ಅಜ್ಮೇರ್ ದರ್ಗಾ ಸ್ಫೋಟ ಪ್ರಕರಣ: ಸಾಧ್ವಿ ಪ್ರಗ್ಯಾ , ಇಂದ್ರೇಶ್ ಕುಮಾರ್ ದೋಷಮುಕ್ತಗೊಳಿಸಿದ ಎನ್‌ಐಎ

Update: 2017-04-03 15:04 GMT

ಹೊಸದಿಲ್ಲಿ, ಎ.3: ಅಜ್ಮೇರ್ ದರ್ಗಾದಲ್ಲಿ 2007ರಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕುರ್ , ಹಿರಿಯ ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ಸೇರಿದಂತೆ ನಾಲ್ವರನ್ನು ದೋಷಮುಕ್ತಗೊಳಿಸಿ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ವರದಿ ನೀಡಿದೆ.

ಸಾಧ್ವಿ ಪ್ರಗ್ಯಾ ಠಾಕುರ್ ಸಿಂಗ್, ಹಿರಿಯ ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ , ಪ್ರಿನ್ಸ್ ಮತ್ತು ರಾಜೇಂದ್ರ ಅವರನ್ನು ದೋಷಮುಕ್ತಗೊಳಿಸಿ ಎನ್‌ಐಎ ವರದಿ ನೀಡಿದ್ದು ಈ ವರದಿಯನ್ನು ಸ್ವೀಕರಿಸುವ ಬಗ್ಗೆ ಎಪ್ರಿಲ್ 17ರಂದು ನ್ಯಾಯಾಲಯ ನಿರ್ಧರಿಸಲಿದೆ ಎಂದು ಮೂಲಗಳು ತಿಳಿಸಿವೆ.

     ಈ ನಾಲ್ವರ ವಿರುದ್ಧದ ಆರೋಪವನ್ನು ಪುಷ್ಠೀಕರಿಸಲು ಸಾಕಷ್ಟು ಪುರಾವೆಗಳು ಲಭ್ಯವಿಲ್ಲ ಎಂದು ಭಯೋತ್ಪಾದಕ ನಿಗ್ರಹ ಏಜೆನ್ಸಿ ತಿಳಿಸಿದ ಕಾರಣ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಜೈಪುರದಲ್ಲಿರುವ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಈ ವರದಿಯನ್ನು ಸ್ವೀಕರಿಸುವ ಬಗ್ಗೆ ನ್ಯಾಯಾಲಯ ಎಪ್ರಿಲ್ 17ರಂದು ನಿರ್ಧರಿಸಲಿದೆ ಎಂದು ಸರಕಾರಿ ಅಭಿಯೋಜಕ ಅಶ್ವಿನಿ ಶರ್ಮ ತಿಳಿಸಿದ್ದಾರೆ.

ಇತರ ಮೂವರು ಆರೋಪಿಗಳಾದ ಸಂದೀಪ್ ಡಾಂಗೆ, ಸುರೇಶ್ ನಾಯರ್ ಮತ್ತು ರಾಮಚಂದ್ರ ಕಲ್‌ಸಂಗ್ರ ಅವರು ಇನ್ನೂ ತಲೆತಪ್ಪಿಸಿಕೊಂಡಿದ್ದಾರೆ.

 ಈ ಮೂವರ ಬಗ್ಗೆ ಸುಳಿವು ನೀಡಿದವರಿಗೆ ನಗದು ಬಹುಮಾನ ಘೋಷಿಸಿ, ಮೂವರು ಆರೋಪಿಗಳನ್ನು ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿ ದಾಖಲಿಸಿ ಎನ್‌ಐಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಮೂರನ್ನು ಬಂಧಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಅಸಮಾಧಾನ ಸೂಚಿಸಿದ ನ್ಯಾಯಾಲಯ, ಈ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಎನ್‌ಐಎ ಡಿಜಿಪಿಗೆ ಸೂಚಿಸಿದೆ.

ಅಜ್ಮೇರ್ ದರ್ಗಾದಲ್ಲಿ 2007ರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮೂವರು ಮೃತಪಟ್ಟು 17 ಮಂದಿ ಗಾಯಗೊಂಡಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ವಿಶೇಷ ಎನ್‌ಐಎ ನ್ಯಾಯಾಲಯ, ಹಿಂದೂ ಬಲಪಂಥೀಯ ಸಂಘಟನೆಯ ಕಾರ್ಯಕರ್ತರಾದ ಸುನಿಲ್ ಜೋಷಿ, ದೇವೇಂದ್ರ ಗುಪ್ತ ಮತ್ತು ಭವೇಶ್ ಭಾಯ್ ಪಟೇಲ್ ಅವರನ್ನು ದೋಷಿಗಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News