ಮಾಸ್ತಿ-ಕಣ್ಣಿಗೆ ಕಟ್ಟುವ ವ್ಯಕ್ತಿತ್ವ
ಹೊಸಗನ್ನಡದ ಅತಿ ಮುಖ್ಯ ಲೇಖಕರಲ್ಲಿ ಒಬ್ಬರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಜನಿಸಿ 125 ವರ್ಷಗಳಾದ ಹಿನ್ನೆಲೆಯಲ್ಲಿ ಮಾವಿನ ಕೆರೆ ರಂಗನಾಥ್ ಅವರು ‘ಮಾಸ್ತಿ’ ಕೃತಿಯನ್ನು ಹೊರತಂದಿದ್ದಾರೆ. ಮಾಸ್ತಿಯವರ ಜೀವನ ಮತ್ತು ಸಾಹಿತ್ಯ, ಅವರ ಬದುಕಿನ ವಿವಿಧ ಘಟ್ಟಗಳನ್ನು ತೆರೆದಿಡುವ ಚಿತ್ರ ಸಂಪುಟ, ಮಾಸ್ತಿ ಅವರ ಕತೆಗಳೂ ಸೇರಿದಂತೆ ಇತರ ಕೃತಿಯ ಪರಿಚಯ, ಮಾಸ್ತಿ ಅವರ ಸಾಹಿತ್ಯ ಸಮ್ಮೇಳನದ ಭಾಷಣ, ಮಾಸ್ತಿ ಅವರ ಜ್ಞಾನಪೀಠ ಪ್ರಶಸ್ತಿ ಭಾಷಣ ಇವೆಲ್ಲವುಗಳ ಮೂಲಕ ಮಾಸ್ತಿಯವರನ್ನು ಲೇಖಕರು ಮತ್ತೊಮ್ಮೆ ಹೊಸದಾಗಿ ಕಟ್ಟಿಕೊಡುತ್ತಾರೆ. ಮಾಸ್ತಿಯ ಬದುಕನ್ನು ಅವರ ಮಾತುಗಳ ಮೂಲಕ, ಉಳಿದವರ ಹೇಳಿಕೆಗಳ ಮೂಲಕ, ಬೇರೆ ಬೇರೆ ಗ್ರಂಥಗಳ ಮೂಲಕ ಸಂಗ್ರಹಿಸಿ ಲೇಖಕರು ಕಥನ ರೂಪದಲ್ಲಿ ತೆರೆದಿಡುತ್ತಾರೆ. ಅವರ ಸಾಹಿತ್ಯಕವಾದ ಬೇರೆ ಬೇರೆ ಸಾಧನೆಗಳನ್ನು ಗುರುತಿಸುತ್ತಾ, ಅವುಗಳನ್ನು ಸಣ್ಣದಾಗಿ ವಿಮರ್ಶೆಗೂ ಒಡ್ಡುತ್ತಾ, ಮಾಸ್ತಿ ಅಗಾಧತೆಯನ್ನು ನಮಗೆ ಪರಿಚಯಿಸುವ ಪ್ರಯತ್ನ ಈ ಕೃತಿಯಲ್ಲಿ ನಡೆಯುತ್ತದೆ. ಬೆನ್ನುಡಿಯಲ್ಲಿ ರಂಗನಾಥ ರಾವ್ ಹೇಳುವಂತೆ ಸಮ್ಯಕ್ ದರ್ಶನ ಮತ್ತು ಸಾಹಿತ್ಯ ಮಂಥನದಿಂದ ಕಣ್ಣಿಗೆ ಕಟ್ಟುವಂಥ ದಿವ್ಯ ವ್ಯಕ್ತಿತ್ವವೊಂದು ಇಲ್ಲಿ ಮೂಡಿ ಬಂದಿದೆ. ಇಂಥ ವ್ಯಕ್ತಿತ್ವವನ್ನು ಕಡೆದು ನಿಲ್ಲಿಸುವ ಕೆಲಸ ಸತ್ಯನಿಷ್ಠೆ, ಶ್ರದ್ಧೆ ಮತ್ತು ವಿನಯಪೂರ್ವಕ ಔನ್ನತ್ಯ ಮಾಪನವನ್ನು ಬೇಡುವಂಥದ್ದು. ಈ ಹಿರಿ ಕೆಲಸದಲ್ಲಿ ಮಾವಿನಕೆರೆಯವರು ಯಶಸ್ವಿಯಾಗಿದ್ದಾರೆ’. ಸುಭಾಷ್ ಸ್ಟೋರ್ಸ್ ಕೃತಿಯನ್ನು ಹೊರತಂದಿದೆ. 116 ಪುಟಗಳ ಈ ಕೃತಿಯ ಮುಖಬೆಲೆ 125 ರೂ. ಆಸಕ್ತರು 080-2336 3347 ದೂರವಾಣಿಯನ್ನು ಸಂಪರ್ಕಿಸಬಹುದು.