ಜ್ಯೋತಿಬಾ ಬೆಳಕು-ಬೆರಗು
ಕೃಷಿಮೂಲ ಚರಿತ್ರೆಯ ಜೊತೆ ಮುಖಾಮುಖಿ
ರವಿ ರಾ. ಅಂಚನ್ ಬರೆದಿರುವ ‘ಜ್ಯೋತಿಬಾ ಬೆಳಕು-ಬೆರಗು’ ಕೃತಿಯನ್ನು ಜ್ಯೋತಿಬಾ ಅವರ ಆತ್ಮ ಚರಿತ್ರೆ ಎಂದು ಕರೆಯುವು ದಕ್ಕಿಂತಲೂ, ಅವರ ಬೆಳಕಿನ ಮೂಲಕ ಇತಿಹಾಸ, ವರ್ತಮಾನವನ್ನು ಶೋಧಿಸುವ ಪ್ರಯತ್ನವಾಗಿ ಈ ಕೃತಿಯನ್ನು ನೋಡಬಹುದು. ಜ್ಯೋತಿಬಾ ಅವರನ್ನು ಕೇಂದ್ರವಾಗಿಟ್ಟುಕೊಂಡೇ ಈ ಬೃಹತ್ ಕೃತಿಯಲ್ಲಿ ಲೇಖಕರು, ರಾಷ್ಟ್ರಕೂಟರ ಪಾಠಲೇಶ್ವರ, ರಾಯಗಢ ರಾಜಕೀಯ, ಪುರಾಣದ ಬಲಿರಾಯ, ಚರಿತ್ರೆಯ ಶಿವರಾಯ, ಬಾದಶಾಹ ಅಕ್ಬರನ ಗೊಂದಲ, ಶಿವಾಜಿಗೆ ಇತಿಹಾಸ ಮಾಡಿದ ಅನ್ಯಾಯ, ವಾರಕರಿ ಸಿದ್ಧಾಂತಿ ನಾಮದೇವರ ಗೊಂದಲ, ಸಂತ ತುಕರಾಮ್, ಚಕ್ರಧರ ಸ್ವಾಮಿಯ ವಧೆ, ಕೋರೆಗಾಂವ್ ಕದನ, ಸಮತೆಯ ಧ್ವನಿ-ಗುಪ್ತಗಾಮಿನಿ ಪರಮ ಹಂಸ ಸಭಾ, ಜ್ಯೋತಿಬಾರ ಬೆಳಕಿನಲ್ಲಿ ಆಧುನಿಕ ಮಹಾರಾಷ್ಟ್ರ ಹೀಗೆ...ಪುರಾಣ-ಇತಿಹಾಸ ಮತ್ತು ವರ್ತಮಾನದ ರಾಜಕೀಯ, ಸಾಂಸ್ಕೃತಿಕ ಸಂಘರ್ಷಗಳನ್ನು ಚರ್ಚಿಸುತ್ತಾರೆ. ರವಿ ರಾ. ಅಂಚನ್ ಅವರ ಲೇಖನಧ ಜೀವದ್ರವ್ಯವೇ ಜ್ಯೋತಿಬಾ ಅವರು ನಂಬಿರುವ ನೆಲಮೂಲ ಸಂಸ್ಕೃತಿ. ಅದರ ತಳಹದಿಯಲ್ಲೇ ಇಲ್ಲಿರುವ ಎಲ್ಲ ಲೇಖನಗಳೂ ನಿಂತಿವೆ. ಈ ಬೃಹತ್ ಕೃತಿಯನ್ನು ನಾಲ್ಕು ಭಾಗವಾಗಿ ವಿಂಗಡಿಸಿದ್ದಾರೆ. ಮೊದಲ ಭಾಗಕ್ಕೆ ‘ಕ್ರಾಂತಿಯ ಉರಿ’ ಎಂದು ಹೆಸರು ನೀಡಿದ್ದಾರೆ. ಜ್ಯೋತಿಬಾ ಹುಟ್ಟುವ ಮುನ್ನ ಮಹಾರಾಷ್ಟ್ರ ಮತ್ತು ಈ ದೇಶದ ನೆಲದ ಸ್ಥಿತಿಗತಿಯನ್ನು ಅವರು ವಿವರಿಸುವ ಪ್ರಯತ್ನ ಮಾಡಿದ್ದಾರೆ. ಜ್ಯೋತಿಬಾ ಹುಟ್ಟುವ ಮೊದಲಿನ ವೈದಿಕ ರಾಜಕಾರಣದ ಎಳೆ ಎಳೆಯನ್ನು ಬೇರೆ ಬೇರೆ ಪುರಾಣ ಮತ್ತು ಇತಿಹಾಸ ಪಾತ್ರಗಳ ಮೂಲಕ ಅವರು ವಿಶ್ಲೇಷಿಸುತ್ತಾರೆ. ಸುಮಾರು 23 ಲೇಖನಗಳು ಈ ಭಾಗದಲ್ಲಿದೆ. ಎರಡನೆ ಭಾಗಕ್ಕೆ ‘ಕ್ರಾಂತಿಯ ಸಿರಿ’ ಎಂಬ ಹೆಸರನ್ನು ನೀಡಿದ್ದಾರೆ. ಇಲ್ಲಿ ಜ್ಯೋತಿಬಾ ಹುಟ್ಟು, ಬದುಕು, ಅವರ ಪರಿಸರಗಳನ್ನು ವಿವರಿಸುವ ಪ್ರಯತ್ನವನ್ನು ಮಾಡುತ್ತಾರೆ. ಜ್ಯೋತಿಬಾ ಅವರು ಕ್ರಾಂತಿಯ ಕಿಡಿಯಾಗುವುದಕ್ಕೆ ಕಾರಣವಾಗುವ ಪರಿಸರ, ಕುಟುಂಬ, ಗೆಳೆಯರು, ಗುರುಗಳು ಇವುಗಳನ್ನು ತೆರೆದಿಡುತ್ತಾರೆ. ಜ್ಯೋತಿಬಾ ಬದುಕಿಗೆ ಸಂಬಂಧಪಟ್ಟಂತೆ 21 ಮಹತ್ವದ ಲೇಖನಗಳಿವೆ. ಮೂರನೆ ಅಧ್ಯಾಯದ ಹೆಸರೇ ಕ್ರಾಂತಿಯ ಕಿಡಿ. ಜ್ಯೋತಿಬಾ ಚಿಂತನೆಯಿಂದ ಹೇಗೆ ಅಂದಿನ ಕಾಲಘಟ್ಟ ಸಣ್ಣಗೆ ಕಂಪಿಸುತ್ತದೆ ಮತ್ತು ಆ ಕಂಪನ ಹೇಗೆ ಹೊಸ ಆಲೋಚನೆ ಗಳಿಗೆ ಜನರ ಮನಸ್ಸನ್ನು ಸಿದ್ಧಗೊಳಿಸುತ್ತದೆ ಎಂಬುದನ್ನು ಹೇಳುತ್ತಾರೆ. ಈ ಅಧ್ಯಾಯದಲ್ಲಿ ಜ್ಯೋತಿಬಾ ಚಿಂತನೆಯಿಂದ ಸಮಾಜದಲ್ಲಿ ಆಗುವ ಬದಲಾವಣೆಗಳು, ಪ್ರಭಾವಗಳನ್ನು ವಿವರಿಸುತ್ತಾರೆ. ಕೊನೆಯ ‘ಕ್ರಾಂತಿಯ ಮುಡಿ’ಯಲ್ಲಿ ಜ್ಯೋತಿಬಾಫುಲೆಯ ಆಲೋಚನೆಗಳು ಹೇಗೆ ಪುರೋಗಾಮಿ ಚಳವಳಿಯ ರಜತ ದೀವಿಗೆಯಾಗುತ್ತದೆ ಎನ್ನುವುದನ್ನು ತಿಳಿಸುತ್ತಾರೆ. ಈ ಕೃತಿಯ ಅತೀ ದೊಡ್ಡ ಹಿರಿಮೆಯೆಂದರೆ ಇದು ಕೇವಲ ಜ್ಯೋತಿಬಾ ಅವರ ಆತ್ಮಚರಿತ್ರೆಯಾಗಿಯಷ್ಟೇ ಉಳಿಯದೇ, ನೆಲಮೂಲ ಜನರ ಕಥನವಾಗಿ ಬೆಳೆಯುತ್ತಾ ಹೋಗುವುದು. ಇತಿಹಾಸದಲ್ಲಿ ಮುಚ್ಚಿಹೋಗಿರುವ ಹತ್ತು ಹಲವು ಸತ್ಯಗಳನ್ನು ಹೊರತೆಗೆದು, ಅದರ ಧೂಳುಗಳನ್ನು ಕೊಡವಿ ನಮ್ಮ ಕಣ್ಣ ತೆರೆಸಿ ದಿಗ್ಭ್ರಮೆಗೆ ಒಳಪಡಿಸುತ್ತಾರೆ. ಮುನ್ನುಡಿಯಲ್ಲಿ ಚಂದ್ರಶೇಖರ ಪಾಲೆತ್ತಾಡಿಯವರು ಹೇಳುವಂತೆ ಇದು ಕೇವಲ ಜ್ಯೋತಿಬಾ ಅವರ ಅಧ್ಯಯನವಷ್ಟೇ ಅಲ್ಲ, ಜ್ಯೋತಿಬಾ ಬೆಳಕಿನ ಮೂಲಕ ಭಾರತದ ಚರಿತ್ರೆ ಯನ್ನು ವಿಶ್ಲೇಷಿಸುವ ಕೆಲಸವನ್ನು ಅಂಚನ್ ಮಾಡಿದ್ದಾರೆ. ಕೃಷಿ ಮೂಲ ಚರಿತ್ರೆಯೊಂದು ಅಂಚನ್ ಬರಹಗಳ ಮೂಲಕ ತೆರೆದುಕೊಳ್ಳುವ ವಿಸ್ಮಯ ವನ್ನು ಪ್ರತೀ ಓದುಗನೂ ನಿಸ್ಸಂಶಯವಾಗಿ ಈ ಕೃತಿಯ ಮೂಲಕ ತನ್ನದಾಗಿಸಿ ಕೊಳ್ಳುತ್ತಾನೆ. ಈ ಬೃಹತ್ ಕೃತಿಯ ಪುಟಗಳು 500. ಮುಖಬೆಲೆ 350 ರೂ. ಸಪ್ನ ಬುಕ್ ಹೌಸ್ ಕೃತಿಯನ್ನು ಪ್ರಕಟಿಸಿದೆ. ಆಸಕ್ತರು ಬೆಂಗಳೂರು ದೂರವಾಣಿ 40114455 ಸಂಖ್ಯೆಯನ್ನು ಸಂಪರ್ಕಿಸಬಹುದು.