ನಕಲಿ ಖಾತೆಗಳನ್ನು ತಡೆಯಲು ಸಜ್ಜಾದ ಫೇಸ್ ಬುಕ್
ನ್ಯೂಯಾರ್ಕ್,ಎ.13 : ನಕಲಿ ಖಾತೆಗಳನ್ನು ಹೊರಗಟ್ಟುವ ಸಲುವಾಗಿ ಫೇಸ್ ಬುಕ್ ಹಲವಾರು ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದ್ದು, ಸತತವಾಗಿ ಅದೇ ಪೋಸ್ಟ್ ಗಳನ್ನು ಅಥವಾ ಸಂದೇಶಗಳನ್ನು ನೀಡುವಂತಹ ಸಂದೇಹಾಸ್ಪದ ಚಟುವಟಿಕೆಗಳಿರುವ ಖಾತೆಗಳ ಮೇಲೆ ಕಣ್ಣಿಡಲಿದೆ. ತಪ್ಪು ಮಾಹಿತಿಗಳನ್ನು ಫೇಸ್ ಬುಕ್ ನಿಂದ ಹೊರಗಿಡುವ ಪ್ರಯತ್ನವಾಗಿ ಈ ಕಾರ್ಯ ಕೈಗೊಳ್ಳಲಾಗುತ್ತಿದೆ.
ಫೇಸ್ ಬುಕ್ ನ ನೈಜ ಖಾತೆದಾರರು ಜವಾಬ್ದಾರಿಯುತವಾಗಿ ವರ್ತಿಸುವವರಾಗಿದ್ದರೆ, ನಕಲಿ ಖಾತೆಗಳು ಬೇರೆಯದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ತಿಳಿದು ಬರುತ್ತಿದೆ,’’ ಎಂದು ಫೇಸ್ ಬುಕ್ ಪ್ರೊಟೆಕ್ಟ್ ಎಂಡ್ ಕೇರ್ ತಂಡದ ಶಬ್ನಮ್ ಶೇಖ್ ಹೇಳುತ್ತಾರೆ.
ನಕಲಿ ಎಂದು ತಿಳಿಯಲಾದ ಖಾತೆಗಳನ್ನು ಮುಚ್ಚಲಾಗುವುದು ಹಾಗೂ ಸಂಬಂಧಿತರಿಗೆ ತಮ್ಮ ಗುರುತನ್ನು ಸಾಬೀತು ಪಡಿಸಲು ಹೇಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಕ್ರಮದಿಂದಾಗಿ ಫ್ರಾನ್ಸ್ ದೇಶದಲ್ಲಿ ಈಗಾಗಲೇ 30,000 ನಕಲಿ ಫೇಸ್ ಬುಕ್ ಖಾತೆಗಳನ್ನು ಮುಚ್ಚಲಾಗಿದೆ. ಖಾತೆದಾರರ ಚಟುವಟಿಕೆಗಳ ಆಧಾರದಲ್ಲಿಯೇ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಫೇಸ್ ಬುಕ್ ಮುಖಾಂತರ ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಡೆಯಲು ಇಂತಹ ಸುದ್ದಿಗಳ ಬಗ್ಗೆ ದೂರು ನೀಡುವ ಕಾರ್ಯವನ್ನು ಸುಲಭಗೊಳಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಬಲದಿಂದಾಗಿಯೇ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ತಪ್ಪು ಮಾಹಿತಿಗಳನ್ನು ಪಸರಿಸಲು ಸಾಧ್ಯವಾಗಿದೆ ಎಂಬ ಟೀಕೆಯಿಂದ ಹೊರ ಬರುವ ಪ್ರಯತ್ನವನ್ನು ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಝುಕರ್ ಬರ್ಗ್ ಮಾಡುತ್ತಿದ್ದಾರೆಂಬುದು ಸ್ಪಷ್ಟ.