ಬುದ್ಧ ನಮ್ಮ ನೆಲದ ಮೊದಲ ಸಮಾನತೆಯ ಧ್ವನಿ

Update: 2017-05-09 18:23 GMT

ದಯೆ ಮತ್ತು ಕರುಣೆಯನ್ನೇ ಕಾಣದೆ ಅಸಮಾನತೆಯ ರೌರವ ನರಕಕ್ಕೆ ಸಿಲುಕಿ ನರಳುತ್ತಿದ್ದ ಈ ನೆಲದಲ್ಲಿ ಬುದ್ಧ ಮೊತ್ತ ಮೊದಲು ಮಾನವನ ಎದೆಯೊಳಗೆ ಕರುಣೆಯನ್ನು ಬಿತ್ತಿದ. ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ ಮೊದಲ ದನಿ ಗೌತಮ ಬುದ್ಧ. ಈ ಕಾರಣಕ್ಕಾಗಿಯೇ ಯಾವುದೇ ಸಹಸ್ರಮಾನವನ್ನೂ ಆತ ಮೀರಿ ನಿಂತಿದ್ದಾನೆ.

ಬುದ್ಧನನ್ನು ಸ್ಪರ್ಶಿಸುತ್ತಾ ಪ್ರತಿವಾದಿಯೊಬ್ಬರು: ‘‘ನೀವು ಮಾನವರೆಲ್ಲರೂ ಸಮಾನರೆಂದು ವಾದಿಸುತ್ತೀರಿ. ಮಾನವ ಸಮಾಜ ಜಾತಿರಹಿತವಾದದು ಎಂದು ವಾದಿಸುತ್ತೀರಿ. ಪ್ರಾಣಿ, ಪಕ್ಷಿ, ಮರ-ಗಿಡ ಬಳ್ಳಿಗಳಲ್ಲಿ ಪ್ರತ್ಯೇಕ ಜಾತಿ, ಪಂಗಡಗಳಿವೆ ಹಾಗೆಯೇ ಮನುಷ್ಯರಲ್ಲೂ ಜಾತಿ ಮತ್ತು ಪಂಗಡಗಳು ಇರಬಾರದೇಕೆ’’ ಎಂದು ಪ್ರಶ್ನಿಸಿದರು. ಬುದ್ಧ ಉತ್ತರಿಸುತ್ತಾ ‘‘ಒಂದು ಆನೆ-ಸಿಂಹ, ಕುದುರೆ-ಕತ್ತೆ, ಹಂದಿ-ನಾಯಿ ಇವುಗಳ ಸಮ್ಮಿಲನದಿಂದ ಮತ್ತೊಂದು ಪ್ರಾಣಿಗೆ ಜನ್ಮತಾಳಲು ಸಾಧ್ಯವಿಲ್ಲ. ಪ್ರಾಣಿ ಪಕ್ಷಿಗಳಲ್ಲಿರುವ ಭೇದವನ್ನು ನಾನು ಒಪ್ಪುತ್ತೇನೆ. ಅದು ಪ್ರಕೃತಿ ನಿಯಮ. ಆದರೆ ಮಾನವರಲ್ಲಿ ಯಾವುದೇ ಜಾತಿ, ಧರ್ಮದ ಸ್ತ್ರೀ ಮತ್ತೊಂದು ಜಾತಿ ಹಾಗೂ ಧರ್ಮದ ಪುರುಷನೊಡನೆ ನಡೆಸುವ ಸಮ್ಮಿಲನದಿಂದ ಮತ್ತೊಂದು ಮಗು ಜನ್ಮವೆತ್ತುತ್ತದಲ್ಲವೇ? ಎಂದ ಮೇಲೆ ಸಹ ಮಾನವರೊಡನೆ ಜಾತಿ, ವರ್ಗದ ಭೇದ ಎಲ್ಲಿದೆ’’ ಎಂದ. ದಯೆ ಮತ್ತು ಕರುಣೆಯನ್ನೇ ಕಾಣದೆ ಅಸಮಾನತೆಯ ರೌರವ ನರಕಕ್ಕೆ ಸಿಲುಕಿ ನರಳುತ್ತಿದ್ದ ಈ ನೆಲದಲ್ಲಿ ಬುದ್ಧ ಮೊತ್ತ ಮೊದಲು ಮಾನವನ ಎದೆಯೊಳಗೆ ಕರುಣೆಯನ್ನು ಬಿತ್ತಿದ. ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ ಮೊದಲ ದನಿ ಗೌತಮ ಬುದ್ಧ. ಈ ಕಾರಣಕ್ಕಾಗಿಯೇ ಯಾವುದೇ ಸಹಸ್ರಮಾನವನ್ನೂ ಆತ ಮೀರಿ ನಿಂತಿದ್ದಾನೆ.

ಬುದ್ಧನಿಗೂ ನಮಗೂ ಎರಡು ಸಾವಿರ ವರ್ಷಗಳಿಗೂ ಮೀರಿದ ಅಂತರವಿದೆ. ಬುದ್ಧ ಹುಟ್ಟುವುದಕ್ಕೂ ಮೊದಲು ಅದೆಷ್ಟೋ ವೈಶಾಖ ಮಾಸ, ಶುಕ್ಲ ಪೂರ್ಣಿಮೆಗಳು ಕಳೆದುಹೋಗಿದ್ದವು. ಬುದ್ಧ ಪೂರ್ವದ ಈ ಹುಣ್ಣಿಮೆಗಳು ಅಷ್ಟು ಮಹತ್ವವೆನಿಸರಲಿಲ್ಲ. ಆದರೆ ಬುದ್ಧನ ಬದುಕಿನೊಟ್ಟಿಗೆ ಹೆಣೆದುಕೊಂಡ ನಿಸರ್ಗದ ಈ ಎರಡು ಘಟನೆಗಳು ಭಾರತೀಯ ಸಾಂಸ್ಕೃತಿಕ ಪರಿಚಲನೆಯ ಸಂಕೇತದಂತಾದವು. ಬುದ್ಧ ಜನ್ಮವೆತ್ತಿದ್ದು ವೈಶಾಖ ಶುಕ್ಲ ಪೂರ್ಣಿಮೆಯ ದಿನ. ಆತ ಬೋಧಿಯನ್ನು ಪಡೆದಿದ್ದು ವೈಶಾಖ ಶುಕ್ಲ ಪೂರ್ಣಿಮೆಯ ದಿನ. ಆತ ಪರಿನಿಬ್ಬಾಣ ಹೊಂದಿದ್ದು ವೈಶಾಖ ಶುಕ್ಲ ಪೂರ್ಣಿಮೆಯ ದಿನ. ಆತನ ಸಮಸ್ತ ವ್ಯಕ್ತಿತ್ವವು ತುಂಬು ಹುಣ್ಣಿಮೆಯ ಬೆಳದಿಂಗಳಿನಂತೆ ಪ್ರಶಾಂತತೆಯನ್ನು ಪಡೆಯಿತು. ಆತನ ಬದುಕು ಹುಣ್ಣಿಮೆಯ ಬೆಳಕಿನಷ್ಟೇ ಪಾವಿತ್ರತೆಗೆ, ಪರಿಶುದ್ಧತೆಗೂ ಸಂಕೇತ. ಯಾವುದೇ ಕಾಲಕ್ಕೂ ಮನುಕುಲದ ಮುಂದೆ ಎರಡು ಪ್ರಶ್ನೆಗಳು ಎದುರಾಗುತ್ತವೆ.

ಒಂದು ಬುದ್ಧ ಮತ್ತೊಂದು ಯುದ್ಧ. ಬುದ್ಧ: ವೈಚಾರಿಕತೆ, ಅಹಿಂಸೆ, ಪ್ರೀತಿ, ಶಾಂತಿ, ಸಮಾನತೆಯ ಸಂಕೇತ. ಹಾಗೆಯೇ ಯುದ್ಧ: ದೇಶ, ಅಹಿಂಸೆ, ಆಕ್ರಮಣದ ಸಂಕೇತ. ಆದರೆ ಚರಿತ್ರೆಯ ಆಯ್ಕೆ ಮತ್ತೆ ಮತ್ತೆ ಯುದ್ಧವನ್ನು ಪೋಷಿಸುವುದು ಮಾತ್ರ ದುರದೃಷ್ಟಕರವೇ ಸರಿ. ಯುದ್ಧ ಎಂದರೆ ಅದು ಎರಡು ದೇಶ, ರಾಜ್ಯಗಳ ನಡುವೆ ಆರ್ಥಿಕ-ರಾಜಕೀಯ ಲಾಭಕ್ಕಾಗಿ ಮಾತ್ರ ಆಗಬೇಕಿಲ್ಲ. ಜಾತಿ, ಧರ್ಮ, ಮತ, ದೇವರು, ದೇವಸ್ಥಾನಗಳಂತಹ ಮೂಲಭೂತ ಮನಸ್ಸುಗಳು ನಡೆಸುವ ಹಿಂಸೆ, ಕ್ರೌರ್ಯ, ಅಮಾನವೀಯ ರೂಪದ ಹತ್ಯೆಗಳು ಕೂಡ ಅವ್ಯವಸ್ಥಿತ ಯುದ್ಧಗಳೇ. ಬುದ್ಧನ ಪ್ರಕಾರ ಇವೆಲ್ಲ ಅಸ್ವಸ್ಥ ಮನಸ್ಸಿನ ವಿಕಾರಗಳು. ಇಂತಹ ವಿಕಾರಗಳಿಂದ ಮಾನವನ ಮನಸ್ಸನ್ನು ತಿಳಿಯಾಗಿಸುವಲ್ಲಿ ಬುದ್ಧನ ಮೂಲ ಶಿಲೆ ಅಡಗಿದೆ.

ಇಂದಿನ ಜಾಗತಿಕ ಜಗತ್ತು ಅಸ್ವಸ್ಥ ಮನಸ್ಸುಗಳ ವಿಕಾರಗಳಿಂದ ತುಂಬಿದೆ. ಒಂದು ಕಾಲಕ್ಕೆ ಮನುಷ್ಯರನ್ನು ಒಟ್ಟುಗೂಡಿಸುತ್ತಿದ್ದ ದೇವರು, ದೇವಸ್ಥಾನ ಇಂದು ಮನುಷ್ಯರನ್ನು ಒಡೆಯುವ ಮೌಢ್ಯಕಗಳಂತೆ ಕಾಣಬರುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಲ್ಲಿನ ಎಲ್ಲ ಮೌಢ್ಯಗಳನ್ನು ನಿರಾಕರಿಸಿ ನಿಲ್ಲಬಲ್ಲ ವ್ಯಕ್ತಿತ್ವ ನಿರ್ಮಾಣವಾದಿತೇ ಎಂದು ಯೋಚಿಸಿದರೆ ಬುದ್ಧ ನೆನಪಾಗುತ್ತಾನೆ. ಅವಲಂಬನೆಯನ್ನು ನಿರಾಕರಿಸಿ ಸ್ವಾವಲಂಬನೆಯನ್ನು ಧಾರ್ಮಿಕತೆಯ ಕೇಂದ್ರವಾಗಿರಿಸಿದ ಬುದ್ಧ ‘‘ನಾನು ಮಾರ್ಗದಾತನಷ್ಟೆ ಮುಕ್ತಿದಾತನಲ್ಲ’’ ಎನ್ನುತ್ತಾನೆ. ‘‘ಹಿರಿಯರು, ಆಚಾರ್ಯರು, ತಂದೆ-ತಾಯಿಯಂದಿರು ಹೇಳಿದರೆಂದ ಮಾತ್ರಕ್ಕೆ ಯಾವುದನ್ನೂ ಒಪ್ಪಿಕೊಳ್ಳಬೇಡ. ನಿನಗೆ ಯಾವುದೇ ಸರಿ ಎನಿಸುತ್ತದೆಯೋ ಅದನ್ನು ಪರಿಶೀಲಿಸಿ ಅದನ್ನು ನೀನು ಒಪ್ಪಿಕೊ’’ ಎಂದ. ‘‘ತನಗೆ ತಾನೇ ಬೆಳಕಾಗಬೇಕು’’ ಎಂಬ ಮಾತನ್ನು ಜಗತ್ತಿನ ಚರಿತ್ರೆಯಲ್ಲಿಯೇ ಮೊತ್ತ ಮೊದಲ ಬಾರಿಗೆ ಹೇಳಿದನು. ‘‘ನನ್ನ ಧರ್ಮವೊಂದೇ ಶ್ರೇಷ್ಠವೆಂದು ಹೇಳುವುದಿಲ್ಲ. ನೀನು ಹೋಗಿ ಇತರ ಧರ್ಮಗಳನ್ನು ಕೇಳಿ ಬಾ.

ಆ ಮೇಲೆ ನನ್ನನ್ನು ಕೇಳು. ಯಾವ ಧರ್ಮ ನಿನಗೆ ಅತ್ಯುತ್ತಮ ಎಂದೆನಿಸುತ್ತದೋ ಅದನ್ನು ಅನುಸರಿಸು.’’

ಎರಡು ಸಾವಿರದ ಐದು ನೂರು ವರ್ಷಗಳ ಹಿಂದೆ ಬುದ್ಧ ಹೇಳಿದ ಈ ಮಾತು ಇಂದು ಮತಾಂಧ ಮನಸ್ಸುಗಳಿಗೆ ಅರಿವಾಗಬೇಕು. ಮತಾಂತರದ ವಿಚಾರದಲ್ಲಿ ಅನಗತ್ಯ ಗೊಂದಲಗಳನ್ನು ಸೃಷ್ಟಿಸಿ ಸಮಾಜದ ಸ್ವಾಸ್ಥ ಕೆಡಿಸುತ್ತಿರುವ ಈ ದಿನಗಳಲ್ಲಿ ಮತಾಂಧರಿಗೆ ಮಾರ್ಗದರ್ಶಕವಾಗಬೇಕು. ಬುದ್ಧ ಬೋಧಿಸಿದ್ದು ಜೀವನ ಮಾರ್ಗ ಹಾಗೂ ಬದುಕುವ ರೀತಿಯನ್ನು. ಬುದ್ಧ ಜಗತ್ತಿನ ವಾಸ್ತವ ಇರುವಿಕೆಯ ಬಗ್ಗೆ ಮಾತನಾಡಿದ. ಮಾನವ ಕೇಂದ್ರಿತ ಧರ್ಮವನ್ನು ಆತ ಈ ನೆಲದಲ್ಲಿ ಸ್ಥಾಪಿಸಿದ. ಬುದ್ಧ ನಿಷ್ಕರುಣಿ. ಸತ್ಯದ ಬಾಗಿಲನ್ನು ಅವನಷ್ಟು ಆಳವಾಗಿ, ಗಂಭೀರವಾಗಿ ತೆರೆದವರು ಯಾರೂ ಇಲ್ಲ. ಅವನು ಮನುಜನ ಮುಂದೆ ಯಾವ ಆಸೆ-ಆಕಾಂಕ್ಷೆಗಳನ್ನ್ನೂ ಇಡುವುದಿಲ್ಲ. ಆತ ಹೇಳುವುದೊಂದೆ ‘‘ಹೆಚ್ಚು ಎಚ್ಚರದಿಂದಿರಿ. ಹೆಚ್ಚು ಪ್ರಜ್ಞಾವಂತರಾಗಿರಿ. ಹೆಚ್ಚು ಧೈರ್ಯಶಾಲಿಗಳಾಗಿರಿ. ನಿಮ್ಮ ಬದುಕನ್ನು ಅಂಗೈ ಮೇಲೆ ಇರಿಸಿಕೊಳ್ಳಿ. ನಿಮ್ಮ ಒಳಗಿನ ಬೆಳಕು ಉಜ್ವಲವಾಗಿ ಬೆಳಗುವಂತೆ ನೋಡಿಕೊಳ್ಳಿ. ಏನು ಕಾಣುತ್ತದೆಯೋ ಅದನ್ನು ನೋಡಿ. ಒಪ್ಪಿಕೊಳ್ಳುವಷ್ಟು ಧೈರ್ಯಶಾಲಿಗಳಾಗಿದ್ದರೆ ಅದೇ ಒಂದು ವರ. ಬುದ್ಧ ಮೊದಲ ಸತ್ಯದ ಕಡೆ ಇಟ್ಟ ಮೊತ್ತ ಮೊದಲ ಹೆಜ್ಜೆಯಿದು.

ಬುದ್ಧ ಬೋಧಿಯನ್ನು ಪಡೆದಾಗ ಯಾರೋ ಅವನನ್ನು ಕೇಳಿದರು. ನೀನು ಏನನ್ನು ಪಡೆದುಕೊಂಡಿದ್ದಿಯೇ? ಬುದ್ಧ ನಗುತ್ತಾ ಹೇಳಿದ ಪಡೆದುಕೊಂಡಿದ್ದು ಏನು ಇಲ್ಲ. ಹಾಗೆ ನೋಡಿದರೆ ಅನೇಕವುಗಳನ್ನು ಕಳೆದುಕೊಂಡಿದ್ದೇನೆ. ಅವುಗಳೆಂದರೆ ‘‘ನನ್ನ ಅಹಂ, ಸ್ವಾರ್ಥ, ಬಂಧನ, ಪೂರ್ವಚಿಂತನೆಗಳು, ನನ್ನ ಮನಸ್ಸಿನ ಎಲ್ಲ ದುರ್ಗುಣಗಳನ್ನು ಕಳೆದುಕೊಂಡಿದ್ದೇನೆ. ನನ್ನದು ಎಂದು ಯಾವುದನ್ನು ತಿಳಿದುಕೊಂಡಿದ್ದೇನೊ ಅವುಗಳನ್ನೆಲ್ಲ ಕಳೆದುಕೊಂಡಿದ್ದೇನೆ. ಈಗ ನಾನು ಶುದ್ಧ ಶೂನ್ಯನಾಗಿದ್ದೇನೆ’ ಎಂದ. ಇಂದು ನಮ್ಮೆಳಗಿರುವ ಅಹಂ ಅನ್ನು ಕಳೆದುಕೊಳ್ಳದೆ ಹೋದರೆ ಬುದ್ಧನನ್ನು ಮುಟ್ಟಲಾಗುವುದಿಲ್ಲ. ನನಗೆ ಬುದ್ಧ ಅಹಂ ಅನ್ನು ಮೀರಿದ ಪ್ರಸಂಗ ನೆನಪಾಗುತ್ತದೆ. ಬುದ್ಧ ಏನೋ ಚಿಂತಿಸುತ್ತಿದ್ದಾಗ ಆನಂದ ಬಂದು ಕೇಳಿದ. ‘‘ಪೂಜ್ಯರೇ ನೀವು ಜಗತ್ತಿನಲ್ಲಿ ಅಪರಿಮಿತ ಜ್ಞಾನವನ್ನು ಪಡೆದಿರುವಿರಂತೆ, ಅಸಂಖ್ಯ ಜ್ಞಾನವು ನಿಮ್ಮಿಳಗಿದೆಯಂತೆ. ಇದು ಸತ್ಯವೇ’’ ಎಂದು ಕೇಳಿದ. ಬುದ್ಧ ಒಂದು ಅರಳಿಮರವನ್ನು ತೋರಿಸಿ ‘‘ಈ ಮರದಲ್ಲಿ ಎಷ್ಟು ಎಲೆಗಳಿವೆ ಎಂದು ಎಣಿಸಬಲ್ಲೆಯಾ?’’ ಎಂದನು. ‘‘ಆನಂದ ಆಗುವುದಿಲ್ಲ ಭಂತೇ ಅವು ಅಸಂಖ್ಯವಾಗಿವೆ?’’ ಎಂದ. ಮತ್ತೆ ಬುದ್ಧ ನೆಲಕ್ಕೆ ಬಾಗಿ ತನ್ನ ಮುಷ್ಟಿಯಲ್ಲಿ ತರಗೆಲೆಗಳನ್ನು ಬಾಚಿ ಇಲ್ಲಿ ಎಷ್ಟು ಎಲೆಗಳಿವೆ ಎಂಬುದನ್ನು ಎಣಿಸಬಲ್ಲೆಯೇ ಎಂದನು. ಆನಂದನು ಒಂದು ಮುಷ್ಟಿ ಇದೆ ಎಂದು ಹೇಳಿದ. ಹಾಗೆಯೇ ಬುದ್ಧ ಉತ್ತರಿಸುತ್ತ ‘‘ಆನಂದ, ಜಗತ್ತಿನ ಜ್ಞಾನವು ಈ ಅರಳಿಯ ಮರದ ಎಲೆಗಳಷ್ಟೆ ಅಸಂಖ್ಯವಾದುದು. ನನ್ನ ಮುಷ್ಟಿಯಲ್ಲಿರುವಷ್ಟು ಎಲೆಗಳು ಮಾತ್ರ ನನ್ನ ಜ್ಞಾನವಾಗಿದೆ’’ ಎಂದು ತನ್ನ ಅಹಂ ಅನ್ನು ತಾನೇ ಮೀರಿ ನಿಂತ. ಬಹುದೊಡ್ಡ ಶೋಧಕ ಪ್ರಜ್ಞೆ ಬುದ್ಧ.

ಭಾರತದಲ್ಲಿ ಡಾ.ಬಿ.ಆರ್.ಅಂಬೇಡ್ಕರರಿಗೆ ಬೌದ್ಧ ಧರ್ಮ ಎನ್ನುವುದು ತಮ್ಮ ಹೋರಾಟಕ್ಕೆ ಸಿಕ್ಕಿದ ಚಾರಿತ್ರಿಕ ಸಮರ್ಥನೆ. ಚಾರಿತ್ರಿಕವಾದ ಸ್ಥಿತಿಯೊಂದನ್ನು ವರ್ತಮಾನಕ್ಕೆ ತರುವ ಮೂಲಕ ತಮ್ಮ ಹೋರಾಟಕ್ಕೆ ಹೆಚ್ಚು ಪರಂಪರೆಯನ್ನು ನಿರ್ಮಿಸಿಕೊಂಡರು. ಈ ದೇಶದ ಶೋಷಿತರಿಗೆ ಒಂದು ದೊಡ್ಡ ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿಕೊಡುವ ಮಹಾನ್ ಪ್ರಯತ್ನದ ಭಾಗ. ‘‘ಸಮಾನತೆ, ಸಹೋದರತೆ ಹಾಗೂ ಭ್ರಾತೃತ್ವಗಳನ್ನು ನಾನು ಫ್ರೆಂಚ್ ಕ್ರಾಂತಿಯಿಂದ ಪಡೆಯಲಿಲ್ಲ. ಬದಲಾಗಿ ನನ್ನ ಗುರು ಗೌತಮ ಬುದ್ಧನಿಂದ ಪಡೆದೆ’’ ಎನ್ನುತ್ತಾರೆ ಅಂಬೇಡ್ಕರ್. ಇಂತಹ ಮೌಲ್ಯಗಳನ್ನು ಸಾರಿದ ಬುದ್ಧ ಏಕೆ ಈ ನೆಲದ ಆಚೆಗೆ ಅರಳಿದಷ್ಟು ಭಾರತದಲ್ಲಿ ಅರಳಲಿಲ್ಲ ಎನ್ನುವುದು ಆಶ್ಚರ್ಯವಾಗಬಹುದು. ಅಶೋಕ, ಕನಿಷ್ಕ, ಹರ್ಷವರ್ಧನರಂತಹ ಕಾಲದಲ್ಲಿ ರಾಜ್ಯಧರ್ಮವಾಗಿ ಸಂರಕ್ಷಿಸಲ್ಪಟ್ಟಿದ್ದ ಧಮ್ಮ ಆನಂತರ ಅವನತಿಯ ಹಾದಿ ಹಿಡಿದು, ಅಂಬೇಡ್ಕರ್ ಅವರ ವಿವೇಕದಿಂದ ಮತ್ತೊಮ್ಮೆ ಈ ನೆಲದಲ್ಲಿ ಎರಡು ಸಾವಿರದ ಐನೂರ ವರ್ಷಗಳ ನಂತರ ತನ್ನನ್ನು ತಾನು ಮರು ಸ್ಥಾಪಿಸಿಕೊಂಡಿತು. ಆದರೆ ಅಂಬೇಡ್ಕರ್ ಕಾಲಾನಂತರವೂ ಕೂಡ ತೆವಳುತ್ತಿರುವುದು ಅತ್ಯಂತ ದುಃಖಕರ.

ಇಂದು ಬುದ್ಧ ಪೂರ್ಣಿಮೆಗಳು ಜರಗುತ್ತಿವೆ. ಆದರೆ ಜನರ ಪಾಲ್ಗೊಳ್ಳುವಿಕೆ ಮಾತ್ರ ಶೂನ್ಯದೆಡೆಗೆ ನಡೆಯುತ್ತಿದೆ. ಅಂಬೇಡ್ಕರ್ ಅನುಯಾಯಿಗಳು ಅವರನ್ನು ಮೀಸಲಾತಿಗೆ ಮತ್ತು ರಾಜಕೀಯದ ಹಿತಾದೃಷ್ಟಿಗೆ ಅನುಸರಿಸಿದಂತೆ ಎನಿಸುತ್ತದೆ. ಬಹಿರಂಗ ಒತ್ತಡಕ್ಕೆ ಅಂಬೇಡ್ಕರ್ ಅನುಯಾಯಿಗಳಾದವರು ಆಂತರಿಕವಾಗಿ ಅವರಿಂದ ದೂರ ಉಳಿದಿರುವುದು ಸ್ಪಷ್ಟ. ಕೊನೆಗೆ ನಮ್ಮೆಳಗೆ ಬುದ್ಧನಿಲ್ಲದ ನಾವು ಬುದ್ಧಪೂರ್ಣಿಮೆಯನ್ನಷ್ಟೇ ಆಚರಿಸಬೇಕಾಗುತ್ತದೆ.

Writer - ಮಲ್ಕುಂಡಿ ಮಹದೇವಸ್ವಾಮಿ

contributor

Editor - ಮಲ್ಕುಂಡಿ ಮಹದೇವಸ್ವಾಮಿ

contributor

Similar News

ಜಗದಗಲ
ಜಗ ದಗಲ