ಮಂಡ್ಯ: ರಣಬಿಸಿಲಿಗೆ ಜನಜಾನುವಾರು, ಪ್ರಾಣಿಪಕ್ಷಿ ತತ್ತರ ನೀರು, ಮೇವಿಗೆ ಹಾಹಾಕಾರ; ಬತ್ತಿದ ಕೆರೆಕಟ್ಟೆ, ಹಳ್ಳಕೊಳ್ಳಗಳು

Update: 2017-04-03 16:47 GMT

ಮಂಡ್ಯ, ಎ.3: ತೀವ್ರ ಬರಗಾಲದ ದವಡೆಗೆ ಸಿಲುಕಿರುವ ಸಕ್ಕರೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ಜನಜಾನುವಾರು, ಪ್ರಾಣಿಪಕ್ಷಿಗಳು ತತ್ತರಿಸತೊಡಗಿವೆ.

ದಿನೇ ದಿನೇ ಬೇಸಿಗೆ ಬಿಸಿಲು ತಾರಕ್ಕೇರುತ್ತಿದ್ದು, ಭೂಮಿ ಕಾದ ಕಾವಲಿಯಾಗುತ್ತಿದೆ. ರಣಬಿಸಿಲಿನ ಝಳಕ್ಕೆ ಜನಜಾನುವಾರು, ಪಕ್ಷಿ ಸಂಕುಲ ಝರ್ಜರಿತಗೊಂಡಿವೆ. ದೂರದ ಬಳ್ಳಾರಿ, ರಾಯಚೂರಿಗೆ ಸಮನಾಗಿ (39 ಡಿಗ್ರಿ ಸೆಲ್ಸಿಯಸ್) ಜಿಲ್ಲೆಯ ತಾಪಮಾನ ಏರುತ್ತಿದೆ.

ಕಾವೇರಿ ಮಾತೆಯ ಕೃಪೆಯಿಂದ ಕಬ್ಬು, ಭತ್ತ, ರಾಗಿ, ಹಿಪ್ಪುನೇರಳೆ, ಹೂವು, ತರಕಾರಿ, ಇತರ ಬೆಳೆಗಳಿಂದ ಹಸಿರು ತುಂಬಿ ಕಂಗೊಳಿಸುತ್ತಿದ್ದ ಭೂಮಿ ಅಕ್ಷರಸಹ ಮರುಭೂಮಿಯಂತಾಗಿದೆ.

 ತಲಕಾವೇರಿ, ಕೊಡಗು ಒಳಗೊಂಡಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಮೂರುನಾಲ್ಕು ವರ್ಷದಿಂದ ಮಳೆ ಕ್ಷೀಣವಾಗುತ್ತಿದ್ದು, ಕನ್ನಂಬಾಡಿ ಕಟ್ಟೆ(ಕೆಆರ್‌ಎಸ್ ಜಲಾಶಯ)ಗೆ ಸಾಕಷ್ಟು ನೀರು ಹರಿದು ಬರುತ್ತಿಲ್ಲ.

ಪ್ರತಿವರ್ಷ ತುಂಬಿಹರಿಯುತ್ತಿದ್ದ ಕಾವೇರಿ ಮೂರು ವರ್ಷದಿಂದ ಮೈದುಂಬಲಿಲ್ಲ, ಕನ್ನಂಬಾಡಿ ಕಟ್ಟೆ ತುಂಬಲಿಲ್ಲ. ಬಂದ ಬಹುಪಾಲು ನೀರು ತಮಿಳುನಾಡು ಸೇರಿದರೆ, ಉಳಿದಿರುವ ನೀರು ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಯ ಜನರ ಬಾಯಾರಿಕೆಗೂ ಸಾಲುತ್ತಿಲ್ಲ.

ಬಣಗುಡುತ್ತಿವೆ ಕೆರೆಕಟ್ಟೆ, ಹಳ್ಳಗಳು: ಕಡುಬೇಸಿಗೆಯಲ್ಲೂ ನೀರು ಉಳಿಸಿಕೊಳ್ಳುತ್ತಿದ್ದ ಕೆರೆಕಟ್ಟೆಗಳು ಈ ವರ್ಷ ಸಂಪೂರ್ಣವಾಗಿ ಒಣಗಿ ಹೋಗಿ ಬಣಗುಡುತ್ತಿವೆ. ಹೊಲಗದ್ದೆಗಳ ನಡುವೆ ಹರಿಯುತ್ತಿದ್ದ ಸಣ್ಣಪುಟ್ಟ ಹಳ್ಳಗಳಲ್ಲೂ ಗುಟುಕು ನೀರು ಸಿಗುತ್ತಿಲ್ಲ. ಇಡೀ ಕೃಷಿ ಪ್ರದೇಶ ಮರುಭೂಮಿಂತಾಗಿದೆ.

ನಾಲೆಗಳಲ್ಲಿ ದಿಢೀರ್ ನೀರು ನಿಲಗಡೆ, ಮಳೆಯಾಗದ ಕಾರಣ, ಸಾವಿರಾರು ರೂ. ಸಾಲಸೋಲ ಮಾಡಿ ಬೆಳೆಯಲಾಗಿದ್ದ ಭತ್ತ, ರಾಗಿ ಫಸಲು ರೈತನ ಕೈಗೆ ಸಿಗಲಿಲ್ಲ. ಶೇ.3ರಷ್ಟು ಫಸಲು ಸಿಕ್ಕಿದ್ದರೇ ಅದೇ ದೊಡ್ಡದು!

ಬೆಳೆನಷ್ಟದಿಂದ ಜನತೆಗೆ ಆಹಾರದ ಸಮಸ್ಯೆ ಎದುರಾಗಿದೆ. ಕೂಲಿಕಾರ್ಮಿಕರು, ಬಡವರ ಸ್ಥಿತಿ ಚಿಂತಾಜನಕವಾಗಿದೆ. ಸರಕಾರದ ಅನ್ನಭಾಗ್ಯ ಯೋಜನೆಯಿಂದ ದೊರೆಯುತ್ತಿರುವ ಪಡಿತರ ಬಡವರ ಹೊಟ್ಟೆ ಹಸಿವನ್ನು ನೀಗಿಸುತ್ತಿದೆ.

ಕುಡಿಯುವ ನೀರಿಗೆ ಹಾಹಾಕಾರ: ಬೇಸಗೆಯ ತಾಪ ಹೆಚ್ಚುತ್ತಿದ್ದಂತೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ನೀರು ಪೂರೈಸುತ್ತಿದ್ದ ಕೊಳವೆಬಾವಿಗಳು ಬತ್ತಿಹೋಗುತ್ತಿವೆ. ಸಾವಿರ ಅಡಿ ತೋಡಿದರೂ ನೀರು ಬರುತ್ತಿಲ್ಲ. ಇದರಿಂದಾಗಿ ಜನರು ನೀರಿಗಾಗಿ ಪರದಾಡುತ್ತಿದ್ದಾರೆ.

ಜಾನುವಾರುಗಳಿಗೂ ಕುಡಿಯಲು ಸಾಕಷ್ಟು ನೀರು ದೊರೆಯುತ್ತಿಲ್ಲ. ಬೆಳೆನಷ್ಟದಿಂದ ಮೇವಿನ ಕೊರತೆ ತೀವ್ರವಾಗಿದೆ. ಮರಳುಗಾಡಿನಂತಾಗಿರುವ ಹೊಲಗದ್ದೆಗಳಲ್ಲೂ ಮೇವು ಇಲ್ಲ. ಸರಕಾರವೂ ಸಮರ್ಪಕವಾಗಿ ಮೇವು ಬ್ಯಾಂಕ್ ತೆರೆದಿಲ್ಲ. ರಾಸುಗಳನ್ನು ಬಿಡಿಗಾಸಿಗೂ ಕೊಳ್ಳುವವರಿಲ್ಲ.

ನೀರಾವರಿ ಪ್ರದೇಶಗಳಾದ ಪಾಂಡವಪುರ, ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಕೆ.ಆರ್.ಪೇಟೆಯಲ್ಲೇ ಕುಡಿಯುವ ನೀರು, ಮೇವಿಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಒಣ ತಾಲೂಕುಗಳಾದ ನಾಗಮಂಗಲ, ಮಳವಳ್ಳಿಗಳ ಜನರ ಸ್ಥಿತಿ ಆತಂಕಕಾರಿಯಾಗಿದೆ. ಬಹುತೇಕ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ.

ಒಟ್ಟಾರೆ, ಜಿಲ್ಲೆಯ ಪರಿಸ್ಥಿತಿ ಆತಂಕಕಾರಿಯಾಗಿದೆ. ಮಳೆಬಾರದಿದ್ದರೆ ಜನರು ಮತ್ತಷ್ಟು ಕಷ್ಟದ ದಿನಗಳನ್ನು ಎದುರು ನೋಡಬೇಕಾಗಿದೆ. ಈಗಾಗಲೇ ಮಹಿಳೆಯರು ಗಾರ್ಮೆಂಟ್ಸ್ ಕೆಲಸದತ್ತ ಮುಖಮಾಡಿದ್ದರೆ, ಉದ್ಯೋಗವಿಲ್ಲದ ಪುರುಷರು, ಯುವಕರು ಅಂಗಡಿ, ಅರಳಿಕಟ್ಟೆಗಳನ್ನು ಆಶ್ರಯಿಸಿದ್ದಾರೆ. ನಡುವೆ ಸಾಲ ಕೊಟ್ಟವರು, ಬ್ಯಾಂಕ್‌ನವರು ನೊಟೀಸ್ ಜಾರಿ ಮಾಡುತ್ತಿದ್ದಾರೆ. ಮತ್ತೆ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದೆ. ಸರಕಾರ, ಅಧಿಕಾರಿಗಳು ಜನರ ಸಂಕಷ್ಟವನ್ನು ಅರಿತು ಕೆಲಸಮಾಡಬೇಕಾಗಿದೆ.

ಸಾಲದ ಸುಳಿಗೆ ಬೀಳುತ್ತಿರುವ ರೈತರು!

ಈ ನಡುವೆ ಕೆಲವು ರೈತರು ಇರುವ ಹಿಪ್ಪುನೇರಳೆ, ಇತರ ಬೆಳೆಗಳನ್ನಾದರೂ ಉಳಿಸಿಕೊಳ್ಳಲು ಹಠಕ್ಕೆ ಬಿದ್ದಂತೆ, ಕೊಳವೆಬಾವಿ ತೋಡಿಸುತ್ತಿದ್ದಾರೆ. ಸಾವಿರ ಅಡಿ ತೋಡಿದರೂ ನೀರು ಬರದೆ ಸಾಲದ ಸುಳಿಗೆ ಬೀಳುತ್ತಿದ್ದಾರೆ. ಕೊಳವೆಬಾವಿ ತೋಡುವುದಕ್ಕೆ ನಿಷೇಧವಿದ್ದರೂ, ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ!

Writer - ಕುಂಟನಹಳ್ಳಿ ಮಲ್ಲೇಶ

contributor

Editor - ಕುಂಟನಹಳ್ಳಿ ಮಲ್ಲೇಶ

contributor

Similar News