ಮುಜ್ರಿಮ್ ಹಾಜಿರ್: ಅಭಿವೃದ್ಧಿ ಮತ್ತು ನೈತಿಕ ಮೌಲ್ಯಗಳ ಸಂಘರ್ಷ
60-70ರ ದಶಕದಲ್ಲಿ ಬಂಗಾಳಿ ಸಾಹಿತ್ಯ ದೇಶಾದ್ಯಂತ ಬೀರಿದ ಪ್ರಭಾವಕ್ಕೆ ಎಲ್ಲ ವರ್ಗದ ಓದುಗರೂ, ಸಾಹಿತಿಗಳೂ ಒಳಗಾಗಿದ್ದರು. ಕನ್ನಡದಲ್ಲಿ ಪ್ರಗತಿಶೀಲ ಬರಹಗಾರರಲ್ಲಿ ಬಹುತೇಕರು ಬಂಗಾಳಿಯ ಶರತ್‌ಚಂದ್ರ ಚಟರ್ಜಿಯೂ ಸೇರಿದಂತೆ ಹಲವು ಲೇಖಕರ ಅನುಕರಣೆಗೆ ಸಿಲುಕಿದ್ದಾರೆ. ಕನ್ನಡದ ಐತಿಹಾಸಿಕ ಕಾದಂಬರಿಗಳ ಪರಂಪರೆ ಯಥಾವತ್ ಬಂಗಾಳಿ ಲೇಖಕರನ್ನೇ ಅನುಕರಿಸಿತ್ತು. ಶರತ್‌ಚಂದ್ರ, ತಾರಾಶಂಕರ ಬಂದೋಪಾಧ್ಯಾಯ, ಬಿಭೂತಿ ಭೂಷಣ್, ಮಾಣಿಕ್ ಬಂದೋಪಾಧ್ಯಾಯ ಮೊದಲಾದ ಬರಹಗಾರರು ಭಾರತೀಯ ಸಿನೆಮಾಗಳ ಮೇಲೂ ಪ್ರಭಾವ ಬೀರಿದ್ದರು ಎನ್ನುವುದನ್ನೂ ಗಮನಿಸಬೇಕಾಗಿದೆ. ಬಂಗಾಳದ ವಿಶ್ವವಿಖ್ಯಾತ ನಿರ್ದೇಶಕರಾಗಿರುವ ಸತ್ಯಜಿತ್ ರೇ ಕೂಡ ಆ ಪ್ರಭಾವಕ್ಕೆ ಸಿಲುಕಿದ್ದರು. ಆನಂತರದ ದಿನಗಳಲ್ಲಿ ಬಂದ ಹುಮಾಯೂನ್ ಅಹಮದ್ ಸುನೀಲ್ ಬಂದೋಪಾಧ್ಯಾಯ ಮೊದಲಾದ ಬಂಗಾಳಿ ಭಾಷೆಯ ಜನಪ್ರಿಯ ಕಾದಂಬರಿಕಾರರು ಭಾರತೀಯ ಕಾದಂಬರಿಗಳಿಗೊಂದು ಜನಪ್ರಿಯ ಮಾರ್ಗವನ್ನು ತೋರಿಸಿಕೊಟ್ಟರು. ಇವರ ಸಾಲಿನಲ್ಲೇ ಬಂದವರು ಬಿಮಲ ಮಿತ್ರ. ನೂರಕ್ಕಿಂತಲೂ ಹೆಚ್ಚು ಕಾದಂಬರಿಗಳನ್ನು ಬರೆದು ಹಲವು ಭಾಷೆಗಳಿಂದ ಓದುಗರನ್ನು ತನ್ನದಾಗಿಸಿಕೊಂಡವರು.
‘ಮುಜ್ರಿಮ್ ಹಾಜಿರ್’ ಸುಮಾರು 800 ಪುಟಗಳ ಬೃಹತ್ ಕಾದಂಬರಿ. ದೇಶವಿದೇಶಗಳ ಹಲವು ಭಾಷೆಗಳಿಗೆ ಅನುವಾದಗೊಂಡಿರುವ ಕೃತಿಯನ್ನು ಕನ್ನಡಕ್ಕಿಳಿಸಿದವರು ಎಸ್. ಕೆ. ರಮಾದೇವಮ್ಮ. 70ರ ದಶಕದ ಜನಪ್ರಿಯ ಮಾರ್ಗದಲ್ಲೇ ಮೂಡಿಬಂದಿರುವ ಕಾದಂಬರಿ ಇದಾಗಿದ್ದರೂ, ನೈತಿಕ ವೌಲ್ಯಗಳನ್ನು ಎತ್ತಿ ಹಿಡಿಯುವ ತನ್ನ ಉದ್ದೇಶಗಳ ಮೂಲಕ ಅದರಾಚೆಗೂ ಕಾದಂಬರಿ ಮಹತ್ವವನ್ನು ಪಡೆದುಕೊಳ್ಳುತ್ತದೆ. ಅಪರಾಧ ಪ್ರಜ್ಞೆಯನ್ನು ಹೊಂದಿದ ಕಥಾನಾಯಕನ ಒಳಸಂಘರ್ಷಗಳನ್ನು ತೆರೆದಿಡುವ ಕೃತಿ, ಮನುಷ್ಯ, ಅಭಿವೃದ್ಧಿ ಮತ್ತು ನೈತಿಕತೆಯ ಮೂರು ನೆಲೆಗಳನ್ನು ಚರ್ಚಿಸುತ್ತದೆ. ಬೃಹತ್ ಕಾದಂಬರಿ ಇದಾಗಿರುವುದರಿಂದ, ಆ ಕಾಲಘಟ್ಟದ ಸಾಮಾಜಿಕ ವಿವರಗಳು ದಟ್ಟವಾಗಿ ಹರಡಿಕೊಂಡಿವೆ. ಸರಳ ಅನುವಾದ ಕೃತಿಯನ್ನು ಓದುಗರಿಗೆ ಆತ್ಮೀಯವಾಗಿಸಿದೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿ ರುವ ಈ ಕೃತಿಯ ಮುಖಬೆಲೆ 400 ರೂ.