ಸರಕಾರಿ ವೆಬ್‌ಸೈಟ್‌ನಲ್ಲಿ ಆಧಾರ್ ಮಾಹಿತಿ "ಸೋರಿಕೆ"

Update: 2017-04-23 08:10 GMT

ರಾಂಚಿ, ಎ.23: ಜಾರ್ಖಂಡ್ ರಾಜ್ಯ ಸರಕಾರದ ಸಾಮಾಜಿಕ ಭದ್ರತೆ ನಿರ್ದೇಶನಾಲಯ ನಿರ್ವಹಿಸುವ ವೆಬ್‌ಸೈಟ್‌ನ ಪ್ರೋಗ್ರಾಮಿಂಗ್ ಲೋಪದ ಕಾರಣದಿಂದಾಗಿ ಲಕ್ಷಾಂತರ ಮಂದಿಯ ಆಧಾರ್ ಮಾಹಿತಿ ಸೋರಿಕೆಯಾದ ಅಂಶ ಇಡೀ ದೇಶದಲ್ಲಿ ಆತಂಕ ಮೂಡಿಸಿದೆ.

ಆಧಾರ್ ನೋಂದಣಿ ವೇಳೆ ಜನಸಾಮಾನ್ಯರು ನೀಡಿದ್ದ ಹೆಸರು, ವಿಳಾಸ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ಬಹಿರಂಗವಾಗಿದೆ. ಜಾರ್ಖಂಡ್ ರಾಜ್ಯದ ವೃದ್ಧಾಪ್ಯ ವೇತನ ಫಲಾನುಭವಿಗಳ ಮಾಹಿತಿಗಳು ಸೋರಿಕೆಯಾಗಿವೆ.

ಜಾರ್ಖಂಡ್‌ನಲ್ಲಿ 16 ಲಕ್ಷ ಪಿಂಚಣಿದಾರರಿದ್ದು, 14 ಲಕ್ಷ ಮಂದಿ ಈ ಪೈಕಿ ತಮ್ಮ ಆಧಾರ್‌ಕಾರ್ಡ್‌ಗಳನ್ನು ಬ್ಯಾಂಕ್ ಖಾತೆ ಜತೆ ಸಂಪರ್ಕಿಸಿದ್ದಾರೆ. ಈ ಮೂಲಕ ಇವರಿಗೆ ಮಾಸಿಕ ಪಿಂಚಣಿ ನೇರವಾಗಿ ಖಾತೆಗೆ ವರ್ಗಾವಣೆಯಾಗುತ್ತಿದೆ. ಇದೀಗ ನಿರ್ದೇಶನಾಲಯದ ವೆಬ್‌ಸೈಟ್‌ಗೆ ಲಾಗ್‌ಇನ್ ಆದರೆ ಈ ಎಲ್ಲ ಫಲಾನುಭವಿಗಳ ಸಮಗ್ರ ವೈಯಕ್ತಿಕ ವಿವರಗಳು ಸಿಗುತ್ತವೆ. ಸರಕಾರಿ ಯೋಜನೆಗಳು ಮತ್ತು ಸೇವೆಗಳ ಪ್ರಯೋಜನ ಸಿಗಬೇಕಾದರೆ, ಆಧಾರ್ ಕಡ್ಡಾಯಗೊಳಿಸಿರುವ ಸರಕಾರದ ಕ್ರಮವನ್ನು ಸುಪ್ರೀಂಕೋರ್ಟ್, ಸೈಬರ್ ಭದ್ರತಾ ತಜ್ಞರು ಹಾಗೂ ವಿರೋಧ ಪಕ್ಷಗಳ ರಾಜಕಾರಣಿಗಳು ಪ್ರಶ್ನಿಸುತ್ತಿರುವ ಬೆನ್ನಲ್ಲೇ ಈ ಭಾರೀ ಪ್ರಮಾಣದ ಖಾಸಗಿತನದ ಲೋಪ ವ್ಯಾಪಕ ಚರ್ಚೆ ಹುಟ್ಟುಹಾಕಿದೆ.

ಈ ವಿವಾದಿತ ವೆಬ್‌ಸೈಟ್‌ಗೆ ಲಾಗ್ ಇನ್ ಆದಾಗ, ಪಿಂಚಣಿ ಪಾವತಿಯ ಖಾತೆಗಳಲ್ಲಿ ನಡೆದ ವಹಿವಾಟಿನ ವಿವರಗಳು ಕೂಡಾ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ಲಭ್ಯವಾಗಿವೆ. ಆಧಾರ್ ಕಾಯ್ದೆಯ ಸೆಕ್ಷನ್ 29 (4)ಕ್ಕೆ ವಿರುದ್ಧವಾಗಿ ಈ ಮಾಹಿತಿಗಳನ್ನು ಬಹಿರಂಗಪಡಿಸಲಾಗಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿಯವರ ವೈಯಕ್ತಿಕ ವಿವರ ಬಹಿರಂಗಪಡಿಸಿದ್ದಕ್ಕಾಗಿ ಆಧಾರ್ ಸೇವಾ ಕಂಪೆನಿಯೊಂದನ್ನು ಹತ್ತು ವರ್ಷಗಳ ಕಾಲ ಇತ್ತೀಚೆಗೆ ಯುಐಡಿಎಐ ಕಪ್ಪುಪಟ್ಟಿಗೆ ಸೇರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News