‘ದಕ್ಷಿಣಾಯಣ’ ಕರ್ನಾಟಕ ಅಭಿವ್ಯಕ್ತಿ ಸಮಾವೇಶ

Update: 2017-04-06 18:40 GMT

ದಕ್ಷಿಣಾಯಣ ಚಳವಳಿಯನ್ನು ಆರಂಭಿಸಿದ ಗಣೇಶ್‌ದೇವಿಯವರು ‘ದಕ್ಷಿಣಾಯಣ’ ವನ್ನು ಒಂದು ಸಂಕೀರ್ಣವಾದ ರೂಪಕವಾಗಿ ಕಂಡಿದ್ದಾರೆ. ನಮ್ಮ ದೇಶದಲ್ಲಿ ನಡೆದ ಅನೇಕ ಸಾಂಸ್ಕೃತಿಕ, ವೈಚಾರಿಕ ಹಾಗೂ ಸೃಜನಶೀಲ ಪಯಣಗಳಂತೆ ಇದು ಒಂದು ನಿರಂತರ ಪಯಣ. ದೀರ್ಘವಾದ ಕತ್ತಲೆಯ ನಂತರ ಬರಲಿರುವ ಬೆಳಕಿನ ಕಡೆಗೆ; ವಚನಕಾರರು ಕನಸು ಕಂಡ ಕಲ್ಯಾಣವನ್ನು ನಮ್ಮ ಆಧುನಿಕ, ಆತಂಕಿತ ತೀವ್ರ ಬಿಕ್ಕಟ್ಟುಗಳ ಕಾಲದಲ್ಲಿ ಮತ್ತೆ ಕಾಣಬಯಸುವ ಪಯಣ; ಈ ದೇಶದ ಮಹಾನ್ ಪ್ರತಿಭೆಗಳು ವಸಾಹತುಶಾಹಿಯನ್ನು ವಿರೋಧಿಸುತ್ತ ಹೊಸದಾಗಿ ಕಟ್ಟಬಯಸಿದ ಸಮತೆ, ಸಹಬಾಳ್ವೆ, ಅಂತಃಕರಣ ಹಾಗೂ ಸಕಲಜೀವಿಗಳ ಬಗೆಗಿನ ಸಹಜ ಪ್ರೀತಿಯುಳ್ಳ ಸ್ವರಾಜ್‌ನ ರಚನೆಯ ಕಡೆಗೆ ಪಯಣ. ಇದು ನಿತ್ಯ ಹಾಗೂ ನಿರಂತರ. ಜೊತೆಗೆ ಹೆಜ್ಜೆ ಹಾಕುತ್ತಾ ಮಾತನಾಡುತ್ತಾ ಸಮುದಾಯದ ಮನಸ್ಸುಗಳು ಹೊಸ ದಾರಿಗಳನ್ನು ಹುಡುಕಬೇಕಾಗಿದೆ. ವಿವೇಕವೂ ಇಲ್ಲದ ಹೃದಯವೂ ಇಲ್ಲದ ರಾಜಕಾರಣದಿಂದಾಗಿ ಹಾಗೂ ಮನುಷ್ಯ ದೇಶೀ ಸಿದ್ಧಾಂತಗಳಿಂದಾಗಿ ನಮ್ಮ ನಾಗರಿಕ ಸಮಾಜದಲ್ಲಿ ಹುಟ್ಟಿಕೊಂಡಿರುವ ಹಿಂಸೆಯ ಹತ್ತು ಅವಕಾಶಗಳಿಂದಾಗಿ ನಮ್ಮ ಮನಸ್ಸುಗಳು ಮುದುಡಿಕೊಂಡಿವೆ. ಏನು ಹೇಳಿದರೆ ಏನಾಗುವುದೋ ಎನ್ನುವ ಭೀತಿ ಕೂಡ ನಮ್ಮ ಮನಸ್ಸುಗಳನ್ನು ಆವರಿಸಿಬಿಟ್ಟಿದೆ. ಹೀಗಾಗಿ ಬಹಳ ಜನರಿಗೆ ಅರಾಜಕೀಯ ವ್ಯಕ್ತಿಗಳಾಗಿ, ಅದೃಶ್ಯ ವ್ಯಕ್ತಿಗಳಾಗಿ, ನಮ್ಮ ಪಾಲಿಗೆ ನಾವಿರು ವುದು ಲೇಸು ಅನ್ನಿಸತೊಡಗಿದೆ.

ಇನ್ನು ಕೆಲವರಿಗೆ ಅದೆಂಥ ಆಕ್ರೋಶ ಬಂದಿದೆಯೆಂದರೆ ಬರಹದ ಸೂಕ್ಷ್ಮಗಳು, ಕಲೆಗಾರಿಕೆ, ಗಾಂಭೀರ್ಯ ಇವೆಲ್ಲವುಗಳು ನಿಷ್ಪ್ರಯೋಜನ ಐಶಾರಾಮಿ ವಸ್ತುಗಳಾಗಿ ಕಾಣುತ್ತಿವೆ. ಅಬ್ಬರ, ಆಡಂಬರ ಸಾರ್ವಜನಿಕ ಭಾಷೆ ಇವುಗಳಿಲ್ಲದ ಬರಹಗಾರರ ಬಗ್ಗೆ ಗುಮಾನಿಗಳು ಬರುತ್ತಿವೆ. ಇವೆರಡು ಅಸಹಜ ಸ್ಥಿತಿಗಳು, ಸಂಸ್ಕೃತಿಗೆ ಅಪಾಯ ತರುವ ಸ್ಥಿತಿಗಳು. ಈಗ ಮಾಡಬೇಕಾದ ಕೆಲಸವೆಂದರೆ ನಾವೆಲ್ಲ ನಮ್ಮ ಮೌನವನ್ನು ಮುರಿಯುವುದು. ವಿಷಾದದ ಒಬ್ಬಂಟಿತನದ ಬದಲಾಗಿ ನಮ್ಮದೇ ಸಮುದಾಯವನ್ನು ಕಟ್ಟಿಕೊಳ್ಳುವುದು. ನಮ್ಮ ಪ್ರಾಮಾಣಿಕ ಅಭಿವ್ಯಕ್ತಿಗೆ ಅಡ್ಡಿಬಂದಲ್ಲಿ ವಿರೋಧಿಸುವುದು. ಇದೆಲ್ಲಕ್ಕಿಂತ ಮುಖ್ಯ ಕೆಲಸವೆಂದರೆ ನಮ್ಮ ಬರಹ, ಕಲೆ, ಮಾತು, ನಾಟಕಗಳು, ಚಲನಚಿತ್ರಗಳು ಇವುಗಳ ಮೂಲಕ ಪ್ರಜಾಪ್ರಭುತ್ವ ಹಾಗೂ ಸಹಬಾಳ್ವೆಯ ಪರವಾದ ವಿಚಾರಗಳ ಒಂದು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಬೇಕಾಗಿದೆ. ಇದು ನಿಜವಾದ ಅರ್ಥದಲ್ಲಿ ಸಾಂಸ್ಕೃತಿಕ ಪ್ರತಿರೋಧವಾಗುತ್ತದೆ. ಇಲ್ಲದಿದ್ದರೆ ಫ್ಯಾಸಿಸ್ಟ್ ಶಕ್ತಿಗಳ ಕ್ರಿಯೆಗಳಿಗೆ ಪ್ರತಿಕ್ರಿಯೆ, ಸಾಮಾಜಿಕ ತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಅವರ ಮಾತಿಗೆ ಪ್ರತಿಮಾತು ಹೇಳುವುದರಲ್ಲಿ ನಮ್ಮ ಸೃಜನಶೀಲತೆ ಸೋರಿಹೋಗುತ್ತದೆ.

ಜನರಿಗೆ ಕೇವಲ ರಾಜಕೀಯದ ಸೈದ್ಧಾಂತಿಕ ಭಾಷಣಗಳು ಬೇಕಾಗಿಲ್ಲ. ಮಾಧ್ಯಮಗಳು ವಾಗ್ಮಿಗಳ ಭಾಷಣಗಳ ಸುರಿಮಳೆಯಿಂದ ಮಾತು ಹಾಗೂ ನುಡಿಯ ವಿಶ್ವಾಸಾರ್ಹತೆಯನ್ನು ನಾಶ ಮಾಡಿಬಿಟ್ಟಿದೆ. ಈಗ ನಮ್ಮ ಸಮುದಾಯ ಬಯಸುವುದು ಪ್ರಾಮಾಣಿಕವಾದ ಸಂಭಾಷಣೆಯನ್ನು, ಕನ್ನಡ ಸಮುದಾಯವು ಪಂಪನಿಂದ ಇಲ್ಲಿಯವರೆಗೆ ಎಲ್ಲಾ ಬರಹಗಾರರನ್ನು ಆಲಿಸಿದೆ. ಎಚ್ಚರದಿಂದ, ವಿಮರ್ಶಾತ್ಮಕವಾಗಿ ಒಪ್ಪಿಕೊಂಡಿದೆ. ಆದ್ದರಿಂದ ದಕ್ಷಿಣಾಯಣವು ಬರಹಗಾರರು ಕಲಾವಿದರು ಹೆಚ್ಚು ಆಳವಾಗಿ, ಸೂಕ್ಷ್ಮವಾಗಿ ತಮ್ಮ ಅಭಿವ್ಯಕ್ತಿ ಮಾರ್ಗಗಳನ್ನು ಬಳಸಿಕೊಂಡು ಸಮುದಾಯದ ಮನಸ್ಸನ್ನು ತಿದ್ದುವ ಕೆಲಸದಲ್ಲಿ ತೊಡಗಬೇಕೆಂದು ಅಪೇಕ್ಷಿಸುತ್ತದೆ. ತಿದ್ದುವುದೆಂದರೆ ಅಹಂಕಾರದ ಮಾತಲ್ಲ, ದುರಂತವೆಂದರೆ ದುಷ್ಟ ರಾಜಕೀಯ ಹಾಗೂ ಚಿಂತನೆಗಳು ನಮ್ಮ ನಾಗರಿಕ ಸಮುದಾಯದಲ್ಲಿ ಪ್ರಬಲವಾಗಿ ಪ್ರವೇಶಿಸಿವೆ.

ಸಾವಿರಾರು ವರ್ಷಗಳ ಸಹಬಾಳ್ವೆ, ಬಹುಮುಖತ್ವ ಹಾಗೂ ಸೆಕ್ಯೂಲರ್ ಪರಂಪರೆಗಳನ್ನು ಸಾಮುದಾಯಿಕ ಮರೆವಿಗೆ ತಳ್ಳಿಬಿಟ್ಟಿವೆ. ದುಷ್ಟ ನಂಬಿಕೆಗಳು ಪ್ರಶ್ನಾತೀತ ಕಾಮನ್‌ಸೆನ್ಸ್ ಆಗಿಬಿಟ್ಟಿವೆ. ಹೀಗಾಗಿ ಛಿದ್ರಗೊಂಡಿರುವ ನಮ್ಮ ಜನರ ಮನಸ್ಸುಗಳನ್ನು ಅಂತಃಕರಣದಿಂದ ಮತ್ತೆ ಬೆಸೆಯಬೇಕಿದೆ. ಫ್ಯಾಸಿಸಂ ಕೇವಲ ಒಂದು ರಾಜಕೀಯ ವ್ಯವಸ್ಥೆಯಲ್ಲ, ಅದು ಜನಸಮುದಾಯಗಳು ಚಿಂತನೆಯನ್ನು ಬಿಟ್ಟು ಹುಸಿ ಆಕರ್ಷಣೆಯುಳ್ಳ ವಿಚಾರಗಳಿಗೆ ಮನ್ನಣೆ ಕೊಡುವ ಸಾಮಾಜಿಕ ಸ್ಥಿತಿಯೂ ಆಗಿದೆ. ಇದನ್ನು ಸರಿಪಡಿಸಲು ಮೊದಲು ನಾವೆಲ್ಲ ಒಂದು ವೇದಿಕೆಯಲ್ಲಿ ಸೇರೋಣ. ಸಹಚಿಂತನೆ ನಡೆಸಿ ನಾಡುಕಟ್ಟುವ ಕೆಲಸದಲ್ಲಿ ತೊಡಗಬೇಕಿದೆ. ಈ ಕಾರಣಕ್ಕಾಗಿ ದಕ್ಷಿಣಾಯಣ ಕರ್ನಾಟಕವು ಎಪ್ರಿಲ್ 8 ರಂದು ಶಿವಮೊಗ್ಗದಲ್ಲಿ ಅಭಿವ್ಯಕ್ತಿ ಸಮಾವೇಶವನ್ನು ಏರ್ಪಡಿಸಿದೆ. ಇದರಲ್ಲಿ ಭಾಗವಹಿಸುವುದು ಒಂದು ಅರ್ಥಪೂರ್ಣವಾದ ಹೆಜ್ಜೆ. ಅದು ಹೇಗೆಂದರೆ ನನ್ನ ಜೊತೆ ಈ ಸಮಾವೇಶದ ಬಗ್ಗೆ ಪ್ರೀತಿಯಿಂದ ಮಾತನಾಡಿದ ವೈದೇಹಿ ಹೇಳಿದಂತೆ ‘‘ಮನೆಯಲ್ಲಿ ಎಂಥದೋ ಆದಾಗ ಎಲ್ಲರೂ ಕೂಡಿ ಮಾತನಾಡಬೇಕಲ್ಲವೇ?’’

ಬನ್ನಿ ಕೂಡಿ ಮಾತನಾಡುವಾ.

Writer - ರಾಜೇಂದ್ರ ಚೆನ್ನಿ

contributor

Editor - ರಾಜೇಂದ್ರ ಚೆನ್ನಿ

contributor

Similar News

ಜಗದಗಲ
ಜಗ ದಗಲ