ಕಾರ್ಮಿಕ ಸಂಘಟನೆಗಳ ಒಳ ಸಂಘರ್ಷಗಳನು್ನ ತೆರೆದಿಡುವ ‘ಆವಿಗೆ’
‘ಆವಿಗೆ’ ಚಿತ್ರಾಮುದ್‌ಗಲ ಹಿಂದಿಯಲ್ಲಿ ಬರೆದಿರುವ ‘ಆವಂ’ ಕಾದಂಬರಿಯ ಕನ್ನಡಾನುವಾದ. ಆರ್. ಪಿ. ಹೆಗಡೆ ಈ ಬೃಹತ್ ಕಾದಂಬರಿಯನ್ನು ಕನ್ನಡಕ್ಕಿಳಿಸಿದ್ದಾರೆ. ಆವಿಗೆ ಅಥವಾ ಆವಂ ಎಂದರೆ ಮಣ್ಣಿನ ಮಡಿಕೆಗಳನ್ನು ಸುಡುವ ಭಟ್ಟಿ. ನೆಲದಲ್ಲಿ ಹೊಂಡತೆಗೆದು ಕಟ್ಟಿಗೆಗಳನ್ನು ಒಟ್ಟಿ, ಹಸಿ ಮಣ್ಣಿನ ಗಡಿಗೆಗಳನ್ನು, ಮಡಿಕೆಗಳನ್ನು ಇಟ್ಟು ಬೆಂಕಿ ಹಾಕಿದಾಗ ಸುಟ್ಟು ಪಕ್ವವಾಗುವ ಕ್ರಿಯೆಯನ್ನು ರೂಪಕವಾಗಿ ಆವಿಗೆ ಕಾದಂಬರಿ ಹೊಂದಿದೆ.ಕನ್ನಡದಲ್ಲಿ ಬೃಹತ್ ನಗರಗಳ ಕಾರ್ಮಿಕರ ಬದುಕಿನ ಸಮಸ್ಯೆಗಳನ್ನು ಹೊಂದಿದ ಕಾದಂಬರಿಗಳು ಈಗಾಗಲೇ ಬಂದಿವೆ. ಅದರಲ್ಲಿ ವ್ಯಾಸರಾಯ ಬಲ್ಲಾಳರ ‘ಬಂಡಾಯ’ ಮುಖ್ಯವಾದುದು. ಆದರೆ ಅದು ಒಟ್ಟಂದದಲ್ಲಿ ಕಾರ್ಮಿಕ ಸಂಘಟನೆಗಳ ಒಳ ರಾಜಕೀಯಗಳನ್ನು ಹೇಳುವ ಪ್ರಯತ್ನ ಮಾಡುತ್ತದೆ. ಆವಿಗೆ ಮಹಿಳಾ ಕಾರ್ಮಿಕರ ಹೋರಾಟವನ್ನು ಕೇಂದ್ರವಾಗಿರಿಸಿಕೊಂಡಿರುವ ಕಾದಂಬರಿ. ಮಹಿಳಾ ಲೇಖಕಿಯೊಬ್ಬರು ಇಂತಹದೊಂದು ಸಂಕೀರ್ಣ ರಾಜಕೀಯ ವಸ್ತುವನ್ನು ಕಾದಂಬರಿಯಾಗಿಸಿರುವುದು ಭಾರತೀಯ ಸಾಹಿತ್ಯ ಲೋಕದಲ್ಲಿ ಒಂದು ಅಪರೂಪ ಸಾಹಸವಾಗಿದೆ. ಕಾರ್ಮಿಕರ ಹಿತ ಕಾಯುವ ಟ್ರೇಡ್ ಯೂನಿಯನ್‌ಗಳ ಒಳ ಜಗಳ, ಕ್ಷುಲ್ಲಕ ರಾಜಕಾರಣ,, ಬಂಡವಾಳಶಾಹಿ ಕಂಪೆನಿಗಳ ಸ್ವಾರ್ಥ ಇವೆಲ್ಲದರ ನಡುವೆ ನರಳುವ ಮಹಿಳಾ ಕಾರ್ಮಿಕರ ಬಗ್ಗೆ ಕಾದಂಬರಿ ಮಾತನಾಡುತ್ತದೆ. ಕಾರ್ಮಿಕ ಸಂಘಟನೆಗಳೇ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ, ಈ ಕಾದಂಬರಿ ನಮ್ಮಿಳಗೆ ಇನ್ನಷ್ಟು ಪ್ರಶ್ನೆಗಳನ್ನು ಎತ್ತುತ್ತದೆ. ಕಾರ್ಮಿಕ ಕುಟುಂಬಗಳ ಜೊತೆಗಿನ ತಮ್ಮ ಸುದೀರ್ಘ ಸಂಬಂಧದ ಬಲದಿಂದ ಲೇಖಕಿಗೆ ಈ ಕಾದಂಬರಿ ಬರೆಯಲು ಸಾಧ್ಯವಾಗಿದೆ. ಕಾರ್ಮಿಕ ಸಂಘಟನೆಗಳ ದಾಖಲೀಕರಣದ ಸಂದರ್ಭದಲ್ಲಿ ತಿಳಿದೋ ತಿಳಿಯದೆಯೋ ಮಹಿಳೆ ಬದಿಗೆ ಸರಿಯಲ್ಪಡುತ್ತಾಳೆ. ಆವಿಗೆ ಈ ಬಗ್ಗೆ ಧ್ವನಿಯೆತ್ತುತ್ತದೆ. ಪ್ರಶ್ನೆಗಳನ್ನು ಎತ್ತುತ್ತದೆ. ವ್ಯಾಸ ಸಮ್ಮಾನ ಪಡೆದಿರುವ ಈ ಕೃತಿಯನ್ನು ಕನ್ನಡಕ್ಕೆ ತರಲು ಕಾರಣವಾಗಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವನ್ನು ಅಭಿನಂದಿಸಬೇಕಾಗಿದೆ. 610 ಪುಟಗಳ ಈ ಕಾದಂಬರಿಯ ಮುಖಬೆಲೆ 400 ರೂಪಾಯಿ.