ವೈದ್ಯರ ಮೇಲೆ ದಾಳಿ ನ್ಯಾಯವೇ?

Update: 2017-03-31 18:33 GMT

ರೋಗಿಗಳ ಸಂಬಂಧಿಗಳು ಮತ್ತು ಹಿತೈಷಿಗಳು ವಾಸ್ತವವನ್ನು ಅರ್ಥೈಸಿಕೊಂಡು ತಾಳ್ಮೆ ಸಹನೆಯಿಂದ ವರ್ತಿಸಿ, ವೈದ್ಯರೂ ಮನುಷ್ಯರೇ ಅವರಿಗೂ ಭಾವನೆಗಳಿವೆ ಎಂದು ತಿಳಿದುಕೊಂಡಲ್ಲಿ ಮಾತ್ರ ಸಮಾಜದಲ್ಲಿ ವೈದ್ಯರು ತಮ್ಮ ವೃತ್ತಿಗೆ ನ್ಯಾಯ ನೀಡಲು ಸಾಧ್ಯವಾಗಬಹುದು. ಅದಲ್ಲದೆ ತಾಳ್ಮೆ ಕಳೆದುಕೊಂಡು ಬುದ್ಧಿಹೀನರಾಗಿ ವೈದ್ಯರ ಮೇಲೆ ದಾಳಿ ಮಾಡಿದಲ್ಲಿ ಪರಿಸ್ಥಿತಿ ಬಿಗಡಾಯಿಸಬಹುದೇ ಹೊರತು ಖಂಡಿತಾ ಸುಧಾರಿಸಲಿಕ್ಕಿಲ್ಲ.

ತ್ತೀಚಿನ ದಿನಗಳಲ್ಲಿ ವೈದ್ಯರ ಮೇಲೆ ದಾಳಿ ಸರ್ವೇ ಸಾಮಾನ್ಯವಾಗುತ್ತಿದೆ. ದೇಶದ ಯಾವುದಾದರೊಂದು ಭಾಗದಲ್ಲಿ ದಿನನಿತ್ಯವೂ ವೈದ್ಯರ ಮೇಲೆ ಹತಾಶರಾದ ರೋಗಿಯ ಹಿಂಬಾಲಕರು ಮತ್ತು ಹಿತೈಷಿಗಳಿಂದ ದಾಳಿ ನಡೆಯುತ್ತಲೇ ಇದೆ. ಇದಕ್ಕೆ ಕೊನೆ ಎಂಬುದು ಇಲ್ಲವೇ? ಪದೇ ಪದೇ ನಡೆಯುತ್ತಿರುವ ಈ ದಾಳಿಗಳಿಂದಾಗಿ ವೈದ್ಯರೂ ಗೊಂದಲಕ್ಕೊಳಗಾಗಿದ್ದಾರೆ ಎಂಬುದಂತೂ ಸತ್ಯ. ಕೆಲವೊಮ್ಮೆ ನಾನ್ಯಾಕೆ ವೈದ್ಯನಾದೆ ಎಂದು ಪರಿತಪಿಸುವ ಹಂತಕ್ಕೂ ಬಂದಿದ್ದಾರೆ ಎಂದರೂ ತಪ್ಪಲ್ಲ. ಭಾರತದಂತಹ 125 ಕೋಟಿ ಜನಸಂಖ್ಯೆ ಇರುವ ಬೃಹತ್ ರಾಷ್ಟ್ರದಲ್ಲಿ ವೈದ್ಯರ ಸಂಖ್ಯೆ ಬಹಳ ಕಡಿಮೆ ಇದೆ. ವಾಸ್ತವಿಕವಾಗಿ ನಮ್ಮ ದೇಶದ ವೈದ್ಯ ಮತ್ತು ಜನ ಸಂಖ್ಯೆಯ ಅನುಪಾತ 0.7/1000. ಅಂದರೆ ಪ್ರತಿ ಸಾವಿರಕ್ಕೆ ಒಂದಕ್ಕಿಂತಲೂ ಕಡಿಮೆ ವೈದ್ಯರಿದ್ದಾರೆ. ಬೇರೆ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಚೈನಾ 1.9, ಬ್ರಿಟನ್ 2.8, ಅಮೆರಿಕ 2.9, ಸ್ಪೇನ್‌ನಲ್ಲಿ 4.9 ವೈದ್ಯರು ಪ್ರತಿ ಸಾವಿರಕ್ಕೆ ಇದ್ದಾರೆ. ನಮ್ಮ ದೇಶದಲ್ಲಿ ಇತರ ದೇಶಗಳಿಗೆ ಹೋಲಿಸಿದಲ್ಲಿ ವೈದ್ಯರ ಅನುಪಾತ ಬಹಳ ಕಡಿಮೆ. ಒಟ್ಟಾರೆಯಾಗಿ ನಮ್ಮಲ್ಲಿ ವೈದ್ಯರ ಕೊರತೆ ಇದೆ ಮತ್ತು ಪ್ರತಿ ವೈದ್ಯರಿಗೂ ತನ್ನದೇ ಇತಿಮಿತಿಗಿಂದ ಮಿಗಿಲಾಗಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆಯೂ ಇದೆ. ಈ ಕಾರಣದಿಂದಲೇ ಒಬ್ಬ ವೈದ್ಯನನ್ನು ದೇವರಾಗಿ ಬಿಡಿ, ಕೇವಲ ಮನುಷ್ಯನನ್ನಾಗಿಯಾದರೂ ಕಾಣಬೇಕಾಗುತ್ತದೆ. ವೈದ್ಯ ತನ್ನ ಸಾಮರ್ಥ್ಯವನ್ನು ಮೀರಿ ರೋಗಿಗಳನ್ನು ನೋಡಬೇಕು ಮತ್ತು ಚಿಕಿತ್ಸೆ ಮಾಡಬೇಕಾದ ಕಠಿಣ ಪರಿಸ್ಥಿತಿ ಇದೆ. ಹೀಗಿರುವಾಗ ಮೊದಲೇ ಹೈರಾಣಾದ ವೈದ್ಯರ ಮೇಲೆ ದಾಳಿ ಮಾಡುವುದು ಎಷ್ಟು ಸರಿ? ರೋಗಿಗಳ ಸಂಬಂಧಿಗಳು ಮತ್ತು ಹಿತೈಷಿಗಳು ವಾಸ್ತವವನ್ನು ಅರ್ಥೈಸಿಕೊಂಡು ತಾಳ್ಮೆ ಸಹನೆಯಿಂದ ವರ್ತಿಸಿ, ವೈದ್ಯರೂ ಮನುಷ್ಯರೇ ಅವರಿಗೂ ಭಾವನೆಗಳಿವೆ ಎಂದು ತಿಳಿದುಕೊಂಡಲ್ಲಿ ಮಾತ್ರ ಸಮಾಜದಲ್ಲಿ ವೈದ್ಯರು ತಮ್ಮ ವೃತ್ತಿಗೆ ನ್ಯಾಯ ನೀಡಲು ಸಾಧ್ಯವಾಗಬಹುದು. ಅದಲ್ಲದೆ ತಾಳ್ಮೆ ಕಳೆದುಕೊಂಡು ಬುದ್ಧಿಹೀನರಾಗಿ ವೈದ್ಯರ ಮೇಲೆ ದಾಳಿ ಮಾಡಿದಲ್ಲಿ ಪರಿಸ್ಥಿತಿ ಬಿಗಡಾಯಿಸಬಹುದೇ ಹೊರತು ಖಂಡಿತಾ ಸುಧಾರಿಸಲಿಕ್ಕಿಲ್ಲ.

ಒಂದೆಡೆ ಕಾರ್ಪೊರೇಟ್ ಆಸ್ಪತ್ರೆಗಳು ವೈದ್ಯರನ್ನು ನೇಮಿಸಿಕೊಂಡು ಅವರನ್ನು ಜೀತದಾಳು ಗಳಂತೆ ಕೆಲಸ ಮಾಡಿಸಿ ಒಂದಷ್ಟು ಬಿಡಿಗಾಸು ನೀಡಿ ಕೈತೊಳೆದುಕೊಳ್ಳುತ್ತಿವೆ. ಇನ್ನೊಂದೆಡೆ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಸರಿಯಾದ ಮೂಲಭೂತ ಸೌಕರ್ಯಗಳೂ ಇಲ್ಲ. ವೈದ್ಯರಿದ್ದರೆ ಪರಿಕರಗಳಿಲ್ಲ, ಉಪಕರಣಗಳಿದ್ದಲ್ಲಿ ತಜ್ಞ ವೈದ್ಯರು ಇಲ್ಲ. ಇಂಥ ವ್ಯವಸ್ಥೆಯಲ್ಲಿ ವೈದ್ಯರಿಂದ ಪವಾಡವನ್ನು ನಿರೀಕ್ಷಿಸುವುದು ಎಷ್ಟು ನ್ಯಾಯ?. ಬಂದ ಎಲ್ಲಾ ರೋಗಿಗಳನ್ನು ಬದುಕಿಸಬೇಕು ಎಂಬ ಮೊಂಡು ಹಠ ಖಂಡಿತವಾಗಿಯೂ ಆರೋಗ್ಯಕರ ಬೆಳವಣಿಗೆಯಂತೂ ಅಲ್ಲವೇ ಅಲ್ಲ. ಬೃಹತ್ ಜನಸಂಖ್ಯೆ ಇರುವ ಭಾರತದಲ್ಲಿ ಹೆಚ್ಚಿನವರು ಬಡತನ ರೇಖೆಗಿಂತ ಕೆಳಗಿನವರೇ. ಸರಕಾರದ ನೆರವಿಲ್ಲದೆ ವೈದ್ಯಕಿಯ ಸೌಲಭ್ಯ ಅವರಿಗೆ ಸಿಗುವುದು ಸುಲಭದ ಮಾತಲ್ಲ. ಈ ಬಡವರಿಗೆ ಉಚಿತ ಸೌಲಭ್ಯ ನೀಡಲೇ ಬೇಕಾದ ಅನಿವಾರ್ಯವೂ ಇದೆ. ಅದಕ್ಕೆ ಪೂರಕವಾದ ಉಪಕರಣಗಳು, ಸಾಕಷ್ಟು ವೈದ್ಯರನ್ನು ಸರಕಾರಿ ಆಸ್ಪತ್ರೆಗಳಲ್ಲಿ ನೇಮಿಸುವುದು ಸರಕಾರದ ಕರ್ತವ್ಯ. ಹಾಗಾದಲ್ಲಿ ಮಾತ್ರ ಸಮಾಜದ ಎಲ್ಲ ವರ್ಗದ ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಸಕಾಲದಲ್ಲಿ ದೊರೆತು ರೋಗಿಯ ಪ್ರಾಣ ಉಳಿಯಬಹುದು. ಆದರೆ ವಿಪರ್ಯಾಸವೆಂದರೆ ಪ್ರತಿ ಬಜೆಟ್‌ನಲ್ಲಿಯೂ ವೈದ್ಯಕೀಯ ಕ್ಷೇತ್ರಕ್ಕೆ ಸಿಗುವ ಅನುಪಾತ ಬಹಳ ಕಡಿಮೆ. ಅಮೆರಿಕದಲ್ಲಿ ಶೇ. 10, ಚೀನಾದಲ್ಲಿ ಶೇ. 50 ಸಿಕ್ಕಿದಲ್ಲಿ ಭಾರತದಲ್ಲಿ ಸಿಗುವ ದೇಣಿಗೆ ಶೇ. 1 ಮಾತ್ರ ಹೀಗಾದಲ್ಲಿ ಜನರಿಗೆ ವೈದ್ಯಕೀಯ ಸೌಲಭ್ಯ ಹೇಗೆ ಸಿಕ್ಕೀತು? ಈ ವ್ಯವಸ್ಥೆಯಲ್ಲಿ ವೈದ್ಯರು ಹೇಗೆ ಸೇವೆ ನೀಡಬಲ್ಲರು? ಇನ್ನಾದರೂ ಸರಕಾರ ಎಚ್ಚೆತ್ತು, ವೈದ್ಯಕೀಯ ಕ್ಷೇತ್ರವನ್ನು ಕೇವಲ ಸೇವಾಕ್ಷೇತ್ರ ಎಂದು ಪರಿಗಣಿಸಿ, ವೈದ್ಯರಿಗೆ ಬೇಕಾದ ಎಲ್ಲಾ ಮೂಲಭೂತ ಪ್ರಾಥಮಿಕ ಸೌಲಭ್ಯಗಳನ್ನು ನೀಡಿದಲ್ಲಿ, ವೈದ್ಯರ ಮೇಲಿನ ಹೊರೆ ಕಡಿಮೆಯಾಗಿ ನೆಮ್ಮದಿಯಿಂದ ಉಸಿರಾಡಬಹುದು. ಇಲ್ಲವಾದಲ್ಲಿ ಈಗ ಅಮೆರಿಕದಲ್ಲಿರುವ ಭಾರತೀಯ ವೈದ್ಯರ ಅನುಪಾತ ಶೇ. 38ರಿಂದ ಶೇ. 50 ತಲುಪುವ ದಿನಗಳು ದೂರವಿಲ್ಲ. ವೈದ್ಯಕೀಯ ವಾಸ್ತವ :

ಇತ್ತೀಚೆಗೆ ಅಂತರ್ಜಾಲದಲ್ಲಿ ಕಣ್ಣಾಡಿಸುತ್ತಿರುವಾಗ ಡಾ ಉಮೇಶ್ ನಾಗಲೋಟಿ ಮಠ ಎಂಬ ವೈದ್ಯರು ಬ್ರಿಟನ್‌ನ ವೈದ್ಯಕೀಯ ವ್ಯವಸ್ಥೆ ಮತ್ತು ಭಾರತದ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಲೇಖನ ಬರೆದಿದ್ದಾರೆ ಇದನ್ನು ಓದಿದರೆ ಬಹಳಷ್ಟು ಮಂದಿಯ ಕಣ್ಣು ತೆರೆಯುವ ಸಾಧ್ಯತೆ ಇದೆ. ಇತ್ತೀಚೆಗೆ ಮಹಾರಾಷ್ಟ್ರದ ದುಲೆ ಎಂಬಲ್ಲಿ ವೈದ್ಯರ ಮೇಲೆ ನಡೆದ ದಾಳಿಯ ಘಟನೆಯನ್ನು ತೆಗೆದುಕೊಳ್ಳೋಣ. ರಸ್ತೆ ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಾ ಆಸ್ಪತ್ರೆಗೆ ಬಂದರೂ ವೈದ್ಯರು ಜೀವ ಉಳಿಸಲಿಲ್ಲ ಎಂದು ವೈದ್ಯರ ಮೇಲೆ ದಾಳಿ ಮಾಡಿದ್ದಾರೆ. ಇಲ್ಲಿಯ ಜನರು ಹಾಳಾದ ರಸ್ತೆಯ ವ್ಯವಸ್ಥೆಯ ಬಗ್ಗೆ ಮಾತಾನಾಡುವುದಿಲ್ಲ, ಹಾಳಾದ ರಸ್ತೆಯನ್ನು ಸರಿಪಡಿಸುವ ಗೋಜಿಗೂ ಹೋಗುವುದಿಲ್ಲ. ರಸ್ತೆಯಲ್ಲಂತೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದೇ ಇಲ್ಲ. ಹೆಲ್ಮೆಟ್ ಇದ್ದರೂ, ತಲೆಯ ಬದಲು ಕೈ ಕಾಲುಗಳಲ್ಲಿ ಜೋತಾಡುತ್ತಿರುತ್ತದೆ. ಮದ್ಯಪಾನ ಮಾಡದೇ ವಾಹನ ಚಲಾಯಿಸುವುದು ಕಡಿಮೆ. ವಾಹನ ಓಡಿಸುವಾಗ ಮೊಬೈಲ್ ಉಪಯೋಗವನ್ನು ಮಾಡಬಾರದು ಎಂಬ ಅರಿವಿದ್ದರೂ ನಿಯಮ ಪಾಲಿಸುವುದಿಲ್ಲ. ಏಕಮುಖ ಸಂಚಾರದ ವ್ಯವಸ್ಥೆ ಇದ್ದರೂ ಎಲ್ಲೆಂದರಲ್ಲಿ ರಸ್ತೆಯಲ್ಲಿ ಓಡಾಡುತ್ತಾರೆ. ಇಷ್ಟೆಲ್ಲಾ ರಾದ್ಧಾಂತವಾಗಿ ಕೊನೆಗೆ ಜೀವನ್ಮರಣದ ಸ್ಥಿತಿಯಲ್ಲಿ ರೋಗಿಯನ್ನು ಆಸ್ಪತ್ರೆಗೆ ತಂದ ಕ್ಷಣದಲ್ಲಿ ರೋಗಿ ಎದ್ದು ಕುಳಿತುಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ರೋಗಿ ತಕ್ಷಣ ಗುಣವಾಗಿ ವೈದ್ಯರಿಂದ ಪವಾಡ ನಡೆಯಬೇಕು ಎಂದು ಅಪೇಕ್ಷಿಸುವುದು ಎಷ್ಟು ಸರಿ? ವೈದ್ಯರು ಕೂಡಾ ಮನುಷ್ಯರೇ ಅವರಿಂದ ಪವಾಡ ಸಾಧ್ಯವಿಲ್ಲ ಎಂಬ ಸಾಮಾನ್ಯ ಜ್ಞಾನದ ಅರಿವೂ ಕೂಡ ಇಲ್ಲದಿರುವುದೇ ನಮ್ಮ ಸಮಾಜದ ಬಹು ದೊಡ್ಡ ದುರಂತ ಎಂದರೂ ತಪ್ಪಲ್ಲ. ಮೊದಲು ನಮ್ಮ ಕರ್ತವ್ಯಗಳನ್ನು ನಿಯಮಗಳನ್ನು ಪಾಲಿಸೋಣ ಆಮೇಲೆ ವೈದ್ಯರ ಮೇಲೆ ವಿಶ್ವಾಸ ಇಡೋಣ ಎಂದು ಎಷ್ಟು ಮಂದಿ ರೋಗಿಗಳು ಆಲೋಚಿಸುತ್ತಾರೆ?

ಇನ್ನು ಜಗತ್ತಿನ ಅತ್ಯಂತ ಮುಂದುವರಿದ ಅಮೆರಿಕ ಮತ್ತು ಇಂಗ್ಲೆಂಡ್‌ನ ವೈದ್ಯಕೀಯ ವ್ಯವಸ್ಥೆಯನ್ನು ಒಮ್ಮೆ ನಿಮಗೆ ತೆರೆದಿಡುತ್ತೇನೆ. ಅಲ್ಲಿಯ ವೈದ್ಯಕೀಯ ವ್ಯವಸ್ಥೆಯಲ್ಲಿ ಒಬ್ಬ ರೋಗಿ ವೈದ್ಯರನ್ನು ಕಾಣಲೂ ಹತ್ತು ಹಲವು ಕಾನೂನು ಕಟ್ಟಲೆಗಳು ಕಟ್ಟು ಪಾಡುಗಳು ಇದೆ. ಆದರೆ ಭಾರತದಲ್ಲಿ ವೈದ್ಯರ ಸಂಖ್ಯೆ ಕಡಿಮೆ ಇದ್ದರೂ ದಿನದ 24 ಗಂಟೆಯೂ ನೆನೆಸಿದಾಗ ಎಲ್ಲ ರೋಗಿಗಳಿಗೆ ವೈದ್ಯರು ಸಿಗುತ್ತಾರೆ ಎಂಬ ಸಾಮಾನ್ಯ ಜ್ಞಾನವನ್ನು ನಾಗರಿಕರು ಅರಿತುಕೊಳ್ಳಬೇಕು. ಅಮೆರಿಕ ಮತ್ತು ಬ್ರಿಟನ್‌ನಲ್ಲಿ ನೀವು ನಿಮ್ಮ ಕುಟುಂಬದ ವೈದ್ಯರನ್ನು ಕಾಣಬೇಕಾದಲ್ಲಿ ಕನಿಷ್ಠ 5ರಿಂದ 7 ದಿನ ಕಾಯಬೇಕಾಗುತ್ತದೆ. ನಮ್ಮಲ್ಲಿ ನೀವು ನೆನೆದಾಗಲೆಲ್ಲಾ ನಿಮ್ಮ ವೈದ್ಯರು ನಿಮಗೆ ಸಿಗುತ್ತಾರೆ. ನೆನಪಿಡಿ ಅನಿವಾರ್ಯವಾದಲ್ಲಿ ನಿಮ್ಮ ಮನೆಗೂ ವೈದ್ಯರು ಬರುತ್ತಾರೆ. ರೋಗಿ ಒಬ್ಬ ವಿಶೇಷ ತಜ್ಞರನ್ನು ಭೇಟಿಯಾಗ ಬೇಕಿದ್ದಲ್ಲಿ ನಿಮ್ಮ ಕುಟುಂಬದ ವೈದ್ಯರು ನಿಮ್ಮನ್ನು ಅವರ ಬಳಿ ಕಳುಹಿಸಿಕೊಡಬೇಕು ಅವರಾಗಿ ತಮಗೆ ಬೇಕಾದ ವೈದ್ಯರ ಬಳಿಗೆ ಹೋಗುವಂತಿಲ್ಲ. ಅದು ಅತೀ ಅಗತ್ಯವಿದ್ದಲ್ಲಿ ಮಾತ್ರ ಅವರನ್ನು ಅಲ್ಲಿಗೆ ಕಳುಹಿಸಲಾಗುತ್ತದೆ. ನಮ್ಮ ಭಾರತದಲ್ಲಿ ಯಾವುದೇ ತಜ್ಞರ ಬಳಿ, ಯಾವಾಗ ಬೇಕಾದಾಗ ರೋಗಿಗಳಿಗೆ ಸಂದರ್ಶನಕ್ಕೆ ಮುಕ್ತ ಅವಕಾಶವಿರುತ್ತದೆ. ಸಣ್ಣ ತುರಿಕೆಗೂ ನೇರವಾಗಿ ಚರ್ಮ ರೋಗದ ತಜ್ಞರ ಬಳಿ ಅಥವಾ ರಸದೂತಗಳ ತಜ್ಞರ ಬಳಿ ಸಲಹೆ ಮಾರ್ಗದರ್ಶನ ಪಡೆದುಕೊಳ್ಳಬಹುದು. ಇಂತಹ ಅಪೂರ್ವ ಸೌಲಭ್ಯ ಭಾರತ ಬಿಟ್ಟರೆ ಬೇರೆ ಯಾವ ದೇಶದಲ್ಲಿಯೂ ಕಾಣಸಿಗಲಿಕ್ಕಿಲ್ಲ. ಅಲ್ಲಿ ರೋಗಿಗಳು ತಜ್ಞ ವೈದ್ಯರ ಸಂದರ್ಶನ ಬೇಕಿದ್ದಲ್ಲಿ ಕನಿಷ್ಕ 1 ತಿಂಗಳು ಕಾಯಬೇಕು. ಅವರು ಒಂದೊಮ್ಮೆ ತಮ್ಮ ಸಂದರ್ಶನವನ್ನು ತಪ್ಪಿಸಿಕೊಂಡಿದ್ದಲ್ಲಿ ಪುನಃ ಕುಟುಂಬ ವೈದ್ಯರ ಬಳಿ ಹೋಗಿ ಮತ್ತೆ ತಿಂಗಳುಗಳ ಕಾಲ ಕಾಯಬೇಕು. ನಮ್ಮ ಭಾರತದಲ್ಲಿ ಇವತ್ತಿನ ಸಂದರ್ಶನ ತಪ್ಪಿಸಿದಲ್ಲಿ ನಾಳೆಯೇ ಅವರಿಗೆ ಮತ್ತೊಮ್ಮೆ ಸಂದರ್ಶನ ಸಿಗುತ್ತದೆ. ಮತ್ತೆ ಅವಕಾಶವೂ ಇರುತ್ತದೆ. ಈ ರೀತಿಯ ಸೌಲಭ್ಯ ಜಗತ್ತಿನ ಬೇರೆ ಎಲ್ಲಿಯೂ ಸಿಗದು. ಅಲ್ಲಿ ಯಾರಿಗಾದರೂ ತುರ್ತು ಆವಶ್ಯಕತೆ ಇದ್ದಲ್ಲಿ ಅವರು ಆಸ್ಪತ್ರೆಗೆ ಹೋದ ಬಳಿಕ ಅವರನ್ನು ಶುಶ್ರೂಶಕಿ ಮತ್ತು ಸಾಮಾನ್ಯ ವೈದ್ಯರು ನೋಡಿ ಅವಶ್ಯವಿದ್ದಲ್ಲಿ ಮಾತ್ರ ತಜ್ಞರ ಬಳಿ ಕಳುಹಿಸುತ್ತಾರೆ. ಏನಿಲ್ಲವೆಂದರೂ ಅವರು 6ರಿಂದ 8 ಗಂಟೆ ಕಾಯಬೇಕಾಗುತ್ತದೆ. ಆದರೆ ಭಾರತದಲ್ಲಿ ರೋಗಿ ಆಸ್ಪತ್ರೆಗೆ ಹೋದ ಕೂಡಲೇ ಆಸ್ಪತ್ರೆಯ ಎಲ್ಲ ವೈದ್ಯರು ಬರಬೇಕೆಂದು ಗಲಾಟೆ ಮಾಡಿ ಬರಿಸಲಾಗುತ್ತಿದೆ. ಅವರಿಗೆ ಬೇಕಾದ ವೈದ್ಯರು ಬರಲಿಲ್ಲದಿದ್ದಲ್ಲಿ ಆಸ್ಪತ್ರೆ ಮರುದಿನ ಪುಡಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲಿ ಯಾರಿಗಾದರೂ ಹೆಚ್ಚಿನ ಸ್ಕ್ಯಾನಿಂಗ್ ಅಥವಾ ಪರೀಕ್ಷೆಗಳ ಅಗತ್ಯವಿದ್ದಲ್ಲಿ ವಾರಗಟ್ಟಲೆ ಅಥವಾ ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ (ತುರ್ತು ಸಂದರ್ಭಗಳನ್ನು ಹೊರತು ಪಡಿಸಿ) ಆದರೆ ಭಾರತದಲ್ಲಿ ಸಣ್ಣ ಹೊಟ್ಟೆ ನೋವಿಗೂ (ಕೆಲವೊಮ್ಮೆ ತಿಂದದ್ದು ಜಾಸ್ತಿಯಾಗಿ) ರೋಗಿಗಳೇ ಸ್ಕ್ಯಾನ್ ಮಾಡಿಸಬೇಕೆಂದು ನಿರ್ಧರಿಸಿ, ನಿಮಗಿಷ್ಟವಾದ ವೈದ್ಯರ ಬಳಿ ತಕ್ಷಣವೇ ಸ್ಕ್ಯಾನ್ ಮಾಡಿಸುವ ಸಂಪೂರ್ಣ ಸ್ವಾತಂತ್ರ ಮತ್ತು ಸೌಲಭ್ಯ ಇವೆ. ಅಲ್ಲಿ ರೋಗಿಗಳೇನಾದರೂ ತಮ್ಮ ಸಂದರ್ಶನದ ಅವಧಿಯನ್ನು ತಪ್ಪಿಸಿದರೆ ಅವರನ್ನು ಸಂದರ್ಶನದ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಆದರೆ ನಮ್ಮ ಭಾರತದಲ್ಲಿ ಅಂತಹವರಿಗೆ ಯಾವಾಗ ಬೇಕಾದರೂ ಭೇಟಿಯ ಸಾಧ್ಯತೆ ಇದೆ.

ಉಚಿತ ಪರೀಕ್ಷೆ, ಉಚಿತ ಶಿಬಿರಗಳು, ಉಚಿತ ಸಂದರ್ಶನ ಇವೆಲ್ಲವೂ ಭಾರತದಲ್ಲಿ ಮಾತ್ರ. ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಉಚಿತವಾಗಿ ಸಿಗುವುದು ಗಾಳಿ ಮಾತ್ರ. ಅಮೆರಿಕ, ಬ್ರಿಟನ್‌ಗಳಲ್ಲಿ ಔಷಧಿ ಬಹಳ ದುಬಾರಿ. ಸರಕಾರ ನೀಡುವ ಔಷಧಿ ಮಾತ್ರ ಉಚಿತ. (ಘೆಏಖ) ರಾಷ್ಟ್ರೀಯ ಆರೋಗ್ಯ ಕಾಯ್ದೆ ಮುಖಾಂತರ ಎಲ್ಲವೂ ಉಚಿತ. ಇಲ್ಲವಾದಲ್ಲಿ ಎಲ್ಲವೂ ಬಹಳ ದುಬಾರಿ. ಖಾಸಗಿ ಚಿಕಿತ್ಸೆಗಾಗಿ ಸಂದರ್ಶನಕ್ಕೆ ಕನಿಷ್ಟ 8ರಿಂದ 10 ಸಾವಿರ ರೂಪಾಯಿ. ಸಾಮಾನ್ಯ ಆಪರೇಷನ್‌ಗೂ 10ರಿಂದ 15 ಲಕ್ಷಗಳು ಖರ್ಚಾಗುತ್ತದೆ. ಆದರೆ ನಮ್ಮ ಭಾರತದಲ್ಲಿ ಪರಿಸ್ಥಿತಿ ಹೀಗಿದೆಯೇ?

ಭಾರತದಲ್ಲಿ ಎಲ್ಲ ಔಷಧಿಗಳು ಮುಕ್ತವಾಗಿ ಮೆಡಿಕಲ್ ಶಾಪ್‌ಗಳಲ್ಲಿ ಲಭ್ಯವಿರುತ್ತದೆ ಆ್ಯಂಟಿಬಯಟಿಕ್‌ಗಳು ಕೂಡಾ ಎಲ್ಲೆಂದರಲ್ಲಿ ಸಿಗುತ್ತದೆ. ಆದರೆ ಬ್ರಿಟನ್ ಮತ್ತು ಅಮೆರಿಕದಲ್ಲಿ ವೈದ್ಯರ ಭೇಟಿ ಇಲ್ಲದೆ ಯಾವುದೇ ಔಷಧಿ ಸಿಗುವುದಿಲ್ಲ.

ಇಷ್ಟೆಲ್ಲಾ ಸ್ವಾತಂತ್ರ ಮತ್ತು ಸೌಲಭ್ಯಗಳಿದ್ದೂ ಜನರು ಕಾನೂನನ್ನು ಕೈಗೆತ್ತಿಕೊಂಡು ವಿನಾಕಾರಣ ವೈದ್ಯರ ಮೇಲೆ ಹಲ್ಲೆ ನಡೆಸುವುದು ಖಂಡಿತಾ ಸರಿಯಲ್ಲ. ನಮ್ಮ ಭಾರತದ ವೈದ್ಯರು ನಮ್ಮ ವ್ಯವಸ್ಥೆಯಲ್ಲಿ ಇರುವ ಯಾವುದೇ ಲೋಪದೋಷಗಳನ್ನು ದೂರದೆ, ಇರುವ ಸೌಲಭ್ಯಗಳನ್ನು ಬಳಸಿ ಪ್ರಾಮಾಣಿಕವಾಗಿ ಬಡವ ಬಲ್ಲಿದ ಎನ್ನದೆ ಹಗಲು-ರಾತ್ರಿ ಎಂದು ಹಲುಬದೆ ರೋಗಿಗಳಿಗೆ ಚಿಕಿತ್ಸೆ ನೀಡಲು ಕಟಿಬದ್ಧರಾಗಿರುವಾಗ ಈ ರೀತಿ ವೈದ್ಯರ ಮೇಲೆ ದಾಳಿ ಮಾಡಿದರೆ ವೈದ್ಯರೂ ತಮ್ಮ ವೃತ್ತಿಯ ಮೇಲೆ ಜಿಗುಪ್ಸೆ ತಾಳುವ ದಿನಗಳು ಬಂದರೂ ಬರಬಹುದು. ಇನ್ನಾದರೂ ಜನರು ಎಚ್ಚೆತ್ತುಕೊಂಡು ಸಾವದಾನದಿಂದ ವರ್ತಿಸದಿದ್ದಲ್ಲಿ, ಯುವ ಜನಾಂಗ ವೈದ್ಯವೃತ್ತಿಯನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಹಿಂದೇಟು ಹಾಕುವ ದಿನಗಳು ಮುಂದೆ ಬಂದರೂ ಬರಬಹುದು.

Writer - ಡಾ. ಮುರಲೀ ಮೋಹನ್, ಚೂಂತಾರು

contributor

Editor - ಡಾ. ಮುರಲೀ ಮೋಹನ್, ಚೂಂತಾರು

contributor

Similar News

ಜಗದಗಲ
ಜಗ ದಗಲ