ರೋಗ ಬೇಡ, ರೋಗಭಯವೂ ಬೇಡ..

Update: 2017-04-06 18:46 GMT

ಒಂದಲ್ಲ ಒಂದು ದಿನ ಎಲ್ಲರಿಗೂ ಬಂದೆರಗುವ ಸಾವಿನ ಮನೆಯ ಕಡೆಗೆ ನೋವಿಲ್ಲದ ದಾರಿಯಲ್ಲಿ, ದೀರ್ಘಕಾಲ ಸುಖವಾಗಿ ಕ್ರಮಿಸಿ ತಲುಪಬೇಕೆನ್ನುವುದು ಮನುಷ್ಯರ ಹಂಬಲ. ಇರುವಷ್ಟು ಕಾಲ ನೆಮ್ಮದಿಯಾಗಿ, ಕ್ರಿಯಾಶೀಲವಾಗಿ, ಸಂತೋಷವಾಗಿ ಬದುಕಲು ಸಾಧ್ಯವಾಗುವುದೇ ಆರೋಗ್ಯ. ಅನಾರೋಗ್ಯ ಬರುವ ಮೊದಲೇ ಆರೋಗ್ಯ ಕುರಿತು ಕಾಳಜಿ ವಹಿಸಬೇಕೆನ್ನುವುದು ವರ್ಷದಲ್ಲಿ ಒಂದು ದಿನವನ್ನು (ಎಪ್ರಿಲ್ 7) ವಿಶ್ವ ಆರೋಗ್ಯ ದಿನವನ್ನಾಗಿ ಗುರುತಿಸಿರುವುದರ ಹಿಂದಿನ ಆಶಯವಾಗಿದೆ. ‘ಕ್ರಿ.ಶ. 2000ದ ಹೊತ್ತಿಗೆ ಸರ್ವ ರಿಗೂ ಆರೋಗ್ಯ ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ಮಹತ್ವಾಕಾಂಕ್ಷೆಯ ಗುರಿಯಾಗಿದ್ದರೂ ಬಹುನಿರೀಕ್ಷಿತ 2000ನೆ ಇಸವಿಯು ಬಂತು, ಹೋಯಿತು. ಮತ್ತೆ 17 ವರ್ಷವೂ ಕಳೆಯಿತು. ಆದರೆ ‘ಎಲ್ಲರಿಗೂ ಆರೋಗ್ಯ’ ಇವತ್ತಿಗೂ ಕನಸೇ ಆಗಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಬದುಕಲರ್ಹ ಸೂಕ್ತ ವ್ಯವಸ್ಥೆ ಕಲ್ಪಿಸಲು ಆಳುವವರು ವಿಫಲಗೊಳ್ಳುತ್ತಿರುವುದು, ಬದಲಾಗುತ್ತಿರುವ ಜೀವನ ಶೈಲಿ-ಆಹಾರ ಶೈಲಿ-ಮೌಲ್ಯವ್ಯವಸ್ಥೆಗಳು ಅನಾರೋಗ್ಯದ ಮುಖ್ಯ ಕಾರಣಗಳಾಗಿವೆ.

ಊಟ ಬಲ್ಲವಗೆ ರೋಗವಿಲ್ಲ

ಭಾರತ ಅತಿಗಳ ದೇಶ. ಇಲ್ಲಿ ಎಲ್ಲ ಅತಿಗಳೂ ಢಾಳಾಗಿ ಕಣ್ಣಿಗೆರಚುತ್ತವೆ. ಆಹಾರ ಕುರಿತ ಅತಿಯೂ ಅನಾರೋಗ್ಯಕ್ಕೆ ಮುಖ್ಯ ಕಾರಣವಾಗಿದೆ. ಒಂದು ಕಡೆ ತಿಂದು ಮಿಗುವಷ್ಟು ಸಮೃದ್ಧಿಯಿಂದ ಬರುವ ಬೊಜ್ಜು ಮತ್ತಿತರ ಕಾಯಿಲೆಗಳು, ಮತ್ತೊಂದೆಡೆ ಹಸಿವೆಯಿಂದ ಬರುವ ಅಪೌಷ್ಟಿಕತೆಯ ಕಾಯಿಲೆ. ಆರೋಗ್ಯ-ಆಹಾರ ಕುರಿತ ಅಜ್ಞಾನ ಹಾಗೂ ತಪ್ಪುಜ್ಞಾನ ಬಡವ-ಶ್ರೀಮಂತರಿಬ್ಬರಲ್ಲೂ ಕಂಡುಬರುತ್ತದೆ. ಜೊತೆಗೆ ಆಹಾರ ಇಷ್ಟಾನಿಷ್ಟಗಳು, ಶುದ್ಧ ನೀರು-ಆಹಾರದ ಬಗೆಗಿನ ಉಪೇಕ್ಷೆ ಮತ್ತು ಶ್ರಮರಹಿತ ಜೀವನಶೈಲಿಗಳು ಜನಭರಿತ ಭಾರತವು ರೋಗಿಭರಿತ ಭಾರತವಾಗುವಂತೆ ಮಾಡಿವೆ. ಹುಟ್ಟಿನಿಂದ ಆರೋಗ್ಯ ಮತ್ತು ಅನಾರೋಗ್ಯ ಎರಡೂ ಬರುತ್ತವೆ. ಆದರೆ ಮನುಷ್ಯ ಹುಟ್ಟಿರುವುದು ಕಾಯಿಲೆ ಅನುಭವಿಸುವುದಕ್ಕಲ್ಲ. ಕ್ರಿಯಾಶೀಲವಾಗಿ ಬದುಕಲಿಕ್ಕೆ. ದುರಂತವೆಂದರೆ ಇವತ್ತಿನ ಕ್ರಿಯಾಶೀಲತೆಯೇ ಬಹಳಷ್ಟು ಹೊಸಕಾಲದ ಕಾಯಿಲೆಗಳಿಗೆ ಕಾರಣವಾಗಿದೆ. ಬರುವ ಕಾಯಿಲೆಗಳಿಗಿಂತ ‘ಬರಿಸಿಕೊಳುವ ಕಾಯಿಲೆ’ಗಳು ಬಾಧಿಸುವುದೇ ಹೆಚ್ಚಾಗಿದೆ. ‘ಬರಿಸಿಕೊಳುವ ಕಾಯಿಲೆ’ಗಳ ತಡೆಗಟ್ಟಲು ಕೈ ಬಾಯಿಗಳ ಹತೋಟಿ, ಅದರಲ್ಲೂ ಹರೆಯ ದಾಟಿದವರಿಗೆ ತುಂಬ ಅವಶ್ಯವಾಗಿದೆ. ಯಾವುದು ತಿನ್ನಬೇಕು, ಯಾವುದು ತಿನ್ನಬಾರದು? ಇದೊಂದು ದೊಡ್ಡ ದ್ವಂದ್ವ. ಈ ಕುರಿತು ದಿನಕ್ಕೊಂದೊಂದು ಸಲಹೆಗಳು ತೇಲಿಬರುತ್ತ ಜನರನ್ನು ಗೊಂದಲಗೊಳಿಸುತ್ತಿವೆ. ಸರಳವಾಗಿ ಹೇಳುವುದಾದರೆ: ಆರೋಗ್ಯದೆಡೆಗಿನ ಮೊದಲ ಬಹುಮುಖ್ಯ ಮಾರ್ಗ ಮಿತ ಆಹಾರ. ಮಿತ ಎಂದರೆ ಕಡಿಮೆ ಎಂದರ್ಥವಲ್ಲ, ‘ಎಷ್ಟು ಬೇಕೋ ಅಷ್ಟು. ನಮ್ಮ ರುಚಿ, ಆದಾಯ, ಲಭ್ಯತೆ ಮತ್ತು ದೇಹದ ಆವಶ್ಯಕತೆಗೆ ತಕ್ಕ ಸರಳ ಆಹಾರ, ಮಿತ ಆಹಾರ ಮತ್ತು ಸಮತೋಲನ ಆಹಾರವೇ ಮಿತಾಹಾರ. ನಮ್ಮ ದೇಹ ತನಗೆ ಏನು ಬೇಕು, ಯಾವುದು ಆಗುವುದಿಲ್ಲವೆಂದು ಸದಾ ಪಿಸುಗುಡುತ್ತಲೇ ಇರುತ್ತದೆ. ಈ ಮೆಲುಮಾತನ್ನು ಕೇಳದೇ, ಆರೋಗ್ಯಕರ ಜೀವನವಿಧಾನ ಅನುಸರಿಸದೇ ಹೋದಾಗ ರೋಗಭಯ ನಮ್ಮನ್ನು ಆಳತೊಡಗುತ್ತದೆ. ಹೈಟೆಕ್ ಮೋಸ ವಿದ್ಯಾವಂತ ಜನ ಆರೋಗ್ಯದ ಬಗೆಗೆ ಸಾಮಾನ್ಯ ಜ್ಞಾನ ಹಾಗೂ ಕಾಳಜಿ ಹೊಂದಿರುವಂತೆ ಮೇಲ್ನೋಟಕ್ಕೆ ತೋರುತ್ತದೆ. ಆದರೆ ಕೆಲವರು ತಮಗಾಗುವ ಸಣ್ಣಪುಟ್ಟ ನೈಸರ್ಗಿಕ ತೊಂದರೆಗಳಿಗೂ ನೆಟ್ ಜ್ಞಾನ ಜಾಲಾಡಿ, ತಜ್ಞ ವೈದ್ಯರನ್ನು ಸಂಪರ್ಕಿಸಿ, ಮುಂದೆಂದೋ ಬರಬಹುದಾದ ಕಾಯಿಲೆಗಳನ್ನೆಲ್ಲ ಇಂದೇ ಆವಾಹಿಸಿಕೊಂಡು, ‘ಹೈಪೋಕಾಂಡ್ರಿಯಾ’ ಅಥವಾ ರೋಗಭಯಕ್ಕೆ ಒಳಗಾಗುತ್ತಾರೆ. ಮತ್ತೆ ಕೆಲವರು ಘನವಾದ ತೊಂದರೆಯಿದ್ದಾಗಲೂ ಎಲ್ಲಿ ಆಸ್ಪತ್ರೆಗೆ ಹೋದರೆ ವೈದ್ಯರು ಯಾವುದಾದರೂ ಕಾಯಿಲೆ ಇದೆಯೆಂದು ಹೇಳಿಬಿಡುತ್ತಾರೋ ಎಂಬ ಆತಂಕದಿಂದ ಆರೋಗ್ಯದ ಬಗೆಗೆ ದಿವ್ಯನಿರ್ಲಕ್ಷ್ಯ ತೋರುತ್ತಾರೆ. ಇವೆರೆಡೂ ಒಳ್ಳೆಯದಲ್ಲ..

ಆರೋಗ್ಯವಂತರಾಗಿರಬೇಕೆಂಬ ಹಂಬಲ ಅತಿಯಾದರೆ ರೋಗಭಯ ಶುರುವಾಗುತ್ತದೆ. ಮಾರಿಗೊಂದು ಮೊಳಕ್ಕೊಂದು ಹುಟ್ಟಿಕೊಂಡಿರುವ ವಿವಿಧ ವೈದ್ಯ ಪದ್ಧತಿಗಳ ಆಸ್ಪತ್ರೆಗಳು; ಅತೀ ಮಾಹಿತಿಗಳನ್ನು ಜನರಲ್ಲಿ ತುಂಬುವ ಮಾಧ್ಯಮಗಳು; ‘ಸೇವೆ’ಯಾಗಿದ್ದ ವೈದ್ಯವೃತ್ತಿ ‘ವ್ಯಾಪಾರ’ವಾಗಿರುವುದು-ಇವೆಲ್ಲ ಸಾಮಾನ್ಯ ಜನರು ಕಾಯಿಲೆಯೆಂದರೆ ಹೆದರುವ ಪರಿಸ್ಥಿತಿ ತಂದಿವೆ. ಗ್ರಾಮೀಣ ಭಾಗದ ರೋಗಿಗಳು ಉಲ್ಬಣಿಸಿದ ರೋಗಕ್ಕೂ ಸೂಕ್ತ ಸೌಲಭ್ಯ ಸಿಗದೇ; ಆರ್ಥಿಕ ಕಾರಣಗಳಿಗೆ ಅವನ್ನು ಬಳಸಿಕೊಳ್ಳಲಾಗದೆ; ಆರೋಗ್ಯ-ಕಾಯಿಲೆ ಕುರಿತ ಮೂಢ ನಂಬಿಕೆಗಳಿಂದ ಸಿಕ್ಕ ಸೌಲಭ್ಯವನ್ನೂ ಬಳಸದೇ ಇದ್ದರೆ; ನಗರ ಸೇರಿರುವ ವೈದ್ಯರು ಮತ್ತು ಔಷಧ ಕಂಪೆನಿಗಳು ಇಲ್ಲಸಲ್ಲದ ರೋಗ ಭಯ ಸೃಷ್ಟಿಸಿ ಜನರನ್ನು ಸುಲಿಯುತ್ತಿದ್ದಾರೆ. ಇವತ್ತಿನ ಬಹುತೇಕ ಆಸ್ಪತ್ರೆಗಳು ಇದಕ್ಕೆ ಸಾಕ್ಷಿಯಾಗಿವೆ. ಹೈಟೆಕ್ ಸುಲಿಗೆಯ ಒಂದು ಹೆಸರು ‘ಕಂಪ್ಲೀಟ್ ಬಾಡಿ ಟೆಸ್ಟ್’. ಮನುಷ್ಯ ದೇಹದ ಸಂಪೂರ್ಣ ತಪಾಸಣೆ 25-26 ವರ್ಷಕ್ಕೇ ಶುರು ಮಾಡುತ್ತಾರೆ. ದೇಹವಿರುವುದು ರೋಗವನ್ನು ಪಡೆಯಲಿಕ್ಕೆ, ನಾವಿರುವುದು ನಿಮ್ಮ ರೋಗ ಆದಷ್ಟು ಬೇಗ ಪತ್ತೆ ಹಚ್ಚಲಿಕ್ಕೆ ಎಂದವರು ತಿಳಿಹೇಳುತ್ತಾರೆ.

ದೇಹವು ಎಂದು ರೋಗಗ್ರಸ್ತ ವಾಗಲು ತೊಡಗಿತು ಎಂದು ರೋಗದ ಟೈಂ ಲೈನ್ ಬರೆಯುವ ಟೆಸ್ಟ್ ಪ್ಯಾಕೇಜ್‌ಗಳು ರೂಪುಗೊಂಡಿವೆ. ನಾನಾ ದರಗಳ, ನಾನಾ ಹೆಸರುಗಳ ಆರೋಗ್ಯ ತಪಾಸಣೆಗಳು ಪ್ರತೀವರ್ಷ ನಡೆದು ಪುಟಗಟ್ಟಲೆ ರಿಪೋರ್ಟು ಫೈಲು ಸೇರುತ್ತವೆ. ಯಥಾಸ್ಥಿತಿಯ ಆತಂಕದ ಜೀವನ ಮುಂದುವರಿಯುತ್ತಲೇ ಇದ್ದರೂ ದೇಹ ತಾರುಣ್ಯಭರಿತವಾಗಿ, ಕಾಯಿಲೆ ರಹಿತವಾಗಿ ಇದೆಯೋ ಇಲ್ಲವೋ ಎಂದು ನೋಡಲು ಮತ್ತೆಮತ್ತೆ ತಪಾಸಣೆಗಳು ನಡೆಯುತ್ತ ಹೋಗುತ್ತವೆ. ಅವರ ಬಳಿ ಇರುವ ಕಾಸಿಗೆ, ರೋಗಭಯಕ್ಕೆ ತಕ್ಕುದಾಗಿ ತಪಾಸಣೆಗಳು ನಡೆಯುತ್ತವೆ. ತಲೆಬುಡ ತಿಳಿಯದ ರಿಪೋರ್ಟುಗಳು ಒಂದುಕಡೆ; ಲ್ಯಾಬಿಗೆ ಹೊಂದಿಕೊಂಡಂತಿರುವ ವೈದ್ಯರ ಸುದೀರ್ಘ ಸಲಹೆಗಳು ಇನ್ನೊಂದು ಕಡೆ-ಒಟ್ಟಾರೆ ಬದುಕೇ ಆಸ್ಪತ್ರೆಮಯವೆನಿಸುವಂತೆ ಆಗುತ್ತದೆ. ರೋಗಿಗಳು ಮೋಸ ಹೋಗುವುದಕ್ಕೂ, ಆಸ್ಪತ್ರೆಗಳು ಬ್ಲೇಡ್ ಕಂಪೆನಿಗಳಾಗುವುದಕ್ಕೂ ಜನರ ಮನಸ್ಥಿತಿ ಹುಲುಸಾದ ಭೂಮಿಕೆ ಒದಗಿಸಿದೆ. ಕಾರಣ ಈಗ ಜನರಲ್ಲಿ ಸಹನೆ ಮತ್ತು ವಿಶ್ವಾಸ ಕಡಿಮೆಯಾಗುತ್ತಿದೆ. ಆಸ್ಪತ್ರೆಗೆ ಬಂದ ಮರುಗಳಿಗೆ ವೈದ್ಯರು ನೋಡಿಬಿಡಬೇಕು; ಮುಂದಿನ ಕೆಲ ಹೊತ್ತಿನಲ್ಲಿ ಚಿಕಿತ್ಸೆ ಪಡೆದು ಕೆಲವೇ ಗಂಟೆಗಳಲ್ಲಿ ಸರಿಯಾಗಿ ತಮ್ಮ ದೈನಂದಿನ ಕರ್ಮಗಳಿಗೆ ಹಿಂದಿರುಗಿಬಿಡಬೇಕು. ಎರಡು ದಿನ ಆರಾಮ ತೆಗೆದುಕೊಳ್ಳಲು ಪುರುಸೊತ್ತಿಲ್ಲ. ರಜೆ ಮಾಡಲಾಗದ, ಆರಾಮ ತೆಗೆದುಕೊಳ್ಳಲಾಗದ ಧಾವಂತಗಳ ಕಾಲಮಾನವೇ ಎಲ್ಲ ಕಾಯಿಲೆ ಹೆಚ್ಚಿಸಿದೆ. ಜನರ ಅಜ್ಞಾನದ ಜೊತೆಗೆ ದುಡ್ಡಿಗಾಗಿ ವೈದ್ಯರ ಹಪಾಹಪಿಯೂ ಸೇರಿದರೆ ಏನು ಆಗಬೇಕೋ ಅದೆಲ್ಲ ಆಗುತ್ತಿದೆ.

ರೋಗಭಯ

ಕೆಲವರಿಗೆ ರೋಗಭಯ. ಆದರೆ ರೋಗಕ್ಕೆ ಮದ್ದುಂಟು, ರೋಗಭಯಕ್ಕೆ ಮದ್ದಿಲ್ಲ. ಮದ್ದು ಕೊಟ್ಟ ನಂತರ ರೋಗ ಗುಣವಾಗುತ್ತದೆ. ರೋಗಭಯದ ಅನುಮಾನ ಪ್ರವೃತ್ತಿ ಸಮಸ್ಯೆ ಉಲ್ಬಣಿಸುವಂತೆ ಮಾಡುತ್ತದೆ. ಎಮರ್ಜೆನ್ಸಿ ರೂಮು ಬಿಟ್ಟರೆ ಉಳಿದಂತೆ ನಾನಾ ಕಾರಣಗಳಿಗೆ ಚಿಕಿತ್ಸೆ ಪಡೆಯುವ ಜನರಲ್ಲಿ ಶೇ. 50 ರೋಗಿಗಳೇ ಅಲ್ಲ. ಉಳಿದ ಅರ್ಧ ಜನರಲ್ಲಿ ಶೇ. 25 ಜನ ನಿಧಾನ ತಂತಾನೇ ಕಡಿಮೆಯಾಗುವ, ವಯೋಸಹಜ, ಸಣ್ಣಪುಟ್ಟ ಕಾಯಿಲೆ ಹೊಂದಿರುತ್ತಾರೆ. ಆದರೆ ಕಾಯುವ ಸಹನೆ ಇಲ್ಲದೆ ತತ್‌ಕ್ಷಣದ ರಿಲೀಫ್‌ಗೆ ವೈದ್ಯರ ಬಳಿ ಬಂದಿರುತ್ತಾರೆ. ಅವರ ಸಮಾಧಾನಕ್ಕೆ ಏನೋ ಒಂದು ಕೊಡಬೇಕಾಗುತ್ತದೆ. ಎಂದರೆ ಕೇವಲ ಶೇ. 25 ಜನರಿಗಷ್ಟೇ ನಿಜಕ್ಕೂ ಚಿಕಿತ್ಸೆ ಅವಶ್ಯವಿರುತ್ತದೆ. ಇದರಲ್ಲೇ ಗೊತ್ತಾಗುತ್ತದೆ, ನಿಜವಾದ ರೋಗಿಗಳಷ್ಟೇ ಆಸ್ಪತ್ರೆಗೆ ಬರತೊಡಗಿದರೆ ಅರ್ಧಕ್ಕರ್ಧ ಆಸ್ಪತ್ರೆಗಳು ಬಾಗಿಲು ಮುಚ್ಚಬೇಕಾಗುತ್ತದೆ. ಇವತ್ತು ಇಡೀ ವೈದ್ಯವೃತ್ತಿಯೇ ವೈದ್ಯನನ್ನು ಕೊಡುವವ ಎಂದೂ, ರೋಗಿಯು ವೈದ್ಯ ನೀಡುವ ಕೆಲವು ಸೇವೆಗಳನ್ನು ಸ್ವೀಕರಿಸುವವ ಎಂದೂ ಭಾವಿಸುತ್ತ ಮಾರುಕಟ್ಟೆಯ ಭಾಷೆಗೆ ಹೆಚ್ಚು ಒಗ್ಗಿಕೊಳ್ಳುತ್ತಿದೆ. ಆದರೆ ವೈದ್ಯರೂ ಸಹ ಮಾನವರು, ಅವರೂ ಸಹ ನರಳುವವರು ಮತ್ತು ಉಪಶಮನ ನೀಡುವವರು ಎಂದು ವೈದ್ಯಬಂಧುಗಳಿಗೆ ತಿಳಿಸುವ ಶಿಕ್ಷಣ, ಮೌಲ್ಯವ್ಯವಸ್ಥೆ ಬರಬೇಕು. ಹಾಗೆಯೇ ಜನಸಾಮಾನ್ಯರಲ್ಲಿ ಆರೋಗ್ಯ-ರೋಗದ ಬಗೆಗೆ ಕನಿಷ್ಠ ವೈಜ್ಞಾನಿಕ ಅರಿವು ಮೂಡಬೇಕು. ಆಗ ಮಾತ್ರ ರೋಗಿಯೆಂಬ ‘ಸ್ವೀಕರಿಸುವವ ಬಡಪಾಯಿ ಬಲಿಪಶುವಾಗದೇ ಎಷ್ಟು ಬೇಕೋ ಅಷ್ಟನ್ನೇ ಸ್ವೀಕರಿಸಿ ಜೀವವುಳಿಸಿಕೊಳ್ಳಬಹುದು.

ರೋಗಭಯ ಕಳಕೊಳ್ಳಲು ಏನು ಮಾಡಬೇಕು?

ಉತ್ತಮ ಸ್ನೇಹಿತರನ್ನು ಪಡೆಯುವುದು ಹೇಗೆ ಕಷ್ಟವೋ ಹಾಗೆ ಉತ್ತಮ ವೈದ್ಯಸ್ನೇಹಿತರನ್ನು ಪಡೆಯುವುದೂ ಕಷ್ಟವೇ. ನಿಮ್ಮ ಸ್ವಭಾವ, ಲಭ್ಯತೆ, ಪರ್ಸಿಗೆ ಹೊಂದುವ ಒಬ್ಬ ವೈದ್ಯರನ್ನು ಗುರುತಿಸಿ ಆಪ್ತಸಂಬಂಧ ಬೆಳೆಸಿಕೊಳ್ಳಿ.

 ►ಸಹಿಸಬಲ್ಲ ಯಾವುದೇ ಅಸಹಜ ಲಕ್ಷಣ ದೇಹದಲ್ಲಿ ಕಂಡರೆ ಕೊಂಚ ಕಾಯಿರಿ. ಅದು ಹೆಚ್ಚಾಗುತ್ತ ದೈನಂದಿನ ಬದುಕಿಗೆ ತೊಂದರೆ ಕೊಡತೊಡಗಿದರೆ ನಿಮ್ಮ ವೈದ್ಯರ ಬಳಿ ಸಲಹೆ ಪಡೆಯಿರಿ.

ವೈದ್ಯರ ಮಾತುಗಳಲ್ಲಿ ನಂಬಿಕೆಯಿಟ್ಟು ಅವರ ಅನಿಸಿಕೆ ಏನೆಂದು ತಿಳಿಯಿರಿ. ನೀವೇ ಅತ್ಯುತ್ಸಾಹದಿಂದ ತಪಾಸಣೆಗಳನ್ನೆಲ್ಲ ಬರೆಯಲು ವೈದ್ಯರಿಗೆ ಒತ್ತಡ ಹೇರಬೇಡಿ.

ಕಾಯಿಲೆ ಜ್ಞಾನ, ದೇಹ ಜ್ಞಾನ, ಔಷಧ ಜ್ಞಾನ ಮಾತ್ರ ವೈದ್ಯರನ್ನು ತಯಾರಿಸುವುದಿಲ್ಲ. ಹಾಗಿದ್ದಲ್ಲಿ ಮಾಹಿತಿವಂತರೆಲ್ಲ ವೈದ್ಯರಾಗುತ್ತಿದ್ದರು. ಅನುಭವಜನ್ಯ ಸರಿತಪ್ಪುವಿಶ್ಲೇಷಣೆ ಹಾಗೂ ಯಾವುದು ಎಲ್ಲಿಯವರೆಗೆ ಕಾಯಿಲೆಯಲ್ಲ ಎಂಬ ತಿಳುವಳಿಕೆ ವೈದ್ಯರನ್ನು ರೂಪಿಸುತ್ತದೆ. ಈ ಮಾಹಿತಿ ಯುಗದಲ್ಲಿ ಎಲ್ಲದರ ಬಗ್ಗೆಯೂ ಅರೆಬೆಂದ ಮಾಹಿತಿಗಳು ಯಥೇಚ್ಛ ದೊರೆಯುತ್ತವೆ. ಅಂಥ ಅರೆಜ್ಞಾನ, ಹುಸಿಜ್ಞಾನವನ್ನು ಹೆಚ್ಚು ತುಂಬಿಕೊಳ್ಳಬೇಡಿ. ಅದರಿಂದ ಸಹಾಯಕ್ಕಿಂತ ಅಪಾಯವೇ ಹೆಚ್ಚು.

ಕೆಲವಿಷಯಗಳಲ್ಲಿ ತಜ್ಞತೆಯನ್ನು ನೆಚ್ಚಬೇಕಾಗುತ್ತದೆ. ವೈದ್ಯಕೀಯ ಅಂತಹ ಒಂದು ಕ್ಷೇತ್ರ. ಮನೆಯಲ್ಲಿ ವೈದ್ಯಕೀಯ ಉಪಕರಣ ಯಾವುದನ್ನೂ ಇಟ್ಟುಕೊಳ್ಳಬೇಡಿ. ಸ್ವಯಂವೈದ್ಯ ಅಪಾಯಕರ.

ಕಾಯಿಲೆಗಳು ಎಂದಿನಿಂದಲೂ ಇವೆ. ಮತ್ತು ಕಾಯಿಲೆ ಇಲ್ಲದೆ ಆರೋಗ್ಯವಾಗಿರುವವರ ಸಂಖ್ಯೆ ರೋಗಿಗಳಿಗಿಂತ ಹೆಚ್ಚಿದೆ. 

ಗಮನಿಸಿ:

 ಒಟ್ಟಾರೆ ಬೆವರು ಹರಿಸಿದಷ್ಟೆ ಹಿಟ್ಟು ಉಣಬೇಕು. ಪ್ರತೀದಿನ, ದಿನಕ್ಕೆ ಮೂರ್ನಾಲ್ಕು ಸಲ ರುಚಿರುಚಿಯಾದದ್ದನ್ನು ಹೊಟ್ಟೆತುಂಬ ತಿನ್ನುವುದನ್ನು ಕಡಿಮೆ ಮಾಡಬೇಕು. ಎಂದರೆ ನಾಲಿಗೆಗೆ ರುಚಿ ಹತ್ತುವುದನ್ನು ಕಡಿಮೆ ತಿನ್ನಬೇಕು.

ಸಾಧ್ಯವಿರುವಷ್ಟು ಹಸಿ-ಕಚ್ಚಾ ಆಹಾರ ಸೇವಿಸಬೇಕು.

ಪ್ರತೀ ನಿತ್ಯದ ಆಹಾರದಲ್ಲಿ ಯಾವುದಾದರೂ ಐದು ತೆರನ ಆಹಾರ ವಸ್ತು ಬಳಸಿ. ತರಕಾರಿ, ಹಣ್ಣು, ದವಸ-ಧಾನ್ಯ, ಮೊಟ್ಟೆ-ಮಾಂಸ, ಕಾಳು-ಬೇಳೆ, ಹಾಲು-ಹೈನು ಇತ್ಯಾದಿಗಳಲ್ಲಿ ಕನಿಷ್ಠ ಐದು ವೈವಿಧ್ಯಗಳಾದರೂ ಇರುವಂತೆ ನೋಡಿಕೊಳ್ಳಬೇಕು. ರುಚಿ ವೈವಿಧ್ಯಕ್ಕಿಂತ ಆಹಾರ ವಸ್ತು ವೈವಿಧ್ಯದೆಡೆ ಹೆಚ್ಚು ಗಮನ ಕೊಡಬೇಕು.

ದಿನಕ್ಕೆ ಮೂರು ಸಲ, ಮೂರೇ ಮೂರು ಸಲ ತಿನ್ನಿ. ನಿಯಮಿತವಾಗಿ, ಮಿತವಾಗಿ ತಿನ್ನಿ. ಉಳಿಯುತ್ತದೆ ಎಂದು ಇದ್ದಷ್ಟನ್ನೂ ಸುರುವಿಕೊಳ್ಳಬೇಡಿ. ಹೊಟ್ಟೆ ತುಂಬಿದ ಮೇಲೆ ಒಂದು ತುತ್ತನ್ನೂ ತಿನ್ನಬೇಡಿ. ಮಿಕ್ಕುವುದೆಲ್ಲ ವಿಷವೇ.

ತಿನ್ನುವ ಪ್ರತೀ ತುತ್ತನ್ನೂ ಪ್ರೀತಿಸಿ.

ಅನ್ನದೇವರ ಮುಂದೆ ಇನ್ನು ದೇವರು ಇಲ್ಲ. ಊಟ-ತಿಂಡಿಗಳ ಬಿಟ್ಟು ಹೊಟ್ಟೆ ಕಾಯಿಸಬೇಡಿ, ಸದಾ ಮೇಯುತ್ತಲೂ ಇರಬೇಡಿ.

ಅವರಿವರಿಂದ ಬರಿಯ ಕಾಯಿಲೆ ಕತೆ ಕೇಳದೇ ಆರೋಗ್ಯದ ಗುಟ್ಟುಗಳ ಕೇಳುತ್ತ ಹೋಗಿ.

ಎಷ್ಟು ಬೇಕೋ ಅಷ್ಟನ್ನು ತಿಂದು, ಕೊಂಚ ಬೆವರು ಹನಿಸಿ ತಿಂದಷ್ಟನ್ನು ಅರಗಿಸಿ

Writer - ಡಾ. ಎಚ್. ಎಸ್. ಅನುಪಮಾ

contributor

Editor - ಡಾ. ಎಚ್. ಎಸ್. ಅನುಪಮಾ

contributor

Similar News

ಜಗದಗಲ
ಜಗ ದಗಲ