ವಿಸ್ಮತಿಯ ನಂತರ- ಭಾರತೀಯ ಸಾಹಿತ್ಯ ವಿಮರ್ಶೆಯ ಬಿಕ್ಕಟ್ಟುಗಳು

Update: 2017-04-21 17:37 GMT

ಭಾರತೀಯ ಸಾಹಿತ್ಯ ವಿಮರ್ಶೆಯಲ್ಲಿ ಸಂಪ್ರದಾಯ ಮತ್ತು ಬದಲಾವಣೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಜಿ. ಎನ್. ದೇವಿ ಅವರು ಬರೆದಿರುವ ‘ಆಫ್ಟರ್ ಅಮ್ನೇಶಿಯಾ’ ಕೃತಿಯ ಅನುವಾದ ‘ವಿಸ್ಮತಿಯ ನಂತರ’. ಬಿ. ಎ. ಶಾರದಾ ಅವರು ಈ ಕೃತಿಯನ್ನು ಕನ್ನಡಕ್ಕಿಳಿಸಿದ್ದಾರೆ. ಸಾಂಸ್ಕೃತಿಕ ಮರೆವು ವರ್ತಮಾನದಲ್ಲೂ ಚರ್ಚೆಗೊಳಗಾಗುತ್ತಿರುವ ವಸ್ತು. ಅದರ ಕುರಿತ ವಾಗ್ವಾದಗಳು ಹಿಂದೆಯೂ ಇತ್ತು. ಇಂದಿಗೂ ಮುಂದುವರಿಯುತ್ತಿದೆ. ಡಾ. ರಜನಿ ಕೊಥಾರಿ, ಡಾ. ದೇವಿ, ಡಾ. ಡಿ. ಆರ್. ನಾಗರಾಜ್‌ರಂತಹ ಚಿಂತಕರು ಈ ಕುರಿತಂತೆ ಬರೆದಿದ್ದಾರೆ. ಈ ಪ್ರಬಂಧವು ವಿಮರ್ಶೆಯಲ್ಲಿ ಬಿಕ್ಕಟ್ಟನ್ನು ವಿವರಿಸುವುದರಿಂದ ಪ್ರಾರಂಭಿಸಿ ಭಾರತೀಯ ಸಾಹಿತ್ಯ ವಿಮರ್ಶೆಯ ತಾತ್ಕಾಲಿಕ ಇತಿಹಾಸದ ಬರವಣಿಗೆಯ ಬಗ್ಗೆ ಪ್ರಸ್ತಾಪಿಸುತ್ತದೆ.

ಈ ಕೃತಿಯಲ್ಲಿ ಪ್ರಮುಖ ಮೂರು ಅಧ್ಯಾಯಗಳಿವೆ. ಮೊದಲನೆ ಅಧ್ಯಾಯ ಸಂಪ್ರದಾಯ ಮತ್ತು ವಿಸ್ಮತಿಗೆ ಸೀಮಿತವಾಗಿದೆ. ಸಾಹಿತ್ಯ ವಿಮರ್ಶೆಯಲ್ಲಿ ಬಿಕ್ಕಟ್ಟು, ಪರಂಪರೆ, ಆಧುನಿಕ ಭಾರತೀಯ ಬುದ್ಧಿಜೀವಿಗಳು ಮತ್ತು ಪಾಶ್ಚಾತ್ಯ ಚಿಂತನೆ, ಆಧುನಿಕ ಭಾರತ ಮತ್ತು ಸಂಸ್ಕೃತ ಪರಂಪರೆ, ವಸಾಹತು ಪರಿಣಾಮ, ಭಾಷಾ ಸಾಹಿತ್ಯಗಳು ಮತ್ತು ಆಧುನಿಕ ನಿಲುವು, ಸಂಸ್ಕೃತಿ, ವಿಸ್ಮತಿ ಮೊದಲಾದವುಗಳು ಈ ಅಧ್ಯಾಯದಲ್ಲಿ ಚರ್ಚೆಗೊಳಗಾಗಿವೆ.

ಎರಡನೆ ಅಧ್ಯಾಯದ ಹೆಸರು ‘ಎಂದೂ ಮುಗಿಯದ ಸಂಕ್ರಮಣ’. ಇಲ್ಲಿ, ಸಾಂಸ್ಕೃತಿಕ ಪ್ರಾಕ್ತನ ಶಾಸ್ತ್ರ, ಮಾರ್ಗ ಮತ್ತು ದೇಶಿ, ಭಕ್ತಿವಂತಿಕೆ ಮತ್ತು ಸಂವಾದ, ವಸಾಹತಿನ ರಚನೆ-ನಗರ ಮತ್ತು ಸೇನಾವಸತಿ, ಕಾನೂನಿನ ದ್ವಿತ್ವ -ಉಭಯತ್ವದ ಕಿರು ಭಾಗಗಳಿವೆ.

 ವಿಸ್ಮತಿಯ ನಂತರ ಕೃತಿಯಲ್ಲಿ ತ್ರಿಪಕ್ಷೀಯ ಸಂಬಂಧ ಮತ್ತು ದೇಶೀವಾದದ ಚರ್ಚೆಗಳಿವೆ. ಉಪಸಂಹಾರದಲ್ಲಿ ವಿಮರ್ಶೆಯ ಕರ್ತವ್ಯವನ್ನು ಲೇಖಕರು ಬೊಟ್ಟು ಮಾಡುತ್ತಾರೆ. ಭಾರತೀಯ ಸಾಹಿತ್ಯದ ಕುರಿತಂತೆ ಗಂಭೀರವಾಗಿ ಅಧ್ಯಯನ ಮಾಡುವವರಿಗೆ, ಅಕಾಡಮಿಕ್ ರೀತಿಯಲ್ಲಿ ಇದೊಂದು ಮಹತ್ವದ ಕೃತಿ. ಕುವೆಂಪು ಭಾಷಾಭಾರತಿ ಪ್ರಾಧಿಕಾರ ಈ ಕೃತಿಯನ್ನು ಹೊರತಂದಿದೆ. 210 ಪುಟಗಳ ಈ ಕೃತಿಯ ಮುಖಬೆಲೆ 160 ರೂಪಾಯಿ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News