ಭಾರತದ ಮಹಿಳಾ ಚಳವಳಿ-ಪಕ್ಷಿನೋಟ
ವಿಮಲಾ ಫಾರೂಕಿ ಬರೆದಿರುವ ‘ಭಾರತದ ಮಹಿಳಾ ಚಳವಳಿಯ ಸಂಕ್ಷಿಪ್ತ ಚರಿತ್ರೆ’ ಕೃತಿಯನ್ನು ಎ. ಜ್ಯೋತಿ ಅವರು ಕನ್ನಡಕ್ಕೆ ತಂದಿದ್ದಾರೆ. ಭಾರತೀಯ ಮಹಿಳಾ ಚಳವಳಿಯು ದೇಶದ ಸಾಮಾಜಿಕ ಮತ್ತು ಸ್ವಾತಂತ್ರ ಚಳವಳಿಗಳೊಂದಿಗೆ ಬೆರೆತು ಬೆಳೆದು ಬಂದಿರುವುದನ್ನು ಲೇಖಕಿ ಇಲ್ಲಿ ಗುರುತಿಸಿದ್ದಾರೆ. ವಿಶೇಷವೆಂದರೆ, ಮಹಿಳಾ ಚಳವಳಿಯ ಬೇರು ಗಳನ್ನು ಅವರು ಭಾರತದ ನೆಲದಲ್ಲೇ ಗುರುತಿಸಿರುವುದು. ಆರಂಭದಲ್ಲಿ ಮಹಿಳೆಯ ಮೇಲೆ ಹೇಗೆ ಹಂತಹಂತ ವಾಗಿ ಧರ್ಮದ ಹೆಸರಲ್ಲಿ ಕಾನೂನುಗಳು ಹೇರಲ್ಪಟ್ಟವು ಎನ್ನುವುದನ್ನು ಗುರುತಿಸುತ್ತಾರೆ. ವೇದಗಳನ್ನು ಧರ್ಮದ ಮೂಲವೆಂದು ಘೋಷಿಸಿದ ಗೌತಮ ಹೇಗೆ ಮಹಿಳೆಯರ ಮೇಲೆ ಧಾರ್ಮಿಕ ವಿಗಳನ್ನು ಹೇರಿದ ಎನ್ನುವುದನ್ನು ಬರೆಯುತ್ತಾರೆ. ಹಾಗೆಯೇ ಋಗ್ವೇದ ಕಾಲದಲ್ಲಿ ಮಹಿಳೆಯರಿಗಿದ್ದ ಹಕ್ಕುಗಳ ಬಗ್ಗೆಯೂ ಪ್ರಸ್ತಾಪಿಸುತ್ತಾರೆ. ಗೌತಮನ ಅನಂತರ ಬಂದ ಬೌದ್ಧಯಾನನಿಂದಲೂ ಮಹಿಳೆಯರ ಬದುಕು ನಿಕೃಷ್ಟವಾಯಿತು ಎಂದು ಲೇಖಕರು ಹೇಳುತ್ತಾರೆ. ಬೌದ್ಧಯಾನ ಬಹುಪತ್ವಿತ್ವವನ್ನು ಬೆಂಬಲಿಸುತ್ತಿದ್ದ. ಇವನ ದೃಷ್ಟಿಯಲ್ಲಿ ಹೆಣ್ಣು ಮಕ್ಕಳನ್ನು ಹೆತ್ತ ಕಾರಣಕ್ಕಾಗಿಯೇ ಪತ್ನಿಯನ್ನು ತೊರೆಯುವ ಅವಕಾಶ ಪತಿಗಿತ್ತು. ಪುರಾತನ ಕಾಲದಲ್ಲಿ ಬೇರೆ ಬೇರೆ ಮಹರ್ಷಿಗಳ ಮೂಲಕ ಹೆಣ್ಣಿನ ಬದುಕಿನಲ್ಲಿ ಆದ ಏರುಪೇರುಗಳನ್ನು ಗುರುತಿಸುತ್ತಾರೆ. ಎರಡನೆ ಅಧ್ಯಾಯದಲ್ಲಿ ಭಾರತದಲ್ಲಿ ಮಹಿಳಾ ಚಳವಳಿಯ ಉಗಮದ ಹಿಂದಿರುವ ಬೇರೆ ಬೇರೆ ರಾಜಕೀಯ ಕಾರಣಗಳನ್ನು ಅವರು ವಿವರಿಸುತ್ತಾರೆ. ಮಹಿಳಾ ಚಳವಳಿಯ ಕುರಿತಂತೆ ಇದೊಂದು ಪಕ್ಷಿನೋಟವಷ್ಟೇ. ಪ್ರಾಥಮಿಕ ಅಧ್ಯಯನಕ್ಕೆ ಕೃತಿ ಸಹಾಯ ಮಾಡುತ್ತದೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 30 ರೂ.