ನಮ್ಮ ನದಿಗಳನ್ನು ರಕ್ಷಿಸುವವರ್ಯಾರು?
ರವಿಶಂಕರ್ ತಜ್ಞರ ವರದಿಯನ್ನು ತಳ್ಳಿಹಾಕಿರುವುದು ಭಾರತದಲ್ಲಿ ನದಿಗಳನ್ನು ರಕ್ಷಿಸುವಲ್ಲಿ ಇರುವ ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತದೆ
ಆರ್ಟ್ ಆಫ್ ಲಿವಿಂಗ್ ಮಾಡಿರುವ ಅಪಮಾನ ಪ್ರತೀ ನದಿಗಳ ವಿಷಯದಲ್ಲೂ ಮತ್ತು ಪ್ರತೀ ನಗರದ ವಿಷಯದಲ್ಲೂ ಪ್ರತಿಫಲಿತಗೊಳ್ಳುತ್ತದೆ. ಅದು ಮುಂದೆ ನಮ್ಮೆಲ್ಲರನ್ನೂ ಕೊಲ್ಲಲಿದೆ. ನಾವು ಹೋರಾಡಲೇ ಬೇಕಿದೆ. ಯಾಕೆಂದರೆ ನಮ್ಮಲ್ಲಿ ಸೈನಿಕರಾಗಿರುವುದು ನಾವು ಮಾತ್ರ.
2016ರ ಮಾರ್ಚ್‌ನಲ್ಲಿ ‘ಆರ್ಟ್ ಆಫ್ ಲಿವಿಂಗ್’ ಆಯೋಜಿಸಿದ್ದ ವಿಶ್ವ ಸಾಂಸ್ಕೃತಿಕ ಹಬ್ಬವು ಯಮುನಾ ಪ್ರಸ್ಥಭೂಮಿಗೆ ತೀವ್ರವಾದ ನಷ್ಟವನ್ನುಂಟು ಮಾಡಿದೆ ಎಂದು ತಜ್ಞರು ಸ್ಪಷ್ಟವಾಗಿ ತಿಳಿಸಿದ್ದಾರೆ. ಅದನ್ನು ಸರಿಪಡಿಸಲು ಒಂದು ದಶಕವೇ ಬೇಕಾಗಿದ್ದು ರೂ. 42 ಕೋಟಿ ವೆಚ್ಚ ಮಾಡಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ರಾಷ್ಟ್ರೀಯ ಹಸಿರು ಪೀಠವು ಆಯ್ಕೆ ಮಾಡಿದ ತಜ್ಞರ ಸಮಿತಿಯ ವರದಿಯಿಂದ ಕೋಪೋದ್ರಿಕ್ತಗೊಂಡ ರವಿಶಂಕರ್‌ರ ‘ಆರ್ಟ್ ಆಫ್ ಲಿವಿಂಗ್’, ಈ ವರದಿಯು ತನ್ನ ಹೆಸರನ್ನು ಕೆಡಿಸಲು ಮಾಡಿರುವ ಷಡ್ಯಂತ್ರ ಎಂದು ಆರೋಪಿಸಿತ್ತು. ವರದಿಯ ಹಿನ್ನೆಲೆಯ ಬಗ್ಗೆ ಹೇಳುವುದಾದರೆ, ದಿಲ್ಲಿಯ ಯಮುನಾ ತೀರದಲ್ಲಿ ನಡೆದ ಈ ಹಬ್ಬದ ವಿರುದ್ಧ ಸಲ್ಲಿಸಲಾದ ದೂರಿನ ಹಿನ್ನೆಲೆಯಲ್ಲಿ ತಜ್ಞರ ತಂಡವನ್ನು ರಚಿಸಲಾಗಿತ್ತು. ಆ ಸಮಯದಲ್ಲಿ ಪ್ರತಿಷ್ಠಾನವು ನದಿಗೆ ಯಾವುದೇ ರೀತಿಯ ತೊಂದರೆ ಮಾಡಿರುವುದನ್ನು ನಿರಾಕರಿಸಿತ್ತು. ಅದಕ್ಕೆ ಸಾಕ್ಷಿಯಾಗಿ, ‘‘ನೋಡಿ ಈಗಲೂ ಅಲ್ಲಿಗೆ ಕೋಣಗಳು ನೀರು ಕುಡಿಯಲು ಬರುತ್ತವೆ’’ ಎಂದು ಪ್ರತಿಷ್ಠಾನ ತಿಳಿಸಿತ್ತು. ತಿಂಗಳುಗಳ ನಂತರ ಪ್ರತಿಷ್ಠಾನ, ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಅಧ್ಯಯನ ಸಂಸ್ಥೆಯ ತಜ್ಞರು ಈ ಹಬ್ಬದಿಂದ ಯಮುನಾ ತೀರಕ್ಕೆ ಯಾವುದೇ ಹಾನಿಯಾಗಿಲ್ಲ ಎಂಬುದಾಗಿ ವರದಿ ಮಾಡಿರುವ ಮಾಹಿತಿಯನ್ನು ಬಿಡುಗಡೆ ಮಾಡಿತು. ನಂತರ ಎನ್‌ಇಇಆರ್‌ಐ (ನೀರಿ) ತಜ್ಞರ ಸಮಿತಿಯಲ್ಲಿರಬೇಕು ಎಂದು ಪ್ರತಿಷ್ಠಾನ ಆಗ್ರಹಿಸಿತ್ತು. ನದಿ ತೀರವನ್ನು ಪರಿಶೀಲಿಸಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿ ನೀಡಿದ ವ್ಯಕ್ತಿಯೇ ನೀರಿಯ ನೇತೃತ್ವವಹಿಸಿದರು. ಸಮಿತಿಯನ್ನು ವಿಸ್ತರಿಸಲಾಯಿತು.
ಇದಾದ ನಂತರ ಪ್ರತಿಷ್ಠಾನವು ಸಮಿತಿಯ ಬಗ್ಗೆ ಅಥವಾ ಅದರ ಸದಸ್ಯರ ಬಗ್ಗೆ ಯಾವುದೇ ವಿರೋಧವನ್ನು ವ್ಯಕ್ತಪಡಿಸಲಿಲ್ಲ. ತದ್ವಿರುದ್ಧ ವರದಿ ಬಂದ ನಂತರವಷ್ಟೇ ಪ್ರತಿಷ್ಠಾನ ತನ್ನ ವಿರುದ್ಧ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಲು ಆರಂಭಿಸಿತು.
ವಿಶ್ವ ಸಾಂಸ್ಕೃತಿಕ ಹಬ್ಬದ ಇತಿಹಾಸವನ್ನು ಗಮನಿಸಿದರೆ ಪ್ರತಿಷ್ಠಾನವು ತನ್ನ ಅಧಿಕಾರವನ್ನು ಸ್ಥಾಪಿಸುತ್ತಿರುವ ವಿಸ್ತಾರದ ಬಗ್ಗೆ ನನಗೆ ಆಶ್ಚರ್ಯವೇನೂ ಆಗಿಲ್ಲ. ಅದನ್ನು ಪ್ರಖ್ಯಾತ ಶಿಕ್ಷಕರೊಬ್ಬರು ಮುನ್ನಡೆಸುತ್ತಿದ್ದಾರೆ. ಅನೇಕ ದೇಶಗಳಲ್ಲಿ ಅದರ ಅನುಯಾಯಿಗಳಿದ್ದಾರೆ. ಭಾರತದಲ್ಲಿ ರಾಜಕೀಯ ಸೇರಿದಂತೆ ಇತರ ಎಲ್ಲಾ ಸಂಪದ್ಭರಿತ ಮತ್ತು ಪ್ರಭಾವಿ ಸಂಘಟನೆಗಳೊಂದಿಗೆ ಅದು ಗುರುತಿಸಿಕೊಂಡಿದೆ. ದಿಲ್ಲಿಯ ಜಲಸಚಿವ ಕಪಿಲ್ ಮಿಶ್ರಾ ಕೂಡಾ ಸಮಿತಿಯ ವರದಿಯ ಬಗ್ಗೆ ಕಿಡಿಕಾರಿದ್ದು ಮುಂದೆಯೂ ಅದೇ ಸ್ಥಳದಲ್ಲಿ ಈ ಹಬ್ಬವನ್ನು ಆಚರಿಸಬೇಕೆಂದು ಸಲಹೆ ನೀಡಿದ್ದಾರೆ. ಹಬ್ಬಕ್ಕೂ ಮೊದಲು ಆ ಪ್ರದೇಶದಲ್ಲಿ ಸಾವಿರಾರು ಪಕ್ಷಿಗಳು ನೆಲೆಸಿದ್ದವೇ ಎಂದವರು ಪ್ರಶ್ನಿಸಿದ್ದಾರೆ. ಅದಕ್ಕುತ್ತರ; ಹೌದು. ವಾಸ್ತವದಲ್ಲಿ ಈ ವರ್ಷ ಮಾರ್ಚ್ 5ರಂದು ಒಂದು ನಿರ್ದಿಷ್ಟ ದಿನದಂದು 95 ಜಾತಿಯ ಪಕ್ಷಿಗಳು ಅಂದರೆ ದಿಲ್ಲಿಯ ಒಟ್ಟಾರೆ ಪಕ್ಷಿಗಳ ಮೂರನೆ ಭಾಗ ಅಲ್ಲಿ ಸೇರಿದ್ದುದಾಗಿ ಸಮೀಪದ ಓಕ್ಲಾ ಪಕ್ಷಿಧಾಮ ವರದಿ ಮಾಡಿದೆ. ಎಲ್ಲಾ ರೀತಿಯ ಪ್ರಭಾವಗಳನ್ನು ಹೊಂದಿದ್ದರೂ ಪ್ರತಿಷ್ಠಾನ ಕೂಡಾ ಕಾನೂನಿಗೆ ಹೊರತಾಗಿಲ್ಲ. ಆದರೆ ದುರದೃಷ್ಟವಶಾತ್ ಅವರು ಅದನ್ನು ಅರಿತಂತೆ ಕಾಣುತ್ತಿಲ್ಲ.
ಮಾನವನಾಗಿ ನದಿ
ತೀರಾ ಇತ್ತೀಚೆಗೆ ಯಮುನಾ ನದಿಗೆ ವ್ಯಕ್ತಿಯ ಸ್ಥಾನಮಾನ ನೀಡಿದ ನ್ಯಾಯಾಲಯವು ಮುಖ್ಯ ಕಾರ್ಯದರ್ಶಿಯನ್ನು ಅದರ ಪಾಲಕ/ಪೋಷಕರನ್ನಾಗಿ ನೇಮಿಸಿತ್ತು. ಅದರ ಪರಿಣಾಮವಾಗಿ ಯಮುನಾ ಒಂದು ವ್ಯಕ್ತಿಯಾಗಿದ್ದು ಎಲ್ಲಾ ಹಕ್ಕುಗಳನ್ನು ಪಡೆಯಲು ಅರ್ಹವಾಗಿದೆ. ಅದನ್ನು ಈ ರೀತಿಯಾಗಿ ಪರಿಗಣಿಸಬಹುದು; ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ವ್ಯಕ್ತಿಯನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯುತ್ತಾರೆ. ವೈದ್ಯರು ಹಲ್ಲೆ ನಡೆದಿರುವುದನ್ನು ದೃಢಪಡಿಸಿ ಆತನಿಗಾದ ಗಾಯಗಳ ಪಟ್ಟಿಮಾಡುತ್ತಾರೆ. ಹಾಗಾದರೆ ಆರೋಪಿಗಳ ಹೆಸರಿಗೆ ಮಸಿಬಳಿಯಲು ವೈದ್ಯರು ಪಿತೂರಿ ನಡೆಸುತ್ತಿದ್ದಾರೆ ಎಂದು ಹೇಳಬಹುದೇ? ನ್ಯಾಯ ಸಿಗುವವರೆಗೂ ಗಾಯಾಳು ರಕ್ತ ಸ್ರವಿಸುತ್ತಲೇ ಇರಬೇಕೇ ಅಥವಾ ಆತನ ಆರೋಗ್ಯ ಸುಧಾರಿಸಲು ವೈದ್ಯಕೀಯ ಚಿಕಿತ್ಸೆಯನ್ನು ನೀಡಬೇಕೇ?
‘ಆರ್ಟ್ ಆಫ್ ಲಿವಿಂಗ್’ನ ಈ ಮನೋವೃತ್ತಿ ಸಾಮಾನ್ಯರನ್ನು ರಕ್ಷಿಸುವಲ್ಲಿ ಇರುವ ಸವಾಲುಗಳ ಬಗ್ಗೆ ಏನು ಹೇಳುತ್ತದೆ? ಮೊಟ್ಟಮೊದಲನೆಯದಾಗಿ ಇದು ಸಾಮಾನ್ಯ ಸಮುದಾಯದ ಶಕ್ತಿಯ ಬಗ್ಗೆ ತಿಳಿಸುತ್ತದೆ. ಕೇವಲ ಶಕ್ತಿ ಮಾತ್ರವಲ್ಲ ಆದರೆ ಜನಸಾಮಾನ್ಯರ ಭೂಮಿಗಾಗಿ ಒಟ್ಟಾಗಿ ಹೋರಾಡುವ ಅನಿವಾರ್ಯತೆಯನ್ನೂ ಅದು ತೋರಿಸುತ್ತದೆ. ಭಾರತದ ರಾಷ್ಟ್ರಪತಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದರೂ ಕೊನೆಯ ಕ್ಷಣದಲ್ಲಿ ತಮ್ಮ ಮನಸ್ಸು ಬದಲಾಯಿಸಿದ್ದರು ಆದರೆ ಸಾರ್ವಜನಿಕ ವಿರೋಧದ ನಡುವೆಯೂ ಬಹುತೇಕ ಎಲ್ಲಾ ಪ್ರಭಾವೀ ರಾಜಕೀಯ ಪ್ರತಿನಿಧಿಗಳು ಉಪಸ್ಥಿತರಿದ್ದರು. ನಮ್ಮ ಅಭಿಪ್ರಾಯಗಳನ್ನು ಪ್ರತೀ ಬಾರಿಯೂ ಪ್ರತಿನಿಧಿಸಬೇಕು ಮತ್ತು ಒಪ್ಪಬೇಕು ಎಂದು ನಾವು ನಿರೀಕ್ಷಿಸಲು ಸಾಧ್ಯವಿಲ್ಲ.
ಎರಡನೆಯದಾಗಿ ಅದು ಮಂತ್ರಿಯೊಬ್ಬರ ಪಾತ್ರ ಮತ್ತು ಪ್ರಭಾವವನ್ನು ತರೆದಿಡುತ್ತದೆ. ರಾಜಕೀಯ ಪ್ರವೇಶಿಸುವುದಕ್ಕೂ ಮೊದಲು ದಶಕಗಳ ಕಾಲ ಸಮಾಜಸೇವೆ ಮಾಡಿರುವ ಕಪಿಲ್ ಮಿಶ್ರಾ ದಿಲ್ಲಿಯ ಜಲ ಮತ್ತು ನದಿಗಳ ಮುಖ್ಯ ರಕ್ಷಕರಾಗಿ ತಮ್ಮ ಪಾತ್ರ ಮತ್ತು ತಮ್ಮ ವೈಯಕ್ತಿಕ ನಿಲುವು ಎರಡನ್ನೂ ಸ್ಪಷ್ಟವಾಗಿ ಮಿಶ್ರಗೊಳಿಸಿದ್ದಾರೆ. ಅವರ ವೈಯಕ್ತಿಕ ನಿಲುವು ಖಂಡಿತವಾಗಿಯೂ ಇಡೀ ನಗರದ ನೀತಿಯಾಗಲು ಸಾಧ್ಯವಿಲ್ಲ. ಒಂದು ತಜ್ಞರ ತಂಡವು ನೀಡಿರುವ ವೈಜ್ಞಾನಿಕ ನಿಲುವಿಗೆ ಅಧಿಕಾರದ ಪ್ರಭಾವವು ಪರ್ಯಾಯವಾಗಲು ಸಾಧ್ಯವಿಲ್ಲ. ಸಕ್ರಿಯವಾದ ಇದಕ್ಕೊಂದು ಪರಿಣಾಮಕಾರಿ ಪ್ರತಿರೋಧವಾಗಬಹುದು. ಮೂರನೆಯದಾಗಿ, ವಿಜ್ಞಾನವನ್ನು ಅದರ ಸಂಕೀರ್ಣತೆಯಲ್ಲೇ ಅರ್ಥಮಾಡಿಕೊಳ್ಳುವ ಮತ್ತು ಅಳವಡಿಸಿಕೊಳ್ಳುವ ಅಗತ್ಯತೆಯು ಈ ಎಲ್ಲಾ ಗದ್ದಲದ ಮಧ್ಯೆ ಸ್ಪಷ್ಟವಾಯಿತು. ಕಪಿಲ್ ಮಿಶ್ರಾ ಪ್ರಕರಣ ಅದಕ್ಕೊಂದು ನಿದರ್ಶನ. ಪಕ್ಷಪಾತ ಮತ್ತು ವಾಕ್ಚಾತುರ್ಯವನ್ನೇ ಸಾಮಾನ್ಯಪ್ರಜ್ಞೆಯ ವಿಜ್ಞಾನ ಎಂದು ಹೇಳಲು ಹೊರಟ ಮಿಶ್ರಾ ಇಡೀ ಚರ್ಚೆಯನ್ನೇ ಕೊನೆಗೊಳಿಸಲು ಪ್ರಯತ್ನಿಸಿದ್ದರು. ವಿಜ್ಞಾನವನ್ನು ಒಪ್ಪುವ ಮತ್ತು ಅದರಿಂದ ಜ್ಞಾನವನ್ನು ಬೆಳಸಿಕೊಳ್ಳಲು ಸಮರ್ಥವಾಗಿರುವ ಸಮಾಜದಲ್ಲಿ ಇಂಥಾ ಜನಪ್ರಿಯ ಹೇಳಿಕೆಗಳನ್ನು ನೀಡಿ ತಪ್ಪಿಸಿಕೊಳ್ಳುವುದು ಬಹಳ ಕಷ್ಟ.
ದೀರ್ಘಕಾಲೀನ ಹಾನಿ
ಅಂತಿಮವಾಗಿ ಹಾನಿಯಂತೂ ಆಗಿದೆ. ಆ ಪ್ರದೇಶವನ್ನು ಸುಸ್ಥಿತಿಗೆ ತರುವಷ್ಟು ಹೊತ್ತಿಗೆ ನಾವೆಲ್ಲರೂ ದಶಕಗಳಷ್ಟು ಹಳಬರಾಗಿರುತ್ತೇವೆ. ಈ ರೀತಿ ಮತ್ತೊಮ್ಮೆ ನಡೆಯಲು ನಾವು ಬಿಡುವ ಹಾಗಿಲ್ಲ. ದಿಲ್ಲಿ ಮತು ಇತರ ನಗರಗಳು ಈ ಘಟನೆಯಿಂದ ಪಾಠ ಕಲಿಯಬೇಕು ಮತ್ತು ಯಾವುದೇ ರಾಜಿಮಾಡಿಕೊಳ್ಳದೆ ತಮ್ಮ ನದಿಗಳನ್ನು ರಕ್ಷಿಸಲು ಮುಂದಾಗಬೇಕು. ಖಂಡಿತವಾಗಿಯೂ ಚರಂಡಿ ಮತ್ತು ಇತರ ತ್ಯಾಜ್ಯಗಳನ್ನು ನದಿಗೆ ಬಿಡುವುದನ್ನು ನಿಲ್ಲಿಸಬೇಕಿದೆ. ಆದರೆ ನಮ್ಮ ನದಿಗಳ ಸುತ್ತ ಭೂಮಿಯೂ ಇದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅವುಗಳು ಪರಿಸರ ವ್ಯವಸ್ಥೆಗಳು. ನಾಗರಿಕರ ರಕ್ಷಣೆಯ ಜೊತೆಗೆ ಅವುಗಳ ರಕ್ಷಣೆಯನ್ನು ಮಾಡುವತ್ತಲೂ ಯೋಜನೆ ರೂಪಿಸಬೇಕಿದೆ. ಅವುಗಳನ್ನು ದಿಲ್ಲಿಯ ಮಾಸ್ಟರ್ ಯೋಜನೆ ತಿಳಿಸಿರುವಂತೆ ‘ಉಲ್ಲಂಘಿಸಲಾಗದ ಪ್ರದೇಶಗಳು’ ಎಂದು ಸೂಚಿಸಬೇಕು ಮತ್ತು ಈ ಬಗ್ಗೆ ರೂಪಿಸುವ ಯೋಜನೆಗಳು ಕಲ್ಮಶರಹಿತವಾಗಿರಬೇಕು. ಬರಪೀಡಿತ ಪ್ರಸಕ್ತ ವರ್ಷದಲ್ಲಿ ನದಿಗಳೇ ನಮ್ಮ ಜೀವನಾಡಿಗಳು. ಅವುಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆಯೂ ಇದೆ. ಕಪಿಲ್ ಮಿಶ್ರಾ ರಾಷ್ಟ್ರೀಯ ಹಸಿರು ಪೀಠ ನೇಮಿಸಿದ ಸಮಿತಿಗೆ ಅಗೌರವ ಸೂಚಿಸಿರುವುದು ಮತ್ತು ಆರ್ಟ್ ಆಫ್ ಲಿವಿಂಗ್ ಮಾಡಿರುವ ಅಪಮಾನ ಪ್ರತೀ ನದಿಗಳ ವಿಷಯದಲ್ಲೂ ಮತ್ತು ಪ್ರತೀ ನಗರದ ವಿಷಯದಲ್ಲೂ ಪ್ರತಿಫಲಿತಗೊಳ್ಳುತ್ತದೆ. ಅದು ಮುಂದೆ ನಮ್ಮೆಲ್ಲರನ್ನೂ ಕೊಲ್ಲಲಿದೆ. ನಾವು ಹೋರಾಡಲೇ ಬೇಕಿದೆ. ಯಾಕೆಂದರೆ ನಮ್ಮಲ್ಲಿ ಸೈನಿಕರಾಗಿರುವುದು ನಾವು ಮಾತ್ರ.
ಕೃಪೆ: scroll.in