ಶಿವಮೊಗ್ಗ ಜಿಪಂ ವಿಶೇಷ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಹೈಡ್ರಾಮಾ
ಶಿವಮೊಗ್ಗ, ಎ.19: ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಬುಧವಾರ ಜಿಪಂ ಸಭಾಂಗಣದಲ್ಲಿ ನಡೆದ ಜಿಪಂ ವಿಶೇಷ ಸಾಮಾನ್ಯ ಸಭೆಯು ಅಕ್ಷರಶಃ ಗದ್ದಲ, ಗೊಂದಲದ ಗೂಡಾಗಿ ಪರಿವರ್ತಿತವಾಗಿತ್ತು. ಆಡಳಿತ ಹಾಗೂ ಪ್ರತಿಪಕ್ಷಗಳ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿತ್ತು. ಕುಡಿಯುವ ನೀರು, ಬರ ವಿಷಯದ ಚರ್ಚೆ ಗೌಣವಾಗಿ, ರಾಜಕೀಯ ಮೇಲಾಟವೇ ತೀವ್ರವಾಗಿತ್ತು.
ಪ್ರತಿಪಕ್ಷ ಬಿಜೆಪಿ ಸದಸ್ಯರು ಭಾರೀ ಗದ್ದಲ ಸೃಷ್ಟಿಸಿ, ಸಬೆಯ ಬಾವಿಗಿಳಿದು ಧರಣಿ ನಡೆಸಿದರು. ಘೋಷಣೆ ಕೂಗಿದರು. ಮತ್ತೊಂದೆಡೆ ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಸದಸ್ಯರು ಬಿಜೆಪಿ ಸದಸ್ಯರ ವರ್ತನೆಯಿಂದ ಎರಡೂ ಬಾರಿ ಸಭಾತ್ಯಾಗ ಮಾಡಿದರು. ಇದರಿಂದ ಎರಡು ಬಾರಿ ಸಭೆಯನ್ನು ಮುಂದೂಡಲಾಯಿತು. ಅರ್ಧ ದಿನದ ಸಭೆ ಗದ್ದಲದಿಂದಲೇ ವ್ಯರ್ಥವಾಗುವಂತಾಯಿತು.
ಕಾರಣವೇನು?: ಸಭೆ ಆರಂಭವಾಗುತ್ತಿದ್ದಂತೆ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಎಂ.ಹರೀಶ್‌ರವರಿಗೆ ಸೂಚಿಸಿದರು.
ಈ ವೇಳೆ ಬಿಜೆಪಿ ಸದಸ್ಯರು ಮೊದಲು ಸದಸ್ಯರ ಅಭಿಪ್ರಾಯಗಳನ್ನು ಆಲಿಸಲು ಅವಕಾಶ ಕಲ್ಪಿಸಬೇಕು ಎಂದು ಅಧ್ಯಕ್ಷೆಗೆ ಆಗ್ರಹಿಸಿದರು. ಮೊದಲು ಅಧಿಕಾರಿಗಳಿಂದ ಜಿಲ್ಲೆಯಲ್ಲಿರುವ ಸಮಸ್ಯೆ, ಕೈಗೊಂಡಿರುವ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಕೊಡಲಿ. ಆ ನಂತರ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಿ’ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಸಹಮತ ವ್ಯಕ್ತಪಡಿಸಲಿಲ್ಲ.
ಮತ್ತೊಂದೆಡೆ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಕೂಡ ಬಿಜೆಪಿ ಸದಸ್ಯರ ವಾದ ಒಪ್ಪದೆ, ಅಧಿಕಾರಿಗೆ ಮಾಹಿತಿ ನೀಡುವಂತೆ ಸೂಚಿಸಿದರು. ರೂಲಿಂಗ್ ಕೂಡ ಹೊರಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಸದಸ್ಯರು ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಲಾರಂಭಿಸಿದರು.
ಈ ಸಂದರ್ಭ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಎರಡೂ ಕಡೆಯವರು ತಮ್ಮ ತಮ್ಮ ನಿಲುವನ್ನೇ ಸಮರ್ಥಿಸಿಕೊಂಡರು. ಈ ವೇಳೆ ಆಡಳಿತ ಪಕ್ಷದ ಕೆಲ ಸದಸ್ಯರು ಸಭೆಯಿಂದ ಹೊರನಡೆದರು. ಗದ್ದಲ ಮುಂದುವರಿದಿದ್ದರಿಂದ ಅಧ್ಯಕ್ಷೆ ಸಭೆಯನ್ನು ಮುಂದೂಡಿದರು.
ಸಭೆ ಮತ್ತೆ ಸಮಾವೇಶಗೊಂಡಾಗಲೂ ಬಿಜೆಪಿ ಸದಸ್ಯರು ತಮ್ಮ ಪಟ್ಟು ಮುಂದುವರಿಸಿದರು. ಅಧ್ಯಕ್ಷರು ಅಧಿಕಾರಿಗಳು ಮೊದಲು ಮಾಹಿತಿ ನೀಡಲಿ. ಆ ನಂತರ ಚರ್ಚೆ ಮಾಡೋಣ ಎಂದು ಸ್ಪಷ್ಟಪಡಿಸಿದರು. ಈ ವೇಳೆಯೂ ಆಡಳಿತ-ಪ್ರತಿಪಕ್ಷದ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಬಿಜೆಪಿ ಸದಸ್ಯರು ಅಧ್ಯಕ್ಷರ ವಿರುದ್ದ ಘೋಷಣೆ ಕೂಗಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಮತ್ತೆ ಕೆಲ ಸದಸ್ಯರು ಸಭೆಯಿಂದ ಹೊರನಡೆದರು. ಇನ್ನೊಂದೆಡೆ ಬಿಜೆಪಿ ಸದಸ್ಯರು ಸಭೆಯ ಬಾವಿಯಲ್ಲಿಯೇ ಕುಳಿತು ಘೋಷಣೆ ಕೂಗುವುದು, ಭಾಷಣ ಮಾಡುವುದನ್ನು ಮುಂದುವರಿಸಿದರು.
ಮಧ್ಯಾಹ್ನ ಸುಮಾರು 1:30 ಕ್ಕೆ ಮತ್ತೆ ಸಭೆ ಪುನಾರಾರಂಭಗೊಂಡಿತು. ತದನಂತರ ಶಾಂತಿಯುತವಾಗಿ ಸಭೆ ನಡೆಯಿತು. ಸಿಇಒ ಡಾ. ಕೆ. ರಾಕೇಶ್‌ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಉಪಸ್ಥಿತರಿದ್ದರು.
ಗದ್ದಲದಿಂದ ವ್ಯರ್ಥವಾದ ಅಮೂಲ್ಯ ಸಮಯ... ನಾಗರೀಕರ ತೆರಿಗೆಯ ಹಣ...!
ಜಿಲ್ಲೆಯಲ್ಲಿರುವ ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಚರ್ಚಿಸಲು ವಿಶೇಷ ಸಾಮಾನ್ಯ ಸಭೆ ಕರೆಯುವಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಆಗ್ರಹಿಸಿ ಸಿಇಒಗೆ ಕಳೆದ ತಿಂಗಳು ಮನವಿ ಪತ್ರ ಅರ್ಪಿಸಿದ್ದರು. ಪ್ರತಿಪಕ್ಷದ ಬೇಡಿಕೆಯ ಹಿನ್ನೆಲೆಯಲ್ಲಿ ವಿಶೇಷ ಸಭೆ ಆಯೋಜಿಸಲಾಗಿತ್ತು. ಇದಕ್ಕಾಗಿ ಸಂಬಂಧಿಸಿದ ಇಲಾಖಾಧಿಕಾರಿಗಳು ಆಗಮಿಸಿದ್ದರು. ಬರ, ಕುಡಿಯುವ ನೀರಿಗೆ ಸಂಬಂಧಿಸಿದ ಮಾಹಿತಿಯನ್ನೊಳಗೊಂಡ ಪುಸ್ತಕಗಳನ್ನು ಮುದ್ರಿಸಲಾಗಿತ್ತು. ಯಶಸ್ವಿಯಾಗಿ ಸಭೆ ನಡೆಸಲು ಜಿಪಂನ ಅಧಿಕಾರಿಗಳು ಸರಿಸುಮಾರು ಒಂದು ವಾರಗಳಿಂದ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇದಕ್ಕಾಗಿ ಸಾವಿರಾರು ರೂ. ಖರ್ಚು ಮಾಡಲಾಗಿದೆ.
ಆದರೆ ಸಭೆಯ ಮುಕ್ಕಾಲುಪಾಲು ಸಮಯ ಗದ್ದಲ, ಧರಣಿ, ಕೂಗಾಟಗಳಿಗೆ ಮೀಸಲಾಗಿದ್ದುದು ನಿಜಕ್ಕೂ ದುರಂತದ ಸಂಗತಿಯಾಗಿದೆ. ಈ ವಿಶೇಷ ಸಭೆಯ ಬಗ್ಗೆ ಜಿಲ್ಲೆಯ ಗ್ರಾಮೀಣ ಭಾಗದ ಜನತೆಯಲ್ಲಿ ಮನೆ ಮಾಡಿದ್ದ ನಿರೀಕ್ಷೆಗಳು ಕೂಡ ಹುಸಿಯಾಗಿವೆ. ಕುಡಿಯುವ ನೀರು, ಬರದ ಬಗ್ಗೆ ಗಂಭೀರ ಚರ್ಚೆ ನಡೆಯಲೇ ಇಲ್ಲ. ಕೆಲ ಸದಸ್ಯರ ಪ್ರತಿಷ್ಠೆಗೆ ಸರಿಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಇಡೀ ಸಭೆಯೇ ಅಸ್ತವ್ಯಸ್ತವಾಗುವಂತಾಯಿತು.
ಮೂಕ ಪ್ರೇಕ್ಷಕವಾಗಿದ್ದ ಅಧಿಕಾರಿ ವರ್ಗ
ಒಂದೆಡೆ ಬಿಜೆಪಿ ಸದಸ್ಯರು ಸಭೆಯ ಬಾವಿಯೊಳಗೆ ಧರಣಿ, ಘೋಷಣೆ, ಭಾಷಣ ಮಾಡುತ್ತಿದ್ದರೆ ಮತ್ತೊಂದೆಡೆ ಕಚೇರಿ ಹಾಗೂ ನಾಗರಿಕರ ಕೆಲಸ ಕಾರ್ಯ ಬದಿಗೊತ್ತಿ ವಿಶೇಷ ಸಭೆಗೆ ಆಗಮಿಸಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಮೂಕ ಪ್ರೇಕ್ಷಕರಂತೆ ಇದೆಲ್ಲವನ್ನು ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುವಂತಾಗಿತ್ತು. ಸಿಇಒ ಡಾ. ಕೆ. ರಾಕೇಶ್‌ಕುಮಾರ್ ಪರಿಸ್ಥಿತಿ ಕೂಡ ಇದೇ ರೀತಿಯಾಗಿತ್ತು. ಯಾರಿಗೂ ಏನೂ ಹೇಳಲಾಗದ ಸ್ಥಿತಿ ಅವರದ್ದಾಗಿತ್ತು. ಶಾಂತವಾಗಿಯೇ ಕುಳಿತು ಸಭೆಯಲ್ಲಿ ನಡೆಯುತ್ತಿದ್ದ ಘಟನಾವಳಿಗಳನ್ನು ಅವಲೋಕಿಸುತ್ತಿದ್ದರು.