ಉರ್ದು ಸಾಹಿತ್ಯ-ಪ್ರಳಯದ ನಡುವಿನ ವಸಂತ
ಸುಮಾರು ಎರಡೂವರೆ ದಶಕಗಳ ಹಿಂದೆ ಡಾ. ಡಿ. ಆರ್. ನಾಗರಾಜ್ ಮತ್ತು ಅಝೀಝುಲ್ಲಾ ಬೇಗ್ ನಡೆಸಿದ ಉರ್ದು-ಕನ್ನಡ ಬರಹಗಾರರ ಕಮ್ಮಟವೊಂದರಿಂದ ಹೊರಬಂದ ಅನುವಾದಗಳ ಸಂಗ್ರಹವೇ ‘ಉರ್ದು ಸಾಹಿತ್ಯ’. ಉರ್ದು ಕಾವ್ಯ ಮತ್ತು ಕಥನ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವುದು ಆ ಕಮ್ಮಟದ ಗುರಿಯಾಗಿತ್ತು. ಉರ್ದು ಭಾಷೆಯ ಪ್ರಾತಿನಿಧಿಕ ಬರಹಗಳನ್ನು ನಿರ್ದೇಶಕರು ಆಯ್ಕೆ ಮಾಡಿದ್ದರು. ಬಳಿಕ ಅದು ಸಂಕಲನ ರೂಪ ಪಡೆದು ಮುದ್ರಣಗೊಂಡಿತ್ತು. ಆ ಸಂಕಲನವನ್ನು ಇದೀಗ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ‘ಉರ್ದು ಸಾಹಿತ್ಯ’ ಹೆಸರಿನಲ್ಲಿ ಪುನರ್ ಮುದ್ರಿಸಿದೆ.
ಮೊದಲ ಅಧ್ಯಾಯದಲ್ಲಿ ಕಾವ್ಯ ಪ್ರಕಾರದ ಅನುವಾದಗಳಿವೆ. ಮೀರ್ ತಖಿಮೀರ್, ಮೀರ್ ಅನೀಸ್, ಸೌದಾ, ಖ್ವಾಜಾಮೀರ್ ದರ್ದ್, ಗಾಲಿಬ್, ಮೂಮಿನ್, ಅಕ್ಬರ್ ಇಲಹಾಬಾದಿ, ಅಸ್ಗರ್ ಗೋಂಡವಿ, ನಫೀಸ್ ಬೆಂಗಳೂರಿ, ಹಝ್ರತ್ ಮುಹಾನಿ, ಡಾ. ಇಕ್ಬಾಲ್, ಫೈಝ್‌ಅಹಮದ್ ಫೈಝ್, ಸಾಹಿರ್ ಲುಧಿಯಾನ್ವಿ, ಜಾನಿಸಾರ್ ಅಖ್ತರ್, ಜಫರ್ ಇಕ್ಬಾಲ್ ಹೀಗೆ ಉರ್ದು ಸಾಹಿತ್ಯದಲ್ಲಿ ಕೈಯಾಡಿಸಿದ ಹಿರಿಯ, ಕಿರಿಯ ಕವಿಗಳ ಕಾವ್ಯಗಳನ್ನು ಕನ್ನಡಕ್ಕಿಳಿಸಲಾಗಿದೆ. ನಟರಾಜ್ ಹುಳಿಯಾರ್, ಸಿದ್ದಲಿಂಗ ಪಟ್ಟಣಶೆಟ್ಟಿ, ಸುಮತೀಂದ್ರ ನಾಡಿಗ, ಹೇಮಾ ಪಟ್ಟಣಶೆಟ್ಟಿ, ಕಮಲಾ ಹೆಮ್ಮಿಗೆ, ಎಚ್. ಎಸ್. ಶಿವಪ್ರಕಾಶ್, ಕೇಶವ ಮಳಗಿ, ಶಶಿಕಲಾ ವೀರಯ್ಯ ಸ್ವಾಮಿ, ಎಂ. ಆರ್. ಕಮಲ ಮೊದಲಾದ ಕನ್ನಡ ಪ್ರಮುಖ ಕವಿಗಳು, ಲೇಖಕರು ಈ ಅನುವಾದದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.
ಇದೇ ಸಂದರ್ಭದಲ್ಲಿ ಕಥಾ ವಿಭಾಗದಲ್ಲಿ ಪ್ರೇಮ್‌ಚಂದ್, ಸಾದತ್ ಹಸನ್ ಮಾಂಟೋ, ಇಸ್ಮತ್ ಚುಗ್ತಾಯಿ, ಕಿಷನ್ ಚಂದರ್, ಖುರಾತುಲ್ಲೇನ್ ಹೈದರ್, ಬಲವಂತ್ ಸಿಂಹ, ಅಝೀಝ್ ಅಹಮದ್, ಸಲಾಂ ಬಿನ್ ರಝಾಕ್ ಮೊದಲಾದ ಮಹತ್ವದ ಕತೆಗಾರರನ್ನು ಕನ್ನಡಕ್ಕಿಳಿಸಲಾಗಿದೆ. ಈ ಅನುವಾದದ ಕಾರ್ಯದಲ್ಲಿ ಬೊಳುವಾರು ಮಹಮದ್ ಕುಂಞಿ, ಫಕೀರ್ ಮುಹಮ್ಮದ್ ಕಟ್ಪಾಡಿ, ಅಗ್ರಹಾರ ಕೃಷ್ಣಮೂರ್ತಿ, ಪಂಚಾಕ್ಷರಿ ಹಿರೇಮಠ, ತಿಪ್ಪೇಸ್ವಾಮಿ, ಕೃಷ್ಣಮೂರ್ತಿ ಚಂದರ್, ರಹಮತ್ ತರೀಕೆರೆ, ಕೆ. ಮರುಳಸಿದ್ದಪ್ಪ ಮೊದಲಾದ ಕನ್ನಡದ ಮಹತ್ವದ ಲೇಖಕರು, ಕಥೆಗಾರರು ಭಾಗವಹಿಸಿದ್ದಾರೆ. ಮೂಲ ಲೇಖಕರು ಮತ್ತು ಅನುವಾದಿಸಿದ ಲೇಖಕರ ಹೆಸರುಗಳೇ ಈ ಕೃತಿಯ ಹಿರಿಮೆಯನ್ನು ಎತ್ತಿ ಹಿಡಿಯು ತ್ತದೆ. ಉರ್ದು ಸಾಹಿತ್ಯದ ಕಾವ್ಯ ಮತ್ತು ಕಥನದ ಸೊಗಡನ್ನು ಈ ಕೃತಿ ಎತ್ತಿ ಹಿಡಿಯುತ್ತದೆ. ಡಿ. ಆರ್. ನಾಗರಾಜ್ ಅವರು ಈ ಕೃತಿಗೆ ಅಪರೂಪದ ಮುನ್ನುಡಿಯನ್ನೂ ಬರೆದಿದ್ದಾರೆ. ಅವರೇ ಹೇಳುವಂತೆ ಉರ್ದು ಕಾವ್ಯವೆಂದರೆ ಪ್ರಳಯದ ನಡುವಿನ ವಸಂತ. 474 ಪುಟಗಳ ಈ ಕೃತಿಯ ಮುಖಬೆಲೆ 250 ರೂಪಾಯಿ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರನ್ನು ಸಂಪರ್ಕಿಸಬಹುದು.