ಮಿತ್ರ ಭಾಷೆಯ- ಮಿತ್ರ ದೇಶದ ಕವಿತೆಗಳು
ಡಾ. ಪಂಚಾಕ್ಷರಿ ಹಿರೇಮಠ ಅವರು ಅನುವಾದಿಸಿರುವ ಸಮಗ್ರ ಕಾವ್ಯದ ಎರಡನೆ ಸಂಪುಟಏಳು ಕವಿತಾ ಸಂಗ್ರಹಗಳನ್ನೊಳಗೊಂಡಿರುವ ಬೃಹತ್ ಕೃತಿ. ಹಿಂದಿಯ ಕವಿ ಆಚಾರ್ಯ ರೂಪಚಂದ್ರ ನೂರೊಂದು ಮುಕ್ತಕಗಳು ‘ಬಯಲ ಬಾನಿನಲ್ಲಿ’, ಅವರದೇ ಐವತ್ತೈದು ಕವಿತೆಗಳನ್ನೊಳಗೊಂಡ ‘ಭೂಮಾ’, ಹಿಂದಿ ಕವಯಿತ್ರಿ ಸಾಧ್ವೀ ಜತನಕುಮಾರಿ ಅವರ ಅರವತ್ತು ಕವಿತೆಗಳ ಸಂಗ್ರಹ, ಸೋವಿಯತ್ ದೇಶದ ಏಳು ಭಾಷೆಗಳ ಇಪತ್ತೈದು ಕವಿತೆಗಳು, ಸಾಧ್ವೀ ಜತನಕುಮಾರಿ ಅವರ ನೂರಾ ಎರಡು ಮುಕ್ತಕಗಳು, ಆಚಾರ್ಯ ರೂಪಚಂದ್ರ ಅವರ ‘ಇಂಧ್ರ ಧನುಸ್ಸು’ ನೂರಾ ಎರಡು ಮುಕ್ತಕಗಳು, ರವೀಂದ್ರ ನಾಥ ಟಾಗೋರರ ನಲವತ್ತೈದು ಕವಿತೆಗಳು ‘ಮಾನಸಿ’ಯನ್ನು ಲೇಖಕರು ಕನ್ನಡಕ್ಕಿಳಿಸಿದ್ದಾರೆ. ಮುಕ್ತಕಗಳನ್ನು ಅನುವಾದಿಸುವ ಸಂದರ್ಭದಲ್ಲಿ ಗದ್ಯ-ಲಯಗಳ ನಡುವೆ ಸಮನ್ವಯತೆಯನ್ನು ಕಾಪಾಡುವಲ್ಲಿ ಹಿರೇಮಠ ಯಶಸ್ವಿಯಾಗಿದ್ದಾರೆ.
ಡಾ. ಪಂಚಾಕ್ಷರಿ ಹಿರೇಮಠರು ರವೀಂದ್ರ ನಾಥ ಟಾಗೋರರ ಬೇರೆ ಬೇರೆ ಕಾವ್ಯಸಂಗ್ರಹಗಳಿಂದ ಆಯ್ದುಕೊಂಡು ಅನುವಾದಿಸಿದ್ದಾರೆ. ‘ಬರಲಿ ವಿಶ್ವದ ಬದುಕು ಹೃದಯಕೆ; ಅರಿವಿನ ಗವಾಕ್ಷಕೆ’ ಎಂಬ ಅಸೀಮ ಅಭೀಪ್ಸೆಯ ಟಾಗೋರರ ಕವಿತೆಗಳನ್ನು ಆವಾಹಿಸಿ, ಕನ್ನಡಕ್ಕಿಳಿಸುವ ಪಂಚಾಕ್ಷರಿ ಅವರ ಪ್ರಯತ್ನ ಭಾಗಶಃ ಯಶಸ್ವಿಯಾಗಿವೆ. ಈ ಕೃತಿಯಲ್ಲಿರುವ ಎಲ್ಲ ಕವಿತೆಗಳೂ ನವೋದಯದ ಭಾವೋತ್ಕರ್ಷವನ್ನು ತನ್ನದಾಗಿಸಿಕೊಂಡಿರುವಂತಹದು. ಇಂತಹದೇ ಭಾವೋನ್ಮಾದದಲ್ಲಿ ಪಂಚಾಕ್ಷರಿಯವರೂ ಅಲ್ಲಲ್ಲಿ ಕೊಚ್ಚಿ ಹೋಗುವುದು ಅನುವಾದದ ದೊಡ್ಡ ತೊಡಕೂ ಆಗಿದೆ. ಕುವೆಂಪು ಭಾಷಾ ಭಾರತಿ ಪ್ರಾಥಿಕಾರ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 254.ರೂ.