ಘನ ತ್ಯಾಜ್ಯ ನಿರ್ವಹಣೆ ವಿಕೇಂದ್ರೀಕರಣದ ಬೆಂಗಳೂರು ಮಾದರಿ

Update: 2017-04-11 09:12 GMT

ಸಿಚುವನ್ ಯುನಿವರ್ಸಿಟಿ ಆಫ್ ಚೆಂಗ್ಡು ಸಂಸ್ಥೆಯ ಡಾ.ಕ್ಸುವಾ ಝಂಗ್, ‘‘ಬೆಂಗಳೂರು ಪ್ರಯೋಗ ನನ್ನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿದೆ. ಇದನ್ನು ಚೆಂಗ್ಡು ನಗರದಲ್ಲೂ ಅಳವಡಿಸಿಕೊಳ್ಳಲಾಗುವುದು. ಇದಕ್ಕೆ ಅಗತ್ಯ ನೀತಿಗಳನ್ನು ಜಾರಿಗೆ ತಂದು, ತ್ಯಾಜ್ಯ ಸುಡುವ ಕ್ರಮದ ಬದಲು ವಿಕೇಂದ್ರೀಕೃತ ಸಂಸ್ಕರಣೆ ಆಧರಿತ ದೃಷ್ಟಿಕೋನವನ್ನು ಜಾರಿಗೊಳಿಸಲಾಗುವುದು. ಈ ಯೋಜನೆ ಮೂಲಕ ನಾನು ಕಲಿತ ಅತೀ ದೊಡ್ಡ ಪಾಠ ಇದು. ತ್ಯಾಜ್ಯ ಕೂಡಾ ಚಿನ್ನ. ಇದು ಕಳೆದುಹೋದ ಸಂಪನ್ಮೂಲ’’ ಎನ್ನುತ್ತಾರೆ

ಘನ ತ್ಯಾಜ್ಯ ನಿರ್ವಹಣೆಯಲ್ಲಿ ಐದು ವರ್ಷದ ಹಿಂದೆ ಉಂಟಾದ ಸಮಸ್ಯೆ, ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹೊಸ ಪಾಠ ಕಲಿಸಿದೆ. ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದೇಶದಲ್ಲೇ ಘನ ತ್ಯಾಜ್ಯ ನಿರ್ವಹಣೆಗೆ ಕಟ್ಟುನಿಟ್ಟಿನ ಹಾಗೂ ವಿಸ್ತೃತ ಮಾರ್ಗಸೂಚಿಯನ್ನು ರೂಪಿಸಿದ ದೇಶದ ಮೊಟ್ಟಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತ್ಯಾಜ್ಯ ನಿರ್ವಹಣೆ ವೈಫಲ್ಯದ ವಿರುದ್ಧ 2012ರಲ್ಲಿ ಸಲ್ಲಿಕೆಯಾದ ಸರಣಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಹಾಗೂ ನ್ಯಾಯಾಂಗದ ಕ್ರಿಯಾಶೀಲತೆ ಇದಕ್ಕೆ ಮುಖ್ಯ ಕಾರಣ. ಬಿಬಿಎಂಪಿ ಅಧಿಕಾರಿಗಳು ದಿನಕ್ಕೆ ಉತ್ಪತ್ತಿಯಾಗುವ 5 ಸಾವಿರ ಟನ್‌ಗಿಂತಲೂ ಅಧಿಕ ಘನ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಕಾರ್ಯಯೋಜನೆ ರೂಪಿಸಿದ್ದಾರೆ.

ಪಾಲಿಕೆ ತ್ಯಾಜ್ಯ ವಿಲೇವಾರಿಯಾಗುತ್ತಿದ್ದ ಮಾವೆಲ್ಲಿಪುರ ಗ್ರಾಮದ ಜನತೆ ಪ್ರತಿಭಟನೆ ನಡೆಸಿದ್ದು, ಪಾಲಿಕೆ ಅಧಿಕಾರಿಗಳನ್ನು ಹೊಸ ವ್ಯವಸ್ಥೆ ಬಗ್ಗೆ ಮರುಚಿಂತನೆಗೆ ತೊಡಗಿಸಿತು. ಇಡೀ ನಗರದ ತ್ಯಾಜ್ಯವನ್ನು ತಂದು ಇಲ್ಲಿ ಸುರಿಯುವುದರಿಂದ ಸುತ್ತಮುತ್ತಲ ಗ್ರಾಮಗಳ ಗಾಳಿ ಹಾಗೂ ಹೊಲಗಳು ಮಲಿನವಾಗುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ತ್ಯಾಜ್ಯ ನಿರ್ವಹಣೆ ಸ್ಥಳದಲ್ಲಿ ಉತ್ಪತ್ತಿಯಾಗುವ ಹುಳಹುಪ್ಪಟೆಗಳು ಅಂತರ್ಜಲಕ್ಕೆ ಸೇರುತ್ತಿವೆ. ತ್ಯಾಜ್ಯ ರಾಶಿ ಬೀಳುವುದರಿಂದ ಪದೇ ಪದೇ ಬೆಂಕಿ ಆಕಸ್ಮಿಕಗಳು ಸಂಭವಿಸುತ್ತವೆ ಎನ್ನುವುದು ಗ್ರಾಮಸ್ಥರ ಆರೋಪವಾಗಿತ್ತು. ಈ ಕಾರಣಕ್ಕಾಗಿ ತ್ಯಾಜ್ಯ ವಿಲೇವಾರಿಯ ಇತರ ಸಾಧ್ಯತೆಗಳನ್ನು ಪರಿಶೀಲಿಸುವುದು ಅನಿವಾರ್ಯವಾಯಿತು. ಇದರ ಫಲವಾಗಿ ಹೊರಹೊಮ್ಮಿದ್ದೇ ವಿಕೇಂದ್ರೀಕರಣ ಪ್ರಕ್ರಿಯೆ. ಈ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ ಪಾಲಿಕೆ ಅಧಿಕಾರಿಗಳು 2013ರಲ್ಲಿ ವಿಕೇಂದ್ರೀಕೃತ ಘನ ತ್ಯಾಜ್ಯ ನಿರ್ವಹಣೆ ನೀತಿ ರೂಪಿಸಿತು. ಆದರೆ ಇದರ ಅನುಷ್ಠಾನ ಹೇಗೆ?

ಕಾಂಪೋಸ್ಟ್ ಗೊಬ್ಬರ

 ಈ ನೀತಿಯಲ್ಲಿ ಮುಖ್ಯವಾಗಿ ಎರಡು ಅಂಶಗಳಿದ್ದವು. ಒಂದು ಒಣ ಹಾಗೂ ಹಸಿ ಕಸವನ್ನು ಪ್ರತ್ಯೇಕಿಸುವುದು; ಇನ್ನೊಂದು ದೊಡ್ಡ ಪ್ರಮಾಣದ ಘನ ತ್ಯಾಜ್ಯ ಉತ್ಪಾದಿಸುವ ಸ್ಥಳ ಹಾಗೂ ಕುಟುಂಬಗಳ ತ್ಯಾಜ್ಯವನ್ನು ಪ್ರತ್ಯೇಕಿಸುವುದು. ಇದರಿಂದಾಗಿ ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪೈಕಿ ಶೇ. 40ರಷ್ಟು ದೊಡ್ಡ ಪ್ರಮಾಣದ ಘನ ತ್ಯಾಜ್ಯ ಉತ್ಪಾದಿಸುವ ಸ್ಥಳದಲ್ಲೇ ಉತ್ಪತ್ತಿಯಾಗುವುದು ತಿಳಿದುಬಂತು. ಹೊಸ ನಿಯಮಾವಳಿಯ ಪ್ರಕಾರ 50ಕ್ಕಿಂತ ಹೆಚ್ಚು ಮನೆಗಳನ್ನು ಹೊಂದಿರುವ ಕಾಲನಿ, ಅಪಾರ್ಟ್‌ಮೆಂಟ್ ಹಾಗೂ ವಸತಿ ಬಡಾವಣೆಗಳನ್ನು ಅಧಿಕ ತ್ಯಾಜ್ಯ ‘ಉತ್ಪಾದನಾ ಸ್ಥಳಗಳು’ ಎಂದು ಗುರುತಿಸಲಾಯಿತು. ಈ ಸ್ಥಳಗಳಲ್ಲಿ ಉತ್ಪಾದನೆಯಾಗುವ ಹಸಿ ತ್ಯಾಜ್ಯವನ್ನು ಬಳಸಿಕೊಂಡು ಸ್ಥಳದಲ್ಲೇ ಕಾಂಪೋಸ್ಟ್ ಅಥವಾ ಜೈವಿಕ ಮಿಥೇನ್ ಉತ್ಪಾದಿಸುವ ಮೂಲಕ ತ್ಯಾಜ್ಯ ವಿಲೇವಾರಿ ಮಾಡುವಂತೆ ಸೂಚಿಸಲಾಯಿತು. ಇದು ಸಾಧ್ಯವಾಗದಿದ್ದರೆ, ಇಂಥ ಬಡಾವಣೆಗಳು ಆಯಾ ವಾರ್ಡ್‌ಗಳಲ್ಲಿರುವ ಪಾಲಿಕೆಯ ಸಂಸ್ಕರಣಾ ಘಟಕಕ್ಕೆ ತ್ಯಾಜ್ಯವನ್ನು ಹಸಿ, ಹಣ ಹಾಗೂ ನೈರ್ಮಲ್ಯ ತ್ಯಾಜ್ಯಗಳೆಂದು ಬೇರ್ಪಡಿಸಿ ತಲುಪಿಸುವುದನ್ನು ಕಡ್ಡಾಯಪಡಿಸಲಾಯಿತು. ದಿನಕ್ಕೆ 10 ಕೆ.ಜಿ.ಗಿಂತ ಅಧಿಕ ತ್ಯಾಜ್ಯ ಉತ್ಪಾದನೆಯಾಗುವ ಸ್ಥಳಗಳನ್ನು ದೊಡ್ಡ ಪ್ರಮಾಣದ ಘನ ತ್ಯಾಜ್ಯ ಉತ್ಪಾದಿಸುವ ಸ್ಥಳ ಎಂದು ವ್ಯಾಖ್ಯಾನಿಸಲಾಯಿತು. ನ್ಯಾಯಮೂರ್ತಿ ಎನ್.ಕುಮಾರ್ ಅವರು, ಪಾಲಿಕೆ ಗುತ್ತಿಗೆದಾರರ ತ್ಯಾಜ್ಯ ಸಂಗ್ರಹ, ಸಾಗಾಟ ಹಾಗೂ ವಿಲೇವಾರಿ ಇಡೀ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ, 45ಕ್ಕೂ ಹೆಚ್ಚು ಆದೇಶಗಳನ್ನು ನೀಡಿ, ಹೊಸ ನೀತಿ ರೂಪುಗೊಳ್ಳಲು ಕಾರಣರಾದರು.

ಬೆಂಗಳೂರು ಮೂಲದ ‘ಅಶೋಕ ಟ್ರಸ್ಟ್ ಫಾರ್ ರೀಸರ್ಚ್ ಇನ್ ಇಕಾಲಜಿ ಆ್ಯಂಡ್ ದ ಎನ್ವಿರಾನ್‌ಮೆಂಟ್’ (ಎಟಿಆರ್‌ಇಇ) ಹಾಗೂ ಚೀನಾದ ‘ಸಿಚುವನ್ ಯುನಿವರ್ಸಿಟಿ ಆಫ್ ಚೆಂಗ್ಡು’ ಜಂಟಿಯಾಗಿ ನಡೆಸಿದ ಅಧ್ಯಯನ, ಈ ನೀತಿ ಅನುಷ್ಠಾನಕ್ಕೆ ಅದ್ಭುತ ಸ್ಪಂದನೆ ವ್ಯಕ್ತವಾಗಿದೆ ಎಂಬ ಅಂಶವನ್ನು ಬೆಳಕಿಗೆ ತಂದಿದೆ. ಪ್ರತಿದಿನ ಉತ್ಪಾದನೆಯಾಗುವ ತ್ಯಾಜ್ಯದಲ್ಲಿ ಶೇ. 67ರಷ್ಟು ಹಸಿ ತ್ಯಾಜ್ಯ, ಶೇ. 19ರಷ್ಟು ಒಣ ಕಸ ಹಾಗೂ ಶೇ. 14ರಷ್ಟು ನೈರ್ಮಲ್ಯ ತ್ಯಾಜ್ಯ ಎನ್ನುವುದು ಅಧ್ಯಯನದಿಂದ ದೃಢಪಟ್ಟಿದ್ದು, ಇದು ಪಾಲಿಕೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಗೆ ಸಮವಾಗಿದೆ. ಶೇ. 40ರಷ್ಟು ತ್ಯಾಜ್ಯ ದೊಡ್ಡ ಪ್ರಮಾಣದ ಘನ ತ್ಯಾಜ್ಯ ಉತ್ಪಾದಿಸುವ ಸ್ಥಳಗಳಲ್ಲಿ ಉತ್ಪಾದನೆಯಾಗುತ್ತಿದ್ದು, ಕಸವನ್ನು ಮೂಲದಲ್ಲೇ ಬೇರ್ಪಡಿಸುವ ಬಗ್ಗೆ ನಾಗರಿಕರಲ್ಲಿ ಜಾಗೃತಿಯ ಕೊರತೆ ಇರುವುದು ಯೋಜನೆಯ ಮತ್ತಷ್ಟು ಯಶಸ್ಸಿಗೆ ತಡೆಯಾಗಿದೆ ಎನ್ನುವುದು ಅಧ್ಯಯನದಿಂದ ಬಹಿರಂಗವಾಗಿದೆ. ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪೌರಕಾರ್ಮಿಕರಿಗೆ ಹಸ್ತಾಂತರಿಸಲಾಗುತ್ತದೆ. ಇದನ್ನು ಬೆಂಗಳೂರು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಪಾಲಿಕೆ ನಿಗದಿಪಡಿಸಿದ ಸ್ಥಳಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ. ಇಡೀ ಪ್ರಕ್ರಿಯೆಯಲ್ಲಿ ರಸ್ತೆಬದಿಯ ಕಸದ ತೊಟ್ಟಿಗಳನ್ನು ನಿರ್ಮೂಲನೆ ಮಾಡಲಾಗಿದೆ.

ಆದಾಯ- ವೆಚ್ಚ

ನಗರದಲ್ಲಿ ನೂರಕ್ಕೂ ಹೆಚ್ಚು ದೊಡ್ಡ ಪ್ರಮಾಣದ ಘನ ತ್ಯಾಜ್ಯ ಉತ್ಪಾದಿಸುವ ಸ್ಥಳಗಳಲ್ಲಿ ಹಸಿ ಕಸವನ್ನು ವಿಲೇವಾರಿ ಮಾಡುವ ಕಾಂಪೋಸ್ಟಿಂಗ್ ವ್ಯವಸ್ಥೆ ಆರಂಭಿಸಲಾಗಿದೆ ಎನ್ನುವುದನ್ನು ಅಧ್ಯಯನ ಬೆಳಕಿಗೆ ತಂದಿದೆ. ತ್ಯಾಜ್ಯ ನಿರ್ವಹಣೆಯ ಹೊಸ ತಂತ್ರಜ್ಞಾನ ಸೇವೆಯನ್ನು ನೀಡುವ ಉದ್ಯಮಿಗಳಿಗೆ ಉತ್ತೇಜನ ನೀಡುವ ಮೂಲಕ ಕಾಂಪೋಸ್ಟಿಂಗ್ ಅಥವಾ ಜೈವಿಕ ಮಿಥೇನ್ ಘಟಕಗಳ ಸ್ಥಾಪನೆಗೆ ಒತ್ತು ನೀಡಲಾಗಿದೆ. ಒಣ ಕಸ ಮತ್ತು ಕಾಂಪೋಸ್ಟ್ ಆದಾಯದ ಮೂಲ ಎನ್ನುವುದು ಅಧ್ಯಯನದಿಂದ ದೃಢಪಟ್ಟಿದ್ದು, ನೈರ್ಮಲ್ಯ ತ್ಯಾಜ್ಯಗಳ ಸುಡುವಿಕೆ ಮಾತ್ರ ದೊಡ್ಡ ಪ್ರಮಾಣದ ಘನ ತ್ಯಾಜ್ಯ ಉತ್ಪಾದಿಸುವ ಸ್ಥಳಗಳಿಗೆ ವೆಚ್ಚದ ಮೂಲ.

ಇಷ್ಟಾಗಿಯೂ ಸವಾಲು ಹಾಗೂ ಅಡೆತಡೆಗಳಿವೆ. ತ್ಯಾಜ್ಯ ಸಂಗ್ರಹ ಗುತ್ತಿಗೆದಾರರು ಹಾಗೂ ಪಾಲಿಕೆ ನಡುವಿನ ಅಪವಿತ್ರ ಮೈತ್ರಿ ಮುಂದುವರಿದಿದೆ. ಕಸ ಸಾಗಾಣೆೆಗೆ ಪ್ರತಿ ಟನ್‌ಗೆ ಇಂತಿಷ್ಟು ಎಂಬ ದರ ವಿಧಿಸಲಾಗುತ್ತಿದ್ದು, ದೊಡ್ಡ ಪ್ರಮಾಣದ ಘನ ತ್ಯಾಜ್ಯ ಉತ್ಪಾದಿಸುವ ಸ್ಥಳಗಳಿಂದಲೂ ತ್ಯಾಜ್ಯವನ್ನು ಗುತ್ತಿಗೆದಾರರು ಸಂಗ್ರಹಿಸುವ ದಂಧೆಯಲ್ಲಿ ತೊಡಗಿದ್ದಾರೆ. ಇದು ಎರಡೂ ವರ್ಗಗಳಿಗೆ ಲಾಭ ತರುವ ಕ್ರಮ. ದೊಡ್ಡ ಪ್ರಮಾಣದ ಘನ ತ್ಯಾಜ್ಯ ಉತ್ಪಾದಿಸುವ ಸ್ಥಳಗಳಿಗೆ ಒಂದೇ ಬಾರಿಗೆ ತ್ಯಾಜ್ಯ ವಿಲೇವಾರಿಯಾದರೆ, ಗುತ್ತಿಗೆದಾರರಿಗೆ ಒಂದೇ ಸ್ಥಳದಿಂದ ದೊಡ್ಡ ಪ್ರಮಾಣದ ಕಸ ಸಿಗುತ್ತದೆ. ಅದರೆ ಕಾನೂನು ಗೌರವಿಸುವ ದೊಡ್ಡ ಪ್ರಮಾಣದ ಘನ ತ್ಯಾಜ್ಯ ಉತ್ಪಾದಿಸುವ ಸ್ಥಳಗಳಿಗೆ ಮಾತ್ರ ಹೊರೆಯಾಗುತ್ತಿದ್ದು, ಇವರು ತ್ಯಾಜ್ಯ ನಿರ್ವಹಿಸುವವರಿಗೆ ಹಣ ನೀಡುವ ಜತೆಗೆ ಪಾಲಿಕೆಗೂ ತ್ಯಾಜ್ಯ ನಿರ್ವಹಣಾ ಸೆಸ್ ನೀಡಬೇಕಾಗುತ್ತದೆ.

ಸವಾಲು- ತಡೆ

‘‘ದೊಡ್ಡ ಪ್ರಮಾಣದ ಘನ ತ್ಯಾಜ್ಯ ಉತ್ಪಾದಿಸುವ ಸ್ಥಳಗಳು ಎದುರಿಸುವ ಸವಾಲುಗಳೆಂದರೆ, ಮೂಲದಲ್ಲೇ ಕಸವನ್ನು ಬೇರ್ಪಡಿಸುವುದನ್ನು ಕಟ್ಟುನಿಟ್ಟಾಗಿಸುವುದು, ನೈರ್ಮಲ್ಯ ತ್ಯಾಜ್ಯಗಳ ವಿಲೇವಾರಿಗೆ ಅಧಿಕ ವೆಚ್ಚವಾಗುವುದು, ಬಿಬಿಎಂಪಿಗೆ ತ್ಯಾಜ್ಯ ನಿರ್ವಹಣೆ ಸೆಸ್ ನೀಡಿಯೂ ತ್ಯಾಜ್ಯ ವಿಲೇವಾರಿಗೆ ಖಾಸಗಿಯವರಿಗೆ ಪಾವತಿಸುವುದು ಹಾಗೂ ಒಣ ಕಸವನ್ನು ಹೇಗೆ ವಿಲೇವಾರಿ ಮಾಡಬೇಕು ಎನ್ನುವಲ್ಲಿ ಪಾಲಿಕೆಯಿಂದ ಸೂಕ್ತ ಮಾರ್ಗದರ್ಶನದ ಕೊರತೆ’’ ಎಂದು ಅಧ್ಯಯನ ನಡೆಸಿದ ಎಟಿಆರ್‌ಇಇ ಸಹ ಪ್ರಧಾನ ಸಂಶೋಧಕಿ ಡಾ.ಮೇಘಾ ಶೆಣೈ ಹೇಳುತ್ತಾರೆ.

ಇಡೀ ಪ್ರಕ್ರಿಯೆಯಲ್ಲಿ ರಾಚನಿಕ ಸಮಸ್ಯೆಗಳೂ ಇವೆ. ಬಿಬಿಎಂಪಿಯ ಇಂಜಿನಿಯರಿಂಗ್ ವಿಭಾಗ ಹಾಗೂ ಆರೋಗ್ಯ ವಿಭಾಗದ ಜಂಟಿ ಹೊಣೆಗಾರಿಕೆಯೂ ಸಮಸ್ಯೆಯಾಗಿದೆ. ಸಿಬ್ಬಂದಿ ಕೊರತೆ ಹಾಗೂ ಖಾಲಿ ಹುದ್ದೆಗಳು ಇನ್ನೊಂದು ಸಮಸ್ಯೆಯಾಗಿದೆ. ಪ್ರಸ್ತುತ ಬಿಬಿಎಂಪಿ 198 ವಾರ್ಡ್‌ಗಳಿಗೆ 110 ಮಂದಿ ಆರೋಗ್ಯ ನಿರೀಕ್ಷಕರು ಹಾಗೂ 35 ಮಂದಿ ಹಿರಿಯ ಆರೋಗ್ಯ ನಿರೀಕ್ಷಕರನ್ನು ಮಾತ್ರ ಹೊಂದಿದೆ.
ಆದರೆ ಎಟ್ರೀ ಆಯೋಜಿಸಿದ್ದ ವಿಕೇಂದ್ರೀಕೃತ ಘನ ತ್ಯಾಜ್ಯ ವಿಲೇವಾರಿ ಕಾರ್ಯಾಗಾರದಲ್ಲಿ ಮಾತನಾಡಿದ ನ್ಯಾಯಮೂರ್ತಿ ಎನ್.ಕುಮಾರ್, ‘‘ಬೆಂಗಳೂರಿನಲ್ಲಿ ಆರಂಭಿಸಿರುವ ಹೊಸ ವ್ಯವಸ್ಥೆಯಿಂದ ಹಿಂದೆ ಸರಿಯುವುದು ಸಾಧ್ಯವೇ ಇಲ್ಲ’’ ಎನ್ನುತ್ತಾರೆ. ‘‘ತ್ಯಾಜ್ಯ ವಿಲೇವಾರಿಯಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವಿಷಯಗಳಿದ್ದು, ವಿಭಿನ್ನ ಹಿತಾಸಕ್ತಿಯ ಗುಂಪುಗಳ ಒತ್ತಡ ಕಾರಣದಿಂದಾಗಿ ಎಲ್ಲರನ್ನು ಮನವೊಲಿಸುವ ಮೂಲಕ ಮಾತ್ರ ಇದನ್ನು ಸಮರ್ಪಕವಾಗಿ ನಿರ್ವಹಿಸಬಹುದಾಗಿದೆಯೇ ವಿನಃ ನ್ಯಾಯಾಲಯ ಅಥವಾ ಕಾನೂನಿನಿಂದ ಇದು ಸಾಧ್ಯವಿಲ್ಲ’’ ಎನ್ನುವುದು ಅವರ ಅಭಿಪ್ರಾಯ. ‘‘ದಿನಕ್ಕೆ 5,500 ಟನ್ ಘನ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ ಎಂಬ ಅಂಕಿ ಅಂಶವನ್ನು ಪಾಲಿಕೆ ಮುಂದಿಡುತ್ತಿದೆ. ಖಂಡಿತವಾಗಿಯೂ ಈ ಕಸ ಮಾಫಿಯಾ ಈ ಅಂಕಿ ಅಂಶಗಳನ್ನು ವೈಭವೀಕರಿಸುತ್ತಿದೆ’’ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ. ಕಸ ಸಾಗಾಟ ಟ್ರಕ್‌ಗಳ ಸಾಗಣೆಯನ್ನು ತೂಕ ಮಾಡಲು ಆರಂಭಿಸುವಂತೆ ಸೂಚಿಸಿದಾಗ ಈ ಪ್ರಮಾಣ 3,500 ಟನ್‌ಗೆ ಇಳಿದಿತ್ತು. ಕಸಗಳ ವಿಂಗಡಣೆಗೆ ಸೂಚಿಸಿದಾಗ 2,500 ಟನ್‌ಗೆ ಇಳಿದಿತ್ತು. ಅಂತೆಯೇ ಒಣ ಕಸ ಸಂಗ್ರಹ ಕೇಂದ್ರಗಳನ್ನು ಆರಂಭಿಸುವಂತೆಯೂ ಪಾಲಿಕೆಗೆ ಸೂಚಿಸಲಾಗಿತ್ತು. ಇದೀಗ 187 ಇಂಥ ಘಟಕಗಳು ಕಾರ್ಯಾಚರಿಸುತ್ತಿದ್ದು, ಶೇ. 50ಕ್ಕಿಂತಲೂ ಅಧಿಕ ಲಾಭದಲ್ಲಿ ನಡೆಯುತ್ತಿವೆ. ಸುಮಾರು 200 ಮಂದಿಗೆ ಇದರಿಂದ ಉದ್ಯೋಗ ಸಿಕ್ಕಿದೆ ಎಂದು ಹೇಳುತ್ತಾರೆ.

ಸುಸ್ಥಿರತೆ

‘‘ಯಾವ ಏಕೈಕ ತಂತ್ರಜ್ಞಾನ ಕೂಡಾ ತ್ಯಾಜ್ಯದ ಎಲ್ಲ ಸಮಸ್ಯೆಗಳನ್ನು ಏಕಕಾಲಕ್ಕೆ ನಿವಾರಿಸಲಾಗದು’’ ಎನ್ನುವುದು ಕರ್ನಾಟಕ ಸರಕಾರದ ರಫ್ತು ಸಮಿತಿ ಸದಸ್ಯ ಎನ್.ಎಸ್.ರಮಾಕಾಂತ್ ಅವರ ಸ್ಪಷ್ಟ ಅಭಿಪ್ರಾಯ. ಸುಸ್ಥಿರತೆ ದೃಷ್ಟಿಯಿಂದ ಅವಳಿ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಮರುಬಳಕೆ ಮಾಡಬೇಕು. ಅಂದರೆ ಕೆಟ್ಟ ಅಂಶಗಳನ್ನು ಕಡಿಮೆ ಮಾಡುವುದು ಹಾಗೂ ಸಂಪನ್ಮೂಲದ ಪುನಶ್ಚೇತನ ದೃಷ್ಟಿಯಿಂದ ಮರುಬಳಕೆ ಅನಿವಾರ್ಯ. ಮನೆಗಳ ತ್ಯಾಜ್ಯದಿಂದ ಗೊಬ್ಬರ ಉತ್ಪಾದಿಸುವ ಅಥವಾ ಜೈವಿಕ ಮಿಥೇನ್ ಘಟಕಗಳು ಸೂಪರ್ ಮಾರ್ಕೆಟ್‌ಗಳಲ್ಲಿ 5 ರಿಂದ 6 ಸಾವಿರ ರೂಪಾಯಿಗೆ ಲಭ್ಯವಾಗುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕು ಎನ್ನುವುದು ಅವರ ಅಭಿಪ್ರಾಯ.

ಸಿಮೆಂಟ್ ಚೀಲಕ್ಕೆ ಪ್ಲಾಸ್ಟಿಕ್

ಐಟಿಸಿ ನಗರದಲ್ಲಿ ನಿರ್ವಹಿಸುವ ತ್ಯಾಜ್ಯ ಸಂಗ್ರಹ ಕೇಂದ್ರಗಳಲ್ಲಿ ಒಟ್ಟಾರೆ ದಿನಕ್ಕೆ 300 ಟನ್ ಪ್ಲಾಸ್ಟಿಕ್ ಸ್ವೀಕರಿಸಿ, ಎಸಿಸಿ ಸಿಮೆಂಟ್ ಕಾರ್ಖಾನೆಗೆ ಸಿಮೆಂಟ್ ಚೀಲಗಳಿಗಾಗಿ ಇವುಗಳನ್ನು ಸಾಗಿಸಲಾಗುತ್ತಿದೆ. ಸಿಮೆಂಟ್ ಹೇರಿಕೊಂಡು ಬಂದ ಲಾರಿಗಳು ಖಾಲಿ ಹೋಗುವ ಬದಲು ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ಒಯ್ಯಲು ವ್ಯವಸ್ಥೆ ಮಾಡಲಾಗಿದೆ. ಈ ಚಟುವಟಿಕೆಯನ್ನು ಸಿಎಸ್‌ಆರ್ ನಿಧಿಯಡಿ ಐಟಿಸಿ ಹಮ್ಮಿಕೊಳ್ಳುತ್ತಿದ್ದು, ಇದರಿಂದಾಗಿ ಇವುಗಳನ್ನು ನಿರ್ವಹಿಸುವ ಪೌರಕಾರ್ಮಿಕರಿಗೆ ಹೆಚ್ಚಿನ ವೇತನ ಕೊಡಲೂ ಇದರಿಂದ ಸಾಧ್ಯವಾಗಿದೆ.

ಸಿಚುವನ್ ಯುನಿವರ್ಸಿಟಿ ಆಫ್ ಚೆಂಗ್ಡು ಸಂಸ್ಥೆಯ ಡಾ.ಕ್ಸುವಾ ಝಂಗ್, ‘‘ಬೆಂಗಳೂರು ಪ್ರಯೋಗ ನನ್ನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿದೆ. ಇದನ್ನು ಚೆಂಗ್ಡು ನಗರದಲ್ಲೂ ಅಳವಡಿಸಿಕೊಳ್ಳಲಾಗುವುದು. ಇದಕ್ಕೆ ಅಗತ್ಯ ನೀತಿಗಳನ್ನು ಜಾರಿಗೆ ತಂದು, ತ್ಯಾಜ್ಯ ಸುಡುವ ಕ್ರಮದ ಬದಲು ವಿಕೇಂದ್ರೀಕೃತ ಸಂಸ್ಕರಣೆ ಆಧರಿತ ದೃಷ್ಟಿಕೋನವನ್ನು ಜಾರಿಗೊಳಿಸಲಾಗುವುದು. ಈ ಯೋಜನೆ ಮೂಲಕ ನಾನು ಕಲಿತ ಅತೀ ದೊಡ್ಡ ಪಾಠ ಇದು. ತ್ಯಾಜ್ಯ ಕೂಡಾ ಚಿನ್ನ. ಇದು ಕಳೆದುಹೋದ ಸಂಪನ್ಮೂಲ’’ ಎಂದು ಹೇಳುತ್ತಾರೆ.

2012ರಲ್ಲಿ ಸೂಕ್ತ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಸರಣಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದ ಮರಿಯಮ್‌ಶಂಕರ್ ಅವರು, ‘‘ಅಗ್ನಿಶಾಮಕ ಪರಿಶೋಧನೆ ನಡೆಯುವಂತೆ ಘನ ತ್ಯಾಜ್ಯ ವಿಲೇವಾರಿ ಬಗ್ಗೆಯೂ ಪರಿಶೋಧನೆ ನಡೆಯಬೇಕು’’ ಎಂದು ಆಗ್ರಹಿಸುತ್ತ್ತಾರೆ. ‘‘ಜರ್ಮನಿಯಲ್ಲಿರುವಂತೆ ಗ್ರಾಹಕರು ಖರೀದಿಸಿದ ವಸ್ತುಗಳ ಪ್ಯಾಕೇಜಿಂಗ್ ಸಾಮಗ್ರಿಗಳನ್ನು ಅಲ್ಲೇ ಬಿಟ್ಟುಬಿಡಲು ಅವಕಾಶ ಇರಬೇಕು’’ ಎನ್ನುವುದು ಅವರ ಸಲಹೆ.

ಲೇಖಕರ ಇ-ಮೇಲ್: maqsiraj@gmail.com

Writer - ಎಂ. ಎ. ಸಿರಾಜ್

contributor

Editor - ಎಂ. ಎ. ಸಿರಾಜ್

contributor

Similar News

ಜಗದಗಲ
ಜಗ ದಗಲ