ವ್ಯಕ್ತಿ ಚಿಂತನೆಗಳು ಪ್ರಜ್ಞೆಯಾಗುವ ಅಗತ್ಯದ ಕುರಿತು....

Update: 2017-04-17 18:51 GMT

‘ಪ್ರಜಾಪ್ರಭುತ್ವದ ಪೂಜೆಯೋ ಪ್ರಜ್ಞೆಯೋ’ ರವಿ ರಾ. ಅಂಚನ್‌ರ ಸಾಂದರ್ಭಿಕ ಲೇಖನಗಳ ಸಂಗ್ರಹವಾಗಿದ್ದರೂ, ಕೃತಿಯ ಒಟ್ಟು ಆಕೃತಿ ಪ್ರಜಾಸತ್ತೆಯ ಪ್ರಜ್ಞೆಯೊಂದಿಗೆ ರೂಪುಗೊಂಡಿದೆ. ಆದುದರಿಂದ, ಬಿಡಿ ಬಿಡಿಯಾಗಿರುವ ಲೇಖನಗಳೆಲ್ಲವೂ ಪೂರ್ಣ ಓದಿನ ಬಳಿಕ, ಪರಸ್ಪರ ಅಂತರ್ ಸಂಬಂಧವನ್ನು ಹೊಂದಿರುವುದು ನಮ್ಮ ಅರಿವಿಗೆ ಬರುತ್ತದೆ. ಇಂದಿನ ದಿಗಳಲ್ಲಿ ಎಲ್ಲವೂ ಪೂಜೆಯ ವಸ್ತುವಾಗುತ್ತಿದೆ. ಆದರೆ ನಮ್ಮ ಪ್ರಜ್ಞೆಯಾಗುವುದರಲ್ಲಿ ಸೋಲುತ್ತಿವೆ ಅಥವಾ ಅದು ನಮ್ಮ ಪ್ರಜ್ಞೆಯಾಗುವುದನ್ನು ತಡೆಯುವುದಕ್ಕಾಗಿಯೇ ಅದನ್ನು ಪೂಜಿಸುವ ಅಡ್ಡದಾರಿಯೊಂದು ತೆರೆದುಕೊಂಡಿದೆ. ಪ್ರಜ್ಞಾಪೂರ್ವಕವಾಗಿ ಅಂಬೇಡ್ಕರ್, ನಾರಾಯಣಗುರು ಎಲ್ಲ ಬಿಡಿ, ಕೊನೆಗೆ ನಮ್ಮ ಸಂವಿಧಾನವೂ ಅದೇ ದಾರಿಯಲ್ಲಿ ನಡೆಯುತ್ತಿದೆ. ಒಂದೆಡೆ ಸಂವಿಧಾನ ದಿನವನ್ನು ಭರ್ಜರಿಯಾಗಿ ಆಚರಿಸಿಕೊಳ್ಳುತ್ತಲೇ, ಸಂವಿಧಾನಕ್ಕೆ ಬಹಿರಂಗವಾಗಿ ಧಕ್ಕೆಯಾಗುತ್ತಿದ್ದಾಗಲೂ ಅದರ ಕುರಿತಂತೆ ವೌನವಾಗುತ್ತೇವೆ. ಪ್ರಜ್ಞೆಯಾಗಬೇಕಾದುದು ಪೂಜೆಯಾದಾಗ ಆಗುವ ದುರಂತ ಇದು. ತಮ್ಮೆಲ್ಲ ಬರಹಗಳಲ್ಲಿ ಜನರ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಉದ್ದೇಶವನ್ನು ಲೇಖಕ ಹೊಂದಿದ್ದಾರೆ. ನಾರಾಯಣಗುರು, ಪೆರಿಯಾರ್, ಕ್ರಾಂತಿಗುರು ಲಾಹೂಜಿ ಸಾಳ್ವೆ, ತುಳುವರು ನಂಬಿದ ಸತ್ಯಗಳು, ದೇವರ ದಾಸಿಮಯ್ಯ...ಹೀಗೆ ಈ ಸಮಾಜಕ್ಕೆ ಚೈತನ್ಯ ತುಂಬಿದ ಬೇರೆ ಬೇರೆ ವ್ಯಕ್ತಿ-ಶಕ್ತಿಗಳನ್ನು ಮುಂದಿಟ್ಟು ಅವರು ವರ್ತಮಾನದ ದುರಂತಗಳನ್ನು ಚರ್ಚಿಸುತ್ತಾರೆ. ಇಂದಿನ ದಿನಗಳಲ್ಲಿ ಆ ಎಲ್ಲ ಚಿಂತನೆಗಳು ನಮ್ಮ ಪ್ರಜ್ಞೆಯಾಗದೇ ಉಳಿದಿರುವ ಕಾರಣದಿಂದ ನಡೆಯುತ್ತಿರುವ ಅನಾಹುತಗಳನ್ನು ಅವರು ಎಚ್ಚರಿಸುತ್ತಾರೆ. ಈ ಕೃತಿಯಲ್ಲಿ ಒಟ್ಟು 27 ಲೇಖನಗಳಿವೆ. ಕೆಲವು ಲೇಖನಗಳು ಮುಂಬೈ ಕನ್ನಡದ ಸೊಗಡುಗಳನ್ನು ತೆರೆದಿಡುತ್ತದೆ. ಅರಸು ಶತಮಾನೋತ್ಸವ ಯಾಕೆ ಪೂಜೆಯಾಗಬಾರದು ಎನ್ನುವುದನ್ನು ಅವರು ದಿಟ್ಟವಾಗಿ ಹೇಳುತ್ತಾರೆ. ಸೌಹಾರ್ದ ಭಾರತಕ್ಕಾಗಿ ಅವರ ಪ್ರತೀ ಲೇಖನಗಳೂ ಹಪಹಪಿಸುತ್ತವೆ.

 ಸ್ವರ ಪ್ರಿಂಟ್ ಆ್ಯಂಡ್ ಪಬ್ಲಿಕೇಶನ್ ಬೆಂಗಳೂರು ಹೊರತಂದಿರುವ ಕೃತಿಯ ಒಟ್ಟು ಪುಟಗಳು 204. ಮುಖಬೆಲೆ 165. ಆಸಕ್ತರು 09323290500 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News