ವರ್ತಮಾನದ ಸುಡುವ ಕೆಂಡಗಳು!

Update: 2017-05-09 18:18 GMT

ಸನತ್ ಕುಮಾರ್ ಬೆಳಗಲಿ ಅಂಕಣಗಳೆಂದರೆ ಸುಡುವ ಕೆಂಡಗಳು. ಈ ದೇಶದ ಜಾತೀಯ ಮನಸ್ಸುಗಳ ವಿರುದ್ಧ ಸದಾ ಕೆಂಡಕಾರುತ್ತಾ, ಕೋಮುವಾದಿ ರಾಜಕಾರಣವನ್ನು ಎದುರಿಸುತ್ತಾ, ವರ್ಗ ಸಮಾನತೆಗೆ ಹಂಬಲಿಸುತ್ತಾ ಬರೆಯುತ್ತಾ ಬಂದವರು ಸನತ್‌ಕುಮಾರ್ ಬೆಳಗಲಿ. ಹಿರಿಯ ಪತ್ರಕರ್ತರೂ ಆಗಿರುವ, ವಾರ್ತಾಭಾರತಿ ಅಂಕಣಕಾರ ಬೆಳಗಲಿ ಅವರ ‘ಬ್ರಾಹ್ಮಣವಾದಿ ಭಾರತ ದಲಿತ ಭಾರತ’ ಹೆಸರೇ ಒಳಗಿನ ವಸ್ತುವೇನು ಎನ್ನುವುದನ್ನು ತೆರೆದಿಡುತ್ತದೆ. ‘ಸುಡುವ ಕೆಂಡದೊಳಗಿನ ಜೀವ ಸಂತಾನ’ ಎಂದು ಅಡಿ ಬರಹವನ್ನೂ ತನ್ನ ಕೃತಿಗೆ ಅವರು ನೀಡಿದ್ದಾರೆ. ಅವರು ವಿವಿಧ ಪತ್ರಿಕೆಗಳಿಗೆ ಬರೆದಿರುವ ಅಂಕಣಗಳ ಸಂಗ್ರಹ ಇದು. ಇಲ್ಲಿರುವ ಹೆಚ್ಚಿನ ಬರಹಗಳು ಪರಸ್ಪರ ಬೆಸೆದುಕೊಂಡಂತಿವೆ ಅಥವಾ ಒಂದರ ಮುಂದುವರಿದ ಭಾಗ ಎನ್ನುವಂತಿವೆ. ಕಾಲ ಸಂದರ್ಭಕ್ಕೆ ತಕ್ಕ ಪ್ರತಿಕ್ರಿಯೆಯ ಭಾಗವಾಗಿ ಚಿಮ್ಮಿರುವ ಅಂಕಣಗಳು ಇವು ಆಗಿರುವುದರಿಂದ, ವಸ್ತುಗಳು ಕೆಲವೊಮ್ಮೆ ಪುನರಪಿಯಾಗಿವೆ. ಕೃತಿಯಲ್ಲಿ ಒಟ್ಟು 56 ಲೇಖನಗಳಿವೆ. ಮಾಧ್ಯಮಗಳು, ಜಾತೀಯತೆ, ಸಾಹಿತ್ಯ ರಾಜಕೀಯ, ಅಂಬೇಡ್ಕರ್, ಮೀಸಲಾತಿ, ಪಂಕ್ತಿಭೇದ, ಸಾಮ್ರಾಜ್ಯಶಾಹಿ ವಿರುದ್ಧದ ಹೋರಾಟ, ಟಿಪ್ಪು, ಬಿ.ವಿ. ಕಕ್ಕಿಲಾಯರ ನೆನಪು, ಕ್ಯಾಪ್ಟನ್ ಲಕ್ಷ್ಮೀ, ಕಬೀರ ಕಲಾಮಂಚ, ಬ್ರಾಹ್ಮಣ್ಯದ ಹಿಂದುತ್ವದ ಮುಖವಾಡ, ಹಿಂದುತ್ವ ಮತ್ತು ಲಿಂಗಾಯತ ಮುಖಾಮುಖಿ, ಪೇಜಾವರರಿಗೇ ಮಾನವ ದೀಕ್ಷೆ, ಗಾಂಧಿಯನ್ನು ಕೊಂದ ದಿನ, ದ್ರಾವಿಡ ಚಳವಳಿಯ ದುರಂತ, ಜೆಎನ್‌ಯು ನಾಶಕ್ಕೆ ಹುನ್ನಾರ....ಹೀಗೆ ವರ್ತಮಾನದ ಜ್ವಲಂತ ವಿಷಯಗಳನ್ನು ಅವರು ತಮ್ಮ ಲೇಖನಗಳಿಗೆ ಆರಿಸಿಕೊಂಡಿದ್ದಾರೆ. ಹೊರಗೆ ಬೆಂಕಿಯಂತೆ ಜ್ವಲಿಸುವ ಲೇಖನಗಳು ಇವುಗಳಾದರೂ ಒಳಗೆ ಅಪ್ಪಟ ಮಾನವೀಯ ಅಂತಃಕರಣದಿಂದ ದ್ರವಿಸುತ್ತವೆ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಪುಟಗಳು 262. ಮುಖಬೆಲೆ 160 ರೂಪಾಯಿ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News