ಯುವ ಸ್ಪಂದನ ಯುವ ಜನರಿಂದ.. ಯುವ ಜನರಿಗಾಗಿ...
ಯಾವುದೇ ದೇಶ ಅಭಿವೃದ್ಧಿ ಹೊಂದಲು ಮತ್ತು ಬಲಿಷ್ಠಗೊಳ್ಳಲು ಅಲ್ಲಿನ ಯುವಜನ ಸಂಪತ್ತು ಅತ್ಯಂತ ಪ್ರಮುಖವಾದ ಶಕ್ತಿ. ಇಡೀ ವಿಶ್ವದಲ್ಲಿ ಭಾರತದಲ್ಲಿ ಅತ್ಯಕ ಸಂಖ್ಯೆಯಲ್ಲಿ 15 ರಿಂದ 30 ವರ್ಷದೊಳಗಿನ ಯುವಜನರಿದ್ದಾರೆ, ಯುವ ಜನರಿಗೆ ಒಂದು ಸಮಗ್ರ ಭಾವನಾತ್ಮಕ ಮಾನಸಿಕ ಮತ್ತು ಮನೋ ಸಾಮಾಜಿಕ ಬೆಂಬಲ ಸೇವೆಗಳನ್ನು ನೀಡುವ ಗುರಿಯೊಂದಿಗೆ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ಸರಕಾರ ಯುವ ಜನರಿಗಾಗಿ ‘ಯುವ ಸ್ಪಂದನ’ ಎಂಬ ಕಾರ್ಯಕ್ರಮ ಅನುಷ್ಠಾನ ಮಾಡಿದೆ.
ಯುವ ಜನರಿಗಾಗಿ ಸುರಕ್ಷಿತ ಕುಟುಂಬ ಮತ್ತು ಸಮಾಜ ನಿರ್ಮಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನ ಆರೋಗ್ಯ ಕೇಂದ್ರ, ಎಪಿಡೀಮಿಯಾಲಜಿ ವಿಭಾಗ ನಿಮ್ಹಾನ್ಸ್ ಅವರ ಸಹಯೋಗದಲ್ಲಿ ಅನುಷ್ಠಾನಗೊಂಡಿರುವ ಈ ಯೋಜನೆಯಲ್ಲಿ 15 ರಿಂದ 30 ವರ್ಷದೊಳಗಿನ ವಯೋಮಾನದ ಯುವ ಜನರ ಯಾವುದೇ ಸಮಸ್ಯೆಗಳಿಗೆ ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನೆಯನ್ನು ಒದಗಿಸುತ್ತದೆ.
ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದ್ದು, ಇದಕ್ಕಾಗಿ ರಾಜ್ಯದ ಪ್ರತೀ ಜಿಲ್ಲೆಯಲ್ಲಿ 30 ಮಂದಿ ಸಮಾಲೋಚಕರನ್ನು ನೇಮಿಸಲಾಗಿದೆ. ಅಲ್ಲದೆ ಸ್ಥಳೀಯ ಯುವ ಜನತೆಯನ್ನೇ, ಯುವ ಪರಿವರ್ತಕರು ಮತ್ತು ಯುವ ಮಿತ್ರರನ್ನಾಗಿ ನೇಮಿಸಲಾಗಿದ್ದು, ಅವರಿಗೆ ಪ್ರತೀ ತಿಂಗಳು ಗೌರವಧನ ಪಾವತಿಸಲಾಗುತ್ತಿದೆ. ಪ್ರತೀ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸ್ಪಂದನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಈ ಕೇಂದ್ರಗಳಲ್ಲಿ, ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯ, ಸಕಾರಾತ್ಮಕ ಚಿಂತನೆ ಹಾಗೂ ವ್ಯಸನಗಳಿಂದ ಮುಕ್ತರಾಗಿ ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳಲು ಯುವಕರಿಗೆ ನೆರವು ನೀಡಲಾಗುತ್ತದೆ.
ಯುವ ಜನತೆ, ತಮ್ಮ ತಂದೆ ತಾಯಿಯರ ಜೊತೆಗಿನ ಸಂಬಂಧ, ಅಂತರಪೀಳಿಗೆಯ ಸಂಬಂಧಗಳು, ವೈವಾಹಿಕ ಸಂಬಂಧ, ಪ್ರೇಮ ಸಂಬಂಧ, ಸಹೋದ್ಯೋಗಿಗಳ ಸಂಬಂಧ ಮತ್ತು ಆರೋಗ್ಯಯುತ ಸಂವಹನ ನಡೆಸುವ ಕುರಿತು ಮಾಹಿತಿ ನೀಡಲಾಗುವುದು.
ಯುವಕರು, ಜೀವನದಲ್ಲಿ ನಿರ್ದಿಷ್ಟ ಗುರಿ ನಿರ್ಧರಿಸುವ ಬಗ್ಗೆ, ಏಕಾಗ್ರತೆ, ನೆನಪಿನ ಶಕ್ತಿ, ಸಮಯ ನಿರ್ವಹಣೆ, ಪರೀಕ್ಷೆ ನಿರ್ವಹಣೆ, ಶಿಕ್ಷಣದ ಒತ್ತಡಗಳನ್ನು, ವೈಲ್ಯಗಳನ್ನು ನಿಭಾಯಿಸುವ ಕುರಿತು ತರಬೇತಿ ನೀಡಲಾಗುವುದು.
ಮೇಲಿನ ಯಾವುದೇ ಸಮಸ್ಯೆಗಳಿದ್ದಲ್ಲಿ, ಸಂಬಂಸಿದ ಯುವ ಜನರಿಗೆ ದೂರವಾಣಿ ಮುಖಾಂತರ, ವೈಯಕ್ತಿಕವಾಗಿ ಮತ್ತು ಆಪ್ತ ಸಮಾಲೋಚನೆ ಮೂಲಕ, ಕಾರ್ಯಾಗಾರಗಳು ಮತ್ತು ತರಬೇತಿ ಮೂಲಕ ಮತ್ತು ತಜ್ಞರೊಂದಿಗೆ ಸಲಹಾ ಶಿಬಿರಗಳ ಮೂಲಕ ನೆರವು ನೀಡಲಾಗುವುದು.
ಈ ಎಲ್ಲಾ ಸೇವೆಗಳನ್ನು ಸಂಪೂರ್ಣ ಉಚಿತವಾಗಿ ಯುವಜನರಿಗೆ ನೀಡಲಾಗುತ್ತಿದ್ದು, ತಮ್ಮ ಜಿಲ್ಲೆಯ ಯುವ ಸ್ಪಂದನ ಕೇಂದ್ರಕ್ಕೆ ತೆರಳಿ ಪ್ರಯೋಜನ ಪಡೆಯಬಹುದು.
ಆಗಸ್ಟ್ 16 ರಲ್ಲಿ ಜಾರಿಗೆ ಬಂದ ಈ ಕಾರ್ಯಕ್ರಮದಲ್ಲಿ ಇದುವರೆಗೆ ರಾಜ್ಯಾದ್ಯಾಂತ ಒಟ್ಟು 4,329 ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, 7,73,288 ಯುವ ಜನರು ಪ್ರಯೋಜನ ಪಡೆದಿದ್ದಾರೆ, ಉಡುಪಿ ಜಿಲ್ಲೆಯಲ್ಲಿ 54 ಅರಿವು ಕಾರ್ಯಕ್ರಮಗಳ ಮೂಲಕ 14,587 ಯುವ ಜನರಿಗೆ ಈ ಯೋಜನೆಯ ಪ್ರಯೋಜನ ತಲುಪಿಸಲಾಗಿದೆ.
ಯುವ ಜನ ಸ್ನೇಹಿ, ಯುವ ಜನ ಉದ್ದೇಶಿತ ಮತ್ತು ಯುವ ಸಬಲೀಕರಣಗೊಳಿಸುವ ಈ ಕೇಂದ್ರದ ಪ್ರಯೋಜನವನ್ನು ಪ್ರತಿಯೊಬ್ಬ ಯುವ ಜನರು ಪಡೆಯಬೇಕಿದೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.