ಹುಣಿಸೆ ಮರ ಹೇಳುವ ನಮ್ಮ ಕತೆ

Update: 2017-05-06 18:15 GMT

ಒಂದು ಮರವನ್ನು ಕೇಂದ್ರವಾಗಿಟ್ಟುಕೊಂಡು ಮನುಷ್ಯನ ಕ್ಷುದ್ರ ರಾಜಕೀಯವನ್ನು ‘ಹುಣಿಸೆ ಮರದ ಕತೆ’ ಕಾದಂಬರಿ ಹೇಳುತ್ತದೆ. ತಮಿಳು ಕಾದಂಬರಿ ಕ್ಷೇತ್ರದಲ್ಲಿ ಹೊಸ ನಿರೂಪಣಾ ತಂತ್ರದ ಮೂಲಕ ಹೆಸರಾಗಿರುವ ಸುಂದರ ರಾಮಸ್ವಾಮಿಯವರ ಈ ಕಾದಂಬರಿಯನ್ನು ಕೆ. ನಲ್ಲತಂಬಿ ಕನ್ನಡಕ್ಕಿಳಿಸಿದ್ದಾರೆ. ‘ಒರು ಪುಳಿಯ ಮರತ್ತಿನ್ ಕದೈ’ ಕಾದಂಬರಿಯ ಮೂಲ ತಮಿಳು ಹೆಸರು. ತಮಿಳುನಾಡಿನ ತಿರುನಲ್ವೇಳಿ ಜಿಲ್ಲೆಯ ಪ್ರಾದೇಶಿಕ ತಮಿಳು ಭಾಷೆಯ ಮೂಲಕ ನಿರೂಪಿಸಿರುವ ಈ ಕೃತಿ ತಮಿಳುಭಾಷೆಯಲ್ಲಿ ಅದೆಷ್ಟು ಜನಪ್ರಿಯವಾಗಿದೆ ಎಂದರೆ, ಈ ಮೂಲಕ ಕತೆ ಹೇಳುವ ಒಂದು ಹೊಸ ಪರಂಪರೆಯನ್ನು ಸೃಷ್ಟಿಸಿದೆ. ಒಂದು ಮರದೊಳಗಿನ ಆತ್ಮವನ್ನು, ಉಸಿರಾಟವನ್ನು, ಅದರ ಘನತೆಯನ್ನು ಆಲಿಸಿ ಬರೆದಂತಿದೆ ಈ ಕಾದಂಬರಿ. ಮನುಷ್ಯನ ರಾಜಕೀಯ ಪೈಪೋಟಿ, ಹಗೆತನ, ಕುತಂತ್ರಗಳ ತಿಕ್ಕಾಟದಲ್ಲಿ ಹೇಗೆ ಒಂದು ಮರ ಇಲ್ಲವಾಗುತ್ತದೆ ಎಂದು ಹೇಳುವ ಮೂಲಕ, ಆಧುನಿಕ ಅಭಿವೃದ್ಧಿ ರಾಜಕಾರಣವನ್ನು ಸರಳ ತಂತ್ರದ ಮೂಲಕ ಚರ್ಚಿಸುತ್ತಾರೆ. ಅಂತಿಮವಾಗಿ ಒಂದು ಮರವನ್ನು ಸಾಯಿಸುವ ಮೂಲಕ ಒಂದು ಸಮಾಜ ತನಗೆ ತಾನೇ ಸಾಯುತ್ತಾ ಹೋಗುತ್ತದೆ. ಕತೆಯ ಹೆಗ್ಗಳಿಕೆಯೇ ಸರಳ ನಿರೂಪಣೆ. ಮುಗ್ಧ, ಸಹಜ ಮನುಷ್ಯ ಭಾಷೆಯಲ್ಲಿ ಒಂದು ಮರದ ಹಿನ್ನೆಲೆ ಮುನ್ನೆಲೆಗಳನ್ನು ಕಟ್ಟಿಕೊಡುತ್ತಾ ಅದನ್ನು ಸುತ್ತುವರಿದಿರುವ ಊರು, ನಗರ ಜನರ ಕತೆಗಳನ್ನು ಕಾದಂಬರಿಕಾರ ಹೇಳುತ್ತಾನೆ. ಕಥನ ತಂತ್ರ ಅತ್ಯಂತ ಹೃದಯ ಸ್ಪರ್ಶಿಯಾದುದು ಮಾತ್ರವಲ್ಲ, ಕಾದಂಬರಿ ಓದುತ್ತಾ ಹೋದ ಹಾಗೆ ಹುಣಿಸೆಮರ ನಮ್ಮ ಭಾವ ಪ್ರಪಂಚದಲ್ಲಿ ಉದ್ದಗಲಕ್ಕೆ ಬೆಳೆಯುತ್ತಾ ಹೋಗುತ್ತದೆ. ವೃದ್ಧ ಹುಣಿಸೆ ಮರ ಒಂದು ಜೀವಂತ ಪಾತ್ರವಾಗಿ ನಮ್ಮಾಳಗೆ ಮಾತನಾಡುತ್ತದೆ. ಗತ, ವರ್ತಮಾನದ ಜೊತೆಗೆ ಭವಿಷ್ಯದ ಕರಾಳತೆಯನ್ನೂ ಈ ಮರ ನಮಗೆ ತೋರಿಸಿಕೊಡುತ್ತದೆ. ಲಂಕೇಶ್ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 150 ರೂ. ಆಸಕ್ತರು 080- 266676427 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News