ಸ್ಪರ್ಧೆಗಳು ಸಂಸ್ಕೃತಿಯನ್ನೂ ಬಿಂಬಿಸುವಂತಾಗಲಿ: ಜಯ ಸುವರ್ಣ
ಮುಂಬೈ, ಎ.23: ಬಿಲ್ಲವ ಸಮುದಾಯದಲ್ಲಿ ಅನೇಕ ಚಿತ್ರನಟರು, ಕಲಾವಿದರಿದ್ದಾರೆ. ಸಿನೆಮಾ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಬಿಲ್ಲವರು ಪ್ರತಿನಿಧಿಸಿ ಸಮುದಾಯಕ್ಕೆ ಕೀರ್ತಿ ತರುವಂತಾಗಬೇಕು. ಸ್ಪರ್ಧೆಗಳು ನಮ್ಮ ಸಂಸ್ಕೃತಿಯನ್ನೂ ಬಿಂಬಿಸುವಂತಾಗಲಿ ಎಂದು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ ಮುಲ್ಕಿ ಇದರ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ನುಡಿದರು.
ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬೈ ಸಹಯೋಗದಲ್ಲಿ ಯುವ ಪತ್ರಕರ್ತ, ಫ್ಯಾಶನ್ ಕೊರಿಯೋಗ್ರಾಫರ್ ಸನಿಧ್ ಪೂಜಾರಿ ಸಾರಥ್ಯದ ರುದ್ರ ಎಂಟರ್‌ಟೇನ್ಮೆಂಟ್ ಪ್ರಸ್ತುತಿಪಡಿಸಿದ ‘ಮಿಸ್ಟರ್ ಬಿಲ್ಲವ-ಮಿಸ್ ಬಿಲ್ಲವ’ ಸೌಂದರ್ಯ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಥಾಣೆ ಮಹಾನಗರಪಾಲಿಕಾ ಮಹಾಪೌರೆ ಮೀನಾಕ್ಷಿ (ಆರ್.ಶಿಂಧೆ) ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಉಲ್ಲಾಸನಗರ್ ಮಹಾನಗರಪಾಲಿಕಾ ಮಹಾಪೌರೆ ವಿೂನಾ ಅಹಿಲಾನಿ, ಬಿಲ್ಲವರ ಅಸೋಸಿಯೇಶನ್ ಮುಂಬೈ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಮಾಜಿ ಅಧ್ಯಕ್ಷ ಎಲ್.ವಿ. ಅವಿೂನ್, ಅಸೋಸಿಯೇಶನ್‌ನ ಯುವಾಭ್ಯುದ್ಯಯ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರು, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಸಮಾಜ ಸೇವಕಿ ಮಂಗಳ ಛಡ್ಡಾ, ಕೊರಿಯೋಗ್ರಾಫರ್ ಸಂದೀಪ್ ಸೊಪರ್ಕರ್, ರುದ್ರ ಸಂಸ್ಥೆಯ ನೀಶಾ ಪೂಜಾರಿ, ರಾಜೇಶ್ ಪೂಜಾರಿ, ಕಲ್ಪಿತಾ ಪೂಜಾರಿ, ಕಾರ್ಯಕ್ರಮ ಪ್ರಾಯೋಜಕ ಹಾಗೂ ಸ್ಪರ್ಧಾ ನ್ಯಾಯದರ್ಶಿಗಳಾದ ರೀನಾ ಎಂ.ಪೂಜಾರಿ, ದೀಪ್ತಿ ಡಿ.ಸುವರ್ಣ, ಪ್ರೇಮಾ ಕೋಟ್ಯಾನ್, ಆಶಾಲತಾ ಕೋಟ್ಯಾನ್, ಲಕ್ಷ್ಮೀ ಎನ್.ಕೋಟ್ಯಾನ್, ಬೇಬಿ ಎಸ್.ಕುಕ್ಯಾನ್, ಪ್ರಭಾಕರ್ ಬೆಳುವಾಯಿ ಮತ್ತಿತರರು ಉಪಸ್ಥಿತರಿದ್ದರು.
ಭವನದ ಮಂದಿರದಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಗೆ ಸಂದೀಪ್ ಸೊಪರ್ಕರ್ ಹಾರಾರ್ಪಣೆಗೈದು ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ವಿಧಿತಾ ಪೂಜಾರಿ ಪ್ರಾರ್ಥಿಸಿದರು. "ಅಕ್ಷಯ" ಮಾಸಿಕದ ಸಹಾಯಕ ಸಂಪಾದಕ ಹರೀಶ್ ಕೆ.ಹೆಜ್ಮಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೀಪಕ್ ಶೆಟ್ಟಿ ಸ್ಪರ್ಧೆಯನ್ನು ನಿರ್ವಹಿಸಿದರು. ಕಾರ್ಯಕ್ರಮದ ಪ್ರಧಾನ ಸಂಘಟಕ, ರುದ್ರ ಎಂಟರ್‌ಟೇನ್ಮೆಂಟ್‌ನ ನಿರ್ದೇಶಕ ಸನಿಧ್ ಪೂಜಾರಿ ಸ್ವಾಗತಿಸಿದರು.