ವೌಲ್ಯಗಳ ಹೊಸ ಪ್ರಜ್ಞೆ ಬಿತ್ತುವ ನರೇಂದ್ರ ದೇವ ಚಿಂತನೆ
ಭಾರತದಲ್ಲಿ ಸಮಾಜವಾದಿ ಚಿಂತನೆಗಳನ್ನು ಬೆಳೆಸಿದ ಪ್ರಮುಖರಲ್ಲಿ ಆಚಾರ್ಯ ನರೇಂದ್ರ ದೇವ ಅವರೂ ಒಬ್ಬರು. ಆದರೆ ಇತರ ಸಮಾಜವಾದಿ ನಾಯಕರಂತೆ ಅವರ ಹೆಸರುಗಳು ರಾಜಕೀಯ ರಂಗದಲ್ಲಿ ಮುನ್ನೆಲೆಗೆ ಬರಲಿಲ್ಲ. ಬೌದ್ಧಿಕ ನೆಲೆಯಲ್ಲಿ ಸಮಾಜವಾದಿ ಚಿಂತನೆಯನ್ನು ಹರಡುವಲ್ಲಿ ಆಚಾರ್ಯರ ಪಾತ್ರ ದೊಡ್ಡದು. ಭಾರತಕ್ಕೆ ಸ್ವಾತಂತ್ರ ಲಭಿಸುವುದು ಎಷ್ಟು ಮುಖ್ಯವೋ, ಅದರ ಜೊತೆಗೆ ಜನರು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರಗಳನ್ನು ಪಡೆದು ಆರೋಗ್ಯಕರ ಸಮಾಜವಾದಿ ಸಮಾಜದಲ್ಲಿ ಬದುಕಬೇಕು ಎನ್ನುವುದು ಅವರ ಗುರಿಯಾಗಿತ್ತು. ರೈತವರ್ಗದ ಕ್ರಾಂತಿಯನ್ನು ಗುರುತಿಸಿ, ತಳಸ್ತರದ ಸಾಮಾಜಿಕ ಕ್ರಾಂತಿಯ ಕನಸನ್ನು ಅವರು ಕಂಡರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಆಚಾರ್ಯ ನರೇಂದ್ರ ದೇವರ ಚಿಂತನೆಗಳನ್ನು ಒಟ್ಟು ಕೂಡಿಸುವ ಪ್ರಯತ್ನವನ್ನು ‘ಆಚಾರ್ಯ ನರೇಂದ್ರ ದೇವ ಅವರ ಸಮಾಜವಾದಿ ವಿಚಾರ ಧಾರೆ’ ಕೃತಿಯಲ್ಲಿ ಮಾಡಿದೆ. ಪ್ರೊ. ಹನುಮಂತ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಮೊದಲ ಅಧ್ಯಾಯದಲ್ಲಿ ತಾವು ಬೆಳೆದು ಬಂದ ದಾರಿಯನ್ನು ದೇವ ಅವರು ನೆನಪಿಸಿಕೊಂಡಿದ್ದಾರೆ. ಸಮಾಜವಾದದ ಕಡೆಗೆ ನಡೆದು ಬಂದ ದಾರಿಯಲ್ಲಿ ಅವರಿಗೆ ಎದುರಾದ ಸವಾಲುಗಳನ್ನು ಈ ಅಧ್ಯಾಯದಲ್ಲಿ ಸ್ಮರಿಸಿಕೊಂಡಿದ್ದಾರೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ತಿಕ್ಕಾಟ, ಈ ಸಂದರ್ಭದಲ್ಲಿ ದೇವ ಅವರ ಮುಂದಿದ್ದ ಗೊಂದಲ ಅಂತಿಮವಾಗಿ ಅವರು ತಳೆದ ನಿರ್ಧಾರಗಳೆಲ್ಲ ಕುತೂಹಲಕರವಾಗಿದೆ. ಸಮಾಜವಾದಿ ಚಿಂತನೆಯ ಹಿನ್ನೆಲೆ ಮುನ್ನೆಲೆಯನ್ನು ‘ಸಮಾಜವಾದ’ ಎನ್ನುವ ಅಧ್ಯಾಯದಲ್ಲಿ ಚರ್ಚಿಸುತ್ತಾರೆ. ಇದರಲ್ಲಿ ಕೆಲವು ಪ್ರಾಥಮಿಕ ಮಾಹಿತಿಗಳೂ ಸೇರಿಕೊಂಡಿವೆ. ಭಾರತೀಯ ಸಮಾಜವಾದ, ಅದರ ಸಂಕ್ರಮಣ ಘಟ್ಟ, ಮಾರ್ಕ್ಸ್‌ವಾದದ ಜೊತೆಗಿನ ಸಂಬಂಧ, ರಾಷ್ಟ್ರೀಯತೆಯ ಕುರಿತಂತೆ ಸಮಾಜದದ ನಿಲುವು, ರೈತ ಹೋರಾಟ, ಭೂಸುಧಾರಣೆ ಅದರ ಪರಿಣಾಮಗಳ ಬಗ್ಗೆ ಚರ್ಚಿಸಿದ್ದಾರೆ. ಜನತಂತ್ರ ಅಧ್ಯಾಯದಲ್ಲಿ ಪಂಚಾಯತ್ ರಾಜ್‌ನ ಪರಿಣಾಮಕಾರಿ ಕ್ರಮದ ಕುರಿತಂತೆ ಬರೆಯುತ್ತಾರೆ. ಸ್ವಾತಂತ್ರದ ಪರಿಭಾವನೆ, ಜಾತಿ ಪದ್ಧತಿ ಹೇಗೆ ಜನತಂತ್ರವನ್ನು ನಿಯಂತ್ರಿಸುತ್ತಿವೆ ಎನ್ನುವುದರ ಕಡೆಗೆ ಬೆರಳು ತೋರಿಸಿದ್ದಾರೆ. ಸಂಸ್ಕೃತಿ ಅಧ್ಯಾಯದಲ್ಲಿ ಕೋಮುವಾರು ಸಮಸ್ಯೆಯನ್ನು ಸಮಾಜವಾದಿ ದೃಷ್ಟಿಕೋನದಲ್ಲಿ ನೋಡಿದ್ದಾರೆ. ಜನತೆಯಲ್ಲಿ ವೌಲ್ಯಗಳ ಹೊಸ ಪ್ರಜ್ಞೆಯನ್ನು ಬಿತ್ತುವುದರಿಂದ, ಈಗಿರುವ ಸಾಮಾಜಿಕ ವ್ಯವಸ್ಥೆಯನ್ನು ಕ್ರಾಂತಿಕಾರಿಯನ್ನಾಗಿ ಮಾಡುವುದರಿಂದ, ಒಂದೇ ಜನಾಂಗ ಹಾಗೂ ಸೋದರತನ ಎಂಬ ವಿಚಾರಗಳನ್ನು ಬೆಳೆಸುವುದರಿಂದ ಹಾಲಿ ಇರುವ ಅಸಮಾನತೆಗಳನ್ನು, ಅವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಹಾಗೂ ಬುಡಸಹಿತ ಕಿತ್ತು ಹಾಕಬಹುದು ಎಂಬ ಆಚಾರ್ಯ ನರೇಂದ್ರ ದೇವ ಅಭಿಪ್ರಾಯ ಒಟ್ಟು ಕೃತಿಯ ಉದ್ದೇಶವೂ ಹೌದು. ಒಟ್ಟು ಪುಟಗಳು 242. ಕೃತಿಯ ಮುಖಬೆಲೆ 125. ಆಸಕ್ತರು ಬೆಂಗಳೂರಿನ 23183311 ದೂರವಾಣಿಯನ್ನು ಸಂಪರ್ಕಿಸಬಹುದು.