ಸೀತೆಯ ಕಣ್ಣಲ್ಲಿ ಕಿರು ರಾಮಾಯಣ

Update: 2017-04-25 17:47 GMT

ರಾಮಾಯಣದಲ್ಲಿ ಸೀತೆಯನ್ನು ಕೇಂದ್ರವಾಗಿಟ್ಟು ಮತ್ತೆ ಮತ್ತೆ ಬರಹಗಳು ಬರುತ್ತಲೇ ಇವೆ. ಆಧುನಿಕ ಮಹಿಳಾಸಂವೇದನೆಗಳು ಜಾಗೃತಗೊಂಡ ದಿನದಿಂದ ರಾಮಾಯಣವನ್ನು ಸೀತೆಯ ಕಣ್ಣಲ್ಲಿ ವಿಶ್ಲೇಷಿಸಿದ ಹಲವು ಕೃತಿಗಳು ಬಂದಿವೆ. ಇತ್ತೀಚೆಗೆ ಎಸ್. ಎಲ್. ಭೈರಪ್ಪ ಅವರ ‘ಉತ್ತರಕಾಂಡ’ವೂ ಇದೇ ಪ್ರಯತ್ನದ ಸಾಲಿಗೆ ಸೇರುತ್ತದೆ. ಇದೇ ಸಂದರ್ಭದಲ್ಲಿ ಸೀತೆಯನ್ನು ಕೇಂದ್ರವಾಗಿಟ್ಟುಕೊಂಡು ಹಲವು ನಾಟಕಗಳೂ ಬಂದಿವೆ. ಇಲ್ಲಿ ಎಸ್. ಮಾಲತಿ ಅವರು ವಾಲ್ಮೀಕಿ ರಾಮಾಯಣವನ್ನು ಆಧರಿಸಿ ‘ಸೀತಾ ಚರಿತ’ ಎನ್ನುವ ಕಿರು ನಾಟಕವನ್ನು ಬರೆದಿದ್ದಾರೆ. ಓರ್ವ ಮಹಿಳೆಯಾಗಿ ಸೀತೆ ಮಾಲತಿಯವರನ್ನು ಹೆಚ್ಚು ಕಾಡಿರುವುದೂ ಈ ಕೃತಿಯಲ್ಲಿ ಎದ್ದು ಕಾಣುತ್ತದೆ.

ಇದು, ಪುರುಷ ಪ್ರಧಾನ ವ್ಯವಸ್ಥೆಯಿಂದ ಪದೇ ಪದೇ ವಂಚನೆಗೊಳಗಾಗುತ್ತಾ, ಶೋಷಣೆಗೊಳಗಾಗುತ್ತಾ ರೋಸಿ ಭೂಮಿತಾಯಿಯ ಗರ್ಭ ಸೇರುವ ಸೀತೆಯ ಕತೆ. ಸೀತೆಯ ಶೋಷಣೆಯೇ ನಾಟಕದ ಮುಖ್ಯ ಭಾಗವಾದಾಗ, ಶ್ರೀರಾಮನ ಪಾತ್ರ ಮಂಕಾಗುತ್ತಾ ಬರುವುದು ಸಹಜವೇ ಆಗಿದೆ. ಇಡೀ ರಾಮಾಯಣದ ಕತೆಯ ಸಾರವನ್ನು ಒಳಗೊಂಡಿರುವ ಈ ಕಿರು ನಾಟಕ 14 ದೃಶ್ಯಗಳನ್ನು ಹೊಂದಿದೆ. ಶ್ರೀರಾಮಪಟ್ಟಾಭಿಷೇಕದಿಂದ ಆರಂಭವಾಗಿ, ವನವಾಸ, ಸೀತಾಪಹರಣ, ರಾವಣ ವಧೆ, ಅಯೋಧ್ಯೆ ಪಟ್ಟಾಭಿಷೇಕ, ಸೀತೆ ಮತ್ತೆ ಕಾಡುಪಾಲು, ಲವಕುಶ ಜನನ, ಅಂತಿಮವಾಗಿ ಮತ್ತೆ ರಾಮನ ಮುಖಾಮುಖಿ, ಸೀತೆಯ ನಿರ್ಗಮನ ಇಷ್ಟನ್ನೂ ಕಿರು ನಾಟಕ ಹೇಳಲು ಹೊರಡುವುದರಿಂದ, ನಾಟಕದ ಎಲ್ಲ ಸೂಕ್ಷ್ಮ ಮತ್ತು ವ್ಯಂಗ್ಯಗಳನ್ನು ವ್ಯಕ್ತಪಡಿಸಲು ಕೃತಿಗೆ ಸಾಧ್ಯವಾಗುವುದಿಲ್ಲವೇನೋ ಅನ್ನಿಸುತ್ತದೆ.

ಸೀತಾಚರಿತವೆಂದು ಹೆಸರಿಟ್ಟರೂ ರಾಮನ ಪಾತ್ರ ಇಲ್ಲಿ ತೀರಾ ನಿರ್ಲಕ್ಷಕ್ಕೆ ಒಳಗಾಗಿಲ್ಲ. ರಾಮ ತೀರಾ ನಿಂದನೆಗೂ ಒಳಗಾಗಿಲ್ಲ. ರಂಗಪ್ರಯೋಗಕ್ಕೆ ಈ ಕಿರು ನಾಟಕ ಪೂರಕವಾಗಿದೆ.

ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 45 ರೂಪಾಯಿ.
 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News