ಪ್ರಯೋಗಶೀಲವಾಗಿರೋಣ ಪೀಳಿಗೆಯೊಡನೆ...

Update: 2017-05-12 16:55 GMT

ಹುರುಪಿನ ಏಕಾಗ್ರತೆ

ಮಕ್ಕಳ ಗುಂಪನ್ನು ತನ್ನ ಸುತ್ತ ವರ್ತುಲವಾಗಿ ನಿಲ್ಲಿಸಿಕೊಂಡು ಆ ಯುವಕ ಹೇಳುತ್ತಿದ್ದ. ‘‘ನಾನು ಹಾರ್ಟ್ ಎಂದಾಗ ಎದೆಯ ಭಾಗ ಮುಟ್ಟಿಕೊಳ್ಳಬೇಕು. ಹೆಡ್ ಎಂದಾಗ ತಲೆಯ ಭಾಗ ಮುಟ್ಟಿಕೊಳ್ಳಬೇಕು’’ ಎಂದು.

ಆತ ಹೇಳುವಾಗ ಒಂದು ಹಂತಕ್ಕೆ ಕ್ರಮವಾಗಿ ಹೇಳುತ್ತಿದ್ದವನು ನಂತರ ವೇಗವಾಗಿ ಹೇಳುವಾಗ ಹಾರ್ಟ್ ಎಂದಾಗ ಮೇಲೆ ಹೆಡ್ ಎನ್ನುವ ಬದಲು ಹಾರ್ಟೆಂದು ಹೇಳುವಾಗ ತಲೆಯನ್ನು ಮುಟ್ಟಿಕೊಳ್ಳುವ ಮಕ್ಕಳು ಔಟ್ ಆಗುತ್ತಿದ್ದರು. ಅದೇ ರೀತಿ ಹೆಡ್ ಎಂದಾಗ ಮೇಲೆ ಮತ್ತೆ ಹಾರ್ಟ್ ಎನ್ನದೇ ಹೆಡ್ ಎಂದೇ ಹೇಳುತ್ತಾ ಗೊಂದಲಕ್ಕೊಳಗಾಗಿ ತಪ್ಪಾಗಿ ಮುಟ್ಟಿಕೊಳ್ಳುವವರನ್ನು ಔಟ್ ಎಂದು ಹೇಳುತ್ತಿದ್ದ. ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದ್ದಂತೆ ಹಾರ್ಟ್ ಎಂದಾಗ ತಲೆ ಮುಟ್ಟಿಕೊಳ್ಳಬೇಕು, ಹೆಡ್ ಎಂದಾಗ ಎದೆ ಮುಟ್ಟಿಕೊಳ್ಳಬೇಕು ಎಂದು ಮತ್ತೆ ಹೇಳುವ ವೇಗವನ್ನು ಹೆಚ್ಚಿಸುತ್ತಿದ್ದ. ಆ ಸುತ್ತೂ ಮುಗಿದ ಮೇಲೆ ಒಂದು ಸಲ ಹಾರ್ಟ್ ಎಂದಾಗ ಎದೆಯನ್ನು, ಹೆಡ್ ಎಂದಾಗ ತಲೆಯನ್ನು ಮುಟ್ಟಿಕೊಳ್ಳಬೇಕು, ಮತ್ತೊಮ್ಮೆ ಹಾರ್ಟ್ ಎಂದಾಗ ತಲೆಯನ್ನು, ಹೆಡ್ ಎಂದಾಗ ಎದೆಯನ್ನು ಮುಟ್ಟಿಕೊಳ್ಳಬೇಕು ಎಂದು ಮತ್ತಷ್ಟು ಸಂಕೀರ್ಣಗೊಳಿಸುತ್ತಿದ್ದ. ಆದರೆ ಕೊನೆಗೆ ತಾನೇ ಸೋತು ಉಳಿದ ಮೂರು ಮಕ್ಕಳಿಗೆ ಬಹುಮಾನ ನೀಡಿದ.

ಹಾಗೆಯೇ ಮಕ್ಕಳಿಬ್ಬರು ಹಸ್ತಗಳನ್ನು ಬೆಸೆದು ಊದಿರುವ ಬಲೂನೊಂದನ್ನು ಗಾಳಿಯಲ್ಲಿ ಹಾರಾಡಿಸುತ್ತಾ ಇರಬೇಕು. ಕೈ ಬಿಟ್ಟರೆ ಔಟ್, ಬೆಲೂನ್ ಬಿದ್ದರೂ ಔಟ್. ಹೀಗೇ ಆಡಿಸುತ್ತಾ, ಕೊನೆಗೆರಡು ಜೋಡಿ ಉಳಿದರೆ, ತಮ್ಮ ಬಲೂನನ್ನು ಬಿಡಬಾರದು. ಮತ್ತೊಬ್ಬರ ಬಲೂನನ್ನು ಬೀಳಿಸುವ ಪ್ರಯತ್ನ ಮಾಡಬೇಕು ಎಂದು ಆಟವನ್ನು ಸಂಕೀರ್ಣಗೊಳಿಸುತ್ತಿದ್ದ.

ಈ ಆಟಗಳನ್ನು ಆಡುವ ಮಕ್ಕಳನ್ನು ಗಮನಿಸುತ್ತಾ ಇದ್ದಾಗ ಅವರಲ್ಲಿ ಕಂಡಿದ್ದು ಅತೀವ ಏಕಾಗ್ರತೆ. ಜೊತೆಗೆ ಹುರುಪು. ಕ್ರಿಯಾ ಶೀಲವಾಗಿರುವ ಆ ವಾತಾವರಣದಲ್ಲಿ ಮಕ್ಕಳು ಒತ್ತಡ ರಹಿತವಾಗಿ ತಮ್ಮ ಸಾಮರ್ಥ್ಯವನ್ನು ಚುರುಕು ಗೊಳಿಸಿಕೊಳ್ಳುತ್ತಿದ್ದರು. ಪಾರ್ಟಿ ಗೇಮ್ಸ್

ಇತ್ತೀಚೆಗೆ ನಗರಗಳಲ್ಲಿ ನಡೆಯುವ ಶ್ರೀಮಂತ ಮಕ್ಕಳ ದುಬಾರಿ ಬರ್ತ್ ಡೇ ಪಾರ್ಟಿಗಳಲ್ಲಿ ಪಾರ್ಟಿ ಗೇಂಗಳನ್ನು ಆಡಿಸುತ್ತಾರೆ. ವಿಶೇಷವಾಗಿ ಅದು ಮಕ್ಕಳಿಗೇ ಆದರೂ ಕೂಡ ಎಲ್ಲರನ್ನೂ ಚಟುವಟಿಕೆಯಿಂದಿಡಲು ಮತ್ತು ಹುರುಪಿನಿಂದಿರಿಸಲು ಹೆಂಗಸರಿಗೆ, ಗಂಡಸರಿಗೆ ಮತ್ತು ದಂಪತಿಗಳಿಗೆ ಅಥವಾ ಜೋಡಿಗಳಿಗೆ ವಿಶೇಷವಾಗಿ ಆಟಗಳನ್ನು ಆಡಿಸುತ್ತಾರೆ. ಆಟದಲ್ಲಿ ಕೊನೆಯ ಸುತ್ತಿಗೆ ಬಂದವರಿಗೆ ಅಥವಾ ಗೆದ್ದವರಿಗೆ ಕೆಲವು ಸಣ್ಣ ಸಣ್ಣ ಬಹುಮಾನಗಳನ್ನು ಕೊಡುತ್ತಾರೆ. ಮಕ್ಕಳು ಗೆದ್ದರೂ ಬಹುಮಾನ ಸೋತರೆ ಚಾಕೊಲೆಟ್‌ಗಳನ್ನು ಕೊಡುತ್ತಾರೆ. ಈ ಬಗೆಯ ಚಟುವಟಿಕೆಗಳಿಂದ ಮಕ್ಕಳೇ ಅಲ್ಲದೆ ಹಿರಿಯರೂ ಕೂಡ ಉಲ್ಲಸಿತರಾಗಿರುತ್ತಾರೆ. ನಿತ್ಯ ಕೆಲಸಗಳಲ್ಲಿ ತೊಡಗಿಕೊಂಡು ಸಾಧಾರಣವಾಗಿ ಅನಿವಾರ್ಯವಾಗಿ ದಿನಗಳನ್ನು ದೂಡುವವರಿಗೆ ಇಂತಹ ಆಟಗಳಿಂದ ಹುರುಪು ಮೂಡುತ್ತದೆ. ಹಿಂಜರಿಕೆ ಕಳೆದುಕೊಳ್ಳುತ್ತಾರೆ.

ಮುಖಹೇಡಿಗಳಾಗಿರುವವರೂ ಕೂಡ ಒಂದು ಹಂತಕ್ಕೆ ಮುಂದೆ ಬರಲು ಧೈರ್ಯ ತೋರುತ್ತಾರೆ. ತಮ್ಮಾಳಗೆಲ್ಲೋ ಬಚ್ಚಿಟ್ಟುಕೊಂಡಿರುವ ಸಾಮರ್ಥ್ಯದ ಅನಾವರಣವನ್ನು ಕೊಂಚ ಮಟ್ಟಿಗಾದರೂ ಮಾಡಿಕೊಳ್ಳುತ್ತಾರೆ. ಈ ಕ್ರೀಡಾ ಮನೋಭಾವ ಮತ್ತು ಚಟುವಟಿಕೆಗಳು ಮಕ್ಕಳಿಗೂ ಕೂಡ ಬಹಳ ಅಗತ್ಯ ಮತ್ತು ಅವರಿಗೆ ಇಷ್ಟವಾಗುತ್ತದೆ ಕೂಡ. ಇಂತಹ ಕ್ರೀಡೆಗಳಲ್ಲಿ ಭಾಗವಹಿಸುವಾಗ ಅವರಿಗೆ ಅರಿವಿನಲ್ಲಿರುವ ಮುಖ್ಯ ಸಂಗತಿಯೆಂದರೆ, ಇದೊಂದು ಸಂತೋಷ ನೀಡುವ ಕ್ರಿಯೆ ಎಂದು. ಇದರಲ್ಲಿ ಎಲ್ಲವೂ ತಮಾಷೆಗೆಯೇ ಹೊರತು, ಇನ್ನಾವುದೇ ಗಂಭೀರವಾಗಿರುವಂತಹ ವಿಷಯವಲ್ಲ ಎಂಬುದು. ದೊರಕುವ ಬಹುಮಾನ ಸಾಂಕೇತಿಕ ಎಂಬುದೇ ಹೊರತು ಅದು ಗುರಿಯಲ್ಲ ಎಂಬುದು. ಈ ಕ್ರೀಡೆಗಳಲ್ಲಿ ಯಾರೇ ಚೆನ್ನಾಗಿ ಭಾಗವಹಿಸಿದರೂ, ಅಥವಾ ಮೊದಲ ಹಂತಗಳಲ್ಲೇ ಸೋತು ಬಂದರೂ ಯಾರೂ ವಿಶೇಷ ಸನ್ಮಾನ ಮಾಡುವುದಿಲ್ಲ ಅಥವಾ ಯಾಕೆ ಸೋತೆ ಎಂದು ಕೇಳುವುದಿಲ್ಲ ಅಥವಾ ಅಪಮಾನಿಸುವುದಿಲ್ಲ ಎಂದು ಗೊತ್ತು.

ಈ ಆಟಗಳಲ್ಲಿ ಭಾಗವಹಿಸುವ ಯಾರೂ ಯಾವ ಪೂರ್ವ ಸಿದ್ಧತೆಯನ್ನೂ ಮಾಡಿಕೊಂಡಿರುವುದಿಲ್ಲ. (ಈ ಆಟಗಳನ್ನು ಆಡಿಸುವವರು ಮಾತ್ರ ಸಿದ್ಧತೆ ಮಾಡಿಕೊಂಡಿರುವರು.) ಆಟಗಳನ್ನು ಆಡುವವರಿಗೆ ಎಲ್ಲವೂ ಅನಿರೀಕ್ಷಿತವೂ, ಕೆಲವೊಮ್ಮೆ ವಿಸ್ಮಯವೂ ಆಗಿರುತ್ತದೆ. ಒಟ್ಟಾರೆ ಆಟ, ಸೋಲು, ಗೆಲುವು, ಬಹುಮಾನ, ಆಡಲಾಗದೇ ಹೋಗುವುದು; ಇವೆಲ್ಲವೂ ಬರಿಯ ಆ ಹೊತ್ತಿಗಾಗಿರುತ್ತದೆಯೇ ಹೊರತು ಅಲ್ಲಿಂದ ಹೊರಗೆ ಬರುವಾಗ ಅದನ್ನು ಕೊಂಚವೂ ಹೊತ್ತು ಸಾಗುವುದಿಲ್ಲ. ಆದರೆ ಉಲ್ಲಸಿತ ಮನೋಭಾವ, ಒತ್ತಡರಹಿತ ಮನಸ್ಥಿತಿ ಮತ್ತು ಹಿಗ್ಗಿನ ಭಾವದ ಹೃದಯದೊಂದಿಗೆ ಹೊರಗೆ ಬರುತ್ತಾರೆ. ಈ ಬಗೆಯ ಕ್ರಿಯಾಶೀಲವಾದಂತಹ ವಾತಾವರಣ ಮಕ್ಕಳಿಗೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ದೊರಕಬೇಕು. ಹಾಗೂ ಪೋಷಕರಾಗಲಿ, ಶಿಕ್ಷಕರಾಗಲಿ, ಮಗುವಿನೊಡನೆ ಅಲ್ಪ ಕಾಲ ಕಳೆಯುವ ಅತಿಥಿಗಳಾಗಲಿ ಮಗುವಿನ ಸಮಗ್ರ ಬೆಳವಣಿಗೆಗೆ ಪೂರಕವಾಗಿರುವಂತಹ ಇಂತಹ ರಚನಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು.

ಒಟ್ಟಾರೆ ಪೋಷಕರಾಗಿರಲಿ, ಶಿಕ್ಷಕರಾಗಿರಲಿ, ಅತಿಥಿಗಳಾಗಲಿ ಮಕ್ಕಳೊಡನೆ ನಾವು ಪ್ರಯೋಗಶೀಲವಾಗಿರಬೇಕು. ಪ್ರಯೋಗಶೀಲ ಎನ್ನುವ ಒಂದು ಕ್ರಿಯಾತ್ಮಕ ಧೋರಣೆ ಮತ್ತು ಚಟುವಟಿಕೆಗಳು ಇಡೀ ವಾತಾವರಣವನ್ನು ರಚನಾತ್ಮಕಗೊಳಿಸುತ್ತದೆ.

ಚಪಲತೆಯಿಂದ ಅಭಿರುಚಿಗೆ

ಚಾಕೊಲೆಟ್, ಐಸ್ ಕ್ರೀಂ, ಮತ್ಯಾವುದೋ ಗರಿಗರಿ ತಿನಿಸುಗಳನ್ನು ತಿನ್ನುವಂತಹ ಚಪಲಗಳು ಮಕ್ಕಳಿಗೆ ಬಹುಬೇಗ ಅಂಟಿಕೊಳ್ಳುತ್ತವೆ. ಈ ಚಪಲವು ಒಮ್ಮಿಂದೊಮ್ಮೆಲೇ ಬರುವುದೇನಲ್ಲ. ಸಾಮಾನ್ಯವಾಗಿ ಅವರಿಗೆ ಅದರ ಬಗ್ಗೆ ಅರಿವಿಲ್ಲದಿರುವಾಗ ದೊಡ್ಡವರು ಮಾಡಿಸಿದ ಅಭ್ಯಾಸಕ್ಕೆ ಅವರು ಮಾರು ಹೋಗಿರುತ್ತಾರೆ. ಮತ್ತೂ ವಿಶೇಷವೆಂದರೆ ದೊಡ್ಡವರು ಮಕ್ಕಳ ಎದುರು ಅದನ್ನು ಪುನರಾವರ್ತಿತವಾಗಿ ಹೇಳುತ್ತಲೂ ಕೊಡಿಸುತ್ತಲೂ ಇರುವುದರಿಂದ ಅಂತಹವೆಲ್ಲಾ ಚಟವಾಗಿ ಮಾರ್ಪಾಡಾಗುತ್ತವೆ. ಒಟ್ಟಾರೆ ಮಕ್ಕಳಲ್ಲಿ ಯಾವುದೇ ಚಪಲತೆ ಉಂಟಾಗಲು ದೊಡ್ಡವರೇ ಕಾರಣ ಎಂಬುದು ಸ್ಪಷ್ಟ.

ಚಪಲತೆ ಎಂದರೇನೆಂದು ಮೊದಲು ತಿಳಿದುಕೊಳ್ಳೋಣ. ಯಾವುದೇ ಒಂದು ರುಚಿಗೆ ಮರುಳಾಗಿರುವುದು ಮತ್ತು ಅದು ಬೇಕೆಂದು ಪದೇ ಪದೇ ಬಯಸುತ್ತಿರುವುದು. ಅಲ್ಲದೇ ಅದು ಅಗತ್ಯವಿದೆಯೋ ಇಲ್ಲವೋ ಎಂಬುದನ್ನು ಪರಿಗಣಿಸದೇ ಇರುವುದು. ಚಪಲತೆಯು ಏಕ ಪ್ರಕಾರವಾದ ವಸ್ತುವನ್ನೇ ಅಥವಾ ಅದೇ ಬಗೆಯ ವಸ್ತುಗಳನ್ನೇ ಬಯಸುತ್ತಿರುತ್ತದೆ. ಯಾವುದೇ ಚಪಲತೆಯನ್ನು ಕಡಿಮೆಗೊಳಿಸಲು ಅಥವಾ ಆದಷ್ಟು ಇಲ್ಲವಾಗಿಸಲು ನೆರವಾಗುವುದೆಂದರೆ ವಿವಿಧ ಹೊಸತುಗಳನ್ನು ಪರಿಗಣಿಸುವ ಅಥವಾ ಆಸ್ವಾದಿಸುವ ಅಭಿರುಚಿ. ಗಮನಿಸಿ ನೋಡಿ ಒಮ್ಮೆ ವಿವಿಧ ವಿಷಯಗಳನ್ನು, ವಿವಿಧ ರುಚಿಗಳನ್ನು, ವಿವಿಧ ಆಸಕ್ತಿಗಳನ್ನು ಬಹಳ ಆಪ್ತವಾಗಿ ಅಭ್ಯಾಸ ಮಾಡಿಕೊಂಡವರಿಗೆ ಚಪಲತೆಯ ಪ್ರಭಾವಗಳು ಕಡಿಮೆ. ಏಕೆಂದರೆ, ವಿವಿಧತೆಗಳನ್ನು ಆನಂದಿಸುವವರಿಗೆ ಯಾವುದೋ ಒಂದು ವಸ್ತುವಿಗೆ ಅಥವಾ ರುಚಿಗೆ ವ್ಯಸನಿಯಾಗುವಂತಹ ಅವಕಾಶಗಳು ತೀರಾ ಕ್ಷೀಣವಾಗುವುದು. ಜೊತೆಗೆ ಒಂದೇ ಬಗೆಯ ರುಚಿಯೂ ಅವರಿಗೆ ಬೇಡವೆನಿಸುವುದು. ಹಾಗಾಗಿಯೇ ಮಕ್ಕಳಿಗೂ ಕೂಡ ವಿವಿಧತೆಗಳನ್ನು ಗುರುತಿಸುವಂತಹ ಅಭ್ಯಾಸವನ್ನು ಮಾಡಿಸಬೇಕು. ವಿವಿಧ ವಿಷಯಗಳಲ್ಲಿ ಅಭಿರುಚಿಗಳನ್ನು ಬೆಳೆಸಬೇಕು.

ಯಾವುದಾದರೂ ಒಂದು ವಿಷಯವನ್ನು ಮುಂದಿಟ್ಟಾಗ ಹಲವರು ಹಲವು ರೀತಿಗಳಲ್ಲಿ ಅಭಿವ್ಯಕ್ತಿಸುವರು.

1.ಆ ವಿಷಯ ನನಗೆ ಆಸಕ್ತಿ ಇಲ್ಲ ಎಂದು ನಿರಾಕರಿಸುವರು.

2.ಅವರಿಗೆ ನಿಜವಾಗಿಯೇ ಆಸಕ್ತಿ ಇದ್ದು ತೀವ್ರ ಕುತೂಹಲ ತೋರುವರು.

3.ಇಷ್ಟವಾಗದಿದ್ದರೂ, ಕಷ್ಟಪಟ್ಟು ಸ್ಪಲ್ಪ ಹೊತ್ತು ಅವರನ್ನು ಸಹಿಸಿಕೊಳ್ಳುವರು.
    
4.ಓಹ್ ಇಂಟರೆಸ್ಟಿಂಗ್ ಎಂದು ಆ ವಿಷಯವನ್ನು ಗಮನಿಸಲು ಯತ್ನಿಸುವರು.

5.ವಿಷಯವನ್ನು ಪ್ರಸ್ತುತ ಪಡಿಸುತ್ತಿರುವವರಿಗೆ ಬೇಸರವಾಗಬಾರದೆಂದು ಪ್ರೋತ್ಸಾಹಕರವಾಗಿ ವರ್ತಿಸುವರು.

6.ವಿಷಯವನ್ನು ತಿಳಿಯುತ್ತಾ ತಾವು ತಿಳಿದಿರುವಂತಹ ವಿಷಯವನ್ನು ಸ್ಮರಣೆಗೆ ತಂದುಕೊಂಡು ಸಾಮ್ಯತೆಗಳನ್ನು ಗುರುತಿಸುವರು. ಕೆಲವೊಮ್ಮೆ ತಮ್ಮ ಅಧ್ಯಯನದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವರು. ವಿಷಯವನ್ನು ತಿಳಿಸುವವರಿಗೇ ಅದರ ಬಗ್ಗೆ ಸ್ಪಷ್ಟತೆಗಳನ್ನು ನೀಡುವರು.

ಇವುಗಳಲ್ಲಿ ನಾಲ್ಕನೆಯ ವರ್ಗದ ಜನರು ತಮ್ಮ ಗಮನವನ್ನು ಪ್ರಾಮಾಣಿಕವಾಗಿರಿಸಿಕೊಂಡಿದ್ದೇ ಆದರೆ ಆರನೆಯ ವರ್ಗದವರಾಗುವರು. ಆರನೆಯ ವರ್ಗದ ಜನರು ಕುಶಲಿಗಳೂ, ಅಧ್ಯಯನಪರರೂ ಮತ್ತು ವಿಚಾರವಂತರೂ ಆಗಿರುತ್ತಾರೆ. ಚಂಚಲತೆಯನ್ನು ಚಲನಶೀಲತೆಗೊಳಿಸಿದ್ದಲ್ಲಿ, ಚಪಲತೆಯನ್ನು ವೈವಿಧ್ಯದ ಅಭಿರುಚಿಗೆ ಹೊರಳಿಸಿದ್ದಲ್ಲಿ ಮಕ್ಕಳು ಸಹಜವಾಗಿ ತಮ್ಮ ಓದಿನ ಮತ್ತು ಕಲಿಕೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಅರಿವಿನ ಹರವನ್ನು ವಿಕಸಿಸಿಕೊಳ್ಳಬಲ್ಲರು.

ಚಂಚಲತೆಯಿಂದ ಚಲನಶೀಲತೆ

ಮಕ್ಕಳೊಡನೆ ಕಳೆಯುವಂತಹ ದೀರ್ಘ ಸಮಯವಾಗಲಿ, ಅಲ್ಪ ಸಮಯವಾಗಲಿ; ಅವರೊಡನೆ ಹಿರಿಯರಾದ ನಾವೆಷ್ಟು ಪ್ರಯೋಗಶೀಲವಾಗಿದ್ದೆವು ಎಂಬುದನ್ನು ನಾವು ಗಮನಿಸಿಕೊಳ್ಳಬೇಕು. ನಾವು ಪ್ರಯೋಗಶೀಲವಾದಷ್ಟು ಮಕ್ಕಳು ಹುರುಪುಗೊಳ್ಳುತ್ತವೆ. ಅವರು ತಮ್ಮ ಬುದ್ಧಿ ಮತ್ತು ಕೌಶಲ್ಯಗಳನ್ನು ಚುರುಕುಗೊಳಿಸಿಕೊಳ್ಳುತ್ತಾರೆ.

ಮಕ್ಕಳದೇ ಮಾತ್ರವಲ್ಲ ಯಾರೊಬ್ಬರ ಮನಸ್ಸೂ ಸಾಮಾನ್ಯವಾಗಿ ಚಂಚಲತೆಯಿಂದ ಇರುತ್ತದೆ. ಈ ಚಂಚಲತೆಯು ಸ್ವರೂಪದಲ್ಲಿ ಚಲಿಸುವಂತಾಗಿದ್ದರೂ, ಗುಣದಲ್ಲಿ ಅಷ್ಟೊಂದು ಸಕಾರಾತ್ಮಕವಾಗೇನೂ ಇರುವುದಿಲ್ಲ. ಚಲನಶೀಲತೆಯು ಸ್ವರೂಪದಲ್ಲಿ ಚಲಿಸುವಂತಹುದಾಗಿದ್ದರೂ ಗುಣದಲ್ಲಿ ಸಕಾರಾತ್ಮಕವಾಗಿರುತ್ತದೆ ಮತ್ತು ವಿಕಾಸಪರವಾಗಿರುತ್ತದೆ.

ಮಕ್ಕಳಿಗೆ ಸಹಜವಾಗಿಯೇ ಇರುವ ಚಂಚಲತೆಯನ್ನು ಚಲನಶೀಲತೆಯನ್ನಾಗಿ ಮಾರ್ಪಡಿಸುವುದು ಹೇಗೆಂದರೆ ಪ್ರತಿಯೊಂದು ವಸ್ತುವಿನಲ್ಲಿಯೂ ಕುತೂಹಲ ಮೂಡಿಸುವುದು. ‘‘ಓಹ್ ಇಟ್ಸ್ ವೆರಿ ಇಂಟರೆಸ್ಟಿಂಗ್’’ ಎಂದು ತೆಗೆಯುವ ಉದ್ಗಾರ ಸಾಮಾನ್ಯವಾಗಿ ಗಮನಾರ್ಹವೆಂದೂ, ಮಾನ್ಯತೆ ಪಡೆಯುವುದು ಎಂದೂ ಭಾಸವಾಗುವುದು ಸಾಮಾನ್ಯ. ಅದೇ ಮಕ್ಕಳ ಜೊತೆಯಲ್ಲಿದ್ದಾಗಲೂ ಆಗಬೇಕಾಗಿರುವುದು. ಮಕ್ಕಳು ಚಂಚಲತೆಯಿಂದ ಚಲಿಸುವಾಗ ಅವರು ಸಂಪರ್ಕಕ್ಕೆ ಬರುವ ಪ್ರತೀ ವಿಷಯದ ಬಗ್ಗೆಯೂ ಹಿರಿಯರು ಆಸಕ್ತಿ ತೋರಿಸುವುದು, ಗಮನಿಸಿ ಅದರ ವಿಶಿಷ್ಟತೆಯನ್ನು ಕುರಿತು ಮಾತಾಡುವುದನ್ನು ಮಾಡಿದರೆ, ಮಕ್ಕಳು ಸಹಜವಾಗಿ ಅದರ ಬಗ್ಗೆ ಕುತೂಹಲವನ್ನು ಬೆಳೆಸಿಕೊಳ್ಳುತ್ತಾರೆ.

ಒಂದು ವಸ್ತುವಿನಿಂದ ಮತ್ತೊಂದು ವಸ್ತುವಿಗೆ, ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಅನ್ಯಮನಸ್ಕರಾಗಿ ಸಂಪರ್ಕಕ್ಕೆ ಬರುವಹಾಗೆ ಬಂದು ಹಾದು ಹೋಗುವುದು ಚಂಚಲತೆಯಾದರೆ, ಯಾವ ವಿಷಯದ, ವಸ್ತುವಿನ ಸಂಪರ್ಕಕ್ಕೆ ಬಂದಾಗ ಅದರ ಬಗ್ಗೆ ಕುತೂಹಲವನ್ನು ಹೊಂದುವುದು, ಅದರ ವೈಶಿಷ್ಟ್ಯತೆಯನ್ನು ಗಮನಿಸುವುದು, ಆಸಕ್ತಿಯಿಂದ ಒಳ ಹೊರಗನ್ನು ಕಾಣಲು ಪ್ರಯತ್ನಿಸುವ ಗುಣ ಚಲನಶೀಲತೆಗೆ ಕಾರಣವಾಗುವುದು. ಇಂತಹ ಚಲನಶೀಲತೆ ಮಕ್ಕಳಲ್ಲಿ ಮನೋವಿಕಾಸಕ್ಕೆ ಕಾರಣವಾಗುವುದಲ್ಲದೆ ಅವರು ಯಾವುದೇ ವಿಷಯದಲ್ಲಿ ಪೂರ್ವಾಗ್ರಹ ಪೀಡಿತರಾಗದೆ ವಸ್ತುನಿಷ್ಟರಾಗಿರುವಂತಹ ಗುಣವನ್ನೂ ಕೂಡ ಅದು ಬೆಳೆಸುತ್ತದೆ. ಅವರ ಜ್ಞಾನ ಮತ್ತು ವಿಜ್ಞಾನದ ಪರಿಧಿ ವಿಸ್ತಾರವಾಗುತ್ತಾ ಹೋಗುತ್ತದೆ.

ಅಷ್ಟೇ ಅಲ್ಲದೆ ಕಾಣುವ ವಸ್ತುವಿನ ಆಚೆಗೆ ನೋಡುವಂತಹ ಈ ಅಭ್ಯಾಸದಿಂದ ಸಂಶೋಧನಾ ಮನೋಭಾವ, ವೈಜ್ಞಾನಿಕವಾಗಿ ವಿಶ್ಲೇಷಿಸುವಂತಹ ಮನೋಧರ್ಮವೂ ಬೆಳೆಯುತ್ತಾ ಅವರು ಸಂಶೋಧನೆ ಮತ್ತು ಮರುಶೋಧನೆಗಳನ್ನು ಮಾಡುವಂತಹ ಸಾಹಸಗಳಿಗೂ ಮುಂದಾಗುತ್ತಾರೆ. ಏನಿಲ್ಲ, ಮಕ್ಕಳನ್ನು ತಮ್ಮ ಕಾರಿನಲ್ಲಿ ಓಡಾಡಿಸುವ ಎಷ್ಟು ಜನ ಪೋಷಕರು ಕಾರಿನ ತಂತ್ರಜ್ಞಾನದ ಬಗ್ಗೆ ರೇಖಾ ಚಿತ್ರಗಳನ್ನು ತೋರಿಸಿ ವಿವರಿಸುತ್ತಾರೆ? ಮನೆಯಲ್ಲಿ ಅಡುಗೆ ಅನಿಲ ಬಳಸುವ ಎಷ್ಟು ಜನ ತಾಯಂದಿರು ಅಡುಗೆ ಅನಿಲದ ಸಂಯುಕ್ತ ರಾಸಾಯನಿಕಗಳನ್ನು ಮಕ್ಕಳಿಗೆ ಹೇಳಿದ್ದಾರೆ? ಈಗ ಇಂಟರ್ನೆಟ್ ಯುಗದಲ್ಲಿ ವಿಷಯವನ್ನು ತಿಳಿದುಕೊಳ್ಳುವುದು ನಿಜಕ್ಕೂ ಏನೇನೂ ಕಷ್ಟವಲ್ಲ. ಆದರೆ ಹೀಗೆ ಮಾಡಬೇಕೆಂದು ಹೊಳೆಯುವುದೇ ಇಲ್ಲ. ಮಕ್ಕಳು ಕೇಳಿದರೆ ಮಾತ್ರ ಹೇಳುವ ಪೋಷಕರು ಕೆಲವರು.

ಆದರೆ ಅವರು ಕೇಳದೇ ಇದ್ದರೂ ಅಂತಹ ವಿಷಯಗಳನ್ನು ಹಂಚಿಕೊಳ್ಳುತ್ತಾ ವಸ್ತುಗಳಲ್ಲಿನ ರಚನೆ ಮತ್ತು ಗುಣಗಳ ತಿಳಿದುಕೊಳ್ಳುವುದರಲ್ಲಿ ಆಸಕ್ತಿ ಮೂಡಿಸಿಕೊಳ್ಳುತ್ತಾ, ವಸ್ತುಗಳಾಚೆಯ ವಿಷಯಗಳಲ್ಲಿ ಕುತೂಹಲ ಬೆಳೆಸಿಕೊಳ್ಳುತ್ತಾ ಹೋಗುವಂತಹ ಅಭ್ಯಾಸವಾಗಬೇಕಾಗಿರುವುದು ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ. ಆಗಲೇ ಚಂಚಲತೆಯಿಂದ ಚಲನಶೀಲತೆಗೆ ಮಕ್ಕಳು ವಾಲುವರು. ಹಾಗೆಯೇ ಚಪಲತೆಯಿಂದ ಅಭಿರುಚಿಯ ಕಡೆಗೂ ಕೂಡ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News