ಟ್ರಾಜಿಡಿ-ಗ್ರೀಕ್ ನಾಟಕಗಳ ಹಿನ್ನೆಲೆಯಲ್ಲಿ

Update: 2017-04-29 05:02 GMT

ವಿಧಿಯ ಮುಂದೆ ಮನುಷ್ಯನ ಅಸಹಾಯಕತೆಯನ್ನು ಎತ್ತಿ ಹಿಡಿಯುವ ಗ್ರೀಕ್ ನಾಟಕಗಳು ವಿಶ್ವದೆಲ್ಲೆಡೆ ಬೇರೆ ಬೇರೆ ಭಾಷೆಗಳು ತನ್ನ ನೆಲದ ದುರಂತಗಳ ಜೊತೆಗೆ ಸಮೀಕರಿಸಲು ಪ್ರಯತ್ನಿಸಿವೆ. ಸೋಪೋಕ್ಲಿಸ್‌ನ ‘ದುರಂತ’ ನಾಟಕಗಳ ಪಾತ್ರಗಳನ್ನು ಕನ್ನಡಕ್ಕೂ ತರುವ ಪ್ರಯತ್ನ ನಡೆದಿದೆ. ಸೋಪೊಕ್ಲಿಸ್‌ನ ಅಯಾಸ್ ಪಾತ್ರವನ್ನು ಮಹಾಭಾರತದ ಅಶ್ವತ್ಥಾಮನಿಗೆ ಜೋಡಿಸುವ ಪ್ರಯತ್ನವನ್ನು ಬಿಎಂಶ್ರೀ ಮಾಡಿದರು. ಭಾರತದ ಕಾವ್ಯವೂ ದುರಂತ ರೂಪಕಗಳಿಗೆ ಖ್ಯಾತವಾಗಿದೆ. ಆದರೂ ‘ಟ್ರಾಜಿಡಿ’ಯ ಪರಿಕಲ್ಪನೆಗೆ ನಮಗೆ ಪಾಶ್ಚಾತ್ಯ ಸಾಹಿತ್ಯವೇ ಮೂಲವಾಗಿದೆ. ಗ್ರೀಕ್ ನಾಟಕಗಳು ಕನ್ನಡದಲ್ಲಿ ಬಂದ ಬಳಿಕ, ಇಲ್ಲೂ ದುರಂತ ನಾಟಕಗಳ ಬಗ್ಗೆ ಆಸಕ್ತಿಯನ್ನು ತಾಳಲಾಯಿತು. ಕುವೆಂಪು ಭಾಷಾ ಭಾರತಿ ಪ್ರಾಕಾರ ಹೊರತಂದಿರುವ, ವಿಜಯಾ ಗುತ್ತಲ ಅವರ ಸಂಶೋಧನಾತ್ಮಕ ಕೃತಿ ‘ಟ್ರಾಜಿಡಿ’ ವಿವಿಧ ನೆಲೆಗಳಲ್ಲಿ ಆ ಪರಿಕಲ್ಪನೆ ಯನ್ನು ನೋಡುವ ಪ್ರಯತ್ನವನ್ನು ಮಾಡುತ್ತದೆ. ಟ್ರಾಜಿಡಿಯ ಕುರಿತಂತೆ ವಿವಿಧ ಚಿಂತಕರು, ಬರಹಗಾರರು ನೀಡಿರುವ ವ್ಯಾಖ್ಯೆಗಳು ಮತ್ತು ಕೊಟ್ಟಿರುವ ಟಿಪ್ಪಣಿಗಳನ್ನು ಆರಂಭದಲ್ಲಿ ಲೇಖಕರು ದಾಖಲಿಸುತ್ತಾರೆ. ದುರಂತ ನಾಟಕಗಳ ರಸಾಸ್ವಾದದ ಬಗ್ಗೆ ವಿವಿಧ ವಿಮರ್ಶಕರು ಈ ಕೃತಿಯಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ.

ಟ್ರಾಜಿಡಿ ಪರಿಕಲ್ಪನೆ ಗ್ರೀಸ್‌ನಲ್ಲಿ ಹುಟ್ಟಿತಾದರೂ, ಆ ಪದದ ಹಿಂದಿರುವ ವಿಸ್ತಾರಗಳನ್ನು ಎರಡನೆ ಅಧ್ಯಾಯದಲ್ಲಿ ಚರ್ಚಿಸುತ್ತಾರೆ. ಅವುಗಳ ಜೊತೆಯಲ್ಲೇ ಗ್ರೀಕ್ ರಂಗ ಭೂಮಿಯ ವಿಕಾಸವನ್ನೂ ಉಲ್ಲೇಖಿಸುತ್ತಾರೆ. ಮೂರನೆ ಅಧ್ಯಾಯದಲ್ಲಿ ಅರಿಸ್ಟಾಟಲ್‌ನಿಂದ ಹಿಡಿದು ನೀಟ್ಶೆಯ ವರೆಗೂ ಹೇಗೆ ಟ್ರಾಜಿಡಿ ಬೇರೆ ಬೇರೆ ಲೇಖಕರು, ಚಿಂತಕರಿಂದ ಗ್ರಹಿಸಲ್ಪಟ್ಟಿದೆ ಎನ್ನುವುದನ್ನು ದಾಖಲಿಸುತ್ತಾರೆ. ಹಾಗೆಯೇ ಕನ್ನಡದಲ್ಲಿ ಟ್ರಾಜಿಡಿ ಕುರಿತ ವಾಗ್ವಾದಗಳನ್ನೂ ಕೃತಿಯ ಕೊನೆಯಲ್ಲಿ ಚರ್ಚಿಸುತ್ತಾರೆ. ಅಧ್ಯಯನಕಾರರು ಬಳಸುವ ಪಾರಿಭಾಷಿಕ ಪದಗಳ ವ್ಯಾಪ್ತಿಯನ್ನು ವಿವರಿಸುವ ಉದ್ದೇಶದಿಂದ ಪ್ರಾಕಾರ ಈ ಕೃತಿಯನ್ನು ಹೊರತಂದಿದೆ. 112 ಪುಟಗಳ ಈ ಕೃತಿಯ ಮುಖಬೆಲೆ 75 ರೂ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News