗೆ ನೋಡುವ ಹೊಣೆಗಾರಿಕೆಗಳಿರುತ್ತವೆ. ಅದರ ಆತ್ಮದ ಜೊತೆಗೆಯೇ ಇನ್ನೊಂದು ಭಾಷೆಗೆ ಇಳಿಸಬೇಕು. ಇದೇ ಸಂದರ್ಭದಲ್ಲಿ ಒಂದು ದೇಶ, ಭಾಷೆ, ಸಂಸ್ಕೃತಿಯನ್ನು ತನ್ನ ಭಾಷೆಯಲ್ಲಿ ಓದುವಾಗ ಅವನಿಗದು ಅನ್ಯ ಅನ್ನಿಸದಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಅನುವಾದಕನಿಗಿದೆ. ಆದುದರಿಂದಲೇ, ಒಂದೇ ಕೃತಿ ಬೇರೆ ಬೇರೆ ಅನುವಾದಕರ ಮೂಲಕ ಬೇರೆ ಬೇರೆ ಅನುಭವಗಳನ್ನು ಕೊಡಬಹುದು. ಲಿಯೋ ಟಾಲ್‌ಸ್ಟಾಯ್ ಅವರ ‘ಅನ್ನಾ ಕರೆನಿನ’ ಜಗತ್ತಿನ ಮೂಲೆ ಮೂಲೆಗಳಿಗೆ ತಲುಪಿದ ಕಾದಂಬರಿ. ಕನ್ನಡದಲ್ಲೇ ಹಲವು ಬಾರಿ, ಹಲವು ಲೇಖಕರಿಂದ ಕೃತಿ ಅನುವಾದಗೊಂಡಿದೆ. ದಾಸ್ತಯೇವ್‌ಸ್ಟಿಯಿಂದ ‘ಒಂದಿನಿತೂ ಲೋಪಲ್ಲಿದ ಕಲೆ’ ಎಂದು ಬಣ್ಣಿಸಲ್ಪಟ್ಟ ಕಾದಂಬರಿ ಅನ್ನಾ ಕರೆನಿನ. ‘ವಾಸ್ತವವಾದಿ ಕಾದಂಬರಿಯ ಶಿಖರ’ವೆಂದು ಕರೆಯಲ್ಪಡುವ ಈ ಕಾದಂಬರಿಯು 19ನೆ ಶತಮಾನದ ಊಳಿಗಮಾನ್ಯ ರಷ್ಯಾದ ಹಿನ್ನೆಲೆಯಲ್ಲಿ ಸಂತ ಪೀಟರ್ಸ್‌ಬರ್ಗ್‌ನ ಕುಲೀನ ಮನೆತನಕ್ಕೆ ಸೇರಿದ ಅನ್ನಾ ಕರೆನಿನಳ ಬದುಕಿನ ಸೌಂದರ್ಯ, ಘನತೆ ಹಾಗೂ ಬಿಕ್ಕಟ್ಟುಗಳನ್ನು ನಮ್ಮ ಮುಂದಿಡುತ್ತದೆ. ಈ ಕಾದಂಬರಿಯನ್ನು ಇದೀಗ ತೇಜಶ್ರೀ ಅವರು ಮತ್ತೆ ಕನ್ನಡಕ್ಕೆ ತಂದಿದ್ದಾರೆ.
ಅನ್ನಾ ಕರೆನಿನ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ರೀತಿಯ ಅನುಭವ ಕೊಡುವ ಕೃತಿ. ಆದುದರಿಂದಲೇ ಅದರ ಮರು ಓದು ಇಂದಿನ ಅಗತ್ಯವಾಗಿದೆ. ತೇಜಶ್ರಿ ಅವರ ಅನುವಾದವೂ ಕೃತಿಯನ್ನು ಇನ್ನಷ್ಟು ಆಪ್ತವನ್ನಾಗಿಸುತ್ತದೆ. ಈ ಕೃತಿಯನ್ನು ಹೊರತಂದಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಉದ್ದೇಶವೂ ಇದೇ ಆಗಿದೆ. ಓದುಗರ ತಲೆಮಾರುಗಳು ಬದಲಾದಂತೆ ವಿಶ್ವ ಸಾಹಿತ್ಯದ ವಿಶಿಷ್ಟ ಕೃತಿಗಳನ್ನು ಬೇರೆ ಬೇರೆ ಬಗೆಯಲ್ಲಿ ಮರು ನಿರೂಪಿಸಬೇಕಾದ ಅಗತ್ಯವನ್ನು ಮನಗಂಡು ಇಂತಹ ಕೃತಿಗಳನ್ನು ಮತ್ತೆ ಅನುವಾದಿಸುವ, ಪ್ರಕಟಿಸುವ ಕೆಲಸಕ್ಕೆ ಪ್ರಾಧಿಕಾರ ಇಳಿದಿದೆ. ಅವರ ಪ್ರಯತ್ನ ‘ಅನ್ನಾ ಕರೆನಿನ’ ಕಾದಂಬರಿಯಲ್ಲಂತೂ ಯಶಸ್ವಿಯಾಗಿದೆ. ತೇಜಶ್ರೀ ಅವರ ಅನುವಾದದ ಮೂಲಕ ಕಾದಂಬರಿ ನಮ್ಮೆಲ್ಲರ ಬದುಕಿನ ವೃತ್ತಾಂತವಾಗಿ ಕಾಣಿಸಿಕೊಂಡು ಹತ್ತಿರವಾಗುತ್ತದೆ. ಅನ್ನಾ ಕರೆನಿನ ಅವರ ಪಾತ್ರ ನಮ್ಮಾಳಗಿನ ಸುಖ-ದುಃಖಗಳಾಗಿ ವ್ಯಾಪಿಸುತ್ತಾ, ಬಹುಸಮಯ ಕಾಡುತ್ತದೆ.
240 ಪುಟಗಳ ಈ ಕೃತಿಯ ಮುಖಬೆಲೆ 100 ರೂ. ಆಸಕ್ತರು 080- 23183311 ಅಥವಾ 23183312 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.