ನಾನು ಕಲಬುರ್ಗಿ’ ಪ್ರಖರ ಚಿಂತೆ
ಪ್ರಖರ ಚಿಂತಕ ದಿ. ಎಂ. ಎಂ. ಕಲಬುರ್ಗಿ ಅವರ ಆಯ್ದ ಚಿಂತನೆಗಳ ಸಂಗ್ರಹವೇ ‘ನಾನು ಕಲಬುರ್ಗಿ’. ಡಾ. ರಾಜೇಂದ್ರ ಚೆನ್ನಿ, ಡಾ. ರಹಮತ್ ತರೀಕೆರೆ ಮತ್ತು ಡಾ. ಮೀನಾಕ್ಷಿ ಬಾಳಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ‘ಭಾರತದಂಥ ಭಾವನಿಷ್ಠ ರಾಷ್ಟ್ರದಲ್ಲಿ ಸಂಶೋಧನೆ ಸರಳದಾರಿಯಲ್ಲ’ ಎನ್ನುವ ಸ್ಪಷ್ಟತೆಯಿದ್ದ ಕಲಬುರ್ಗಿ ತನ್ನ ಸಂಶೋಧನೆಯ ವಿರುದ್ಧ ಪ್ರತಿರೋಧಗಳನ್ನು ನಿರೀಕ್ಷಿಸಿಯೇ ಇದ್ದರು. ಕಲಬುರ್ಗಿಯನ್ನು ನೆನೆಯುವುದೆಂದರೆ ಕಲಬುರ್ಗಿಯವರ ಬರಹಗಳ ಮರುವಾಚಿಕೆಯಾಗಿದೆ. ಈ ನಿಟ್ಟಿನಲ್ಲಿ ಇದು ಕಲಬುರ್ಗಿಗೆ ಸಲ್ಲಿಸಿದ ಅರ್ಥಪೂರ್ಣ ಶೃದ್ಧಾಂಜಲಿಯೂ ಆಗಿದೆ. ಕಲಬುರ್ಗಿಯವರು ಬರೆದ ಸುಮಾರು 15 ಲೇಖನಗಳನ್ನು ಇಲ್ಲಿ ಕೊಡಲಾಗಿದೆ. ಕೊನೆಯಲ್ಲಿ ಕಲಬುರ್ಗಿಯವರ ಉಲ್ಲೇಖನೀಯ ಹೇಳಿಕೆಗಳು ಮತ್ತು ಅವರ ಚಿಂತನೆಯ ಸಾಲುಗಳನ್ನೂ ನೀಡಲಾಗಿದೆ. ಸಾಹಿತ್ಯದಲ್ಲಿ ಸಮೂಹ ಆಸ್ತಿ, ಅರೆ ಖಾಸಗಿ ಆಸ್ತಿ-ಖಾಸಗಿ ಆಸ್ತಿಯನ್ನು ಗುರುತಿಸುವ ಕಲಬುರ್ಗಿ ಲೇಖನ ಅತ್ಯಂತ ಕುತೂಹಲಕರವಾಗಿದೆ. ಸಾಹಿತ್ಯವೆನ್ನುವುದು ಸಾಹಿತಿಯ ಸ್ವಂತ ಆಸ್ತಿಯೇ? ಎನ್ನುವುದನ್ನು ಚರ್ಚಿಸುತ್ತಾ ಹೇಗೆ ಅದು ಹಂತ ಹಂತವಾಗಿ ಖಾಸಗಿ ಆಸ್ತಿಯ ರೂಪ ಪಡೆಯಿತು ಎನ್ನುವುದನ್ನು ಅವರು ವಿವರಿಸುತ್ತಾರೆ. ಇನ್ನೊಂದು ಲೇಖನದಲ್ಲಿ ವಚನಗಳ ಮೂಲಕ ಭಾಷೆಯನ್ನು ಚರ್ಚಿಸುತ್ತಾ ‘ಭಾಷೆಯು ಸಾಹಿತ್ಯದ ಮೂಲಕ ಯಾವುದನ್ನೇ ಅಭಿವ್ಯಕ್ತಿಸುವುದನ್ನಲ್ಲ, ಸ್ಥಾಪಿಸುವುದನ್ನು ಮಾಡುತ್ತದೆ’ ಎನ್ನುವ ನಿಲುವು ತಳೆಯುತ್ತಾರೆ. ಕನ್ನಡ ಮಾತೃಭಾಷಾ ಪ್ರಜ್ಞೆಯ ಇತಿಹಾಸ ಅವಲೋಕಿಸುತ್ತಾ, ಅದರ ಮಿತಿ ವ್ಯಾಪ್ತಿಗಳನ್ನು ಚರ್ಚಿಸುತ್ತಾರೆ. ಒಟ್ಟು ಕೃತಿಯಲ್ಲಿ ವಚನಗಳನ್ನೇ ಕೇಂದ್ರವಾಗಿಟ್ಟುಕೊಂಡು ಭಾಷೆ ಸಾಹಿತ್ಯ, ಸಂಸ್ಕೃತಿಯನ್ನು ಚರ್ಚಿಸುವ ಈ ಕೃತಿ, ಕಲಬುರ್ಗಿಯ ಚಿಂತನೆಯ ಮೇಲ್ಪದರವೊಂದನ್ನು ನಮಗೆ ಪರಿಚಯ ಮಾಡಿಕೊಡುತ್ತದೆ. ಅವರ ಇನ್ನಿತರ ಬರಹಗಳನ್ನು ಓದಲು ಪ್ರೇರಣೆ ನೀಡುತ್ತದೆ. ಲಡಾಯಿ ಪ್ರಕಾಶನ ಗದಗ ಈ ಕೃತಿಯನ್ನು ಹೊರ ತಂದಿದೆ. ಕೃತಿಯ ಮುಖಬೆಲೆ 120 ರೂಪಾಯಿ.