ವಾಸ್ತವ ಮತ್ತು ಕಲ್ಪನೆಗಳ ನಡುವೆ- ಡಾನ್ ಕ್ವಿಕ್ಸಾಟನ ಸಾಹಸಗಳು

Update: 2017-03-31 18:29 GMT

 ‘ಡಾನ್ ಕ್ವಿಕ್ಸಾಟ್’ ಎನ್ನುವುದು ಮಿಗುವೆಲ್ ದಿ ಸರ್ವಾಂಟಿಸ್ ಸಾವೆದ್ರ ಎಂಬ ಸ್ಪಾನಿಶ್ ಲೇಖಕ ಬರೆದ ಹಾಸ್ಯ ಪ್ರಧಾನ ಕಾದಂಬರಿ. ಕೃತಿಯ ಕಥಾನಾಯಕನ ಹೆಸರೇ ಡಾನ್ ಕ್ವಿಕ್ಸಾಟ್. ರೋಚಕ ಕತೆಗಳನ್ನು ಓದಿ ಮಾನಸಿಕವಾಗಿ ಅದರ ಜೊತೆಗೆ ಬದುಕುತ್ತಾ, ತಾನು ಅದರಂತೆ ಆಗಲು ಹೋಗಿ, ಸಮಸ್ಯೆ, ತಮಾಷೆಯೊಳಗೆ ಸಿಲುಕಿಕೊಳ್ಳುವ ಕತೆ ಇದು. ಡಾನ್ ಕ್ವಿಕ್ಸಾಟ್ ಎನ್ನುವುದು ಒಂದು ಮಾನಸಿಕ ಅವಸ್ಥೆಯೂ ಹೌದು. ಅವನು ಹುಚ್ಚನಲ್ಲ. ಹಾಗೆಯೇ ದುಷ್ಟನೂ ಅಲ್ಲ. ಮುಗ್ಧ ಎಂದು ಕರೆಯಬಹುದು. ಅಂತೆಯೇ ವಾಸ್ತವದಿಂದ ಪಲಾಯನಗೊಂಡು, ಭ್ರಮೆಗಳ ಜೊತೆಗೆ ಬದುಕುವ ಅವನ ಸ್ಥಿತಿ ಕೆಲವೊಮ್ಮೆ ಅದು ಬೇರೆ ಬೇರೆ ಆಯಾಮಗಳಲ್ಲಿ ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ ಅಥವಾ ಒಂದು ತಮಾಷೆಯ ಕತೆಯಾಗಿ ಇದನ್ನು ಸರಾಗವಾಗಿಯೂ ಓದಬಹುದು. ಎನ್. ಎಲ್. ಕ್ಯಾರಿಂಗ್ಟರ್ ಈ ಸ್ಪಾನಿಶ್ ಸಾಹಸವನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದ್ದು ಅದನ್ನು ಖ್ಯಾತ ಕವಿ, ಲೇಖಕ ಕೆ.ವಿ. ತಿರುಮಲೇಶ್ ಅವರು ಕನ್ನಡಕ್ಕಿಳಿಸಿದ್ದಾರೆ. ‘ಡಾನ್ ಕ್ವಿಕ್ಸಾಟನ ಸಾಹಸಗಳು’ ಎಂಬ ಹೆಸರಿನಲ್ಲಿ ಇದು ಪುಸ್ತಕ ರೂಪ ಪಡೆದಿದೆ. ಇದು ಮಕ್ಕಳ ಪಾಲಿಗೂ ಯುವಕರ ಪಾಲಿಗೂ ಖುಷಿ ಕೊಡುವ ಸಾಹಸಗಾಥೆ. ಒಂದು ರೀತಿಯಲ್ಲಿ ರೋಚಕ ಬದುಕಿನ ಅಣಕ. ಮಧ್ಯಕಾಲೀನ ವೀರ ಸರದಾರರ ಸಾಹಸ ಕಥೆಗಳನ್ನು ಓದಿ ಅದರಿಂದ ಹೊರಬರಲಾಗದೆ ಅವರಂತೆ ಬದುಕುವುದಕ್ಕೆ ಹಟ ತೊಟ್ಟ ಕ್ವಿಕ್ಸಾಟ್, ನಮ್ಮ ನಡುವಿನ ನೂರಾರು ಮನಸ್ಸುಗಳನ್ನು ಪ್ರತಿನಿಧಿಸುವ ವೀರ. ಲೇಖಕರೇ ಹೇಳುವಂತೆ, ಮಧ್ಯಕಾಲೀನ ವಿದೇಶಿ ಕತೆಯಾದ ಕಾರಣ ಕೆಲವು ಸಂಗತಿಗಳು ಅಪರಿಚಿತ ಎನಿಸಬಹುದು. ಅವುಗಳನ್ನು ವಿವರಿಸಿ ಹೇಳುವುದಕ್ಕಿಂತ ಸಂದರ್ಭಾನುಸಾರ ಅರ್ಥಮಾಡಿಕೊಳ್ಳುವುದೇ ಕಥೆಯ ಒಳಗೆ ಪ್ರವೇಶಿಸಲು ಹೆಚ್ಚು ಅನುಕೂಲವಾಗುತ್ತದೆ. ಕೆ. ವಿ. ತಿರುಮಲೇಶ್ ಅವರು ಆ ಕತೆಯ ಕಾಲವನ್ನು ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಕನ್ನಡ ಭಾಷೆಯೊಳಗೆ ಹಿಡಿದಿಡಲು ಮತ್ತು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಓದುಗರ ತಲೆಮಾರುಗಳು ಬದಲಾದಂತೆ ಲೋಕ ಸಾಹಿತ್ಯದ ವಿಶಿಷ್ಟ ಕೃತಿಗಳನ್ನು ಬೇರೆ ಬೇರೆ ಬಗೆಯಲ್ಲಿ ಮರು ನಿರೂಪಿಸುವ ಹೊಣೆಗಾರಿಕೆಯಿಂದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈ ಕೃತಿಯನ್ನು ಮಗದೊಮ್ಮೆ ಕವಿಯೊಬ್ಬರ ಕೈಯಲ್ಲಿ ಬರೆಸಿದೆ. 110 ಪುಟಗಳನ್ನು ಹೊಂದಿರುವ ಈ ಕೃತಿಯ ಮುಖಬೆಲೆ 60 ರೂಪಾಯಿ. ಆಸಕ್ತರು 23183311 ಅಥವಾ 23183312 ಬೆಂಗಳೂರು ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News