ಮಕ್ಕಳು ಮತ್ತು ಸಾಹಿತ್ಯ
ಮಕ್ಕಳನ್ನು ಬೆಳೆಸುವ ಮತ್ತು ಪಾಲನೆ ಪೋಷಣೆ ಮಾಡುವ ರೀತಿಗಳನ್ನು ವಿವರಿಸುವಂತಹ ಕೈಪಿಡಿಗಳು ಲಭ್ಯವಿವೆ ಎಂಬ ಅರಿವೂ ಇಲ್ಲದಂತಹ ಪೋಷಕರ ಬಹುದೊಡ್ಡ ಸಮೂಹವಿದ್ದರೆ, ಅರಿವಿದ್ದರೂ ಅದನ್ನು ಕೊಳ್ಳುವಲ್ಲಿ ಉದಾಸೀನ ತೋರುವ ಮಂದಿಯೂ ಬಹಳಷ್ಟಿದ್ದಾರೆ.
ವಂಶವಾಹಿನಿ ಮತ್ತು ಗುಪ್ತಗಾಮಿನಿ
ಮಕ್ಕಳು ಎಲ್ಲಾ ಕಾಲದಲ್ಲೂ, ಎಲ್ಲಾ ದೇಶದಲ್ಲೂ ಸಮಾಜದ ಅತಿಮುಖ್ಯ ಭಾಗವಾಗಿರುತ್ತಾರೆ. ಈ ಭಾಗವನ್ನು ಜೀವಂತಿಕೆಯಿಂದ ನೋಡಿಕೊಳ್ಳಲೇಬೇಕಾದಂತಹ ಅತೀ ಆವಶ್ಯಕತೆ ಎಲ್ಲಾ ಸಮಾಜಗಳಿಗೂ ಇದೆ. ಏಕೆಂದರೆ ಪೀಳಿಗೆಯ ಸಂರಕ್ಷಣೆಯ ಹೊಣೆಗಾರಿಕೆ ಎಲ್ಲಾ ಸಮಾಜಗಳದ್ದು. ಜನಾಂಗಗಳ ನಡುವೆ ಘರ್ಷಣೆಗಳು ನಡೆಯುವಾಗ ಮತ್ತು ಯಾವುದೇ ಪಂಗಡ ಅಥವಾ ವ್ಯಕ್ತಿ ತನ್ನ ಸ್ವಾಮಿತ್ವವನ್ನು ಸರ್ವಾಧಿಕಾರ ಧೋರಣೆಯಲ್ಲಿ ಉಳಿಸಿಕೊಳ್ಳುವ ಸಂದರ್ಭಗಳಲ್ಲಿ ತನ್ನ ಸ್ಥಾನಕ್ಕೆ ಸಂಚಕಾರ ಬರುವುದು ಎಂದು ಸುಳಿವುಗಳನ್ನು ಕಂಡಾಗ ಪುರುಷರ ಹತ್ಯೆಗಳಾಗುವುದರ ಜೊತೆಗೆ ಶಿಶು ಹತ್ಯೆಗಳನ್ನೂ ಕೂಡ ಪ್ರಧಾನವಾಗಿಯೇ ಕೈಗೊಳ್ಳುತ್ತಾರೆ. ಇದಕ್ಕೆ ನಿದರ್ಶನಗಳು ಬರೀಯ ಚಾರಿತ್ರಿಕ ದಾಖಲೆಗಳಲ್ಲಿ ಮಾತ್ರವಲ್ಲ, ಜಾನಪದ ಹಾಗೂ ಧಾರ್ಮಿಕ ಉಲ್ಲೇಖಗಳೂ ಇವೆ.
ಎಷ್ಟೋ ಬಾರಿ ಯಾವುದೇ ಧಾರ್ಮಿಕ ಹಿನ್ನೆಲೆ ಅಥವಾ ಸಾಂಸ್ಕೃತಿಕ ಹಿನ್ನೆಲೆಗಳನ್ನು ಜೊತೆಗೆ ಸಾಮಾಜಿಕ ಪ್ರಭಾವಗಳನ್ನು ಮೀರಿದ ವಂಶವಾಹಿನಿಗುಣಗಳು ಸ್ವಾಭಾವಿಕವಾಗಿ ಪೀಳಿಗೆಗಳಲ್ಲಿ ಮುಂದುವರಿದಿರುತ್ತದೆ. ಪೀಳಿಗೆಗಳನ್ನು ಕಾಪಾಡುವುದು ಎನ್ನುವುದರ ಜೊತೆಗೆ ಕೆಲವೊಮ್ಮೆ ನಿರ್ದಿಷ್ಟ ತಳಿಗಳನ್ನೂ ಕಾಪಾಡುವುದು ಎಂದೂ ಸೇರಿಸಿಕೊಳ್ಳಬಹುದು. ಪ್ರಾಣಿ ಮತ್ತು ಸಸ್ಯಗಳಲ್ಲಿ ಮಾತ್ರವಲ್ಲದೇ ಮನುಷ್ಯರಲ್ಲಿಯೂ ಕೂಡ ಅಂತಹ ತಳಿಯ ಸ್ವರೂಪಗಳನ್ನು ಸೂಕ್ಷ್ಮರೂಪದಲ್ಲಿ ಗಮನಿಸಬಹುದಾಗಿರುತ್ತದೆ. ಆದರೆ ಅವು ಮೊದಲೇ ತಿಳಿಸಿದಂತೆ ಬಹಳ ಸೂಕ್ಷ್ಮ ಸ್ವರೂಪದ್ದಾಗಿದ್ದು, ಇನ್ನುಳಿದಂತೆ ಎಲ್ಲಾ ಚಟುವಟಿಕೆಗಳು ಸಾಮಾನ್ಯವೇ ಆಗಿರುವುದರಿಂದ ಅಗತ್ಯ ವ್ಯವಹಾರಗಳ, ಧೋರಣೆಗಳ ಹಾಗೂ ಚಟುವಟಿಕೆಗಳ ರೂಪುಗೊಳ್ಳುವಿಕೆಯಲ್ಲಿ ಯಾವ ಯಾವ ಅಂಶಗಳು ಪ್ರಭಾವಿಸುತ್ತವೆ ಎಂಬುದನ್ನು ಗಮನಿಸಿಕೊಂಡು ಅದರ ಪ್ರಕಾರ ಶಿಕ್ಷಣವನ್ನೂ ಮತ್ತು ಸಾಮಾನ್ಯ ತಿಳುವಳಿಕೆಯನ್ನೂ ಕೊಡಬೇಕಾಗುತ್ತದೆ.
ಹೊರಗಿನ, ಅಂದರೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಾದೇಶಿಕತೆಗೆ ತಕ್ಕಂತ ಪ್ರಭಾವಗಳು ಏನೇ ಇದ್ದರೂ, ಸಾಂಘಿಕವಾಗಿ ಮತ್ತು ವ್ಯಾವಹಾರಿಕವಾಗಿ ತೋರುವ ವರ್ತನೆ ಮತ್ತು ಚಟುವಟಿಕೆಗಳ ಅಗತ್ಯಕ್ಕೆ ತಕ್ಕಂತೆ ಏನೇ ರೂಢಿಸಿಕೊಂಡಿದ್ದರೂ, ವಂಶವಾಹಿನಿಯ ಎಷ್ಟೋ ಗುಣ ಮತ್ತು ಅವಗುಣಗಳು ಸೂಕ್ಷ್ಮರೂಪದಲ್ಲಿ ಗುಪ್ತಗಾಮಿನಿಯಾಗಿರುತ್ತದೆ ಎಂದು ಹಲವರು ವಾದಿಸುತ್ತಾರೆ; ಅಂತೆಯೇ ಹಲವರು ಅಲ್ಲಗಳೆಯುತ್ತಾರೆ.
ಈ ವಿಷಯದಲ್ಲಿ ಸಮ್ಮತವಿರಲಿ, ವಿರೋಧವಿರಲಿ; ಸಾಧಾರಣವಾಗಿರುವಂತ ಕೋಪ, ಅಸೂಯೆ, ಸೇಡಿನ ಮನೋಭಾವ, ಅಸಹನೆ, ದ್ವೇಷ, ಅಸಹನೆಯನ್ನು ಪರೀಕ್ಷೆಗೆ ಒಳಪಡಿಸಿಕೊಳ್ಳದೇ ಮುಂದುವರಿಸುವುದು, ಪೈಪೋಟಿ, ಹಿಂಸೆ ಅಥವಾ ಕ್ರೌರ್ಯ ತುಂಬಿದ ಮನೋಭಾವ, ತಾನೇ ಗೆಲ್ಲಬೇಕೆಂಬ ಉನ್ಮಾದ; ಇಂತಹ ಹಲವು ಗುಣಗಳಿರುತ್ತವೆ. ಇವುಗಳನ್ನೇ ಸಾಹಿತ್ಯಕವಾಗಿ ಹೇಳುವಾಗ ಅವಗುಣಗಳೆಂದು ಹೇಳುತ್ತೇವೆ. ದಯೆ, ಕರುಣೆ, ಪ್ರೀತಿ, ಸಾಮೂಹಿಕ ಬಾಳ್ವೆ, ವಾತ್ಸಲ್ಯ, ಆದರ, ಔದಾರ್ಯದಂತಹ ಗುಣಗಳನ್ನು ಗುಣಗಳೆಂದು ಅಥವಾ ಸದ್ಗುಣಗಳೆಂದು ಹೇಳುತ್ತೇವೆ. ವಿಷಯವೇನೆಂದರೆ ನೈಸರ್ಗಿಕವಾಗಿ ಎಲ್ಲವೂ ಗುಣಗಳಷ್ಟೇ ಆಗುತ್ತದೆ. ಇನ್ನು ಸದ್ಗುಣ ಮತ್ತು ದುರ್ಗುಣಗಳೆಂದು ನಾವು ಯಾವ್ಯಾವುದನ್ನು ಕರೆಯುತ್ತೇವೆಯೋ ಅವು ಬರೀ ನಾಮ ಆರೋಪಿಸುವಂತಹದ್ದಾಗಿರುತ್ತದೆ. ಯಾವ್ಯಾವುದು ನಮ್ಮ ಸಾಮಾಜಿಕ ಜೀವನದಲ್ಲಿ ಸೌಹಾರ್ದ ರೂಪಿಸುವಂತಹುದ್ದೋ, ಆರೋಗ್ಯಕರವಾದಂತಹ ಸಾಮಾಜಿಕ ವಾತಾವರಣವನ್ನು ಕಟ್ಟಿಕೊಡುವುದೋ ಅಂತಹದ್ದನ್ನು ಗುರುತಿಸಿ ಪ್ರಶಂಸೆ ಮಾಡುತ್ತಾ ಅಭ್ಯಾಸ ಮಾಡಲು ಪ್ರೇರೇಪಿಸುತ್ತೇವೆ.
ಇದು ಸಾಮಾಜಿಕವಾಗಿ ನಮ್ಮಲ್ಲಿ ಒಪ್ಪಿತವಾಗಿರುವುದು. ಆದರೆ ನೈಸರ್ಗಿಕವಾಗಿ ಹಾಗೇನೂ ಇಲ್ಲ. ಹೊರಗೆ ಅದೆಷ್ಟೇ ಸಾಮಾಜಿಕ ಮತ್ತು ಕೌಟುಂಬಿಕ ವೌಲ್ಯಗಳ ಕುರಿತಾಗಿ ಪಾಠಗಳನ್ನು ಮಾಡುತ್ತಿದ್ದರೂ ಅಂತರ್ಗತವಾಗಿ ಸ್ವಾಭಾವಿಕವಾಗಿರುವಂತಹ ನಕಾರಾತ್ಮಕ (ನಾವು ಆರೋಪಿಸುವಂತೆ) ಗುಣಗಳು ಇದ್ದೇ ಇರುತ್ತವೆ. ಇವುಗಳನ್ನು ತಮ್ಮಲ್ಲಿಯೇ ಗುರುತಿಸಿಕೊಂಡು, ಆತ್ಮ ವಿಮರ್ಶೆ ಮಾಡಿಕೊಂಡು, ವೈಪರೀತ್ಯಗಳನ್ನು ತಹಬದಿಗೆ ತಂದುಕೊಂಡು ಎಲ್ಲರೊಡನೆ ಬಾಳುವಂತಹ ಅಗತ್ಯ ಇದೆ. ಹಾಗೆಯೇ ಆರೋಗ್ಯಕರ ವ್ಯಕ್ತಿತ್ವಕ್ಕೆ, ಕುಟುಂಬಕ್ಕೆ ಮತ್ತು ಸಮಾಜಕ್ಕೆ ಅಗತ್ಯವಿರುವಂತಹ ನಮ್ಮದೇ ಗುಣಗಳನ್ನು ಗುರುತಿಸಿಕೊಂಡು ಅವುಗಳನ್ನು ಪೋಷಿಸಿಕೊಂಡು, ಬಲಪಡಿಸಿಕೊಂಡು ಹಾಗೂ ತರಬೇತಿ ನೀಡುವಂತಹ ಅಗತ್ಯವೂ ಇದೆ. ಈ ಅಗತ್ಯಗಳಿಗೆ ಪೂರಕವಾಗಿಯೇ ಮಕ್ಕಳ ಸಾಹಿತ್ಯ ಬೇಕಾಗಿರುವುದು.
ಮಕ್ಕಳ ಸಾಹಿತ್ಯದಲ್ಲಿ ಕವಲುಗಳು
ಇನ್ನು ಮಕ್ಕಳ ಸಾಹಿತ್ಯ ಎಂದಕೂಡಲೆೀ ಹಲವು ಕವಲುಗಳು ಕಾಣುತ್ತವೆ.
1. ಮಕ್ಕಳ ಪಾಲನೆ ಪೋಷಣೆ ಮತ್ತು ಅವುಗಳನ್ನು ವೈಜ್ಞಾನಿಕವಾಗಿ (ಜೈವಿಕ ವಿಜ್ಞಾನ ಮತ್ತು ಮನೋ ವಿಜ್ಞಾನ) ಪ್ರಯೋಗಿಸುವುದರ ಕುರಿತಾದ ಕೈಪಿಡಿಗಳು.
2. ಮಕ್ಕಳನ್ನು ಶೈಕ್ಷಣಿಕವಾಗಿ ಮತ್ತು ವೈಚಾರಿಕವಾಗಿ ಬೆಳೆಸಲು ಬೇಕಾದ ತಿಳುವಳಿಕೆಗಳ ದಿಕ್ಸೂಚಿಗಳು.
3. ಮಕ್ಕಳ ಮನರಂಜಿಸಿ ಅವರು ಒತ್ತಡ ಮುಕ್ತರಾಗಿ ಬೆಳೆಯಲು ಅಗತ್ಯವಿರುವಂತಹ ರಚನೆಗಳು.
4. ಮಕ್ಕಳ ಕಲ್ಪನಾ ಶಕ್ತಿಯನ್ನು ಮತ್ತು ಸೃಜನಶೀಲತೆಯನ್ನು ಪುಷ್ಟೀಕರಿಸಲು ನೆರವಾಗುವಂತಹ ಸಾಹಿತ್ಯಗಳು.
5. ಮಕ್ಕಳ ಮಿದುಳಿಗೆ ಕಸರತ್ತು ಕೊಡುವ ಮೂಲಕ ಅವರನ್ನು ಚಟುವಟಿಕೆಯಿಂದ ಕೂಡಿರುವಂತೆ ನೋಡಿಕೊಳ್ಳಲು ಮತ್ತು ಚುರುಕಾಗಿರುವಂತೆ ನೋಡಿಕೊಳ್ಳಲು ಅಗತ್ಯವಿರುವಂತಹ ಸಾಹಿತ್ಯ ಸಾಮಗ್ರಿಗಳು.
6.ಮನುಷ್ಯ ಸಂಘಜೀವಿಯಾದ್ದರಿಂದ ಸಾಮೂಹಿಕವಾಗಿ ಬದುಕುವ ಬಗೆ ಮತ್ತು ಸಮಾಜಮುಖಿಯಾಗಿ ಸಹಬಾಳ್ವೆ ನಡೆಸುವುದಕ್ಕೆ ವ್ಯಕ್ತಿಗತವಾಗಿ ಮಾಡುವ ಕ್ರಿಯೆ ಮತ್ತು ನೀಡುವ ಪ್ರತಿಕ್ರಿಯೆಗಳ ಬಗ್ಗೆ ಪ್ರೇರಣೆ ಮತ್ತು ಎಚ್ಚರಿಕೆಗಳನ್ನು ನಿೀಡುವಂತಹ ರೂಪಕ ಬರಹಗಳು.
7.ಈ ಮೇಲಿನ ಆರು ಬಗೆಯ ಸಾಹಿತ್ಯಗಳು ಮಕ್ಕಳನ್ನು ನೋಡಿಕೊಳ್ಳುವ ಹಿರಿಯರಿಗಾದರೆ, ಇನ್ನು ಮಕ್ಕಳೇ ಓದುವಂತಹ ಸಾಹಿತ್ಯವೂ ಇದೆ. ಅವುಗಳ ಉದ್ದೇಶವೂ ಈ ಮೇಲಿನವುಗಳದ್ದೇ ಆಗಿದ್ದರೂ ಸಾಹಿತ್ಯದ ಭಾಷೆ ಮತ್ತು ನಿರೂಪಣೆಯಲ್ಲಿ ವ್ಯತ್ಯಾಸವಿರುತ್ತದೆ.
ಯಾರಿಗೆ ಯಾವ ಸಾಹಿತ್ಯ
1.ಮಕ್ಕಳಿಗೆ ಶಾಲೆಗೆ ಸೇರಿಸುವ ಸಂದರ್ಭದಲ್ಲಿ, ಅವರಿಗೆ ಪಠ್ಯ ಪುಸ್ತಕಗಳನ್ನು ಕೊಡಿಸುವಾಗ, ಯೂನಿಫಾರ್ಮ್ ಇತ್ಯಾದಿಗಳಿಗೆ ಅತ್ಯಧಿಕ ಹಣ ವ್ಯಯ ಮಾಡುವ ಎಷ್ಟೆಷ್ಟೋ ಪೋಷಕರಿಗೆ ಮಕ್ಕಳ ಕಲಿಕೆಯ ಬಗ್ಗೆ ತಾವು ತೆಗೆದು ಕೊಳ್ಳಬೇಕಾದ ಎಚ್ಚರಿಕೆ ಮತ್ತು ಅದಕ್ಕೆ ಬೇಕಾಗುವ ಮಾರ್ಗದರ್ಶನದ ಪುಸ್ತಕಗಳಿಗೆ ಸಣ್ಣ ಪ್ರಮಾಣದ ಹಣ ಹೂಡಲು ಹಿಂಜರಿಯುತ್ತಾರೆ.
ಅದು ತಮಗೆ ಬೇಕಾಗಿಯೇ ಇಲ್ಲ ಎಂಬ ಧೋರಣೆ ಅವರದು. ಕಲಿಸುವ ಕೆಲಸ ಶಾಲೆಯವರದು. ಇನ್ನು ತಮ್ಮ ಮಗು ಯಾವುದಾದರೂ ವಿಷಯದಲ್ಲಿ ಹಿಂದುಳಿದಿದ್ದರೆ ಅದಕ್ಕೆ ಬೇಕಾಗುವ ಖಾಸಗಿ ಮನೆಪಾಠಕ್ಕೆ ಅಥವಾ ವಿಶೇಷ ತರಗತಿಗಳಿಗೆ ಕಳುಹಿಸಲಾಗುವುದು, ಇನ್ನು ಕಲಿಸುವ ಬಗ್ಗೆ ತಾವು ಓದಿ ಮಾಡಬೇಕಾದದ್ದೇನು ಎಂಬ ಧೋರಣೆ ಮತ್ತು ಉಪೇಕ್ಷೆ. ಇದರಿಂದಾಗಿ ಮಕ್ಕಳ ಕಲಿಕೆಯ ವಿಷಯದಲ್ಲಿ ತಾವು ಸಹಕರಿಸಬಹುದಾದ ಸೂಕ್ಷ್ಮತೆಗಳನ್ನು ತಿಳಿದುಕೊಳ್ಳದೇ ಹೋಗುತ್ತಾರೆ.
2.ಮಕ್ಕಳ ಮನೋವಿಜ್ಞಾನ, ಅವರ ಸ್ವಭಾವಗಳ ಅಧ್ಯಯನ ಮತ್ತು ಅವರ ವಿವಿಧ ಬಗೆಯ ವರ್ತನೆಗಳಿಗೆ ಕಾರಣ; ಇವುಗಳನ್ನು ತಿಳಿಸುವಂತಹ ಪುಸ್ತಕಗಳನ್ನು ಕೂಡ ಪೋಷಕರು ಬಹುಪಾಲು ಕೊಳ್ಳುವುದೇ ಇಲ್ಲ. ಹೇಳಿದ ಮಾತು ಕೇಳಿಕೊಂಡಿದ್ದರೆ ಪುರಸ್ಕಾರ, ಹಟ ಹಿಡಿದರೆ ಬಹಿಷ್ಕಾರ, ಇನ್ನು ಚಂಡಿ ಹಿಡಿದರೆ ದಂಡಂ ದಶಗುಣಂ ಭವೇತ್, ಅಷ್ಟೇ. ಗದರುವುದು, ಬೈಯುವುದು, ಮಿತಿ ಮೀರಿದರೆ ಒಂದು ಬೆತ್ತ ತೆಗೆದುಕೊಂಡು ಬಾರಿಸಿದರೆ ಸರಿ ಹೋಗುತ್ತಾರೆ ಎನ್ನುವಂತಹ ಮನೋಭಾವ. ಆದರೆ ಇವುಗಳಿಂದ ಯಾವ ಪರಿಣಾಮಗಳನ್ನು ಮುಂದೆ ಎದುರಿಸಬೇಕಾಗಬಹುದು ಎಂಬಂತಹ ದೂರದೃಷ್ಟಿಯೂ ಇಲ್ಲದೇ ತಾವು ತಮ್ಮ ಮನೋಧೆರಣೆಗೆ ತಕ್ಕಂತೆ ವರ್ತಿಸುತ್ತಾರೆ.
3.ಮಕ್ಕಳನ್ನು ಬೆಳೆಸುವ ಮತ್ತು ಪಾಲನೆ ಪೋಷಣೆ ಮಾಡುವ ರೀತಿಗಳನ್ನು ವಿವರಿಸುವಂತಹ ಕೈಪಿಡಿಗಳು ಲಭ್ಯವಿವೆ ಎಂಬ ಅರಿವೂ ಇಲ್ಲದಂತಹ ಪೋಷಕರ ಬಹುದೊಡ್ಡ ಸಮೂಹವಿದ್ದರೆ, ಅರಿವಿದ್ದರೂ ಅದನ್ನು ಕೊಳ್ಳುವಲ್ಲಿ ಉದಾಸೀನ ತೋರುವ ಮಂದಿಯೂ ಬಹಳಷ್ಟಿದ್ದಾರೆ. ನಮ್ಮಪ್ಪ ಅಮ್ಮ ಎಲ್ಲಾ ಪುಸ್ತಕ ಓದಿಕೊಂಡೇ ಬೆಳೆಸಿದರಾ? ಮಗುವಿಗೆ ಏನಾದರೂ ದೈಹಿಕವಾಗಿ ಸಮಸ್ಯೆ ಬಂದರೆ ಡಾಕ್ಟರ್ ಹತ್ತಿರ ಹೋದರಾಯಿತು; ಇಂತಹ ಮನೋಧರ್ಮದಿಂದಲೂ ಕೂಡ ಕೈಪಿಡಿಳು ಪೋಷಕರ ಕೈ ಸೇರುತ್ತಿಲ್ಲ.
4.ಮಕ್ಕಳ ಮನರಂಜಿಸಲು ತಾವು ಕಥೆ ಹೇಳುವ ಅಥವಾ ಓದುವ ಒಂದು ಅದ್ಭುತವಾದ ಅನುಭವವನ್ನು ಬಹಳಷ್ಟು ಪೋಷಕರು ಕಳೆದುಕೊಂಡುಬಿಟ್ಟಿದ್ದಾರೆ. ಮಗುವಿಗೆ ಒಂದು ಕಾರ್ಟೂನ್ ಶೋ ಹಾಕಿ ತೋರಿಸಿದರೆ ತೀರಿತು ಅಥವಾ ಟಿವಿಯ ಯಾವುದಾದರೂ ಮಕ್ಕಳಿಗೆ ಸೀಮಿತವಾಗಿರುವ ವಾಹಿನಿಗಳನ್ನು ಹಾಕಿಟ್ಟುಬಿಟ್ಟರೆ ಮಕ್ಕಳು ಗಂಟೆಗಟ್ಟಲೆ ಅರ್ಥವಾಗದೇ ಇದ್ದರೂ ಬಣ್ಣ ಬಣ್ಣದ ಚಲಿಸುವ ಚಿತ್ರಗಳನ್ನು ನೋಡಿಕೊಂಡು ಕುಳಿತುಕೊಂಡುಬಿಡುತ್ತಾರೆ. ಆದರೆ ಕಥೆಗಳ ಪಾತ್ರಗಳು ಮತ್ತು ಸನ್ನಿವೇಶಗಳೊಂದಿಗೆ ತಮ್ಮನ್ನು ಸಂಪರ್ಕಿಸಿಕೊಳ್ಳಲು ಅಂದರೆ ಕನೆಕ್ಟಿವಿಟಿ ಸಾಧಿಸಲು ಅವರಿಗೆ ತಿಳಿಯುವುದಿಲ್ಲ. ರೆಕಾರ್ಡೆಡ್ ಕಥೆಗಳು ವಿಸ್ತಾರವಾಗುವುದಿಲ್ಲ. ಆದರೆ ಅದೇ ಕಥೆಯನ್ನು ಮಕ್ಕಳಿಗೆ ಓದಿ ಹೇಳುವಾಗ ಸಾಂದರ್ಭಿಕವಾಗಿ ಕಥೆಯ ವಿಷಯವನ್ನು ಪ್ರಸ್ತುತ ವಿಷಯಕ್ಕೆ ಸಮೀಕರಿಸುವುದು, ಕಥೆಗಳಲ್ಲಿರುವ ಸಂಗತಿಗಳನ್ನು ತಿಳಿದಿರುವ ಸಂಗತಿಯ ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳುವುದು, ಒಂದು ಪಾತ್ರವನ್ನು ಪ್ರಶಂಸಿಸುವುದು, ಒಂದು ಗುಣವನ್ನು ಸ್ವೀಕರಿಸುವುದು, ಅಥವಾ ತಿರಸ್ಕರಿಸುವುದು ಎಲ್ಲವೂ ಅಲ್ಲಿರುತ್ತದೆ.
ಶಾಶ್ವತ ಮತ್ತು ಬದಲಾಯಿಸಲಾಗದ ದಾಖಲೆ ಅಂದರೆ ರೆಕಾರ್ಡೆಡ್ ಕಥೆಗಳನ್ನು ಚಲಿಸುವ ಚಿತ್ರರೂಪಗಳಲ್ಲಿ ನೋಡುವಾಗ ತಮಗೆ ಆಕರ್ಷಕವಾಗಿರುವುದನ್ನು ಪ್ರಶಂಸೆ ಮಾಡುವ ಮಟ್ಟಿಗೆ ಮಕ್ಕಳಿರುತ್ತಾರೆ. ಇದರಿಂದ ಮುಂದಾಗುವ ಮಹಾ ಅಪಾಯವೆಂದರೆ ಯಾವುದೇ ನಕಾರಾತ್ಮಕ, ಅನಾರೋಗ್ಯಕರ ಮತ್ತು ಅನಗತ್ಯವಾದಂತಹ ವಿಷಯಗಳನ್ನು ವಿಜೃಂಭಿಸಿ ಹೇಳುವಾಗ ಅಥವಾ ತೋರುವಾಗ ಅವರು ಅದನ್ನೇ ೆುಚ್ಚುತ್ತಾರೆ ಮತ್ತು ಒಪ್ಪುತ್ತಾರೆ.
ಈಗಿನ ಬಹುಪಾಲು ಸಿದ್ಧಸೂತ್ರದ ಸಿನೆಮಾಗಳ ಗತಿ ಇದೇ ಆಗಿದೆ. ಪ್ರೇಕ್ಷಕರ ಬಹು ದೊಡ್ಡ ವರ್ಗದ ಅನಾರೋಗ್ಯಕರ ಆಯ್ಕೆಯ ಪರಿಸ್ಥಿತಿ ಇದಾಗಿದೆ. ಇದು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿರುವಂತಹ ಸಮಸ್ಯೆಗಳನ್ನು ಉಂಟು ಮಾಡುವುದಷ್ಟೇ ಅಲ್ಲದೇ ವ್ಯಕ್ತಿಗತ ವಾಗಿಯೂ ಕೂಡ ಮಾನಸಿಕ ಮತ್ತು ಮನೋದೈಹಿಕ ಸಮಸ್ಯೆ ಗಳಿಗೂ ಕಾರಣವಾಗುತ್ತದೆ. ಭಾವನಾತ್ಮಕ ಸಂಘರ್ಷಗಳಿಗೂ ಕಾರಣವಾಗುತ್ತದೆ.
ಮಕ್ಕಳ ಸಾಹಿತ್ಯದ ತುರ್ತಿನ ಅಗತ್ಯ
ಯಾವುದೇ ದೇಶದಲ್ಲಿ ಆರ್ಥಿಕ ಸಮಸ್ಯೆ ಉಂಟಾದಾಗ, ದಂಗೆಯಂತಹ ಆಂತರಿಕ ತಲ್ಲಣಗಳು ಉಂಟಾದಾಗ, ಜನಾಂಗೀಯ ಘರ್ಷಣೆಗಳು ನಡೆದಾಗ, ಯುದ್ಧ ಮತ್ತು ದಾಳಿಗಳಂತಹ ಸಂದರ್ಭಗಳು ಉಂಟಾದಾಗ ಅಸಹಾಯಕ ಬಲಿಪಶುಗಳು ಆಗುವ ರೆಂದರೆ, ಅದು ಮಕ್ಕಳೇ. ಆದರೆ ಆ ಮಕ್ಕಳಿಗೆ ತತ್ಕಾಲದ ಆಶ್ರಯ ಕೊಡುವ ಮೂಲಕ, ಊಟ, ಔಷಧಿ ಇತ್ಯಾದಿ ಉಪಚಾರಗಳನ್ನು ಕೊಡುವ ಮೂಲಕ, ಹೆತ್ತವರನ್ನು, ಮನೆಯವರನ್ನು ಕಳೆದುಕೊಂಡಿದ್ದರೆ ಅವರನ್ನು ದತ್ತು ತೆಗೆದುಕೊಳ್ಳುವ ಮೂಲಕ ತೋರುವ ಕಾಳಜಿ ನಿಜಕ್ಕೂ ಶ್ಲಾಘನೀಯವೇ. ಆದರೆ, ಇಂತಹ ವಿದ್ಯಮಾನಗಳು ನಡೆಯದಂತೆ ನೋಡಿಕೊಳ್ಳಲು ಅಗತ್ಯವಿರುವ ಅರಿವು, ಶಿಕ್ಷಣ ಮತ್ತು ತರಬೇತಿಗಳನ್ನು ನೀಡುವಂತಹ ಸಾಹಿತ್ಯಗಳು ಮತ್ತು ಚಟುವಟಿಕೆಗಳು ಮಾತ್ರ ಇಲ್ಲವಾಗಿರುವುದು ಶೋಚನೀಯ.
ಒಂದು ಗಿಡದ ಬುಡಕ್ಕೆ ಬೇಕಾದ ಪೋಷಣೆ, ಉಪಚಾರ ಮತ್ತು ಸವಲತ್ತುಗಳನ್ನು ನೀಡದೇ ಗಿಡದ ಬಾಡುವ ಎಲೆ, ಹೂವು, ಕಾಯಿಗಳಿಗೆ ಉಪಚರಿಸಲು, ಅವುಗಳನ್ನು ನಾಶವಾಗದಂತೆ ತಡೆಯಲು ಹೋಗುವಂತಾಗುತ್ತದೆ.
ನಾನು ಪುಸ್ತಕ ಮಾರಾಟಗಾರನಾಗಿ ಕುಳಿತಿರುವಂತಹ ಸಂದರ್ಭಗಳಲ್ಲಿ ಮಕ್ಕಳೊಂದಿಗೆ ಬರುವ ಪೋಷಕರನ್ನೇ ಗಮನಿಸುತ್ತೇನೆ. ಮೊದಲಿಗೆ ಅವರಿಗೆ ಪುಸ್ತಕ ಕೊಳ್ಳುವ ಆಸಕ್ತಿ ಇರುವುದೇ ಕಡಿಮೆ. ಇದ್ದವರು ಬಹುಪಾಲು ಆಯ್ದು ಕೊಳ್ಳುವುದು ಬೇರೆಯೇ ಬಗೆಯ ರೋಚಕತೆಯ ಸಾಹಿತ್ಯಗಳನ್ನು. ಪುಸ್ತಕಗಳನ್ನು ಕೊಂಡ ಮಾತ್ರಕ್ಕೆ, ಕೊಂಡು ಓದಿದ ಮಾತ್ರಕ್ಕೆ ಬದಲಾವಣೆ ಮತ್ತು ಒಳನೋಟಗಳು ದೊರಕಿದವು ಎಂದೇನಲ್ಲ ನಿಜ. ಆದರೆ ಒಂದು ಪ್ರಾರಂಭಿಕ ಹಂತಕ್ಕೂ ತೊಡಗದ ಪೋಷಕರ ನಡವಳಿಕೆ ಮಾತ್ರ ಪ್ರಶ್ನಾರ್ಹ.