ಅಂಬೇಡ್ಕರರ ಜೀವನವೂ... ಸಮಾನತೆಯೆಡೆಗಿನ ನಿರಂತರ ಪಯಣವೂ...

Update: 2017-04-13 18:23 GMT

ಗಾಂಧೀಜಿಯವರು ಅಸ್ಪಶ್ಯರಿಗೆ ಪ್ರತ್ಯೇಕ ಮತದಾನ ಪದ್ಧತಿ ನೀಡುವುದರ ವಿರುದ್ಧವಿದ್ದಾರೆ ನೀವು ಇದನ್ನು ಒಪ್ಪಬೇಕು ಎಂದು ಅವರ ಅನುಯಾಯಿಗಳು ಸಂದೇಶ ತಂದಾಗ ಅಂಬೇಡ್ಕರರು ಹೇಳಿದ್ದು ‘‘ನಾನು ನಿಮಗೆ ಹೇಳುವುದೇನೆಂದರೆ, ನೀವು ನನ್ನನ್ನು ಹತ್ತಿರದಲ್ಲೇ ಇರುವ ಬೀದಿಯ ದೀಪದ ಕಂಬಕ್ಕೆ ನೇಣು ಹಾಕಿದರೂ ಕೂಡ ನಾನು ನನ್ನ ಈ ಪರಮ ಶ್ರೇಷ್ಠ ಕರ್ತವ್ಯದಿಂದ ಹಿಂದೆ ಸರಿಯಲಾರೆ, ನನ್ನ ಜನರ ಅರ್ಹ ಮತ್ತು ನ್ಯಾಯಸಮ್ಮತ ಹಿತಾಸಕ್ತಿಗಳಿಗೆ ದ್ರೋಹ ಬಗೆಯಲಾರೆ’’

1927 ಮಾರ್ಚ್ 20 ರಂದು ಬಾಬಾಸಾಹೇಬ್ ಅಂಬೇಡ್ಕರರು ಮಹಾಡ್ ನಗರದ ಚೌಡರ್ ಕೆರೆಯ ನೀರನ್ನು ಕುಡಿದಾಗ ಅವರಿಗೆ ಬರೀ 36 ವರ್ಷ. ಅವರು ಹೀಗೆ ನೀರು ಕುಡಿಯಲು ಅವರಿಗೆ ಇದ್ದ ಒತ್ತಾಸೆಗೆ ಕಾರಣ ಪ್ರಾಣಿಗಳನ್ನು ಶ್ರೇಷ್ಠವಾಗಿ ಕಾಣುವ ಧರ್ಮವೊಂದು ತನ್ನ ಸಹಧರ್ಮೀಯ ಮನುಷ್ಯರನ್ನು ಅದಕ್ಕಿಂತಲೂ ಕೀಳಾಗಿ ಕಾಣುತ್ತಿದೆಯಲ್ಲ, ಸಾರ್ವಜನಿಕ ಉಪಯೋಗದ ವಸ್ತುಗಳನ್ನು ಸ್ಥಳಗಳನ್ನು ಬಳಸಲು ಅನುಮತಿ ನಿರಾಕರಿಸುತ್ತಿದೆಯಲ್ಲ ಎಂಬುದಾಗಿತ್ತು. ಈ ನಿಟ್ಟಿನಲ್ಲಿ ಇದರ ಹಿಂದೆ ಇದ್ದದ್ದು ಒಂದೇ ತುಡಿತ ಅದು ಸಮಾನತೆ. ಹೌದು, ಸಮಾನತೆ ಬಾಬಾಸಾಹೇಬ್ ಅಂಬೇಡ್ಕರರು ಜೀವನ ಪೂರ್ತಿ ಮಿಡಿದ ಹೋರಾಟದ ಬಹುಮುಖ್ಯ ಅಂಶ.

ಅಂದಹಾಗೆ ಸಮಾನತೆಯೆಡೆಗಿನ ಅಂತಹ ಹೋರಾಟದಲ್ಲಿ, ಅಂದರೆ ಸಮಾನತೆ ಸಾಧಿಸಲು ಅಂತಹ ಅಸಮಾನ ತಕ್ಕಡಿಯಲ್ಲಿ ಅಂಬೇಡ್ಕರರು ಇಟ್ಟ ತೂಕದ ಬಟ್ಟುಗಳು... ಒಂದೇ? ಎರಡೇ? ಅವುಗಳಲ್ಲಿ ಕೆಲವನ್ನು ಉಲ್ಲೇಖಿಸುವುದಾದರೆ... 1931 ಆಗಸ್ಟ್ 14ರಂದು ಅಂಬೇಡ್ಕರರು ಗಾಂಧೀಜಿಯವರನ್ನು ಪ್ರಪ್ರಥಮವಾಗಿ ಮುಂಬೈನ ಮಣಿಭವನ್‌ನಲ್ಲಿ ಭೇಟಿಯಾದರು. ಆಗ ಅಂಬೇಡ್ಕರರು ಹೇಳಿದ್ದು ‘‘ಗಾಂಧೀಜಿಯವರೆ, ನನಗೆ ಮಾತೃಭೂಮಿಯಿಲ್ಲ’’ ಎಂದು! ‘‘ಕುಡಿಯಲು ನೀರು ಕೊಡದ, ನಾಯಿ ಬೆಕ್ಕುಗಳಿಗಿಂತ ಕೀಳಾಗಿ ಕಾಣುವ ಈ ಧರ್ಮವನ್ನು, ಈ ನಾಡನ್ನು ನನ್ನ ಮಾತೃಭೂಮಿ ಎಂದು ಹೇಗೆ ಕರೆಯಲಿ?’’ ಎಂದು ಅಂಬೇಡ್ಕರರು ಏರಿದ ದನಿಯಲ್ಲಿ ಪ್ರಶ್ನಿಸಿದ್ದರು (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.17, ಭಾಗ.1, ಪು.53). ಇದೇ ಸಂದರ್ಭದಲ್ಲಿ ಗಾಂಧೀಜಿಯವರು ಅಸ್ಪಶ್ಯರಿಗೆ ಪ್ರತ್ಯೇಕ ಮತದಾನ ಪದ್ಧತಿ ನೀಡುವುದರ ವಿರುದ್ಧವಿದ್ದಾರೆ ನೀವು ಇದನ್ನು ಒಪ್ಪಬೇಕು ಎಂದು ಅವರ ಅನುಯಾಯಿಗಳು ಸಂದೇಶ ತಂದಾಗ ಅಂಬೇಡ್ಕರರು ಹೇಳಿದ್ದು ‘‘ನಾನು ನಿಮಗೆ ಹೇಳುವುದೇನೆಂದರೆ, ನೀವು ನನ್ನನ್ನು ಹತ್ತಿರದಲ್ಲೇ ಇರುವ ಬೀದಿಯ ದೀಪದ ಕಂಬಕ್ಕೆ ನೇಣು ಹಾಕಿದರೂ ಕೂಡ ನಾನು ನನ್ನ ಈ ಪರಮ ಶ್ರೇಷ್ಠ ಕರ್ತವ್ಯದಿಂದ ಹಿಂದೆ ಸರಿಯಲಾರೆ, ನನ್ನ ಜನರ ಅರ್ಹ ಮತ್ತು ನ್ಯಾಯಸಮ್ಮತ ಹಿತಾಸಕ್ತಿಗಳಿಗೆ ದ್ರೋಹ ಬಗೆಯಲಾರೆ’’ (ಅದೇ ಕೃತಿ. ಪು.152). ಬಾಬಾಸಾಹೇಬರ ಈ ಆಕ್ರೋಶದ ಗುಡುಗಿನ ಹಿಂದೆ ಇದ್ದದ್ದು? ಮತ್ತದೇ ಸಮಾನತೆಯ ಮಿಡಿತ. ಮುಂದುವರಿದು 1935ರಲ್ಲಿ ಲಾಹೋರ್‌ನ ‘ಜಾತಿ ನಿರ್ಮೂಲನಾ ಮಂಡಳಿ’ ಎಂಬ ಸಂಘಟನೆಯವರು ಅಂಬೇಡ್ಕರರಿಗೆ ತಮ್ಮ ಮಂಡಳಿಯ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆಯನ್ನು ಈ ಬಾರಿ ನೀವೇ ವಹಿಸಬೇಕು ಎಂದಾಗ ಅಂಬೇಡ್ಕರರು ಅಧ್ಯಕ್ಷ ನುಡಿಗಾಗಿ ತಾವು ಸಿದ್ಧಪಡಿಸಿದ ಆ ಭಾಷಣದಲ್ಲಿ ಹೇಳಿದ್ದು ‘‘ಹಿಂದೂಗಳೇ, ಬಹುಶಃ ಇದು ನಿಮ್ಮನ್ನುದ್ದೇಶಿಸಿ ನಾನು ಮಾಡುತ್ತಿರುವ ಕೊನೆಯ ಭಾಷಣ’’ ಎಂದು! ಹಾಗೆಯೇ ಆ ಭಾಷಣದಲ್ಲಿ ಅವರು ಹೇಳಿದ್ದು ‘‘ಹಿಂದೂಗಳು ತಮ್ಮ ಧರ್ಮವನ್ನು, ಇದು ನಮ್ಮನ್ನು ಚೆನ್ನಾಗಿ ಬದುಕಲು ಉಳಿಯಗೊಡಬಲ್ಲುದೆ? ವಂಶಪಾರಂಪರ್ಯವಾಗಿ ಬಂದ ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕೆ ಅಥವಾ ಆಯ್ದವುಗಳನ್ನು ಉಳಿಸಿಕೊಂಡು ಉಳಿದವುಗಳನ್ನು ಕೈಬಿಡಬೇಕೆ? ಪ್ರಾಚೀನ ಕಾಲವನ್ನು ಪೂಜಿಸಬೇಕೆ ಅಥವಾ ಪೂಜಿಸುವುದನ್ನು ನಿಲ್ಲಿಸಬೇಕೆ? ಎಂದು ಪರಿಶೀಲಿಸಬೇಕು. ಹಾಗೆಯೇ ಸನಾತನವಾದುದು ಯಾವುದು ಇಲ್ಲ ಎಂಬುದನ್ನು ಅರಿಯಬೇಕು. ಜಾತಿಪದ್ಧತಿ ನಾಶವಾದರೆ ಮಾತ್ರ ಹಿಂದೂ ಸಮಾಜ ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲದು ಎಂಬುದನ್ನು ಮನಗಾಣಬೇಕು’’. ಅಂಬೇಡ್ಕರರು ತಕ್ಕಡಿಯನ್ನು ಒಂದೇ ಏಟಿಗೆ ಸಮಕ್ಕೆ ತಂದು ನಿಲ್ಲಿಸಿ ಹಿಂದೂಗಳೇಕೆ ಹೀಗೆ ಬದುಕಬಾರದು ಎಂದು ತೋರಿಸಿದ್ದರು. ಇದಕ್ಕೆ ಪೂರಕವಾಗಿ ‘ಹಿಂದೂ ಧರ್ಮದಲ್ಲಿನ ಒಗಟುಗಳು’, ‘ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ವಿರುದ್ಧ ಕ್ರಾಂತಿ’, ‘ಶೂದ್ರರು ಯಾರು?’, ‘ಅಸ್ಪಶ್ಯರು ಯಾರು?’, ‘ವಿಮೋಚನೆಯ ಮಾರ್ಗ ಯಾವುದು?’ ಹೀಗೆ ಸರಣಿ ಕೃತಿಗಳನ್ನು ಬರೆದರು. ಸಮಾನತೆ ಕೂಗನ್ನು ಉದ್ದಕ್ಕೂ ಮೊಳಗಿಸಿದರು. ಅಂದಹಾಗೆ ಇದರ ಪ್ರಾಯೋಗಿಕತೆ? ಬಾಬಾಸಾಹೇಬರು ಅದಕ್ಕೂ ಉತ್ತರ ಕಂಡುಕೊಂಡಿದ್ದರು. ಬ್ರಿಟಿಷರಿಂದ ತನ್ನವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪಡೆದ ಅವರು ಶಾಸನ ಸಭೆಗಳಿಗೆ ಆಯ್ಕೆಯಾಗಲೂ ಅಂತಹ ಮೀಸಲಾತಿಯನ್ನು ಉಳಿಸಿಕೊಂಡು ಶತಶತಮಾನಗಳಿಂದ ನೊಂದ ತನ್ನವರಿಗೆ ಸಮಾನತೆಯ ಸವಿ ಏನೆಂದು ತೋರಿಸಿಕೊಟ್ಟರು. ಹಾಗೆಯೇ ಅದರ ಫಲಾನುಭವಿ ತಾವೇ ಆದರು! ಹೇಗೆಂದರೆ 1937ರಲ್ಲಿ ಮೀಸಲಾತಿಯಡಿ ತಮ್ಮ ಪಕ್ಷ ‘ಇಂಡಿಯನ್ ಲೇಬರ್ ಪಾರ್ಟಿ’ಯಿಂದ ಮುಂಬೈ ಅಸೆಂಬ್ಲಿಗೆ ಸ್ಪರ್ಧಿಸಿ 17 ಸ್ಥಾನಗಳನ್ನು ಗೆದ್ದು ವೈಸರಾಯ್‌ರ ಮಂತ್ರಿಮಂಡಲದಲ್ಲಿ 1942 ಜುಲೈ 20ರಂದು ಕಾರ್ಮಿಕ ಮಂತ್ರಿಯಾಗಿ ನೇಮಕಗೊಂಡಿದ್ದರು. ಈ ಸಂದರ್ಭದಲ್ಲಿ ಅಂಬೇಡ್ಕರರ ಈ ಸಮಾನತೆಯೆಡೆಗಿನ ನಡೆಯನ್ನು ಅಂದಿನ ಮಾಧ್ಯಮಗಳು ಬೆಂಬಲಿಸಿದ್ದವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಖಂಡಿತ ಇಲ್ಲ. 1943ರ ಸಂದರ್ಭದ ಅಂಬೇಡ್ಕರರ ಮಾತುಗಳನ್ನೆ ಇಲ್ಲಿ ಉಲ್ಲೇಖಿಸುವುದಾದರೆ ‘‘ಮಾಧ್ಯಮಗಳ ಟೀಕೆಗೆ ನಾನು ಯಾವುದೇ ಬೆಲೆ ಕೊಡುವುದಿಲ್ಲ. ಯಾಕೆಂದರೆ ಅವು ನನ್ನನ್ನು ಟೀಕಿಸುತ್ತವೆ ಆದರೆ ಅವು ಎಂದೂ ನನ್ನ ಹೇಳಿಕೆಗಳನ್ನು ಸುಳ್ಳು ಎಂದು ತೋರಿಸಿಲ್ಲ. ಅವುಗಳಿಗೆ ಗೊತ್ತಿರುವುದಿಷ್ಟೆ ನಾನು ಏನೇ ಮಾಡಲಿ ನನ್ನನ್ನು ನಿಂದಿಸುವುದು, ಹೆದರಿಸುವುದು, ಟೀಕಿಸುವುದು. ಈ ನಿಟ್ಟಿನಲ್ಲಿ ಮಾಧ್ಯಮಗಳ ಈ ವರ್ತನೆ ಅಸ್ಪಶ್ಯರ ವಿರುದ್ಧದ ಹಿಂದೂಗಳ ದ್ವೇಷದ ಪ್ರತಿಬಿಂಬವಲ್ಲದೆ ಮತ್ತೇನು?’’ (ಅಂಬೇಡ್ಕರ್ ಬರಹಗಳು ಇಂಗ್ಲಿಷ್ ಸಂ.1, ಪು.209). ಖಂಡಿತ, ಅಂದಿನ ಮಾಧ್ಯಮಗಳ ವಿರುದ್ಧದ ಅಂಬೇಡ್ಕರರ ಈ ಮಾತುಗಳೂ ಕೂಡ ಸಮಾನತೆಯೆಡೆಗಿನ ಚಲನೆಯ ಅವರ ನಿರ್ಭಿಡತೆಯನ್ನು ತೋರಿಸುತ್ತವೆ.

ಮುಂದುವರಿದು, ಅದು ಸ್ವಾತಂತ್ರ್ಯದ ಕಾಲ, 1947ರ ಸಮಯ. ಇಡೀ ದೇಶ ಆಗ ಸ್ವಾತಂತ್ರ್ಯದೆಡೆ ತನ್ನ ದೃಷ್ಟಿ ನೆಟ್ಟಿತ್ತು. ಆದರೆ ಬಾಬಾಸಾಹೇಬರು ಆಗಲೂ ಅಷ್ಟೆ ಸಮಾನತೆಯೆಡೆಗೆ ತಮ್ಮ ದೃಷ್ಟಿ ನೆಟ್ಟಿದ್ದರು! ಹೇಗೆಂದರೆ ಅಂದು ತಮ್ಮ ಮಾತೃಭೂಮಿ ಮುಂಬೈನಿಂದ ಅವರು ಸಂವಿಧಾನಸಭೆಗೆ ಆಯ್ಕೆಯಾಗಲು ಯತ್ನಿಸಿದರಾದರೂ ಸಫಲರಾಗದೆ ದೂರದ ಬಂಗಾಳದಿಂದ ಮುಸ್ಲಿಂ ಲೀಗ್‌ನ ಬೆಂಬಲದಿಂದ ಆಯ್ಕೆಯಾದರು. ಈ ಸಂದರ್ಭದಲ್ಲಿ ತಾವು ಆಯ್ಕೆಯಾಗಿದ್ದ ಬಂಗಾಳದ ಆ ಪ್ರಾಂತ್ಯ ಕೂಡ ಪಾಕಿಸ್ತಾನಕ್ಕೆ ಸೇರ್ಪಡೆಯಾದಾಗ ಪಟ್ಟುಬಿಡದೆ ಮತ್ತೆ ತಮ್ಮನ್ನು ಸಂವಿಧಾನ ಸಭೆಗೆ ಆಯ್ಕೆಯಾಗುವಂತೆ ನೋಡಿಕೊಂಡರು. ಅಂಬೇಡ್ಕರರ ಸಂವಿಧಾನ ಸಭೆಯೆಡೆಗಿನ ಈ ಪ್ರೀತಿಗೆ ಕಾರಣ? ಮತ್ತದೇ ಸಮಾನತೆ! ಯಾಕೆಂದರೆ ತಾವೇ ಶಿಲ್ಪಿಯೂ ಆದ ಆ ಸಂವಿಧಾನದ ಪೀಠಿಕೆಯ ಪ್ರಾರಂಭದಲ್ಲೇ ಅವರು ಹೇಳಿದ್ದು ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆ! ಈ ನಿಟ್ಟಿನಲ್ಲಿ ಸಮಾನತೆಯನ್ನು ನಾಗರಿಕರ ಮೂಲಭೂತ ಹಕ್ಕಾಗಿಸಿ ಅದರ ಅಡಿಯಲ್ಲಿ ಅನುಚ್ಛೇದ 14, 15, 16, 17 ಮತ್ತು 18ಗಳನ್ನು ಸೇರಿಸಿ ಸಮಾನತೆಯನ್ನು ತಾವು ಪ್ರತಿಪಾದಿಸಿದ ಸಾಮಾಜಿಕ ನ್ಯಾಯವಾದ ಮೀಸಲಾತಿಗೆ ಧಕ್ಕೆಯಾಗದ ಹಾಗೆ ಸ್ಪಷ್ಟವಾಗಿ ವ್ಯಾಖ್ಯಾನಿಸಿದ ಅವರು ಸ್ವತಂತ್ರ ಇಂಡಿಯಾದಲ್ಲಿ ಸಮಾನತೆಗೆ ಕಾನೂನಿನ ಮುದ್ರೆಯೊತ್ತಿದ್ದರು.

ಆಶ್ಚರ್ಯವೆಂದರೆ ಅಂಬೇಡ್ಕರರಿಗೆ ಆಗಲೂ ಸಮಾಧಾನವಾಗಲಿಲ್ಲವೆಂದೆನಿಸುತ್ತದೆ! ಏಕೆಂದರೆ ಅವರಿಗೆ ತಿಳಿದಿತ್ತು. ಎಲ್ಲಿಯವರೆಗೆ ತಾನು ಹಿಂದೂಧರ್ಮದಲ್ಲಿ ಇರುತ್ತೇನೆಯೋ ಅಲ್ಲಿಯವರೆಗೂ ತಾನು ಸಮಾನತೆಯನ್ನು ಮುಕ್ತವಾಗಿ ಅನುಭವಿಸಲು ಸಾಧ್ಯವಿಲ್ಲ ಎಂದು ಮತ್ತು ಇದಕ್ಕೆ ಪೂರಕವಾಗಿ ಅವರು 1935ರಲ್ಲಿಯೇ ಸಭೆಯೊಂದರಲ್ಲಿ ‘‘ದುರದೃಷ್ಟವಶಾತ್ ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಹಿಂದೂವಾಗಿ ಸಾಯಲಾರೆ’’ ಎಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಇದರ ಈಡೇರಿಕೆಗಾಗಿಯೋ ಅಥವಾ ಸಮಾನತೆಯ ಆಳದ ತುಡಿತಕ್ಕಾಗಿಯೋ ತಮ್ಮ ಜೀವನದ ಕೊನೆಯ ಘಳಿಗೆಯಲ್ಲಿ ಅಂದರೆ ತಾವು ನಿಧನರಾಗುವ ಎರಡೇ ತಿಂಗಳು ಮೊದಲು ಅಂದರೆ 1956 ಅಕ್ಟೋಬರ್ 14ರಂದು ಬಾಬಾಸಾಹೇಬರು ಬೌದ್ಧಧರ್ಮ ಸೇರಿದ್ದರು. ಆ ಮೂಲಕ ಸಮಾನತೆಯ ತಮ್ಮ ಮಿಡಿತಕ್ಕೆ ಪೂರ್ಣ ವಿರಾಮ ಇಟ್ಟಿದ್ದರು.

ಒಟ್ಟಾರೆ ಬಾಬಾಸಾಹೇಬರ 65 ವರ್ಷಗಳ ತುಂಬು ಜೀವನ ಅದು ಸಮಾನತೆಯೆಡೆಗಿನ ನಿರಂತರ ಪಯಣ ಎಂದು ನಿಸ್ಸಂಶಯವಾಗಿ ಹೇಳಬಹುದು.

Writer - ರಘೋತ್ತಮ ಹೊ.ಬ. ಮೈಸೂರು

contributor

Editor - ರಘೋತ್ತಮ ಹೊ.ಬ. ಮೈಸೂರು

contributor

Similar News

ಜಗದಗಲ
ಜಗ ದಗಲ