ಹೋರಾಟಗಾರನೊಬ್ಬನ ಜೋಳಿಗೆಯಿಂದ-‘ನನ್ನನುಭವದ ಸೂಫಿ’

Update: 2017-04-14 18:29 GMT

ಸಮಕಾಲೀನ ನವ ಮಾರ್ಕ್ಸ್‌ವಾದಿ ಚಿಂತಕರೂ, ಹೋರಾಟಗಾರರೂ ಆಗಿರುವ ನೂರ್ ಜುಲ್ಫಿಕರ್ ಬರೆದಿರುವ ಅಪರೂಪದ ಕೃತಿ ‘ನನ್ನನುಭವದ ಸೂಫಿ- ಮತ್ತು ಇತರ ಲೇಖನಗಳು’. ಈ ಕೃತಿಯಲ್ಲಿ ಒಟ್ಟು ಸುಮಾರು 20ಕ್ಕೂ ಅಧಿಕ ಲೇಖನಗಳಿವೆ. ಈ ಬರಹಗಳಿಗೆ ಒಂದು ರೀತಿಯಲ್ಲಿ ಆತ್ಮ ಕಥನದ ಗುಣವಿದೆ. ತನ್ನ ಬದುಕು, ಹೋರಾಟಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಅವರು ಸಮಾಜದ ಸದ್ಯದ ರಾಜಕೀಯ ಸಾಮಾಜಿಕ ವಿಷಯಗಳ ಕುರಿತಂತೆ ಚರ್ಚಿಸುತ್ತಾರೆ. ತನ್ನ ಹೋರಾಟಕ್ಕಾಗಿ ನೂರ್ ಅವರು ಮಾಡಿರುವ ತ್ಯಾಗ, ಬಲಿದಾನಗಳು ಸಣ್ಣದೇನೂ ಅಲ್ಲ. ನಕ್ಸಲ್ಪರಿ ಚಳವಳಿ ಹಾಗೂ ಚಿಂತನೆಯಿಂದ ಪ್ರಭಾವಿತಗೊಂಡು ಮಾಡುತ್ತಿರುವ ಉದ್ಯೋಗ, ವ್ಯಾಸಂಗ ತೊರೆದು ಸುಮಾರು 25 ವರ್ಷಗಳಿಂದ ಪೂರ್ಣಾವಧಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಾ, ಕುಟುಂಬ ಗೆಳೆಯ ರಿಂದ ದೂರವಿದ್ದೂ ಹತ್ತಿರವಾಗಿದ್ದವರು. ಬಳಿಕ ಸಂಘಟನೆಯ ಜೊತೆಗೆ ಭಿನ್ನಾಭಿಪ್ರಾಯ ಮೂಡಿ, ತಮ್ಮ ಹೋರಾಟದ ದಾರಿಯನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಂಡು, ನಾಡಿಗೆ ಕಾಲಿಟ್ಟವರು. ಈ ಸಂದರ್ಭದಲ್ಲಿ ಅವರು ಎದುರಿಸಿದ ಬೇರೆ ಬೇರೆ ಸವಾಲುಗಳನ್ನು ಈ ಕೃತಿಯಲ್ಲಿ ತೆರೆದಿಡುತ್ತಾರೆ. ‘ನನ್ನನುಭವದ ಸೂಫಿ’ ಈ ಕೃತಿಯಲ್ಲಿ ಪ್ರತ್ಯೇಕ ಲೇಖನವೇ ಆಗಿದ್ದರೂ, ಅವರ ಬದುಕು ಸೂಫಿ ಬದುಕಿನಂತೆಯೇ ಜಂಗಮವಾದುದು. ಪುರೋಹಿತ ಶಾಹಿ ವ್ಯವಸ್ಥೆ ಮತ್ತು ಪ್ರಭುತ್ವದ ವಿರುದ್ಧ ದಬ್ಬಾಳಿಕೆಯನ್ನು ಪ್ರಶ್ನಿಸುವುದು ಸೂಫಿಸಂನ ಮೂಲ ಗುಣವೇ ಹೌದು. ಆದುದರಿಂದ, ‘ನನ್ನನುಭವದ ಸೂಫಿ’ ತಲೆಬರಹ ಇಲ್ಲಿರುವ ಎಲ್ಲ ಲೇಖನಗಳ ಸಾರಸರ್ವಸ್ವವನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆ.

ಈ ಕೃತಿ ನಾವು ಕಂಡರಿಯದ ಹೊಸ ಜಗತ್ತೊಂದನ್ನು ತೆರೆದಿಡುತ್ತದೆ. ಪೊಲೀಸರ ಕ್ರೌರ್ಯ, ಪಾಪಿಗಳ ಸ್ನೇಹ, ಕಾಡಿನ ಸಂಗಾತಿಗಳ ನೆನಪು ಮತ್ತು ನೋವು, ಪರ್ಯಾಯ ಹೋರಾಟದ ಹುಡುಕಾಟ, ನಕ್ಸಲ್ ಮಹಿಳಾ ಕಿಡಿಗಳ ಸಂಘರ್ಷಗಾಥೆ ಇವೆಲ್ಲವುಗಳನ್ನು ಒಳಗೊಂಡ ಈ ಕೃತಿ, ಸದ್ಯದ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳನ್ನು ಅರ್ಥ ಮಾಡಿಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ.

ಲಂಕೇಶ್ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 280. ಮುಖಬೆಲೆ 200 ರೂಪಾಯಿ. ಆಸಕ್ತರು 080-26676427 ದೂರವಾಣಿಯನ್ನು ಸಂಪಕಿರ್ಸ ಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News