ಮತಾಂತರಗೊಂಡ ಬಿಲ್ಲವರ ಇತಿಹಾಸ ಶೋಸುತ್ತಾ...
ಮಂಗಳೂರಿನ ಬಿಲ್ಲವರಿಗೂ ಪ್ರೊಟೆಸ್ಟೆಂಟ್‌ಕ್ರಿಶ್ಚಯನ್ನರಿಗೂ ಏನು ಸಂಬಂಧ? ಕರಾವಳಿಯ ಮತಾಂತರ ಮೂಲಗಳನ್ನು ಹುಡುಕುತ್ತಾ ಹೋಗುವ, ಆ ಮೂಲಕ ಭೂತ ಮತ್ತು ವರ್ತಮಾನವನ್ನು ಮುಖಾಮುಖಿಯಾಗಿಸುವ, ವರ್ತಮಾನದ ಧರ್ಮ, ಜಾತಿ ರಾಜಕಾರಣವನ್ನು ವಿಶ್ಲೇಷಿಸುವ ಕುತೂಹಲಕಾರಿ ಕೃತಿ ರಮಾನಾಥ್ ಕೋಟೆಗಾರ್ ಅವರ ‘ಬಿಲ್ಲವರು ಮತ್ತು ಬಾಸೆಲ್ ಮಿಷನ್’. ಇದು ಕರಾವಳಿಯ ಮತಾಂತರ ಹಿನ್ನೆಲೆ ಮುನ್ನೆಲೆಯನ್ನು ಚರ್ಚಿಸುವ ಮಹತ್ವದ ಪುಟ್ಟ ಸಂಶೋಧನಾ ಕೃತಿ. ಸಮಾಜದಲ್ಲಿ ಅಸ್ಪಶ್ಯರಂತೆ ಬದುಕುತ್ತಿದ್ದ ಬಿಲ್ಲವರು 1834ರಲ್ಲಿ ಕ್ರೈಸ್ತ ಮಿಶನರಿಗಳ ಪ್ರಭಾವಕ್ಕೆ ಸಿಲುಕಿ ಪ್ರೊಟೆಸ್ಟಂಟ್ ಧರ್ಮವನ್ನು ಸ್ವೀಕರಿಸಿದ ಇತಿಹಾಸವನ್ನು ಇಲ್ಲಿ ಬಗೆಯಲಾಗಿದೆ. ಅಂದು ಪ್ರೊಟೆಸ್ಟಂಟ್ ಕ್ರೈಸ್ತರಾಗಿ ಪರಿವರ್ತನೆ ಹೊಂದಿದವರ ಐದನೆ ತಲೆಮಾರಿನವರಾದ ಇಂದಿನ ಪೀಳಿಗೆಯವರಿಗೆ ತಮ್ಮ ಹಿನ್ನೆಲೆ, ಗತ ಇತಿಹಾಸ ಗೊತ್ತಿಲ್ಲ. ಅದೇ ರೀತಿ ಇಂದಿನ ಬಿಲ್ಲವ ಜನಾಂಗದವರಿಗೆ ತಮ್ಮ ಪೂರ್ವಿಕರಲ್ಲಿ ಉಂಟಾದ ಪರಿವರ್ತನೆಯ ಹಿನ್ನೆಲೆ ತಿಳಿದಿಲ್ಲ. ಈ ಎರಡೂ ಬಗೆಯ ತಲೆಮಾರುಗಳನ್ನು ಬೆಸೆಯುವ ಸೇತುವೆಯಂತೆ ಈ ಸಂಶೋಧನಾ ಕೃತಿ ಕೆಲಸ ಮಾಡುತ್ತದೆ. ಬಿಲ್ಲವರ ಅಂದಿನ ಸ್ಥಿತಿಗತಿ, ಮತಾಂತರದ ಕಾರಣಗಳು ಮತ್ತು ವರ್ತಮಾನದಲ್ಲಿ ಅದರ ಪರಿಣಾಮಗಳನ್ನು ಸೂಕ್ಷ್ಮವಾಗಿ ಈ ಕೃತಿ ಹೇಳುತ್ತದೆ. 19ನೆ ಶತಮಾನದಲ್ಲಿ ಬಿಲ್ಲವರ ರೀತಿ ರಿವಾಜುಗಳು, ಸಮಾಜದಲ್ಲಿ ಅವರ ಸ್ಥಾನಮಾನಗಳು ಹೇಗಿತ್ತು ಎನ್ನುವುದನ್ನು ಮೊದಲ ಭಾಗದಲ್ಲಿ ವಿವರಿಸಲಾಗುತ್ತದೆ. ಹಾಗೆಯೇ ಕ್ರೈಸ್ತ ಧರ್ಮ ಬಿಲ್ಲವರನ್ನು ಸೆಳೆಯಲು ಕಾರಣವಾದ ಅಂಶಗಳನ್ನೂ ವಿವರಿಸಲಾಗಿದೆ. ಎರಡೂ ಧರ್ಮಗಳ ಸಂಕರದಲ್ಲಿ ಹೇಗೆ ಇಲ್ಲಿನ ಕ್ರಿಶ್ಚಿಯನ್ನರು ಭಿನ್ನವಾಗಿ ಗುರುತಿಸಲ್ಪಡುತ್ತಾರೆ ಮತ್ತು ತಮ್ಮ ಹಿಂದಿನ ಗುರುತನ್ನು ಇನ್ನೂ ಯಾವ ಯಾವ ಬಗೆಯಲ್ಲಿ ಉಳಿಸಿಕೊಂಡಿದ್ದಾರೆ ಎನ್ನುವ ಕುತೂಹಲಕಾರಿ ವಿಷಯಗಳನ್ನು ಅವರು ತೆರೆದಿಡುತ್ತಾರೆ. ಸದ್ಯದ ಮತಾಂತರ ರಾಜಕೀಯಗಳಿಗೆ ಉತ್ತರವೆಂಬಂತೆ ಈ ಕೃತಿ ಹೊರಬಂದಿದೆ. ಸಾಯಿ ಸುಂದರಿ ಸೇವಾ ಟ್ರಸ್ಟ್ ಈ ಕೃತಿಯನ್ನು ಹೊರತಂದಿದೆ.112 ಪುಟಗಳ ಕೃತಿಯ ಮುಖಬೆಲೆ 80 ರೂ. ಆಸಕ್ತರು 9449449405 ದೂರವಾಣಿಯನ್ನು ಸಂಪಕಿರ್ಸಬಹುದು.