ಕಾಡಂಕಲ್‌ಲ್ ಮನೆ: ಬಿರುಕು ಬಿಟ್ಟ ಸಂಬಂಧಗಳನ್ನು ಬೆಸೆಯುವ ಯತ್ನ

Update: 2017-04-06 18:33 GMT

ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದಿರುವ ಮುಹಮ್ಮದ್ ಕುಳಾಯಿ ಅವರ ಕಾದಂಬರಿ ‘ಕಾಡಂಕಲ್‌ಲ್ ಮನೆ’ ಬಿರುಕು ಬಿಟ್ಟ ಸಂಬಂಧಗಳನ್ನು ಬೆಸೆಯುವ ಪ್ರಯತ್ನವನ್ನು ವಸ್ತುವಾಗಿಟ್ಟುಕೊಂಡ ಕೃತಿ. ಕೌಟುಂಬಿಕ ಸಂಬಂಧಗಳ ಜೊತೆ ಜೊತೆಗೇ, ಸಮಾಜದಲ್ಲಿ ಧರ್ಮ, ಜಾತಿಗಳ ಹೆಸರಲ್ಲಿ ಬೇರ್ಪಡುವ ಮನಸ್ಸುಗಳನ್ನು ಜೊತೆಗೂಡಿಸುವ ಹಂಬಲಿಕೆ ಈ ಕಾದಂಬರಿಯಲ್ಲಿದೆ. ಒಂದು ಮನೆತನದ ಕತೆಯಾಗಿ ಆರಂಭಗೊಳ್ಳುವ ನಿರೂಪಣೆ, ಜಾತಿ, ಧರ್ಮಗಳಾಚೆಗೆ ವಿಸ್ತಾರಗೊಂಡು ಸಕಲ ಮನುಷ್ಯರ ಕತೆಯಾಗಿ ನಮ್ಮನ್ನು ಒಳಗೊಳ್ಳುತ್ತದೆ. ಇಂದು ನಾವೆಲ್ಲ ನಮ್ಮ ನಮ್ಮ ಎದೆಯೊಳಗೆ ಪಾಳುಬಿದ್ದ ‘ಕಾಡಂಕಲ್‌ಲ್ ಮನೆ’ಯೊಂದನ್ನು ಇಟ್ಟುಕೊಂಡು ಓಡಾಡುತ್ತಿದ್ದೇವೆ. ಅದನ್ನು ಮತ್ತೆ ದುರಸ್ತಿಗೊಳಿಸಿ, ಧೂಳು, ಜೇಡರಬಲೆಗಳನ್ನು ಝಾಡಿಸಿ, ಸುಣ್ಣ ಬಳಿದು ತೋರಣಕಟ್ಟುವ ಪ್ರಯತ್ನವೊಂದನ್ನು ಈ ಕಾದಂಬರಿ ಮಾಡುತ್ತದೆ. ಕತೆಯ ನಿರೂಪಣೆಯಲ್ಲಿ ಒಂದಿಷ್ಟು ಜನಪ್ರಿಯ ತಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ. ಅಂದರೆ ಸಿನಿಮೀಯ ರೀತಿಯಲ್ಲಿ ಕತೆಯನ್ನು ನಿರೂಪಿಸುವ ಮೂಲಕ ಎಲ್ಲ ವರ್ಗಗಳಿಗೂ ಹತ್ತಿರವಾಗುವ ರೀತಿಯಲ್ಲಿ ಕತೆಯನ್ನು ನಿರೂಪಿಸುತ್ತಾ ಹೋಗುತ್ತಾರೆ. ಸರಳ ಭಾಷೆ ಕಾದಂಬರಿಯ ಇನ್ನೊಂದು ಹೆಗ್ಗಳಿಕೆ. ಕೌಟುಂಬಿಕ ಬಂಧವನ್ನು ಗಟ್ಟಿ ಮಾಡುವ ಪ್ರಯತ್ನದಲ್ಲಿ ವಿದ್ಯಾವಂತಳಾದ ರೊಹರಾ ಪಾತ್ರವನ್ನು ತೀರಾ ಕಠಿಣವಾಗಿಸುತ್ತಾರೆ ಅನ್ನಿಸುತ್ತದೆ. ಮಹಿಳೆಯರು ವಿದ್ಯೆ ಕಲಿತರೆ ಅದು ಬೀರುವ ಕೆಲವು ಪರಿಣಾಮಗಳನ್ನು ಹೇಳುವ ಮೂಲಕ ಲೇಖಕರು ಮೃದುವಾಗಿ ಋಣಾತ್ಮಕ ಧೋರಣೆಯನ್ನು ಹೊಂದಿದ್ದಾರೆಯೋ ಅನ್ನಿಸುವಂತಿದೆ. ಆದರೆ ಕಾಲೇಜು, ವಿದ್ಯೆ ಕೊಡುವ ಸ್ವಾತಂತ್ರದ ಬಲದಲ್ಲಿ ಕುಟುಂಬವನ್ನು ತ್ಯಜಿಸಿ ಹೋಗುವ ಹೆಣ್ಣು ಮಕ್ಕಳು, ಇನ್ನೊಂದು ಪಾರತಂತ್ರದ ತೆಕ್ಕೆಯಲ್ಲಿ ಹೆಣಗಾಡುವ ಸೂಕ್ಷ್ಮದ ಕಡೆಗೂ ಅವರು ಗಮನ ಹರಿಸುತ್ತಾರೆ. ಇರುವೆ ಪ್ರಕಾಶನ ಹೊರ ತಂದಿರುವ ಈ ಕೃತಿಯ ಒಟ್ಟು ಪುಟಗಳು 232. ಮುಖಬೆಲೆ 200 ರೂಪಾಯಿ. 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News