ಭೂತ-ವರ್ತಮಾನಗಳ ನಡುವಿನ ತೊಯ್ದಟ- ಪಾಟಕ್

Update: 2017-05-02 18:57 GMT

ಮುಂಬೈ ಕನ್ನದ ಸಾಂಸ್ಕೃತಿಕ ಲೋಕದಲ್ಲಿ ಸಾ. ದಯಾ ಅಥವಾ ದಯಾನಂದ ಸಾಲಿಯಾನ್ ತಮ್ಮದೇ ಆದ ಕಾಲುದಾರಿಯೊಂದನ್ನು ಆರಿಸಿಕೊಂಡು, ಯಾವ ಗದ್ದಲವೂ ಇಲ್ಲದೆ ಸಾಹಿತ್ಯಕ, ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಮುಂಬೈಯ ರಂಗ ಭೂಮಿಯ ಬಹುತೇಕ ಜನಪ್ರಿಯ ನಿರ್ದೇಶಕರು ಸಿದ್ಧಮಾದರಿಯನ್ನೇ ಬಳಸಿಕೊಂಡು ಹೆಸರು ಪಡೆಯುತ್ತಿರುವಾಗ, ದಯಾ ಮುಂಬೈಯ ರಾತ್ರಿ ಶಾಲೆಯ ಹುಡುಗರನ್ನು ಜೊತೆ ಸೇರಿಸಿ, ಅನುಭವಿ ಗಳನ್ನು ದುಡಿಸಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದವರು. ತಮ್ಮದೇ ಒಂದು ಯುವ ಬಳಗವನ್ನು ಕಟ್ಟಿಕೊಂಡು ರಂಗಭೂಮಿ, ಸಾಹಿತ್ಯ ಲೋಕದಲ್ಲಿ ಸದಾ ಚಟುವಟಿಕೆಯಲ್ಲಿ ಇರುವವರು. ತುಳು ಮತ್ತು ಕನ್ನಡ ಎರಡರ ನಡುವಿನ ಕೊಂಡಿಯಾಗಿರುವವರು. ಜಾತ್ರೆಯ ಮರು ದಿನ, ಮಳೆ ಹನಿ ಮುತ್ತು ಕವನ ಸಂಕಲನದ ಮೂಲಕ ಗುರುತಿಸಿಕೊಂಡಿರುವ ಸಾ. ದಯಾ ಇದೀಗ ತಮ್ಮ ಚೊಚ್ಚಲ ಕತಾ ಂಕಲನ ‘ಪಾಟಕ್’ ಹೊರತಂದಿದ್ದಾರೆ.
ಜನ್ಮಭೂಮಿ-ಕರ್ಮಭೂಮಿಗಳ ನಡು ವಿನ, ಭೂತ-ವರ್ತಮಾನಗಳ ನಡುವಿನ ತೊಯ್ದಟಗಳಲ್ಲಿ ಒಡಮೂಡಿರುವ ಇಲ್ಲಿರುವ ಎಲ್ಲ ಕತೆಗಳ ಪಾತ್ರಗಳೂ ಸಾ.ದಯಾ ಅವರು ರಚಿಸಿ ನಿರ್ದೇಶಿಸಿರುವ ಹಲವು ನಾಟಕಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತಲೆ ತೂರಿಸಿಕೊಂಡವುಗಳೇ ಆಗಿವೆ. ಸುಮಾರು ಒಂಬತ್ತು ಕತೆಗಳನ್ನು ಒಳ ಗೊಂಡಿರುವ ‘ಪಾಟಕ್’ ಹೆಸರೇ ವಿಶಿಷ್ಟವಾದುದು. ಇಲ್ಲಿರುವ ಕತೆಗಳಲ್ಲಿ ಬರುವ ಮರಾಠಿ, ಹಿಂದಿ, ತುಳು ಪದಗಳು ಬರೀ ಭಾಷೆಯಾಗಿಯಷ್ಟೇ ಅಲ್ಲ ಬದುಕಾಗಿಯೂ ನಮ್ಮನ್ನು ಸುತ್ತಿಕೊಳ್ಳುತ್ತದೆ. ಈ ಮೂರೂ ಸಂಸ್ಕೃತಿಗಳು ಕತೆಗಾರನನ್ನು ಕಾಡಿರುವ ರೀತಿ, ಪ್ರತೀ ಪಾತ್ರಗಳ ನಮ್ಮನ್ನು ತಟ್ಟುತ್ತವೆ. ವರ್ತಮಾನದಲ್ಲಿ ಪಾಲಿಸುವ ಸಂಯಮದ ಮೂಲಕ ಭೂತವನ್ನು ಎದುರಿಸುತ್ತಾ ಭವಿಷ್ಯದ ನಿರೀಕ್ಷೆಯಲ್ಲಿರುವ ಸುಮಾ ‘ಪಾಟಕ್’ ಕತೆಯ ನಾಯಕಿ. ‘ನನ್ನ ರಕ್ತಕ್ಕೆ ಕೆಂಪು ಬಣ್ಣ ಕೊಡಿ’ ಕತೆಯಲ್ಲಿ ವಸುಂಧರನಾಗಿ ಬದಲಾಗುವ ವಾಸು, ತನ್ನ ಹಳೆಯ ನೆನಪುಗಳ ಜೊತೆಗೆ ನಡೆಸುವ ಸಂಘರ್ಷಗಳು, ‘ಹಾವು ಮತ್ತು ವಿಜೂ ಎಂಬ ಹುಡುಗ’ ಕತೆಯಲ್ಲಿ ಕಾಮ ಮತ್ತು ಕ್ರೌರ್ಯ ಮುಗ್ಧ ಮನಸ್ಸಿನ ಮೇಲೆ ನಡೆಸುವ ದಾಳಿಯನ್ನು ರೂಪಕಗಳ ಮೂಲಕ ಹೇಳುತ್ತದೆ. ‘ಬದುಕನರಸಿದ ಕೈಗಳು’ ಕತೆಯಲ್ಲಿ ನಗರದ ಯುವಕರ ಅರಾಜಕ ಬದುಕನ್ನು ತೆರೆದಿಡುತ್ತದೆ. ಕತೆಯ ನಾಟಕೀಯ ಸನ್ನಿವೇಶಗಳಲ್ಲಿ ನಾಟಕಗಾರರಾಗಿರುವ ಸಾ. ದಯಾ ಅವರ ಹಸ್ತಕ್ಷೇಪವನ್ನೂ ನಾವು ಗುರುತಿಸಬಹುದಾಗಿದೆ.
ಸುವರ್ಣಗಿರಿ ಪ್ರಕಾಶನ ಮಂಗಳೂರು ಈ ಕೃತಿಯನ್ನು ಹೊರತಂದಿದೆ.101 ಪುಟಗಳ ಈ ಕೃತಿಯ ಮುಖಬೆಲೆ 150 ರೂ. ಆಸಕ್ತರು 09004957989 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News