ಭದ್ರತಾ ಲೋಕದಲ್ಲಿ: ನಮ್ಮ ನಗರ ಕಾಯುವ ಸೈನಿಕರು
ಈ ದೇಶದಲ್ಲಿ ಪೊಲೀಸ್ ಅಧಿಕಾರಿಗಳು, ಸೇನೆಯ ಹಿರಿಯ ನಾಯಕರು, ಹಿರಿಯ ಪತ್ರಕರ್ತರು ತಮ್ಮ ತಮ್ಮ ಬದುಕಿನ ಅನುಭವಗಳನ್ನು ಅದೇನೋ ಬಹುದೊಡ್ಡ ಸಂಗತಿಗಳಾಗಿ ತೆರೆದುಕೊಡುವುದು, ಮಾಧ್ಯಮಗಳಲ್ಲಿ ವಿಜೃಂಭಿಸುವುದನ್ನು ನಾವು ನೋಡಿದ್ದೇವೆ. ಆದರೆ ಇದೇ ವ್ಯವಸ್ಥೆಯ ತಳಸ್ತರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಪೇದೆಗಳು ಅಥವಾ ಸೇನೆಯ ಜವಾನರು ತಮ್ಮ ಆತ್ಮಕತೆಗಳನ್ನು ಬರೆದರೆ, ಅಥವಾ ತಮ್ಮ ಬದುಕನ್ನು ತೆರೆದಿಟ್ಟರೆ ಏನಾಗಬಹುದು? ಈ ಪ್ರಶ್ನೆಗೆ ಉತ್ತರಗಳನ್ನು ನಾವು ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲೇ ಓದುತ್ತಿದ್ದೇವೆ. ತನಗೆ ಸಿಗುವ ಆಹಾರ, ಸವಲತ್ತುಗಳನ್ನು ಜಗತ್ತಿಗೆ ತೋಡಿಕೊಂಡ ಜವಾನನೊಬ್ಬ ಮೇಲಧಿಕಾರಿಗಳಿಂದ ದಯನೀಯ ಸ್ಥಿತಿಯನ್ನು ಅನುಭವಿಸಬೇಕಾಯಿತು. ಅಂತೆಯೇ ಓರ್ವ ಯೋಧ ಆತ್ಮಹತ್ಯೆ ಮಾಡಿಕೊಳ್ಳಬೇಕಾದಂತಹ ಸನ್ನಿವೇಶ ಎದುರಾಯಿತು. ಯಾವತ್ತೂ ಮೇಲ್ದರ್ಜೆಯ ಅಧಿಕಾರಿಗಳ ಆತ್ಮಕತೆಗಳು ರೋಚಕವಾಗಿರುತ್ತದೆ. ಇದೇ ಸಂದರ್ಭದಲ್ಲಿ ತಳಸ್ತರದ ಸಿಬ್ಬಂದಿ ಬಾಯಿತೆರೆದರೆ ಅದು ಆಘಾತಕಾರಿಯಾಗಿರುತ್ತದೆ. ‘ಸೆಕ್ಯೂರಿಟಿ ಗಾರ್ಡ್’ಗಳಿಲ್ಲದ ವ್ಯವಸ್ಥೆಯನ್ನು ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ದ್ದೇವೆ. ಯೂನಿಫಾರ್ಮ್‌ಗಳನ್ನು ಹಾಕಿಕೊಂಡು, ಕೈಯಲ್ಲಿ ಲಾಠಿ, ವಿಸಿಲ್, ಕೆಲವೊಮ್ಮೆ ಸಣ್ಣ ದೊಂದು ಕೋವಿ ಹಿಡಿದು ನಿಂತಿರುವ ಇವರನ್ನು ‘ಉದ್ಧಟರು’ ‘ಅಧಿಕ ಪ್ರಸಂಗಿಗಳು’ ಎಂಬ ರೀತಿಯಲ್ಲೇ ಸಮಾಜ ಸ್ವೀಕರಿಸುತ್ತಾ ಬಂದಿದೆ. ಎಲ್ಲ ಪ್ರತಿಷ್ಠಿತ ಸಂಸ್ಥೆಗಳಿಗೂ ಇವರು ಅನಿವಾರ್ಯ. ಇಂದು ರಸ್ತೆ ಬದಿ ಸಾಲು ಸಾಲಾಗಿ ನಿಂತಿರುವ ಎಟಿಎಂಗಳ ಮುಂದೆ ಜೀವವನ್ನು ಒತ್ತೆಯಿಟ್ಟು ನಿಂತಿರುವ ಈ ಸೆಕ್ಯೂರಿಟಿ ಗಾರ್ಡ್‌ಗಳ ಸೇವೆಗಳಿಗೆ ಬೆಲೆಕಟ್ಟುವುದಕ್ಕೆ ಸಾಧ್ಯವಿಲ್ಲ. ಆದರೆ ಈ ತಳಸ್ತರದ ಸಿಬ್ಬಂದಿಯ ಒಳ ಬದುಕಿನ ದುಃಖ, ಸಂಕಟಗಳೇ ಬೇರೆಯದು. ಹೊಳೆನರಸೀಪುರ ಮಂಜುನಾಥ ಅವರು ಬರೆದಿರುವ ‘ಭದ್ರತಾ ಲೋಕದಲ್ಲಿ’ ಕೃತಿಯು ಸೆಕ್ಯೂರಿಟಿ ಬದುಕಿನ ಸುಖ-ದುಃಖಗಳನ್ನು ತೆರೆದಿಡುತ್ತದೆ. ಸಮಾಜ ದಲ್ಲಿ ಇವರು ಎದುರಿಸುವ ತಾತ್ಸಾರ, ಗುತ್ತಿಗೆ ಕಂಪೆನಿಗಳು ಇವರನ್ನು ಶೋಷಿಸುವ ರೀತಿ, ಕಡಿಮೆ ವೇತನ, ಬಡತನ, ಹಗಲು ನಿದ್ದೆ, ರಾತ್ರಿ ಕೆಲಸ ಇವೆಲ್ಲವನ್ನು ಹೃದಯಸ್ಪರ್ಶಿಯಾಗಿ ಈ ಕೃತಿ ತೆರೆದಿಡುತ್ತದೆ. ನಿವೃತ್ತ ಪೊಲೀಸ್ ಸಿಬ್ಬಂದಿ, ಸೇನಾ ಜವಾನರೂ ಬಳಿಕ ಸೆಕ್ಯೂರಿಟಿ ಗಾರ್ಡ್ ಗಳಾಗಿ ತಮ್ಮ ಬದುಕನ್ನು ಸವೆಸುವುದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸೇನೆ, ಪೊಲೀಸ್ ಸೇರುವ ಕನಸುಗಳು ಈಡೇರದೆ ಅಂತಿಮವಾಗಿ ಸೆಕ್ಯೂರಿಟಿ ಗಾರ್ಡ್‌ನ ಯೂನಿಫಾರ್ಮ್ ಧರಿಸಿ ತೃಪ್ತಿ ಪಟ್ಟುಕೊಳ್ಳುವ ನೂರಾರು ಯುವಕರು ಇವರೊಳಗಿದ್ದಾರೆ. ಈಶಾನ್ಯ ಭಾರತದಿಂದ ಇಲ್ಲಿಗೆ ಬಂದು, ಅನ್ಯರಾಗಿ ಬದುಕು ಸವೆಸುತ್ತಾ, ಸ್ಥಳೀಯರು ಮತ್ತು ಗುತ್ತಿಗೆ ಕಂಪೆನಿಗಳ ತಾತ್ಸಾರ, ನಿಂದನೆಗಳಿಗೆ ಗುರಿಯಾಗುತ್ತಾ ಬದುಕುವ ನೂರಾರು ಯುವಕರನ್ನೂ ನಾವು ಕಾಣಬಹುದು. ಸೆಕ್ಯೂರಿಟಿ ಗಾರ್ಡ್ ಎನ್ನುವುದು ಬರೀ ಸಂಬಳಕ್ಕಾಗಿ ಮಾಡುವ ಕೆಲಸವಲ್ಲ. ಇದರಲ್ಲೂ ಅದರಾಚೆಗಿನ ವೌಲ್ಯಗಳಿವೆ. ದೇಶವಿದೇಶಗಳ ಸೆಕ್ಯೂರಿಟಿ ಜಗತ್ತಿನಲ್ಲಿ ಬಹುದೊಡ್ಡ ಅನುಭವ ಗಳಿಸಿರುವ ಹೊಳೆನರಸೀಪುರ ಮಂಜುನಾಥ್ ಅವರ ಈ ಕೃತಿ, ಸಮಾಜದಲ್ಲಿ ಅನಿವಾರ್ಯವಾಗಿರುವ ಒಂದು ಹುದ್ದೆಯನ್ನು ವಹಿಸಿ ಇದ್ದೂ ಇಲ್ಲದಂತೆ ಬದುಕುತ್ತಿರುವ ಒಂದು ದೊಡ್ಡ ವರ್ಗದ ಬದುಕಿನ ಭಿನ್ನ ಕಥನವನ್ನು ತೆರೆದಿಡುತ್ತದೆ.
ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಕೋಡೂರು, ಶಿವಮೊಗ್ಗ ಜಿಲ್ಲೆ ಇವರು ಈ ಕೃತಿಯನ್ನು ಹೊರತಂದಿದ್ದಾರೆ. ಪುಟಗಳು 104. ಮುಖಬೆಲೆ 80 ರೂಪಾಯಿ. ಆಸಕ್ತರು 97315 54955 ದೂರವಾಣಿಯನ್ನು ಸಂಪರ್ಕಿಸಬಹುದು.