ಸರಳ ಕನ್ನಡದಲ್ಲಿ ಡಿಜಿಟಲ್ ಬದುಕು
ಸದ್ಯಕ್ಕೆ ಇಡೀ ದೇಶ ಡಿಜಿಟಲ್ ಕ್ರಾಂತಿಯ ಕುರಿತಂತೆ ಮಾತನಾಡುತ್ತಿದೆ. ‘ಡಿಜಿಟಲ್ ಇಂಡಿಯಾ’ದ ಮೂಲಕ ಭಾರತವನ್ನು ಕಟ್ಟುವ ಪ್ರಯತ್ನವೊಂದು ನಡೆಯುತ್ತಿದೆ. ಇದರ ಹಿಂದಿರುವ ಕೆಲವು ಹಿತಾಸಕ್ತಿಗಳ ಬಗೆಗಿರುವ ಚರ್ಚೆಗಳು ಅದೇನೇ ಇರಲಿ, ನಾವಿಂದು ಡಿಜಿಟಲ್ ಯುಗಕ್ಕೆ ಬೆನ್ನು ಮಾಡುವಂತಹ ಸ್ಥಿತಿಯಲ್ಲಂತೂ ಇಲ್ಲ. ಈ ಹಿನ್ನೆಲೆಯಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿರುವ ‘ಡಿಜಿಟಲ್ ಕ್ರಾಂತಿ ಮತ್ತು ಭಾರತ’ ಕೃತಿ ಮಹತ್ವಪೂರ್ಣವಾದುದು. ನಮ್ಮ ಬದುಕನ್ನು ಡಿಜಿಟಲ್ ತಂತ್ರಜ್ಞಾನ ಬಹುತೇಕ ಆವರಿಸಿಕೊಂಡಿದೆ. ಹೀಗಿರುವಾಗ ಆ ಕುರಿತ ಮಾಹಿತಿಗಳನ್ನು ತಿಳಿದುಕೊಳ್ಳುವುದು ಬದುಕಿನ ಅನಿವಾರ್ಯಗಳಲ್ಲಿ ಒಂದಾಗಿದೆ. ಶಿವಾನಂದ ಕಣವಿಯವರ ಇಂಗ್ಲಿಷ್ ಕೃತಿಯ ಕನ್ನಡಾನುವಾದ ‘ಡಿಜಿಟಲ್ ಕ್ರಾಂತಿ ಮತ್ತು ಭಾರತ’. ಡಾ. ವೈ. ಸಿ. ಕಮಲ ಇದನ್ನು ಕನ್ನಡಕ್ಕಿಳಿಸಿದ್ದಾರೆ. ಈ ಪುಸ್ತಕ ಇಂಗ್ಲಿಷ್‌ನಲ್ಲಿ ಬಿಡುಗಡೆಯಾಗಿ ಹತ್ತು ವರ್ಷಗಳಾಗಿರುವುದು ಒಂದು ಸಣ್ಣ ಮಿತಿ. ಅಂದು ಮುಂಚೂಣಿಯಲ್ಲಿದ್ದ ತಂತ್ರಜ್ಞಾನಗಳಿಗೂ ಇಂದಿನ ತಂತ್ರಜ್ಞಾನಗಳಿಗೂ ವ್ಯತ್ಯಾಸಗಳಿವೆ. ಅಂದಿನ ತಂತ್ರಜ್ಞಾನಗಳು ಇಂದು ಆ್ಯಪ್‌ಗಳಾಗಿ ಮಾರ್ಪಾಟಾಗಿವೆ. ಇಂಗ್ಲಿಷ್‌ನಲ್ಲಿರುವ ಮಾಹಿತಿಗಳನ್ನು ಕನ್ನಡ ಪದಬಳಕೆಗಳ ಜೊತೆಗೆ ಸರಳವಾಗಿ ಜನರಿಗೆ ತಲುಪಿಸುವುದು ಸಣ್ಣ ವಿಷಯವೇನೂ ಅಲ್ಲ. ಅನುವಾದಕಿ ಅದರಲ್ಲಿ ಯಶಸ್ವಿಯಾಗಿದ್ದಾರೆ.
ಕೃತಿಯಲ್ಲಿ ಆರು ಪ್ರಮುಖ ಅಧ್ಯಾಯಗಳಿವೆ. ಮೊದಲನೆ ಅಧ್ಯಾಯ ಮೈಕ್ರೋಚಿಪ್‌ನ ಹಿನ್ನೆಲೆ, ಮುನ್ನೆಲೆಯನ್ನು ತೆರೆದಿಡುತ್ತದೆ. ಎರಡನೆ ಅಧ್ಯಾಯ ಬುದ್ಧಿ, ವೃದ್ಧಿಯ ಸಾಧನವಾಗಿ ಕಂಪ್ಯೂಟರ್‌ಗಳನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವ ತಿಳುವಳಿಕೆಯನ್ನು ನೀಡುತ್ತದೆ. ಹಾಗೆಯೇ ಪರ್ಸನಲ್ ಕಂಪ್ಯೂಟರ್‌ಗಳ ಲಾಭಗಳನ್ನು ವಿವರಿಸುವ ಅಧ್ಯಾಯಗಳೂ ಇವೆ. ಡಿಜಿಟಲ್ ಯುಗದಲ್ಲಿ ಇಂಗ್ಲಿಷ್ ಕನ್ನಡದೊಳಗೆ ಸರಾಗವಾಗಿ ನುಸುಳುವುದರಿಂದ ಇಲ್ಲಿರುವ ಕೆಲವು ಕನ್ನಡ ಶಬ್ದಗಳು ನಮ್ಮನ್ನು ಗೊಂದಲಗೊಳಿಸುವ ಸಾಧ್ಯತೆಗಳು ಇಲ್ಲದಿಲ್ಲ. ಅದೇನೇ ಇರಲಿ, ತಂತ್ರಜ್ಞಾನದ ಜೊತೆಗೆ ಬೆಳೆಯುತ್ತಿರುವ ಸಂದರ್ಭದಲ್ಲಿ ಕನ್ನಡ ಭಾಷಾ ಭಾರತಿ ಪ್ರಾಧಿಕಾರ ಈ ಪ್ರಕಾರದ ಕಡೆಗೆ ಒಲವು ತೋರಿದ್ದು ಅಭಿನಂದನೀಯ. ಕೃತಿಯ ಮುಖಬೆಲೆ 250 ರೂ.