ದಲಿತ ಸಂವೇದನೆ- ಅಂಬೇಡ್ಕರ್ ಚಿಂತನೆಯ ತಳಹದಿಯಲ್ಲಿ

Update: 2017-04-19 18:59 GMT

ಅಂಬೇಡ್ಕರ್ ಚಿಂತನೆಯ ಬರಹಗಳ ಹಿನ್ನೆಲೆಯಲ್ಲಿ ರೂಪುಗೊಂಡ ಕೃತಿ ಅಪ್ಪಗೆರೆ ಸೋಮಶೇಖರ್ ಅವರ ‘ದಲಿತ ಸಂವೇದನೆ’. ಮಣ್ಣಿನ ಗರ್ಭದಲ್ಲಿ ಅಡಗಿರುವ ಬೇರುಗಳಿಗೆಂದೂ ಸಾವಿಲ್ಲ. ಅವು ತಾಯಿ ಗರ್ಭದ ಕೂಸಿನ ಹಾಗೆ ಸದಾ ಮಿಡಿಯುತ್ತಿರುತ್ತವೆ. ಇಲ್ಲಿ ಆ ಆದಿಪರಂಪರೆಯ ಬೇರುಗಳ ಹುಡುಕಾಟದ ಸಂಕಟಗಳನ್ನು ನಾವು ಕಾಣಬಹುದು.

 ಈ ಕೃತಿಯಲ್ಲಿ 25ಕ್ಕೂ ಅಧಿಕ ಬರಹಗಳಿವೆ. ಮೊದಲ ಬರಹ ‘ದಲಿತ ಸಂವೇದನೆ ಮತ್ತು ಪರಂಪರೆ’ ಇಡೀ ಕೃತಿಯ ತಳಹದಿಯಂತಿದೆ. ದಲಿತ ಸಂವೇದನೆಗಳ ಬೇರುಗಳನ್ನು ಜನಪದ ಸಾಹಿತ್ಯದಲ್ಲಿ ಗುರುತಿಸುವ ಪ್ರಯತ್ನವನ್ನು ಲೇಖಕರು ಮಾಡುತ್ತಾರೆ. ‘ಬಡವರು ಸತ್ತರೆ ಸುಡಲೀಕೆ ಸೌದಿಲ್ಲ, ಒಡಲ ಬೆಂಕೀಲಿ ಹೆಣ ಬೆಂದೋ...’ ಎನ್ನುವ ಜನಪದ ಹಾಡಿನಲ್ಲಿ ಅವರು ದಲಿತ ನೋವುಗಳನ್ನು ಕಾಣುತ್ತಾರೆ. ಕವಿರಾಜಮಾರ್ಗದಲ್ಲಿ ಬರುವ ಸಹಬಾಳ್ವೆ ಯಲ್ಲಿಯೂ ದಲಿತ ಸಂವೇದನೆಯ ತುಡಿತವನ್ನು ನೋಡುವ ಪ್ರಯತ್ನ ಲೇಖಕರದು. ಮಂಟೇಸ್ವಾಮಿ ಕಾವ್ಯ, ಬಸವಣ್ಣ, ಅಲ್ಲಮ ಮೊದಲಾದವರ ವಚನಗಳಲ್ಲೂ ಈ ಸಂವೇದನೆಯ ಎಳೆಯನ್ನು ಅವರು ಗುರುತಿಸುತ್ತಾರೆ. ಕೇರಳದ ಅಯ್ಯನ್ ಕಾಳಿ, ಪದ್ಮಶ್ರೀ ಕಾಕಾ ಕಾರಖಾನೀಸ, ಕುದ್ಮಲ್ ರಂಗರಾವ್, ಬಡವರ ಭರಣಯ್ಯ, ದಲಿತ ರಾಜಕಾರಣದ ಸಾಕ್ಷಿ ಪ್ರಜ್ಞೆ ಕೋಲಾರ ಟಿ. ಚನ್ನಯ್ಯ, ದಲಿತ ಹೋರಾಟಗಾರ ಪಂಡಿತ ಅಯೋತಿದಾಸ್, ದೇವರಾಯ ಇಂಗಳೆ, ಬಿ. ಬಸವಲಿಂಗಪ್ಪ, ಆಧುನಿಕ ಕನ್ನಡ ದಲಿತ ಸಾಹಿತ್ಯದ ಜಲಕಣ್ಣು ಡಿ. ಗೋವಿಂದದಾಸ್...ಇವರಿಂದ ಹಿಡಿದು ನೆಲ್ಸನ್ ಮಂಡೇಲಾ ವರೆಗಿನ ವ್ಯಕ್ತಿತ್ವಗಳನ್ನು ಪರಿಚಯಿಸುತ್ತಾ ದಲಿತ ಚಿಂತನೆಯ ಬೇರೆ ಬೇರೆ ಆಯಾಮಗಳನ್ನು ಲೇಖಕರು ತೆರೆದಿಡುತ್ತಾರೆ. ಕರ್ನಾಟಕದ ವರ್ತಮಾನಗಳೂ ಕೃತಿಯಲ್ಲಿ ಚರ್ಚೆಗೊಳಗಾಗುತ್ತವೆ. ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ, ಹಿಂದುಳಿದ ವಿದ್ಯಾರ್ಥಿಗಳು ಜಾತಿಯ ಕಾರಣಕ್ಕಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನೂ ಕೃತಿಯಲ್ಲಿ ಕೆಲವೆಡೆ ಚರ್ಚಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿರುವ ವೈದಿಕ ಪ್ರಜ್ಞೆ ಹೇಗೆ ಸಮಾಜದ ಬೆಳವಣಿಗೆಗೆ ತೊಡಕಾಗಿದೆ ಎಂಬ ಅಂಶವನ್ನು ಅವರು ಎತ್ತಿ ತೋರಿಸುತ್ತಾರೆ.

ಲಡಾಯಿ ಪ್ರಕಾಶನ, ಗದಗ ಹೊರತಂದಿರುವ ಕೃತಿಯ ಒಟ್ಟು ಪುಟಗಳು 220. ಮುಖಬೆಲೆ 150 ರೂಪಾಯಿ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News