ಕನ್ನಡ ಶಾಲೆಯ ಸವಿನೆನಪುಗಳು

Update: 2017-04-18 18:33 GMT

ಕನ್ನಡ ಶಾಲೆಗಳು ಮುಚ್ಚುತ್ತಿರುವ ಇಂದಿನ ದಿನಗಳಲ್ಲಿ, ಕನ್ನಡ ಶಾಲೆಯ ಹಿರಿಮೆ, ಗರಿಮೆಗಳನ್ನು ಎತ್ತಿ ಹಿಡಿಯುವ ‘ಕನ್ನಡ ಶಾಲೆಯ ಸವಿ ನೆನಪುಗಳು’ ಕೃತಿಯನ್ನು ಮಯೂರ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬೈ ಇವರು ಹೊರತಂದಿದ್ದಾರೆ. ಹೊರನಾಡು, ಒಳನಾಡಿನ ಹತ್ತು ಹಲವು ಲೇಖಕರು ಹಲವು ದಶಕಗಳ ಹಿಂದೆ ತಾವು ಕಳೆದ ಕನ್ನಡ ಶಾಲೆಗಳ ಸವಿ ದಿನಗಳನ್ನು ಈ ಕೃತಿಯಲ್ಲಿ ಹಂಚಿಕೊಂಡಿ ದ್ದಾರೆ. ವಿಶ್ವನಾಥ ದೊಡ್ಮನೆ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಸದ್ಯದ ಸಂದರ್ಭಕ್ಕೆ ನಮ್ಮೆಳಗಿನ ಕನ್ನಡತನಗಳನ್ನು ಮುಟ್ಟಿ ನೋಡುವ ಪ್ರಯತ್ನವಾಗಿ ಈ ಕೃತಿಯನ್ನು ಹೊರತರಲಾಗಿದೆ. ಇಂದು ಅಣಬೆಗಳಂತೆ ತಲೆಯೆತ್ತುತ್ತಿರುವ ಇಂಗ್ಲಿಷ್ ಮೀಡಿಯಂ ಶಾಲೆಗಳಲ್ಲಿ ವಿದ್ಯಾರ್ಥಿಗಳು ಯಂತ್ರಗಳಂತೆ ರೂಪುಗೊಳ್ಳುತ್ತಿರುವಾಗ, ಹಿಂದೆ ಕನ್ನಡ ಶಾಲೆಗಳಲ್ಲಿ ಮಕ್ಕಳು ಹೀಗೆ ಪ್ರಕೃತಿಯ ಜೊತೆಗೆ ಅವಿನಾಭಾವ ಸಂಬಂಧಗಳನ್ನಿಟ್ಟು ಸಹಜವಾಗಿ ಅರಳುತ್ತಿದ್ದರು ಎನ್ನುವುದನ್ನು ಇಲ್ಲಿರುವ ಪ್ರತೀ ಬರಹಗಳು ಹೇಳುತ್ತವೆ. ಕನ್ನಡ ಶಾಲೆಗಳೇ ಇಲ್ಲದ ಕರ್ನಾಟಕವೊಂದು ರೂಪು ಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ, ಈ ಹಿರಿಯರ ಹಳೆ ನೆನಪುಗಳು ನಮ್ಮತನವನ್ನು ತಟ್ಟಿ ಎಚ್ಚರಿಸುತ್ತವೆ.
 ಕನ್ನಡ ಶಾಲೆಗಳ ಕುರಿತಂತೆ ಇಲ್ಲಿ ಸುಮಾರು 87 ಲೇಖನಗಳಿವೆ. ಹಲವು ಲೇಖಕರು ಕರ್ನಾಟಕದೊಳಗಿನ ಕನ್ನಡ ಶಾಲೆಗಳ ನೆನಪು ಗಳನ್ನು ಹಂಚಿಕೊಂಡರೆ, ಇನ್ನು ಹಲವರು ಮುಂಬೈಯ ಕನ್ನಡ ಶಾಲೆಗಳ ನೆನಪುಗಳನ್ನೂ, ಅದರ ಬೆಳಕಿನಲ್ಲಿ ಭವಿಷ್ಯ ಕಟ್ಟಿಕೊಂಡುದನ್ನು ಹಂಚಿಕೊಂಡಿದ್ದಾರೆ. ಸನತ್ ಕುಮಾರ್ ಜೈನ್ ಅವರು ಮುಂಬೈ ಕನ್ನಡ ಶಾಲೆಗಳು ಹಾಗೂ ರಾತ್ರಿ ಶಿಕ್ಷಣದ ಕುರಿತಂತೆ ಮುಖ್ಯ ಲೇಖನವೊಂದನ್ನು ಬರೆದಿದ್ದಾರೆ. ಮುಂಬೈಯ ಕನ್ನಡ ಶಾಲೆಗಳು ಮಿನುಗಿದ್ದು ರಾತ್ರಿಯಲ್ಲಿ. ಆದುದರಿಂದಲೇ ಮುಂಬೈಯ ಕವಿಯೊಬ್ಬ, ಈ ರಾತ್ರಿ ಶಾಲೆಯ ವಿದ್ಯಾರ್ಥಿಗಳನ್ನು ‘ನೆಲದ ನಕ್ಷತ್ರಗಳು’ ಎಂದು ಕರೆದಿದ್ದಾನೆ. 1908ರಲ್ಲಿ ಕೋಟೆ ಕ್ಷೇತ್ರದಲ್ಲಿ ಮೊಗವೀರ ಫ್ರೀ ನೈಟ್ ಹೈಸ್ಕೂಲ್ ಎಂಬ ಪ್ರಪ್ರಥಮ ಕನ್ನಡ ರಾತ್ರಿ ಶಾಲೆ ಆರಂಭವಾಗುವುದರಿಂದ, ಮುಂಬೈಯಲ್ಲಿ ಕನ್ನಡ ಶಾಲೆಯ ಹಣತೆ ಹಚ್ಚಲ್ಪಟ್ಟಿತು. ಕಾಡಿಪಟ್ಣ ಚಂದು ಮಾಸ್ತರ್ ಇದಕ್ಕೆ ಆರಂಭಿಕ ಹಜ್ಜೆಯಿ ಟ್ಟವರು. 1939ರಲ್ಲಿ ಈ ಶಾಲೆಗೆ ಮಾನ್ಯತೆ ದೊರಕಿತು. ಮುಂದೆ ಖಾರ್ ಕ್ಷೇತ್ರಕ್ಕೆ ಸ್ಥಳಾಂತರಗೊಂಡು ತನ್ನ 80ನೆ ವರ್ಷದಲ್ಲಿ ಮುಚ್ಚಲ್ಪಟ್ಟಿತು. ಮುಂದೆ ಬೇರೆ ಬೇರೆ ಸಂಘಟನೆಗಳ ಮೂಲಕ, ಸಮಾಜ ಸೇವಕರ ಮೂಲಕ ಮುಂಬೈಯಾದ್ಯಂತ ಕನ್ನಡ ಶಾಲೆಗಳು ವಿಸ್ತರಿಸಿದ್ದು, ನೂರಾರು ಹೊಟೇಲ್ ಕಾರ್ಮಿಕರು ಇಂತಹ ರಾತ್ರಿ, ಹಗಲು ಶಾಲೆಗಳಲ್ಲಿ ಕಲಿತು ಅತ್ಯುನ್ನತ ಸ್ಥಾನಗಳಿಗೇರಿದ್ದೂ ಅವರು ನೆನೆದು ಕೊಳ್ಳುತ್ತಾರೆ. ಮುಂಬೈ ಕನ್ನಡ ಶಾಲೆಗಳೂ ಸೇರಿದಂತೆ 70ರ ದಶಕದ ಕನ್ನಡ ಶಾಲೆಗಳ ಕುರಿತಂತೆ ಹಲವರು ಹೃದಯ ಸ್ಪರ್ಶಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.
 ಇಲ್ಲಿರುವ ಬರಹಗಳು ತೀರಾ ಪಕ್ವತೆಯಿಂದ, ಭಾಷಾ ಸಮೃದ್ಧತೆಯಿಂದ ಕೂಡಿದೆ ಎಂದು ಹೇಳುವಂತಿಲ್ಲ. ಪುಸ್ತಕ ಒಂದು ಸ್ಮರಣ ಸಂಚಿಕೆಯ ರೂಪದಲ್ಲಿದೆಯಾದರೂ, ಒಟ್ಟು ಕೃತಿಯ ಉದ್ದೇಶ ಮಾತ್ರ ಶ್ರೇಷ್ಠವಾದುದು. ಕೃತಿಯ ಒಟ್ಟು ಪುಟಗಳು 325, ಮುಖಬೆಲೆ 250 ರೂ. ಆಸಕ್ತರು 092221 37634 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News