ಗೂಢಚಾರರ ನಿದ್ದೆಗೆಡಿಸಿದ ಕ್ರೀಡಾ ಪತ್ರಕರ್ತ ಲೆಸ್ಟರ್ ರಾಡ್ನಿ

Update: 2017-04-25 12:44 GMT

 ಲೆಸ್ಟರ್ ರಾಡ್ನಿ ಓರ್ವ ಅಮೆರಿಕನ್ ಕ್ರೀಡಾ ಪತ್ರಕರ್ತನಾಗಿದ್ದರು. ನ್ಯೂಯಾರ್ಕ್ ನಗರದಲ್ಲಿ 1911ರಲ್ಲಿ ಹುಟ್ಟಿದ ರಾಡ್ನಿ ಹಲವು ದಶಕಗಳ ಕಾಲ ಅಮೆರಿಕದ ಕಮ್ಯುನಿಸ್ಟ್ ಪಾರ್ಟಿಯ ದಿನ ಪತ್ರಿಕೆಯಾಗಿದ್ದ ‘ದಿ ಡೈಲಿ ವರ್ಕರ್’ ಪತ್ರಿಕೆಯ ಕ್ರೀಡಾ ಸಂಪಾದಕರಾಗಿದ್ದರು. ಈಗ್ಗೆ ಎಂಟು ವರ್ಷಗಳ ಹಿಂದೆ ತೀರಿಕೊಳ್ಳುವತನಕ ಈ ಲೆಸ್ಟರ್ ರಾಡ್ನಿ ಅಮೆರಿಕದ ಆಂತರಿಕ ಗೂಢಚರ್ಯೆ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್‌ನ (ಊಆಐ) ಸತತ ನಿಗಾದಲ್ಲಿದ್ದರು.

ಅಮೆರಿಕನ್ ಕ್ರೀಡಾ ಪ್ರಿಯರಿಗೆ ಎಪ್ರಿಲ್ ಒಂದು ಅವಿಸ್ಮರಣೀಯ ತಿಂಗಳು. ಅವರ ನೆಚ್ಚಿನ ಜಗತ್ಪ್ರಸಿದ್ಧ ಬೇಸ್‌ಬಾಲ್ ಆಟಗಾರನಾಗಿದ್ದ ಜಾಕಿ ರಾಬಿನ್‌ಸನ್ ಸ್ಮರಣೆ ದಿನಾಚರಣೆಯನ್ನು ಅವರು ಆಚರಿಸುವುದು ಇದೇ ಎಪ್ರಿಲ್‌ನಲ್ಲೆ. ಅಂದ ಹಾಗೆ ಈ ಜಾಕಿ ರಾಬಿನ್‌ಸನ್ ಅಮೆರಿಕನ್ ಇತಿಹಾಸದಲ್ಲೇ ಬೇಸ್‌ಬಾಲ್ ಟೀಂಗೆ ಸೇರ್ಪಡೆಯಾದ ಮೊಟ್ಟಮೊದಲ ಆಫ್ರಿಕನ್ ಅಮೆರಿಕನ್ ಆಟಗಾರ. ಬಿಳಿಯರೇ ಸದಾ ತುಂಬಿ ತುಳುಕುತ್ತಿದ್ದ ನ್ಯಾಷನಲ್ ಬೇಸ್‌ಬಾಲ್ ಟೀಂಗೆ ಕಪ್ಪುಬಣ್ಣದ ಜಾಕಿ ಸೇರುವಂತೆ ಪ್ರಯತ್ನಿಸಿ ಯಶಸ್ವಿಯಾದವರೇ ಈ ಲೆಸ್ಟರ್ ರಾಡ್ನಿ ಎಂಬ ಯಹೂದಿ ಕ್ರೀಡಾ ಪತ್ರಕರ್ತ. ಈ ರಾಡ್ನಿ ಜನಿಸಿದ್ದು ಸಹ ಎಪ್ರಿಲ್‌ನಲ್ಲೆ.


 ಅಂದ ಹಾಗೆ ಯಾವುದೇ ಸರಕಾರಿ ಗೂಢಚರ್ಯೆ ಏಜನ್ಸಿಗಳು ಬಂಡುಕೋರರ ಚಟುವಟಿಕೆಗಳ ಮೇಲೆ, ಸರಕಾರಿ ವಿರೋಧಿಗಳ ಮೇಲೆ ನಿಗಾ ಇಡುವುದು ಸರ್ವೇಸಾಮಾನ್ಯ, ಆದರೆ ಕ್ರೀಡಾ ಪತ್ರಕರ್ತನೊಬ್ಬನ ಬರವಣಿಗೆ, ಚಿಂತನೆ ಹಾಗೂ ಚಟುವಟಿಕೆಗಳ ಮೇಲೂ ಕಣ್ಣಿಡುತ್ತಾರೆಂದರೆ ಆಶ್ಚರ್ಯ ಅನಿಸದಿರದು. ರಾಡ್ನಿ ಒಬ್ಬ ಕಮ್ಯುನಿಸ್ಟ್ ಕ್ರೀಡಾ ಪತ್ರಕರ್ತ ಎಂಬ ಅನುಮಾನ ಒಂದೆಡೆಗಿದ್ದರೆ, ಇನ್ನೊಂದು ಕಾರಣ ಏನಿತ್ತೆಂದರೆ ಈ ರಾಡ್ನಿ ಅಮೆರಿಕನ್ ಕ್ರೀಡಾ ಕ್ಷೇತ್ರದಲ್ಲಿ ಆಫ್ರೋ ಅಮೆರಿಕನ್ನರಿಗೆ ಅವಕಾಶ ನೀಡದ ಬಿಳಿಯರ ಜಾತಿ ಅಹಂಕಾರದ ವಿರುದ್ಧ ನಿರಂತರವಾಗಿ ಬರೆಯುತ್ತಿದ್ದುದು.

ಇಸಾಬೆಲ್ ಕಾಟನ್ ಹಾಗೂ ಮಾರ್ಕ್ಸ್ ರಾಡ್ನಿ ದಂಪತಿಯ ನಾಲ್ವರು ಮಕ್ಕಳಲ್ಲಿ ಮೂರನೆಯವರಾಗಿ ರಾಡ್ನಿ ಜನಿಸಿದಾಗ ಅಮೆರಿಕದ ಸಮಾಜದಲ್ಲಿ ಕ್ಷೋಭೆ ಇತ್ತು. 1ನೆ ವಿಶ್ವ ಮಹಾಯುದ್ಧಕ್ಕೆ ಅರ್ಥಾತ್ ಜಗತ್ತಿನ ಬಡವರ ಮರು ಹಂಚಿಕೆಯ ಕದನಕ್ಕೆ ಶ್ರೀಮಂತ ದೇಗಳು ತಯಾರಾಗುತ್ತಿದ್ದ ಕಾಲ ಅದು.

1929ರಲ್ಲಿ ಅಮೆರಿಕದಲ್ಲಿ ಗ್ರೇಟ್ ಡಿಪ್ರೆಶನ್ ಶುರುವಾಗಿ ಸ್ಟಾಕ್ ಮಾರ್ಕೆಟ್ ಪತನಗೊಂಡು ಬಾಲಕ ರಾಡ್ನಿಯ ತಂದೆ ದಿವಾಳಿಯಾದರು. ಹಾಗಾಗಿ ರಾಡ್ನಿ ಚಿಕ್ಕವಯಸ್ಸಿನಲ್ಲೇ ಪಾರ್ಟ್‌ಟೈಂ ಕೆಲಸ ಮಾಡುತ್ತಾ ಓದಲು ಯತ್ನಿಸಿದರು. 2ನೆ ವಿಶ್ವ ಮಹಾಯುದ್ಧ ಶುರುವಾದಾಗ ಸೇನೆ ಸೇರಿ ದಕ್ಷಿಣ ಪೆಸಿಫಿಕ್ ವಲಯದಲ್ಲಿ ಕಾದಾಡಿದರು. ಆಗಲೇ ಅಮೆರಿಕದಲ್ಲಿ ಬಂಡವಾಳಶಾಹಿಗಳ ಬಗ್ಗೆ ಜನರಿಗೆ ಭ್ರಮನಿರಸನವಾಗಿ ಸಮಾಜವಾದಿ ಚಿಂತನೆಗಳ ಪರ ಒಲವು ಬೆಳೆಯತೊಡಗಿತ್ತು. ಅಮೆರಿಕದ ಕಮ್ಯುನಿಸ್ಟ್ ಪಾರ್ಟಿಯ ‘ಡೈಲಿ ವರ್ಕರ್’ ದಿನಪತ್ರಿಕೆ ಒಂು ಪ್ರಭಾವಶಾಲಿ ಮಾಧ್ಯಮವಾಗಿತ್ತು.

ಯುದ್ಧ, ಕ್ಷೋಭೆ, ಆರ್ಥಿಕ ಕುಸಿತದ ನಡುವೆಯೂ ಅಮೆರಿಕನ್ನರಿಗೆ ಬೇಸ್‌ಬಾಲ್ ಆಟದ ವ್ಯಾಮೋಹ ಉಳಿದೇ ಇತ್ತು. ‘ಡೈರಿ ವರ್ಕರ್’ನಲ್ಲಿ ಕ್ರೀಡೆ ಬಗ್ಗೆ ಬರೆಯುತ್ತಿದ್ದ ರಾಡ್ನಿಆಟಗಳಲ್ಲಿ ವರ್ಣಭೇದ ನೀತಿಯನ್ನು ಖಂಡಿಸಿ ಬಿಳಿಯರ ಅಹಂಕಾರದ ಮುಖವಾಡ ಕಳಚಿಡತೊಡಗಿದರು.

ಇವರ ಬರವಣಿಗೆಯ ಪ್ರಭಾವ ಹೇಗಿತ್ತೆಂದರೆ ಕೊನೆಗೆ ‘ಡಾಗ್‌ಜರ್ಸ್‌’ ಎಂಬ ಟೀಂ ಜಾಕಿ ರಾಬಿನ್‌ಸನ್ ಎಂಬ ಕಪ್ಪುವರ್ಣೀಯನನ್ನು 1947ರ ಎಪ್ರಿಲ್ 15ರಂದು ಮೊಟ್ಟಮೊದಲ ಬಾರಿಗೆ ತನ್ನ ತಂಡಕ್ಕೆ ಸೇರಿಸಿಕೊಳ್ಳಬೇಕಾಯಿತು.

ಈ ಜಾಕಿ ಆಟದಲ್ಲಿ ಅದೆಂತಹ ಖ್ಯಾತಿ ಪಡೆದನೆಂದರೆ ಮುಂದೆ ಅವನು ನಿವೃತ್ತನಾದಾಗ ಅವನು ಧರಿಸುತ್ತಿದ್ದ ಜೆರ್ಸಿ ನಂ. 42ನ್ನು ಬೇರೆ ಯಾವ ಆಟಗಾರನಿಗೂ ಕೊಡದೆ ಶಾಶ್ವತವಾಗಿ ಅವನ ಗೌರವಾರ್ಥ ಹಾಗೇ ಉಳಿಸಲಾಗಿದೆ. ಅಲ್ಲದೆ ಎಪ್ರಿಲ್ 15ರಂದು ಒಂದು ವಿಶೇಷ ಮ್ಯಾಚ್ ಆಡಿಸಿ ಆ ದಿನ ಎರಡೂ ಟೀಂನ ಪ್ರತಿ ಆಟಗಾರನಿಗೂ ಜೆರ್ಸಿ ನಂ 42ನ್ನು ಧರಿಸಲು ನೀಡಲಾಗುತ್ತದೆ.

ಜಾಕಿ ಬೇಸ್‌ಬಾಲ್‌ನಿಂದ ನಿವೃತ್ತನಾದ ಮೇಲೆ ನಾಗರಿಕ ಹಕ್ಕುಗಳ ಚಳವಳಿ ಸೇರಿದ. ದಮನಿತರಿಗಾಗಿಯೇ ಫ್ರೀಡಂ ನ್ಯಾಷನಲ್ ಬ್ಯಾಂಕ್ ಸ್ಥಾಪಿಸಿದ.. ಜೀವಂತ ದಂತಕತೆಯಾದ.ಜಾಕಿಯ ಪ್ರತಿಭೆ ಗುರುತಿಸಿ ಅವನಿಗೆ ನ್ಯಾಷನಲ್ ಟೀಂನಲ್ಲಿ ಸ್ಥಾನ ಸಿಗುವಂತೆ ನೋಡಿಕೊಂಡ ರಾಡ್ನಿ ಬಗ್ಗೆ ಅಷ್ಟರಲ್ಲಾಗಲೇ ಎಫ್‌ಬಿಐ ಒಂದು ರಹಸ್ಯ ಫೈಲ್ ಅನ್ನೇ ತಯಾರಿಸಿತ್ತು.

ಓರ್ವ ಬಿಳಿಯನಾಗಿದ್ದರೂ ರಾಡ್ನಿ ಕರಿಯ ಬಾಕ್ಸರ್ ಜೋ ಲೂಯಿ, ಕೆನ್ನಿ ವಾಷಿಂಗ್‌ಟನ್ ಮುಂತಾದವರ ಬಗ್ಗೆ ಹೆಚ್ಚು ಬರೆಯುತ್ತಿದ್ದದು ಎಫ್‌ಬಿಐ ಮುಖ್ಯಸ್ಥ ಹೂವರ್‌ಗೆ ಕಗ್ಗಂಟಿನಂತೆ ಕಾಣುತ್ತಿತ್ತು.

ಅಲ್ಲದೆ ಅಮೆರಿಕದ ವಿರೋಧಿ ದೇಶಗಳ ಕ್ರೀಡಾ ಪಟುಗಳ ಉತ್ತಮ ಸಾಧನೆಗಳ ಬಗ್ಗೆಯೂ ರಾಡ್ನಿ ಮೆಚ್ಚಿ ಬರೆಯುತ್ತಿದ್ದದು ಸರಕಾರಕ್ಕೆ ಕೋಪ ತರುತ್ತಿತ್ತು. ಹಾಗಾಗಿ ಕೆಲವೊಮ್ಮೆ ಕ್ರೀಡಾ ವರದಿ ಮಾಡಲು ಹೊರದೇಶಗಳಿಗೆ ಹೋದರೂ ಅಲ್ಲಿನ ಅಮೆರಿಕನ್ ದೂತವಾಸ ಅಧಿಕಾರಿಗಳಿಗೆ ಹೂವರ್ ಪತ್ರ ಬರೆದು ರಾಡ್ನಿಯ ಚಲನವಲನಗಳ ಬಗ್ಗೆ ಕಣ್ಣಿಡುವಂತೆ ಹೇಳುತ್ತಿದ್ದರಂತೆ.

ನೀಗ್ರೊಗಳು ಸೇನೆ ಸೇರಿ ಯುದ್ಧ ಮಾಡುತ್ತಿದ್ದಾರೆ, ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿದ್ದಾರೆ. ಕಚೇರಿಗಳಲ್ಲಿ ಸಿಬ್ಬಂದಿಯಾಗಿ, ಕಲಾವಿದರಾಗಿ, ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ‘‘ಇದೆಲ್ಲಾ ತಿಳಿದಿರುವ ಅವರಿಗೆ ಕ್ರೀಡಾಳುಗಳಾಗಲು ಏಕೆ ಸಾಧ್ಯವಿಲ್ಲ?’’ ‘‘ಅವರಿಗೆ ಆಟ ಬರುವುದಿಲ್ಲ ಅಂತ ನಿರ್ಧರಿಸಿದವನು ಯಾವನು?’’ ಎಂದು ರಾಡ್ನಿ ಪ್ರಶ್ನಿಸುತ್ತಿದ್ದುದು ಆ ಕಾಲದಲ್ಲಿ ಅಮೆರಿಕನ್ನರಿಗೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿತ್ತು.ಒಮ್ಮೆ ಅಂತಾರಾಷ್ಟ್ರೀಯ ಕ್ರೀಡಾಕೂಟ ಒಂದರಲ್ಲಿ ಅಮೆರಿಕನ್ ಆಟಗಾರರು ರಷ್ಯನ್ನರನ್ನು ಭೇಟಿಯಾಗುವಂತೆ ಸಂದರ್ಭ ಏರ್ಪಡಿಸಿದರು ರಾಡ್ನಿ.ನಂತರ ‘‘ರಷ್ಯನ್ನರೂ ನಮ್ಮಂತೆ ಮನುಷ್ಯರೆ ಅಂತ ಗೊತ್ತಾಯಿತು’’ ಎಂದು ಅಮೆರಿಕದ ಕ್ರೀಡಾಪಟುಗಳು ಒಪ್ಪಿಕೊಂಡದ್ದನ್ನು ಬರೆದರು.ರಷ್ಯನ್ನರೆಂದರೆ ದೆವ್ವಗಳೆಂಬಂತೆ ಅಮೆರಿಕ ಸರಕಾರ ಬಿಂಬಿಸುತ್ತಿದ್ದುದಕ್ಕೆ ರಾಡ್ನಿಯ ವ್ಯಂಗ್ಯದ ಉತ್ತರ ಹೀಗಿರುತ್ತಿತ್ತು.

ಲೆಸ್ಟರ್ ರಾಡ್ನಿ ಕ್ರೀಡೆಗಳನ್ನು ಕೇವಲ ಕ್ರೀಡೆಗೆ ಸೀಮಿತಗೊಳಿಸಿ ಬರೆಯುತ್ತಿರಲಿಲ್ಲ. ಹಾಗಾಗಿ ಅವರ ಬಗ್ಗೆ ಸರಕಾರಕ್ಕೆ ಅಸಹನೆಯಾಗುತ್ತಿತ್ತು. ಅಮೆರಿಕದ ಕಪ್ಪು ಜನರ ನಾಯಕ ಮಾರ್ಟಿನ್ ಲೂಥರ್ ಕಿಂಗ್‌ಗೆ ರಾಡ್ನಿ ಬಗ್ಗೆ ಅಪಾರ ಗೌರವವಿತ್ತು.

ಜನ ಸಾಮಾನ್ಯರು ಯಾವಾಗಲೂ ಕ್ರೀಡಾ ಉನ್ಮಾದದಲ್ಲಿರಬೇಕೆಂದು ಸರಕಾರಗಳು ಬಯಸುತ್ತವೆ. ಸರಕಾರಗಳು ಕ್ರೀಡೆಗಳನ್ನು ತಮ್ಮ ಸಂಕುಚಿತ, ದ್ವೇಷದ ರಾಜಕೀಯ ಉದ್ದೇಶಗಳಿಗಾಗಿ ಬಳಸುವುದು ಚಾಲ್ತಿಯಲ್ಲಿದೆ. ಆದರೆ ಕ್ರೀಡೆಯ ಸ್ಫೂರ್ತಿಯನ್ನು ಸದಭಿಲಾಶೆಯ ಉದ್ದೇಶಗಳೊಂದಿಗೆ ಬೆಸೆದರೆ ಅನೇಕರಿಗೆ ಕೋಪ ಬರುತ್ತದೆ.

ಲೆಸ್ಟರ್ ರಾಡ್ನಿ 2009ರಲ್ಲಿ ಎಪ್ರಿಲ್‌ನಲ್ಲಿ ಸತ್ತಾಗ ಎಫ್‌ಬಿಐ ಬಳಿ ಅವರ ಕುರಿತಾದ 400 ಪುಟಗಳ ರಹಸ್ಯ ವರದಿಗಳ ಫೈಲ್ ಇತ್ತು. ನಿಜ ಸಂಗತಿ ಏನೆಂದರೆ ರಾಡ್ನಿ ಕಮ್ಯುನಿಸ್ಟರಾಗಿರಲಿಲ್ಲ. ಆದರೆ ಸಂವೇದನಾಶೀಲ, ಆರೋಗ್ಯವಂತ ಮನಸ್ಥಿತಿಯ ಒಬ್ಬ ಕ್ರೀಡಾ ಪತ್ರಕರ್ತರಾಗಿದ್ದರು. ಕ್ರೀಡಾ ಪ್ರೇಮಿಯು ಆಗಿದ್ದರು ಅಷ್ಟೆ.

ಜನಸಾಮಾನ್ಯರನ್ನು ರಾಜಕೀಯವಾಗಿ ನಿಷ್ಕ್ರಿಯಗೊಳಿಸಲು ವ್ಯವಸ್ಥೆಯು ಹೇಗೆ ಮದ್ಯ, ಮಾದಕ ವಸ್ತುಗಳು, ಟಿವಿ. ಸಿನೆಮಾಗಳನ್ನು ಉಪಕರಣಗಳಾಗಿ ಬಳಸುತ್ತದೋ ಅದೇ ರೀತಿ ಬೃಹತ್ ಉನ್ಮಾದ ಸೃಷ್ಟಿಸಬಲ್ಲ ಕ್ರೀಡೆಗಳನ್ನು ಸಹ ಒಂದು ಅಸ್ತ್ರವಾಗಿ ನಿರಂತರವಾಗಿ ಬಳಸುತ್ತಿರುತ್ತದೆ. ಯಾರಾದರೂ ಅದಕ್ಕೆ ಪ್ರತಿಯಾಗಿ ಅದೇ ಕ್ರೀಡೆಗಳನ್ನೇ ನ್ಯಾಯಕ್ಕಾಗಿ, ಹಕ್ಕು ಬಾಧ್ಯತೆಗಳಿಗಾಗಿ ರಾಜಕೀಯ ಸದುದ್ದೇಶಕ್ಕಾಗಿ ಅರ್ಥೈಸಲು ಹೊರಟಾಗ ಆಳುವ ಜನ ಕಿರಿಕಿರಿ ಅನುಭವಿಸುತ್ತಾರೆ.

ಲೆಸ್ಟರ್ ರಾಡ್ನಿ ಇದಕ್ಕೊಂದು ಜೀವಂತ ಉದಾಹರಣೆಯಾಗಿದ್ದಾರೆ. ರಾಡ್ನಿಯ ಬದುಕಿನ ಕತೆ ಪುಸ್ತಕ ರೂಪದಲ್ಲೂ ಬಂದಿದೆ. ಅದರ ಹೆಸರು ‘press Box Red ಅಂದಹಾಗೆ ಅವರ ಆತ್ಮಕತೆಗೆ ಈ ಹೆಸರಿಟ್ಟಿದ್ದು ರಾಡ್ನಿ ಅಲ್ಲ. ಬೇರೆಯವರು...!
 

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News

ಜಗದಗಲ
ಜಗ ದಗಲ