ಇತಿಹಾಸ ಬಿಚ್ಚಿಡುತ್ತಿದೆ ಆರೆಸ್ಸೆಸ್ ನ ರಾಷ್ಟ್ರಪ್ರೇಮ!

Update: 2017-04-24 06:11 GMT

ರಾಮಜಸ್ ಕಾಲೇಜಿನಲ್ಲಿ ಇತ್ತೀಚೆಗೆ ಎಬಿವಿಪಿ ನಡೆಸಿದ ದಾಳಿ ಇರಬಹುದು, 2016ರ ಫೆಬ್ರವರಿ 9ರಂದು ಜೆಎನ್‌ಯುನಲ್ಲಿ ನಡೆದ ಘಟನೆ ಇರಬಹುದು, ಅಥವಾ ಮೋದಿ ಆಡಳಿತದಲ್ಲಿ ‘‘ದೇಶದ್ರೋಹಿ’’ ಕಲಾವಿದರು ಮತ್ತು ಪತ್ರಕರ್ತರ ಮೇಲೆ ನಡೆದ ಅಸಂಖ್ಯಾತ ದಾಳಿ ಇರಬಹುದು, ಮಾಧ್ಯಮ ಕಚೇರಿಗಳನ್ನು ಧ್ವಂಸಗೊಳಿಸಿದ ಘಟನೆ ಇರಬಹುದು- ಇವೆಲ್ಲಕ್ಕೂ ಮುಕ್ತ ಅಭಿವ್ಯಕ್ತಿ ಹಾಗೂ ರಾಷ್ಟ್ರೀಯತೆ ನಡುವಿನ ಸಂಘರ್ಷವಾಗಿ ಇವರು ಬಿಂಬಿಸುತ್ತಾರೆ

ರಾಷ್ಟ್ರೀಯವಾದಿಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಸಂಘ ಪರಿವಾರವನ್ನು ಯಾವ ವಿಮರ್ಶೆಯೂ ಇಲ್ಲದೇ ಯಥಾವತ್ತಾಗಿ ಸ್ವೀಕರಿಸುವುದು ಹಿರಿಯ ಪತ್ರಕರ್ತರಿಗೆ ಇತಿಹಾಸದ ಬಗ್ಗೆ ಇರುವ ಅಜ್ಞಾನವನ್ನು ಪ್ರತಿಬಿಂಬಿಸುತ್ತದೆ. ಹಿಂದುತ್ವ ಕೂಟ ರಾಷ್ಟ್ರೀಯತೆ ಯನ್ನು ತನ್ನ ಆಸ್ತಿ ಎಂದು ಬಳಸಿಕೊಳ್ಳುತ್ತಿದೆ. ರಾಷ್ಟ್ರೀಯವಾದಿ ಸ್ವಾತಂತ್ರ್ಯ ಚಳವಳಿಯಲ್ಲಿ ವಿಶ್ವಾಸದ್ರೋಹ ಎಸಗಿದ ಅವಮಾನವನ್ನು ಮುಚ್ಚಿಹಾಕುವ ಸಲುವಾಗಿ ಈ ಮುಖ ವಾಡ ಧರಿಸಿದೆ. ತಮ್ಮ ಮರುಶೋಧಕ್ಕಾಗಿ ಆರೆಸ್ಸೆಸ್ ಮಾಡಿಕೊಂಡ ಸ್ವಯಂಘೋಷಣೆ ಇದು. ಈ ಅತಿರಾಷ್ಟ್ರಪ್ರೇಮಿಗಳು ಎಂದು ಬಿಂಬಿಸಿಕೊಳ್ಳುವ ಯತ್ನ ಇದು.

ದೇಶದ ಸ್ವಾತಂತ್ರ್ಯಕ್ಕೆ ನಡೆದ ಹೋರಾಟ ಹಾಗೂ ರಾಷ್ಟ್ರೀಯತೆ ಭಾರತದಲ್ಲಿ ಅವಿನಾಭಾವ ಸಂಬಂಧ ಹೊಂದಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ನಿರ್ವಹಿಸಿದ ಪಾತ್ರವನ್ನು ಮೆಲುಕು ಹಾಕಿಕೊಂಡರೆ, ಈ ರಾಷ್ಟ್ರೀಯತೆಯ ಮುಖವಾಡ ತಾನಾಗಿಯೇ ಕಳಚಿ ಬೀಳುತ್ತದೆ.


ದಂಡಿ ಯಾತ್ರೆ ಮತ್ತು ಆರೆಸ್ಸೆಸ್

1999ರ ಮಾರ್ಚ್ 18ರಂದು ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಯವರು ಆರೆಸ್ಸೆಸ್ ಸಂಸ್ಥಾಪಕ ಕೆ.ಬಿ.ಹೆಡಗೇವಾರ್ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದರು. ಸಂಘ ಪರಿವಾರದ ಮಂದಿಯಿಂದ ತುಂಬಿದ್ದ ಸಭಾಂಗಣದಲ್ಲಿ ಅವರನ್ನು ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಿದರು. ಈ ನಡೆ, ಸ್ವತಂತ್ರಪೂರ್ವದಲ್ಲಿ ಆರೆಸ್ಸೆಸ್‌ನ ಸಂಪ್ರದಾಯವನ್ನು ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿತ್ತು ಎಂದು ಬಿಂಬಿಸುವ ಪ್ರಯತ್ನ. ಆದರೆ ವಾಸ್ತವವಾಗಿ, ಸಾಮ್ರಾಜ್ಯಶಾಹಿ ಆಡಳಿತದ ವಿರುದ್ಧದ ಹೋರಾಟದಲ್ಲಿ ಆರೆಸ್ಸೆಸ್ ಎಂದೂ ತೊಡಗಿಸಿಕೊಂಡಿರಲಿಲ್ಲ. ಬದಲಾಗಿ, 1925ರಲ್ಲಿ ಆರಂಭವಾದ ಬಳಿಕ ಆರೆಸ್ಸೆಸ್ ಖ್ಯಾತ ಸಾಮ್ರಾಜ್ಯಶಾಹಿ ಆಡಳಿತ ವಿರುದ್ಧದ ಹೋರಾಟವನ್ನು ಕೆಡಿಸಲು ಪ್ರಯತ್ನ ಮಾಡಿತ್ತು ಎಂದು ಇತಿಹಾಸ ತಜ್ಞ ಶಂಸುಲ್ ಇಸ್ಲಾಂ ಬಣ್ಣಿಸಿದ್ದಾರೆ.

ಹೆಡೆಗೇವಾರ್ ಎಂಬ ಸ್ವಾತಂತ್ರ್ಯ ಹೋರಾಟಗಾರ ಆರೆಸ್ಸೆಸ್ ಪೂರ್ವದ ಕಾಂಗ್ರೆಸ್ ಮುಖಂಡ. ಖಿಲಾಪತ್ ಚಳವಳಿ (1919-1924)ಯಲ್ಲಿ ಬಂಧಿತರಾಗಿ ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದವರು. ಅದು ಅವರ ಕೊನೆಯ ಸ್ವಾತಂತ್ರ್ಯ ಹೋರಾಟ. ಜೈಲಿನಿಂದ ಬಿಡುಗಡೆಯಾದ ತಕ್ಷಣ ಹೆಡಗೇವಾರ್, ಸಾವರ್ಕರ್ ಅವರ ಹಿಂದುತ್ವ ಸಿದ್ಧಾಂತದಿಂದ ಪ್ರಭಾವಿತರಾದರು. 1925ರ ಸೆಪ್ಟಂಬರ್‌ನಲ್ಲಿ ಆರೆಸ್ಸೆಸ್ ಹುಟ್ಟುಹಾಕಿದರು. ಈ ಸಂಘಟನೆ ಬ್ರಿಟಿಷ್ ಆಡಳಿತದ ಉಳಿದ ಅವಧಿಯಲ್ಲಿ, ಸಾಮ್ರಾಜ್ಯಶಾಹಿ ಆಡಳಿತದ ಗುಲಾಮನಾಗಿ ವರ್ತಿಸಿದ್ದು ಮಾತ್ರವಲ್ಲದೇ, ಭಾರತ ಸ್ವಾತಂತ್ರ್ಯ ಸಂಗ್ರಾಮವನ್ನು ಪ್ರತೀ ಹಂತದಲ್ಲೂ ವಿರೋಧಿಸುತ್ತಾ ಬಂದಿದೆ.

ಆರೆಸ್ಸೆಸ್ ಪ್ರಕಟಿಸಿದ ಹೆಡಗೇವಾರ್ ಅವರ ಜೀವನ ಚರಿತ್ರೆಯ ಪ್ರಕಾರ, 1930ರಲ್ಲಿ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಆರಂಭಿಸಿದಾಗ ಅವರು ‘‘ಸಂಘ ಈ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ಸಂದೇಶವನ್ನು ರವಾನಿಸಿದರು. ಆದಾಗ್ಯೂ ವೈಯಕ್ತಿಕವಾಗಿ ಇದರಲ್ಲಿ ಭಾಗವಹಿಸುವುದಾದರೆ ಅದನ್ನು ತಡೆಯುವುದಿಲ್ಲ. ಅಂದರೆ ಸಂಘದ ಯಾರು ಕೂಡಾ ಈ ಸತ್ಯಾಗ್ರಹದಲ್ಲಿ ಭಾಗವಹಿಸಬಾರದು ಎಂಬ ಅರ್ಥ’’

ಆದರೆ ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಹಲವು ಮಂದಿ ಈ ಸಾಮೂಹಿಕ ಚಳವಳಿಯಲ್ಲಿ ಪಾಲ್ಗೊಳ್ಳುವ ಉತ್ಸಾಹ ಹೊಂದಿದ್ದರು. ಆದರೆ ಇದಕ್ಕೆ ಹೆಡಗೇವಾರ್ ಮತ್ತು ಅವರ ಉತ್ತರಾಧಿಕಾರಿ ಎಂ.ಎಸ್.ಗೋಲ್ವಾಳ್ಕರ್ ತಣ್ಣೀರೆರಚಿದರು. ಇದಕ್ಕೆ ಸಂಬಂಧಿ ದಾಖಲಾದ ಒಂದು ಘಟನೆಯನ್ನು ಇಲ್ಲಿ ವಿವರಿಸಿದರೆ, ಆರೆಸ್ಸೆಸ್ ನಾಯಕತ್ವದ ಪಾತ್ರದ ಬಗ್ಗೆ ಸ್ಪಷ್ಟ ಅರಿವಾಗುತ್ತದೆ.

‘‘1930-31ರಲ್ಲಿ ಹೋರಾಟ ನಡೆದಿತ್ತು. ಆಗ ಹಲವು ಮಂದಿ ಡಾಕ್ಟರ್‌ಜೀ (ಹೆಡಗೇವಾರ್) ಬಳಿಗೆ ಹೋದರು. ಈ ಚಳವಳಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸ ಬಹುದು. ಈ ವಿಚಾರದಲ್ಲಿ ಸಂಘ ಹಿಂದುಳಿಯಬಾರದು ಎಂದು ಮನವಿ ಮಾಡಿ ಕೊಂಡರು. ಈ ಹಂತದಲ್ಲಿ ಒಬ್ಬರು ಡಾಕ್ಟರ್‌ಜೀ ನಾನು ಜೈಲಿಗೆ ಹೋಗಲೂ ಸಿದ್ಧ’’ ಎಂದು ಹೇಳಿದರು. ಆಗ ಡಾಕ್ಟರ್‌ಜೀ ನೀಡಿದ ಉತ್ತರ ಏನು ಗೊತ್ತೇ? ‘‘ಖಂಡಿತ ವಾಗಿಯೂ ಹೋಗು. ಆದರೆ ನಿನ್ನ ಕುಟುಂಬವನ್ನು ನೋಡಿಕೊಳ್ಳುವವರು ಯಾರು?’’ ಅದಕ್ಕೆ ಆ ವ್ಯಕ್ತಿಯ ಉತ್ತರ, ‘‘ನಾನು ಸಾಕಷ್ಟು ಸಂಪನ್ಮೂಲವನ್ನು ಹೊಂದಿಸಿಕೊಂಡಿದ್ದೇನೆ; ಎರಡು ವರ್ಷಗಳ ಕುಟುಂಬ ನಿರ್ವಹಣೆಗೆ ಮಾತ್ರವಲ್ಲದೇ ಕಾನೂನಾತ್ಮಕವಾಗಿ ತೆರಬೇಕಾದ ದಂಡ ಪಾವತಿಸಲೂ ಹಣ ಹೊಂದಿಸಿಕೊಂಡಿದ್ದೇನೆ.’’

‘‘ನೀನು ಸಂಪನ್ಮೂಲ ಹೊಂದಿಸಿಕೊಂಡಿದ್ದರೆ, ಎರಡು ವರ್ಷ ಕಾಲ ಸಂಘದ ಕೆಲಸಕ್ಕೆ ಬಾ’’ ಎಂದು ಡಾಕ್ಟರ್‌ಜೀ ಹೇಳಿದರು. ಮನೆಗೆ ವಾಪಸಾದ ಬಳಿಕ ಆ ವ್ಯಕ್ತಿ ಜೈಲಿಗೂ ಹೋಗಲಿಲ್ಲ; ಸಂಘದ ಕೆಲಸಕ್ಕೂ ಬರಲಿಲ್ಲ.

ಆದಾಗ್ಯೂ ಹೆಡಗೇವಾರ್ ವೈಯಕ್ತಿಕವಾಗಿ ಚಳವಳಿಯಲ್ಲಿ ಪಾಲ್ಗೊಂಡು, ಜೈಲಿಗೆ ಹೋದರು. ಆದರೆ ಈ ಬಾರಿ ಸ್ವಾತಂತ್ರ್ಯ ಸಂಗ್ರಾಮದ ಉದ್ದೇಶದಿಂದ ಅಲ್ಲ. ಆರೆಸ್ಸೆಸ್ ಪ್ರಕಟಿಸಿದ ಅವರ ಜೀವನಚರಿತ್ರೆ ಪ್ರಕಾರ, ‘‘ಸ್ವಾತಂತ್ರ ಪ್ರೀತಿಸುವ, ಸ್ವಯಂ ತ್ಯಾಗದ ಹಾಗೂ ಘನತೆ ಹೊಂದಿದ ಜನರು ಅವರ ಜತೆ ಜೈಲಿನಲ್ಲಿದ್ದ ಕಾರಣ, ಅವರ ಜತೆ ಸಂಘದ ಬಗ್ಗೆ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಬಹುದು ಎಂಬ ಕಾರಣಕ್ಕಾಗಿ’’.

ಹಿಂದೂ ಹಾಗೂ ಮುಸ್ಲಿಂ ಪ್ರತ್ಯೇಕತಾವಾದಿ ಗುಂಪುಗಳು ಕಾಂಗ್ರೆಸ್ ಸಂಘಟನೆ ಯನ್ನು ಸ್ವಂತ ವಿಚ್ಛಿದ್ರಕಾರಿ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿವೆ ಎಂಬ ಸುಳಿವು ಅರಿತ ಅಖಿಲ ಭಾರತ ಕಾಂಗ್ರೆಸ್ ಸಮಿತಿ 1934ರಲ್ಲಿ ನಿರ್ಣಯ ಆಂಗೀಕರಿಸಿ, ಕಾಂಗ್ರೆಸ್ ಸದಸ್ಯರು ಆರೆಸ್ಸೆಸ್, ಹಿಂದೂ ಮಹಾಸಭಾ ಅಥವಾ ಮುಸ್ಲಿಂ ಲೀಗ್ ಸದಸ್ಯರಾ ಗುವಂತಿಲ್ಲ ಎಂದು ಸ್ಪಷ್ಟಪಡಿಸಿತು.

1940ರ ದಶಕದ ಉತ್ತರಾರ್ಧದಲ್ಲಿ ಗಾಂಧೀಜಿ ಭಾರತ ಬಿಟ್ಟು ತೊಲಗಿ ಚಳವಳಿ ಆರಂಭಿಸಿದಾಗ, ಆರೆಸ್ಸೆಸ್ ಮುಖಂಡರ ಒಂದು ನಿಯೋಗ ಗೃಹ ಇಲಾಖೆ ಕಾರ್ಯದರ್ಶಿಯವರನ್ನು ಭೇಟಿ ಮಾಡಿ, ‘‘ಸಂಘ ಪರಿವಾರದ ಮಂದಿ ನಾಗರಿಕ ಸುರಕ್ಷಾ ಸೇವೆಯಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುವುದಾಗಿ ಕಾರ್ಯದರ್ಶಿಗೆ ಭರವಸೆ ನೀಡಿತು’’ ಎಂದು ಸಾಮ್ರಾಜ್ಯಶಾಹಿ ಆಡಳಿತದ ಗೃಹ ಇಲಾಖೆಯ ಕಡತವೊಂದು ಬಹಿರಂಗಪಡಿಸಿದೆ.

ಆರೆಸ್ಸೆಸ್ ಮತ್ತು ಕ್ವಿಟ್ ಇಂಡಿಯಾಗೆ ವಿರೋಧ

‘ಭಾರತ ಬಿಟ್ಟು ತೊಲಗಿ ಚಳವಳಿ; ಆರಂಭವಾದ ಎರಡೂವರೆ ವರ್ಷಗಳ ಬಳಿಕ ಬ್ರಿಟಿಷ್ ಆಡಳಿತದ ಮುಂಬೈ ಸರಕಾರ ಒಂದು ಸಮಾಧಾನಕರ ಟಿಪ್ಪಣಿ ಹೊರಟಿಸಿತು. ‘‘ಸಂಘವನ್ನು ಕಟ್ಟುನಿಟ್ಟಾಗಿ ಕಾನೂನಿನ ಚೌಕಟ್ಟಿನೊಳಗೇ ಇಡಲಾಗಿದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ, 1942ರಲ್ಲಿ ಆರಂಭವಾದ ದಾಂಧಲೆಗಳಿಂದ ದೂರ ಇರುವಂತೆ ನೋಡಿಕೊಳ್ಳಲಾಗಿದೆ.’’

ಆದಾಗ್ಯೂ ದಂಡಿ ಸತ್ಯಾಗ್ರಹ ಪ್ರಕರಣದಂತೆ, ಆರೆಸ್ಸೆಸ್ ಕಾರ್ಯಕರ್ತರು, ಚಳವಳಿಯಿಂದ ಸಂಘಟನೆಯ ಕಾರ್ಯಕರ್ತರನ್ನು ಹೊರಗಿಡುವ ತಮ್ಮ ನಾಯಕನ ನಿರ್ಧಾರದಿಂದ ಹತಾಶರಾಗಿದ್ದರು. ಗೋಳ್ವಾಲ್ಕರ್ ಸ್ವತಃ ಹೇಳಿರುವಂತೆ, ‘‘1942ರಲ್ಲಿ ಕೂಡಾ ಹಲವರ ಹೃದಯದಲ್ಲಿ, ಸಂಘ ನಿಷ್ಕ್ರಿಯ ವ್ಯಕ್ತಿಗಳ ಸಂಘಟನೆ, ಅದರ ಮಾತುಗಳು ನಿಷ್ಪ್ರಯೋಜಕ ಎಂಬ ಪ್ರಬಲ ಭಾವನೆ ದಟ್ಟವಾಗಿತ್ತು. ಇದು ಕೇವಲ ಹೊರಗಿನವರಲ್ಲಿ ಮಾತ್ರವಲ್ಲದೇ ನಮ್ಮ ಸ್ವಯಂಸೇವಕರಲ್ಲೂ ಈ ಅಭಿಪ್ರಾಯ ದಟ್ಟವಾಗಿತ್ತು. ಈ ಬಗ್ಗೆ ವ್ಯಾಪಕ ಚರ್ಚೆಯೂ ನಡೆದಿದೆ’’

ಆದರೆ ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದಿರಲು ಕುತೂಹಲಕರ ಹಿನ್ನೆಲೆ ಇದೆ. ಬಂಗಾಳದಲ್ಲಿ ಕನಿಷ್ಠ 30 ಲಕ್ಷ ಮಂದಿಯ ಸಾವಿಗೆ ಕಾರಣವಾಗಿದ್ದ ಬ್ರಿಟಿಷ್ ನಿರ್ಮಿತ ಬರ ಪರಿಸ್ಥಿತಿಗೆ ಮುನ್ನ ಅಂದರೆ 1942ರ ಜೂನ್‌ನಲ್ಲಿ ಗೋಲ್ವಾಳ್ಕರ್ ಮಾಡಿದ ಭಾಷಣದಲ್ಲಿ, ‘‘ಇಂದಿನ ಸಾಮಾಜಿಕ ಸ್ಥಿತಿ ಹದಗೆಟ್ಟಿರುವ ಬಗ್ಗೆ ಸಂಘ ಯಾರನ್ನೂ ದೂರುತ್ತಿಲ್ಲ. ಜನ ಬೇರೆಯವರನ್ನು ದೂಷಿಸಲು ಆರಂಭಿಸಿದರೆ ಅವರಲ್ಲೇ ಮೂಲಭೂತವಾಗಿ ದೌರ್ಬಲ್ಯ ಇದೆ ಎಂಬ ಅರ್ಥ. ದುರ್ಬಲರಿಗಾಗಿ ಮಾಡಿದ ಅನ್ಯಾಯದ ಬಗ್ಗೆ ಮಾತನಾಡುವುದು ನಿಷ್ಪ್ರಯೋಜಕ. ಇತರರನ್ನು ಟೀಕಿಸುವ ಅಥವಾ ನಿಂದಿಸುವುದಕ್ಕೆ ಸಂಘ ತನ್ನ ಅಮೂಲ್ಯ ಸಮಯ ವ್ಯರ್ಥ ಮಾಡುವುದಿಲ್ಲ. ದೊಡ್ಡ ಮೀನು, ಸಣ್ಣ ಮೀನನ್ನು ತಿನ್ನುತ್ತದೆ ಎನ್ನುವುದನ್ನು ನಾವು ತಿಳಿದುಕೊಂಡರೆ, ದೊಡ್ಡ ಮೀನಿನ ಮೇಲೆ ಗೂಬೆ ಕೂರಿಸುವುದು ಹುಚ್ಚುತನ. ಒಳ್ಳೆಯದಾಗಿರಲೀ, ಕೆಟ್ಟದಾಗಿರಲೀ, ಪ್ರಕೃತಿ ಸಹಜ ನಿಯಮ ಸಾರ್ವಕಾಲಿಕ. ಇದನ್ನು ಅನ್ಯಾಯ ಎಂದು ಹೇಳಿದರೆ ಅದು ಬದಲಾಗುವುದಿಲ್ಲ’’.

ಹಿಂದಿನ ವರ್ಷದ ನೌಕಾ ದಂಗೆಯ ಬಳಿಕ 1947ರ ಮಾರ್ಚ್‌ನಲ್ಲಿ ಅಂತಿಮವಾಗಿ ಭಾರತ ತೊರೆಯಲು ಬ್ರಿಟಿಷರು ನಿರ್ಧರಿಸಿದರೂ, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲು ಇಚ್ಛಿಸಿದ್ದ ಕಾರ್ಯಕರ್ತರನ್ನು ಗೋಲ್ವಾಳ್ಕರ್ ಟೀಕಿಸುತ್ತಲೇ ಬಂದಿದ್ದರು. ಆರೆಸ್ಸೆಸ್‌ನ ವಾರ್ಷಿಕೋತ್ಸವದಲ್ಲಿ ಅವರು ಮಾಡಿದ್ದ ಭಾಷಣ ಹೀಗಿತ್ತು:

‘‘ಒಮ್ಮೆ ಜವಾಬ್ದಾರಿಯುತ ಹಿರಿಯರೊಬ್ಬರು ನಮ್ಮ ಶಾಖೆಗೆ ಭೇಟಿ ನೀಡಿದ್ದರು. ಅವರು ಆರೆಸ್ಸೆಸ್ ಸ್ವಯಂಸೇವಕರಿಗೆ ಹೊಸ ಸಂದೇಶ ತಂದಿದ್ದರು. ಶಾಖೆಯ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಲು ಅವಕಾಶ ನೀಡಿದಾಗ, ಅವರು ಪ್ರಭಾವಿ ಭಾಷಣ ಮಾಡಿದರು. ಇದೀಗ ಒಂದೇ ಒಂದು ಕೆಲಸ ಮಾಡಿ. ಬ್ರಿಟಿಷರನ್ನು ಹಿಡಿದಿಡಿ. ಅವರನ್ನು ಒದ್ದೋಡಿಸಿ. ಮುಂದೆ ಏನಾಗುತ್ತದೆ ಕಾದುನೋಡೋಣ ಎಂದು ಹೇಳಿ ಅವರು ಕುಳಿತರು. ಈ ಸಿದ್ಧಾಂತದ ಹಿಂದಿನ ಭಾವನೆಯೆಂದರೆ ಸರಕಾರದ ವಿರುದ್ಧದ ಕ್ರೋಧ ಹಾಗೂ ಆಕ್ರೋಶ; ದ್ವೇಷದ ಹಿನ್ನೆಲೆಯ ಆಕ್ರಮಣಕಾರಿ ಪ್ರವೃತ್ತಿ. ಇಂದಿನ ರಾಜಕೀಯ ಭಾವನೆಗಳ ಲೋಪ ಎಂದರೆ, ಅದರ ಮೂಲ ಇರುವುದೇ ಆಕ್ರಮಣಕಾರಿ, ಸಿಟ್ಟು ಹಾಗೂ ಆಕ್ರೋಶದಲ್ಲಿ ಮತ್ತು ಸ್ನೇಹತ್ವವನ್ನು ಮರೆಯುವುದರಲ್ಲಿ’’


ಮುಂದುವರಿಯುತ್ತದೆ............

Writer - ಪವನ್ ಕುಲಕರ್ಣಿ

contributor

Editor - ಪವನ್ ಕುಲಕರ್ಣಿ

contributor

Similar News

ಜಗದಗಲ
ಜಗ ದಗಲ