ಮಾರ್ಕ್ಸ್ ಅಂಬೇಡ್ಕರ್ ನಡುವಿನ ಕೊಂಡಿ-ಸಾಠೆ

Update: 2017-04-29 18:44 GMT

ದುಡಿಯುವ ವರ್ಗದಿಂದ ಸಿಡಿದ ಕಿಡಿ ಅಣ್ಣಾ ಭಾವೂ ಸಾಠೆ. ಮಹಾರಾಷ್ಟ್ರದ ವಾಟೇಗಾಂವ ಎಂಬ ಹಳ್ಳಿಯಲ್ಲಿ ಮಾದಿಗ ಜನಾಂಗದಲ್ಲಿ ಜನಿಸಿ, ಬಡತನ, ಜಾತಿನಿಂದನೆಯ ಧಗೆಯಲ್ಲಿ ಬೆಂದು ಮೇಲೆದ್ದು ಬಂದವರು. ಬಾಲ್ಯದಲ್ಲೇ ಮುಂಬೈನ ಜೋಪಡಪಟ್ಟಿ ಸೇರಿದ ಅಣ್ಣಾಭಾವೂ ಸಾಠೆ, ಆ ಬೀದಿಯ ಧೂಳಿನಿಂದಲೇ ಸಾಹಿತಿಯಾಗಿ, ಕಲಾವಿದನಾಗಿ ಹೋರಾಟಗಾರನಾಗಿ ರೂಪುಗೊಂಡರು. ಇಂದು ಅಣ್ಣಾಭಾವೂ ಸಾಠೆಯವರ ಸಾಹಿತ್ಯಕೃತಿಗಳ ಕುರಿತು ವಿಶೇಷ ಅಧ್ಯಯನಗಳು ನಡೆಯುತ್ತಿವೆ. ಅವರ ಹೆಸರೇ ಚಿಂತನೆಗೆ, ಹೋರಾಟಗಳಿಗೆ ಸ್ಫೂರ್ತಿಯಾಗಿವೆ. ಅಣ್ಣಾಭಾವೂ ಸಾಠೆಯ ಹೆಸರಲ್ಲಿ ಸಾಹಿತ್ಯ ಸಮ್ಮೇಳನಗಳು ಜರಗುತ್ತಿವೆ. ಇಂತಹ ಏಳು ಸಮ್ಮೇಳನಗಳು ಮಹಾರಾಷ್ಟ್ರದಲ್ಲಿ ನಡೆದು ಎಂಟನೆ ಸಾಹಿತ್ಯ ಸಮ್ಮೇಳನ ಕಲಬುರಗಿಯಲ್ಲಿ ಜರಗಿತು. ಈ ಸಂದರ್ಭದಲ್ಲಿ ವಿವಿಧ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಗಳನ್ನು ಉತ್ತಮ ಕಾಂಬಳೆ ಸಂಗ್ರಹಿಸಿ ಸಂಪಾದಿಸಿದ್ದಾರೆ. ಚಂದ್ರಕಾಂತ ಪೋಕಳೆ ಅವರು ಅವುಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯ ಹೆಸರೇ ‘ಆಘಾತ ಹಾಕಿ ಜಗವ ಬದಲಾಯಿಸಿ’. ಇದು ಅಂಬೇಡ್ಕರ್ ಚಿಂತನೆಯ ಆಶಯವಾಗಿದೆ. ಕೃತಿಯ ಆರಂಭದಲ್ಲಿ ‘ಸಂಪಾದಕೀಯ’ದ ಮೂಲಕ ಅಣ್ಣಾಭಾವೂ ಸಾಠೆ ಅವರ ಬದುಕು, ಚಿಂತನೆ ಮತ್ತು ಅವರ ಹೆಸರಲ್ಲಿ ಸಾಹಿತ್ಯ ಸಮ್ಮೇಳನಗಳು ರೂಪುಗೊಂಡ ಬಗೆಯನ್ನು ವಿವರಿಸಲಾಗಿದೆ. ಈ ಸಮ್ಮೇಳನಗಳ ಹಿಂದಿನ ಶಕ್ತಿಯಾಗಿರುವ ದಿ. ಗೋವಿಂದ ಪನ್ಸಾರೆ ಅವರನ್ನೂ ನೆನೆಯಲಾಗಿದೆ. ಅರ್ಜುನ ಡಾಂಗಳೆ, ರಾಜನ್ ಗವಸ, ದೀನನಾಥ ಮನೋಹರ, ಏಕನಾಥ ಆವ್ಹಾಡ, ಡಾ. ರಾವ ಸಾಹೇಬ ಕಸಬೆ, ಸತೀಶ ಕಾಳಸೇಕರ, ಉತ್ತಮ ಕಾಂಬಳೆಯವರು ವಿವಿಧ ಸಮ್ಮೇಳನಾಧ್ಯಕ್ಷರಾಗಿ ಮಾಡಿದ ಭಾಷಣಗಳನ್ನು ಇಲ್ಲಿ ನೀಡಲಾಗಿದೆ. ಸಾಠೆಯವರ ಚಿಂತನೆಯಿಂದಲೇ ಟಿಸಿಲೊಡೆದು ಬಂದ ಸಮ್ಮೇಳನಾಧ್ಯಕ್ಷರ ಭಾಷಣಗಳು ಜಾತಿ ಮತ್ತು ವರ್ಗ ಎರಡರ ಕುರಿತಂತೆಯೂ ಬಂಡಾಯದ ಮಾತುಗಳನ್ನು ಆಡುತ್ತವೆ. ‘ಆಘಾತ ಹಾಕಿ ಜಗವ ಬದಲಾಯಿಸಿ’ ಎನ್ನುವ ಅಂಬೇಡ್ಕರ್‌ರ ಆಶಯವನ್ನು ಜೊತೆಗಿಟ್ಟುಕೊಂಡ ಸಾಠೆ ಒಂದು ಬಗಲಲ್ಲಿ ಮಾರ್ಕ್ಸ್ ಇನ್ನೊಂದು ಬಗಲಲ್ಲಿ ಅಂಬೇಡ್ಕರ್‌ರನ್ನು ಜೊತೆಯಾಗಿಸಿಕೊಂಡವರು. ಇಲ್ಲಿರುವ ಎಲ್ಲ ಭಾಷಣಗಳೂ ಸಾಠೆಯವರ ಚಿಂತನೆಯ ಮುಂದುವರಿದ ಭಾಗವೇ ಆಗಿದೆ. 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News