ಜಿನ್ನಾ ನಿವಾಸ: ಕೊನೆಗಾಣುವುದೇ ಜಿಜ್ಞಾಸೆ?
ಜನಾಭಿಪ್ರಾಯ ಹೇಗಿದೆ ಎಂದು ಪರೀಕ್ಷಿಸಲು ಪ್ರಭಾತ್ ಲೋಧಾ ಈ ಗಾಳಿಪಟವನ್ನು ತಾವೇ ಹಾರಿಸಿಬಿಟ್ಟಿದ್ದಾರೋ ಅಥವಾ ಪಕ್ಷದ ಪರವಾಗಿ ಹಾರಿಸಿದ್ದಾರೋ ಎನ್ನುವುದು ತಿಳಿದುಬಂದಿಲ್ಲ. ಆದರೆ ಗಮನಿಸಬೇಕಾದ ಒಂದು ಅಂಶವೆಂದರೆ ಇವರು ಮುಂಬೈನ ಪ್ರಭಾವಿ ಬಿಲ್ಡರ್‌ಗಳಲ್ಲೊಬ್ಬರು ಹಾಗೂ ಜಿನ್ನಾ ಹೌಸ್ ಅಥವಾ ಅಧಿಕೃತವಾಗಿ ಸೌತ್ ಕೋರ್ಟ್ ಎಂದು ಕರೆಯಲ್ಪಡುವ ಈ ನಿವಾಸ ಅವರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
ಪಾಕಿಸ್ತಾನದ ಜನಕ ಮುಹಮ್ಮದ್ ಅಲಿ ಜಿನ್ನಾ ಅವರ ಮುಂಬೈ ನಿವಾಸವನ್ನು ಧ್ವಂಸಗೊಳಿಸಿ, ಅಲ್ಲಿ ಸಾಂಸ್ಕೃತಿಕ ಸದನ ನಿರ್ಮಿಸಬೇಕು ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ಮಂಗಲ್ ಪ್ರಭಾತ್ ಲೋಧಾ ಆಗ್ರಹಿಸಿದ್ದಾರೆ. ರಾಷ್ಟ್ರ ವಿಭಜನೆಯ ಪಿತೂರಿ ರೂಪುಗೊಂಡಿದ್ದೇ ಜಿನ್ನಾ ನಿವಾಸದಲ್ಲಿ. ಆದ್ದರಿಂದ ಅದು ಇರಲು ಅವಕಾಶ ನೀಡಬಾರದು ಎನ್ನುವುದು ಅವರ ವಾದ.
ಜನಾಭಿಪ್ರಾಯ ಹೇಗಿದೆ ಎಂದು ಪರೀಕ್ಷಿಸಲು ಲೋಧಾ ಈ ಗಾಳಿಪಟವನ್ನು ತಾವೇ ಹಾರಿಸಿಬಿಟ್ಟಿ ದ್ದಾರೋ ಅಥವಾ ಪಕ್ಷದ ಪರವಾಗಿ ಹಾರಿಸಿದ್ದಾರೋ ಎನ್ನುವುದು ತಿಳಿದುಬಂದಿಲ್ಲ. ಆದರೆ ಗಮನಿಸಬೇಕಾದ ಒಂದು ಅಂಶವೆಂದರೆ ಇವರು ಮುಂಬೈನ ಪ್ರಭಾವಿ ಬಿಲ್ಡರ್‌ಗಳಲ್ಲೊಬ್ಬರು ಹಾಗೂ ಜಿನ್ನಾ ಹೌಸ್ ಅಥವಾ ಅಧಿಕೃತವಾಗಿ ಸೌತ್ ಕೋರ್ಟ್ ಎಂದು ಕರೆಯಲ್ಪಡುವ ಈ ನಿವಾಸ ಅವರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
ಶಿವಸೇನೆ ಕೂಡಾ ಈ ಆಗ್ರಹಕ್ಕೆ ದನಿಗೂಡಿಸುವ ಮೂಲಕ ತಾನೂ ಕಡಿಮೆಯಿಲ್ಲ ಎಂದು ತೋರಿಸಿ ಕೊಟ್ಟಿದೆ. ಕಳೆದ ಎರಡು ವರ್ಷಗಳಲ್ಲಿ ಮಿತ್ರ ಪಕ್ಷದ ಕಾಲೆಳೆಯುವ ಒಂದು ಅವಕಾಶವನ್ನೂ ಹಾಳು ಮಾಡಿಕೊಳ್ಳದ ಶಿವಸೇನೆ ಈ ವಿಚಾರದಲ್ಲಿ ಮಾತ್ರ ಒಮ್ಮತ ವ್ಯಕ್ತಪಡಿಸಿದೆ.
ರಾಜಕಾರಣಿಗಳು ತೀರಾ ಆಕಸ್ಮಿಕವಾಗಿ ತೇಲಿಬಿಡುವ ಕೆಲ ಯೋಚನಾ ಲಹರಿಗಳು ಕೂಡಾ ನೈಜ ವಾಸ್ತವವಾಗುತ್ತವೆ. ದಿಲ್ಲಿಯ ‘ಔರಂಗಜೇಬ್ ಮಾರ್ಗ’ವನ್ನು ‘ಎ.ಪಿ.ಜೆ. ಕಲಾಂ ಮಾರ್ಗ’ ಎಂದು ಮರು ನಾಮಕರಣ ಮಾಡುವ ಸಂಬಂಧ ಸಾರ್ವಜನಿಕವಾಗಿ ಉಲ್ಲೇಖಗಳು ಕೇಳಿಬಂದ ಕೆಲವೇ ವಾರಗಳಲ್ಲಿ ಅದು ಕಾರ್ಯರೂಪಕ್ಕೆ ಬಂದ ನಿದರ್ಶನವನ್ನು ನೆನಪಿಸಿಕೊಳ್ಳಿ. ಆದ್ದರಿಂದ ಈ ವಿಷಯದ ಬಗ್ಗೆಯೂ ಒಳಗಿಂದೊಳಗೆ ಏನೋ ನಡೆಯುತ್ತಿರಬಹುದು.
ಲೋಧಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ಜಿನ್ನಾ ನಿವಾಸವನ್ನು ಪಾಕಿಸ್ತಾನಕ್ಕೆ ನೀಡಬೇಕು ಎಂಬ ಆಗ್ರಹವನ್ನು ಪುನರುಚ್ಚರಿಸಿದೆ. ಆ ಜಾಗದ ಮಾಲಕತ್ವದ ಹಕ್ಕು ತನ್ನ ಬಳಿ ಇದೆ ಎಂದು ಹಳೆಯ ವಿವಾದವನ್ನು ಅದು ಮತ್ತೆ ಕೆದಕಿದೆ.
ಮುಂಬೈನ ಟೋನಿ ಮಲಬಾರ್ ಹಿಲ್‌ನಲ್ಲಿ ಎರಡೂವರೆ ಎಕರೆ ವಿಶಾಲ ಪ್ರದೇಶದಲ್ಲಿ ವ್ಯಾಪಿಸಿರುವ ನಿವಾಸದ ನಿರ್ಮಾಣದ ಮೇಲ್ವಿಚಾರಣೆಯನ್ನು ಸ್ವತಃ ಜಿನ್ನಾ ನಡೆಸಿದ್ದರು. 1936ರಲ್ಲಿ 2 ಲಕ್ಷ ರೂಪಾಯಿ ವೆಚ್ಚದಲ್ಲಿ ಇದರ ನಿರ್ಮಾಣ ಪೂರ್ಣಗೊಂಡಿತ್ತು. ಆ ಕಾಲಕ್ಕೆ ಅದು ದೊಡ್ಡ ಮೊತ್ತ. ನಗರದ ಅಂದಿನ ಅಗ್ರ ವಾಸ್ತುಶಿಲ್ಪಿ ಕ್ಲೌಡ್ ಬೆಟ್ಲೆ ಇದನ್ನು ನವ- ಶಾಸ್ತ್ರೀಯ ಶೈಲಿಯಲ್ಲಿ ವಿನ್ಯಾಸಗೊಳಿಸಿದ್ದರು. ಇದು ಜಿನ್ನಾ ಹಾಗೂ ಕಾಂಗ್ರೆಸ್ ಮುಖಂಡರಾದ ಮಹಾತ್ಮಾ ಗಾಂಧಿ, ಜವಾಹರ್‌ಲಾಲ್ ನೆಹರೂ ಹಾಗೂ ಸುಭಾಶ್ಚಂದ್ರ ಬೋಸ್ ಅವರ ನಡುವಿನ ಚರ್ಚೆಯ ಕೇಂದ್ರ ಸ್ಥಾನವಾಗಿ ಮಹತ್ವ ಪಡೆದಿತ್ತು.
ಜಿನ್ನಾರ ನವವಧು ರತ್ತನ್‌ಭಾಯಿ ಆಗಮನ ಈ ನಿವಾಸಕ್ಕೆ ವಿಶೇಷ ಮೆರುಗು ತಂದಿತ್ತು. ಈ ಅಮೂಲ್ಯ ಆಸ್ತಿಯನ್ನು ತ್ಯಜಿಸಿ ಪಾಕಿಸ್ತಾನಕ್ಕೆ ಹೋಗುವಾಗ ಜಿನ್ನಾ ಅವರ ಹೃದಯ ಛಿದ್ರವಾಗಿತ್ತು ಎನ್ನಲಾಗಿದೆ. ಇದನ್ನು ಯೂರೋಪಿಯನ್ ಮಿಷನ್‌ಗೆ ಬಾಡಿಗೆಗೆ ನೀಡುವಂತೆ ಜಿನ್ನಾ, ಮೊದಲ ಭಾರತೀಯ ಹೈಕಮಿಷರ್ ಪ್ರಕಾಶ ಅವರ ಮೂಲಕ ನೆಹರೂ ಅವರಿಗೆ ಮನವಿಯನ್ನೂ ಮಾಡಿಕೊಂಡಿದ್ದರು. ಇದನ್ನು ಪಾಕಿಸ್ತಾನಿ ಸರಕಾರಕ್ಕೆ ಉಡುಗೊರೆಯಾಗಿ ನೀಡುವ ಸಲಹೆಯೂ ಬಂದಿತ್ತು. ಆದರೆ ಅದಕ್ಕೆ ಭಾರತದ ಸಚಿವ ಸಂಪುಟ ಒಪ್ಪಿಗೆ ನೀಡಿರಲಿಲ್ಲ.
ಅಂತಿಮವಾಗಿ 1948ರಲ್ಲಿ, ಜಿನ್ನಾ ನಿವಾಸವನ್ನು ಬ್ರಿಟಿಷ್ ಹೈಕಮಿಷನ್‌ನ ಅಧಿಕೃತ ನಿವಾಸ ಹಾಗೂ ಡೆಪ್ಯುಟಿ ಹೈಕಮಿಷನರ್ ಅವರ ಕಚೇರಿಯಾಗಿ ಬಿಟ್ಟುಕೊಡಲಾಯಿತು. ಭಾರತ ಇದನ್ನು 1983ರಲ್ಲಿ ವಾಪಸು ಕೇಳುವವರೆಗೂ ಇದು ಮುಂದುವರಿಯಿತು. ಭಾರತದ ಆಗ್ರಹದಿಂದ ತಲ್ಲಣಗೊಂಡ ಬ್ರಿಟಿಷ್ ಸರಕಾರ, ಅಲ್ಲೇ ಮುಂದುವರಿಯಲು ಅವಕಾಶ ನೀಡುವಂತೆ ಭಾರತದ ಮನವೊಲಿಸುವ ಪ್ರಯತ್ನ ಮಾಡಿತು. ಆದರೆ ಈ ಪ್ರಯತ್ನ ಫಲ ನೀಡಲಿಲ್ಲ. ಬಳಿಕ ಅದನ್ನು ಲೋಕೋಪಯೋಗಿ ಇಲಾಖೆ ವಶಕ್ಕೆ ಪಡೆಯಿತು. ಅಂತಿಮವಾಗಿ ಭಾರತದ ಸಾಂಸ್ಕೃತಿಕ ವ್ಯವಹಾರಗಳ ಮಂಡಳಿ ಇದನ್ನು ಸಾಂಸ್ಕೃತಿಕ ಕೇಂದ್ರ ನಿರ್ಮಿಸುವ ಸಲುವಾಗಿ ವಶಕ್ಕೆ ಪಡೆಯಿತು. ಆದರೆ ಈ ಯೋಜನೆ ಇನ್ನೂ ಜಾರಿಗೆ ಬರಲೇ ಇಲ್ಲ.
1990ರ ದಶಕದಲ್ಲಿ ಪಾಕಿಸ್ತಾನ ಸರಕಾರ, ಇಲ್ಲಿ ತನ್ನ ರಾಜ್ಯಭಾರ ಕಚೇರಿ ತೆರೆಯುವ ಯೋಚನೆಯಲ್ಲಿತ್ತು. ಉಭಯ ದೇಶಗಳ ಸಂಬಂಧ ಸುಧಾರಿಸಿದ ಬಳಿಕ ಈ ಕ್ರಮಕ್ಕೆ ನಿರ್ಧರಿಸಿತು. ಆದರೆ 1993ರ ಬಾಂಬ್‌ಸ್ಫೋಟ ಎಲ್ಲ ಯೋಚನೆ ತಲೆ ಕೆಳಗಾಗುವಂತೆ ಮಾಡಿತು. ಅದುವರೆಗೂ ಹೊಟೇಲ್‌ನಲ್ಲಿ ತಂಗಿದ್ದ ಪಾಕಿಸ್ತಾನದ ಕೌನ್ಸೆಲ್ ಜನರಲ್, ಸ್ವದೇಶಕ್ಕೆ ಗಂಟುಮೂಟೆ ಕಟ್ಟಿದರು. ಆ ಬಳಿಕ ಜಿನ್ನಾ ನಿವಾಸ ನಿರ್ಲಕ್ಷ್ಯಕ್ಕೆ ಒಳಗಾಯಿತು. ಮನೆಯ ಸಾಮಗ್ರಿಗಳು ಹಾಳಾಗಲು ಆರಂಭವಾದರೂ, ಅಧಿಕಾರಿಗಳು ತಲೆಕೆಡಿಸಿಕೊಳ್ಳಲಿಲ್ಲ. ಈ ವಿಚಾರ ದ್ವಿಪಕ್ಷೀಯ ಮಾತುಕತೆ ವೇಳೆ ಚರ್ಚೆಗೆ ಬಂದರೂ ಇದುವರೆಗೂ ಇತ್ಯರ್ಥವಾಗಿಲ್ಲ. ಕಾಕತಾಳೀಯ ಎಂಬಂತೆ ದಿಲ್ಲಿಯ ಹಿಂದಿನ ಔರಂಗಜೇಬ್ ರಸ್ತೆಯಲ್ಲಿ ಜಿನ್ನಾ ಅವರ ಇನ್ನೊಂದು ಒಳ್ಳೆಯ ಮನೆ ಇತ್ತು. ಇದರಲ್ಲೀಗ ಡಚ್ ರಾಯಭಾರ ಕಚೇರಿ ಇದೆ.
ಜಿನ್ನಾ ಹಾಗೂ ರುತ್ತೀ ಅವರ ಏಕೈಕ ಮಗಳು ದಿನಾ ವಾಡಿಯಾ ಈ ಬಗ್ಗೆ ದಾವೆ ಹೂಡುವುದರೊಂದಿಗೆ ಈ ವಿವಾದ ಕಗ್ಗಂಟಾಯಿತು. ಪಾರ್ಸಿ ಉದ್ಯಮಿ ನೆವಿಲ್ಲೆ ವಾಡಿಯಾ ಅವರನ್ನು ಪುತ್ರಿ ವಿವಾಹವಾದದ್ದು ತಂದೆಯ ಕೋಪಕ್ಕೆ ಕಾರಣವಾಗಿತ್ತು. ಈ ಆಸ್ತಿಯನ್ನು ತನಗೆ ಹಸ್ತಾಂತರಿಸಬೇಕು ಎಂದು ಆಕೆ ವಾದಿಸಿದ್ದರು. ತಂದೆ ಜಿನ್ನಾ ಅವರು ಹಿಂದೂ ಕಾನೂನನ್ನು ಪಾಲಿಸುವ ಖೋಜಾ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಶರಿಯಾ ಕಾನೂನನ್ನು ಅವರು ಅನುಸರಿಸುತ್ತಿರಲಿಲ್ಲ. ಹಿಂದೂ ಉತ್ತರಾಧಿಕಾರಿತ್ವ ಕಾಯ್ದೆಯ ಪ್ರಕಾರ, ವಂಶದ ಆಸ್ತಿಗೆ ಹಕ್ಕು ಆಕೆಗೆ ಇದೆ ಎನ್ನುವುದು ಅವರ ವಾದವಾಗಿತ್ತು.
ಏತನ್ಮಧ್ಯೆ ಲೋಕಮಾನ್ಯ ತಿಲಕ್ ಸ್ವರಾಜ್ಯ ಭೂಮಿ ಟ್ರಸ್ಟ್, ತಿಲಕರ ಸ್ಮಾರಕ ನಿರ್ಮಿಸುವ ಸಲುವಾಗಿ ಜಿನ್ನಾ ನಿವಾಸವನ್ನು ಟ್ರಸ್ಟ್ ವಶಕ್ಕೆ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಿತು. 1908ರಲ್ಲಿ ತಿಲಕರ ಪ್ರಕರಣವನ್ನು ಜಿನ್ನಾ ವಾದಿಸಿದ್ದರು ಎಂಬ ಹಿನ್ನೆಲೆಯಲ್ಲಿ ಈ ಆಗ್ರಹ ಮಂಡಿಸಿತ್ತು.
ಹೀಗೆ ಕಟ್ಟಡದ ಮೇಲೆ ಹಲವು ಮಂದಿಯ ಆಗ್ರಹ ಹಾಗೂ ಹಕ್ಕುಪ್ರತಿಪಾದನೆ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಯಾವ ನಿರ್ಧಾರಕ್ಕೂ ಬರಲು ಇದೇ ಕಾರಣದಿಂದ ಸಾಧ್ಯವಾಗಿರಲಿಲ್ಲ. ಆದರೆ ಶತ್ರು ಆಸ್ತಿ ಕಾಯ್ದೆಗೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ಇರುವ ಇಂಥ ನೂರಾರು ಆಸ್ತಿಗಳಂತೆ ಜಿನ್ನಾನಿವಾಸದ ಸ್ಥಿತಿಗತಿಯೂ ಬದಲಾಗಬಹುದು. ಸರಕಾರ ಈ ಪ್ರಕರಣದಲ್ಲೂ ಈ ಕಾಯ್ದೆಯನ್ನು ಅನ್ವಯಿಸುವ ಸಾಧ್ಯತೆ ಇದೆ. ಹೊಸ ಕಾನೂನಿಗೆ ಅನುಗುಣವಾಗಿ ಸರಕಾರ ಇದನ್ನು ಸ್ವಾಧೀನಪಡಿಸಿಕೊಳ್ಳಬೇಕು ಎನ್ನುವುದು ಲೋಧಾ ಅವರ ವಾದ.