ಹೈದರಲಿ-ಟಿಪ್ಪು: ಇತಿಹಾಸ ಕಥನ ಚಾರಿತ್ರಿಕ ಸಿಕ್ಕುಗಳನ್ನು ಬಿಡಿಸುವ ಯತ್ನ
‘ಹೈದರಲಿ-ಟಿಪ್ಪು: ಇತಿಹಾಸ ಕಥನ’ ಬಾರ್ಕೂರು ಉದಯ ಅವರ ಕಿರು ಸಂಶೋಧನಾ ಕೃತಿ. ವಸಾಹತು ಇತಿಹಾಸದ ಹಿನ್ನೆಲೆ ಮತ್ತು ಚರಿತ್ರೆಯ ವಾಸ್ತವಗಳನ್ನು ಈ ಕೃತಿಯ ಮೂಲಕ ಚರ್ಚಿಸುತ್ತಾರೆ. ಈ ಕೃತಿಯಲ್ಲಿ ಒಟ್ಟು 11 ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ಹೇಗೆ ಬ್ರಿಟಿಷ್ ಬರಹಗಾರರು ರಾಜಕೀಯ ಪೂರ್ವಗ್ರಹದಿಂದ ಮುಸ್ಲಿಮ್ ಕಾಲಘಟ್ಟವನ್ನು ನೋಡುತ್ತಾ, ಬರೆಯುತ್ತಾ ಬಂದರು ಎನ್ನುವುದನ್ನು ವಿವರಿಸುತ್ತಾರೆ. ಬ್ರಿಟಿಷ್ ಇತಿಹಾಸ ಕಥನ ಮತ್ತು ಸಮಗ್ರವಾದ ವಿಮರ್ಶೆಯನ್ನೊಳಗೊಳ್ಳದ ಹಿಂದೂ ಇತಿಹಾಸ ಕಥನವಿಲ್ಲದ ಕಾರಣ, ಮುಸ್ಲಿಮ್ ಆಡಳಿತದ ಬಗ್ಗೆ ವ್ಯಕ್ತವಾಗುವ ಹಿಂದೂ ರಾಷ್ಟ್ರೀಯವಾದಿ ಚಿಂತನೆ ಇಷ್ಟು ಪ್ರಚಾರವಾಗಲು ಕಾರಣವಾಯಿತು ಎಂದು ಅವರು ಅಭಿಪ್ರಾಯಪಡುತ್ತಾರೆ. ಟಿಪ್ಪು ಮತ್ತು ಹೈದರಾಲಿಯೂ ಇದೇ ಚಿಂತನೆಗಳ ಬಲಿಪಶುಗಳು ಎಂದೂ ಅವರು ಭಾವಿಸುತ್ತಾರೆ. ಎರಡನೆ ಅಧ್ಯಾಯದಲ್ಲಿ ಇತಿಹಾಸದ ಪರಿಕಲ್ಪನೆಯ ಕುರಿತಂತೆ ಚರ್ಚಿಸುತ್ತಾರೆ. ಸಿಪಾಯಿ ದಂಗೆ ಮತ್ತು ಸ್ವಾತಂತ್ರ ಹೋರಾಟ ಹೇಗೆ ಕಾಲದಿಂದ ಕಾಲಕ್ಕೆ ಬದಲಾಗುತ್ತದೆ ಎನ್ನುವುದನ್ನು ಚರ್ಚಿಸುತ್ತಾ, ಅಶೋಕನ ಕಾಲದಲ್ಲಿ ಪ್ರಭುತ್ವ ಹೇಗೆ ಬೌದ್ಧ ಧರ್ಮ ಮತಾಂತರಕ್ಕೆ ಪೂರಕವಾಗಿತ್ತೋ, ಹಾಗೆಯೇ ಟಿಪ್ಪುವಿನ ಕಾಲದಲ್ಲಿ ಪ್ರಭುತ್ವ ಇಸ್ಲಾಂ ಧರ್ಮ ಮತಾಂತರಕ್ಕೆ ಪೂರಕವಾಗಿದ್ದರೆ ಅದನ್ನು ಆಕ್ಷೇಪಿಸುವುದು ಸರಿಯಲ್ಲ ಎನ್ನುತ್ತಾರೆ. ಧರ್ಮ ಮತ್ತು ರಾಜಕೀಯ ಬೇರೆ ಬೇರೆಯಾಗಿರುವುದನ್ನೂ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸುತ್ತಾರೆ. ಹೈದರಲಿ ಮತ್ತು ಟಿಪ್ಪು ಉಳಿದ ರಾಜರಿಗೆ ಹೋಲಿಸಿದರೆ ಹೇಗೆ ಭಿನ್ನ ನೋಟಗಳನ್ನು ಒಳಗೊಂಡಿದ್ದಾರೆ ಎನ್ನುವುದನ್ನು ಮೂರನೆ ಅಧ್ಯಾಯದಲ್ಲಿ ವಿವರಿಸುತ್ತಾರೆ. ಬ್ರಿಟಿಷರು ಕಟ್ಟಿಕೊಟ್ಟ ಹೈದರಲಿ ಮತ್ತು ಟಿಪ್ಪುವಿನ ವ್ಯಕ್ತಿತ್ವ ಹಾಗೆಯೇ ಸಾಮಾಜಿಕ ಬದಲಾವಣೆಯಲ್ಲಿ ಅವರಿಬ್ಬರ ಒಳನೋಟಗಳನ್ನು ಅವರು ಬೇರೆ ಬೇರೆ ಗ್ರಂಥಗಳ ಆಧಾರದಲ್ಲಿ ಮುಂದಿಡುವ ಪ್ರಯತ್ನ ಮಾಡುತ್ತಾರೆ. ಈ ಪುಟ್ಟ ಕೃತಿಯಲ್ಲಿ ಹೈದರಲಿ ಮತ್ತು ಟಿಪ್ಪುವಿನ ಕುರಿತಂತೆ ಅಪಾರ ಮಾಹಿತಿಗಳನ್ನು ಕಲೆ ಹಾಕುತ್ತಲೇ ಆ ಕಾಲಘಟ್ಟವನ್ನು ವಿಶ್ಲೇಷಿಸುವ ಪ್ರಯತ್ನವನ್ನು ಕೃತಿಯಲ್ಲಿ ಮಾಡಿದ್ದಾರೆ. ಒಂದು ರೀತಿಯಲ್ಲಿ ವಿವಿಧ ಇತಿಹಾಸತಜ್ಞರ ಬೃಹತ್ ಗ್ರಂಥಗಳನ್ನು ಸೋಸಿ ತೆಗೆದು, ಅದರ ಸಾರವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಟಿಪ್ಪು ಸುಲ್ತಾನ್ ಇತಿಹಾಸ ಸಂಶೋಧನಾ ಸಮಿತಿ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 134. ಮುಖಬೆಲೆ 100 ರೂಪಾಯಿ. ಆಸಕ್ತರು 9343565343 ದೂರವಾಣಿಯನ್ನು ಸಂಪರ್ಕಿಸಬಹುದು.