ಕನ್ನಡದ ದುರ್ಯೋಧನನ ಮನಸ್ಸು!

Update: 2017-05-14 18:51 GMT

ಕನ್ನಡ ಭಾಷೆ ಮತ್ತು ಬದುಕನ್ನು ಕೇಂದ್ರಸ್ಥಾನದಲ್ಲಿಟ್ಟುಕೊಂಡ ಕೃತಿಯೇ ಬರಗೂರು ರಾಮಚಂದ್ರಪ್ಪ ಅವರ ಕನ್ನಡ ಪ್ರಜ್ಞೆ. ಕನ್ನಡ ವಿಶ್ವವಿದ್ಯಾನಿಲಯದ ಪ್ರಸಾರಾಂಗವು ಈ ಕೃತಿಯನ್ನು ಮೊದಲು ಪ್ರಕಟಿಸಿದ್ದು. ಇದೀಗ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮರು ಮುದ್ರಣಗೊಂಡಿದೆ. ವಿವಿಧ ಸಂದರ್ಭಗಳಲ್ಲಿ ಬರೆದಿರುವ ಲೇಖನಗಳು ಇವುಗಳಾದರೂ, ಕನ್ನಡ ಪ್ರಜ್ಞೆಯ ಜೊತೆಗೆ ವರ್ತಮಾನವೊಂದನ್ನು ಕಟ್ಟುವ ಅಗತ್ಯವನ್ನು ಎತ್ತಿ ಹಿಡಿಯುವ ಬರಹಗಳು ಇವುಗಳಾಗಿವೆ. ಒಟ್ಟು 34 ಬರಹಗಳು ಇಲ್ಲಿವೆ. ಬೇರೆ ಬೇರೆ ಕಾಲಘಟ್ಟದಲ್ಲಿ ಕನ್ನಡ ಅಭಿಮಾನದ ಮಾದರಿಗಳನ್ನು ಶೋಧಿಸುವ ಸುದೀರ್ಘ ಲೇಖನ 'ಕನ್ನಡಾಭಿಮಾನ. ಭಾಷಾಭಿಮಾನವು ತನ್ನ ಮೂಲ ನೆಲೆಗಳನ್ನು ಬಿಟ್ಟುಕೊಡದೆ ಬದಲಾಗುತ್ತಿರುವ ಸನ್ನಿವೇಶಕ್ಕನುಗುಣವಾಗಿ ಹೊಸ ಸವಾಲುಗಳಿಗೆ ಉತ್ತರ ಹುಡುಕುವ ತಾತ್ವಿಕ ಗಟ್ಟಿತನವನ್ನು ಪಡೆಯುವ ಅಗತ್ಯವನ್ನು ಈ ಲೇಖನದಲ್ಲಿ ಉಲ್ಲೇಖಿಸುತ್ತಾರೆ ಮತ್ತು ಅದಕ್ಕಾಗಿಯೇ ಕನ್ನಡದ ಸುದೀರ್ಘ ಇತಿಹಾಸ, ಪರಂಪರೆಯ ಉದಾಹರಣೆಗಳನ್ನು ಕೊಡುತ್ತಾ, ವರ್ತಮಾನದ ಕನ್ನಡದ ಬಿಕ್ಕಟ್ಟುಗಳನ್ನು ಮುಂದಿಡುತ್ತಾರೆ. 'ಸಂಕಟವಿಲ್ಲದ ಸಿಟ್ಟು, ಅಂತಃಕರಣವಿಲ್ಲದ ಆಕ್ರೋಶಗಳು ಕೇವಲ ಕಂಠವನ್ನಷ್ಟೇ ವಿಜೃಂಭಿಸುತ್ತವೆ' ಎಂದು ಎಚ್ಚರಿಸುವ ಅವರು, ಇಂದು ಕನ್ನಡಕ್ಕೆ ಬೇಕಾದದ್ದು ನಾಗರವಾಗದ ನಾಲಗೆ, ದೂರಗಾಮಿ ಬೆಳವಣಿಗೆ ಮತ್ತು ಕರುಳಿನ ಕನ್ನಡಾಭಿಮಾನ ಎಂದು ಅಭಿಪ್ರಾಯಪಡುತ್ತಾರೆ.

'ಕನ್ನಡ ಮನಸ್ಸು; ಸಾಹಿತ್ಯಕ-ಸಾಂಸ್ಕೃತಿಕ ಸ್ವರೂಪ' ಕೃತಿಯ ಇನ್ನೊಂದು ಮಹತ್ವದ ಚಿಂತನೆ. ಕನ್ನಡ ಮನಸ್ಸು ಎಂದರೆ ಏನು ಎನ್ನುವುದನ್ನು ಅವರು ಈ ಲೇಖನದಲ್ಲಿ ಚರ್ಚಿಸುತ್ತಾರೆ. ಕನ್ನಡ ಮನಸ್ಸು ಎಂದರೆ ಭಾಷೆಯೊಂದರ ಮೂಲಕ ರೂಪುಗೊಂಡ ಮಾನಸಿಕ ಸ್ಥಿತಿಯೇ? ಅಥವಾ ಭಾಷೆಯನ್ನು ಮೀರಿದ ಪ್ರಾದೇಶಿಕ ಮನೋಧರ್ಮವೇ? ಅಥವಾ ಭಾಷೆ ಮತ್ತು ಪ್ರದೇಶಗಳೊಂದಾಗಿ ಸಂಭವಿಸಿದ ಅನುಭವದ ಮೊತ್ತವೇ? ಮೊದಲಾದ ಪ್ರಶ್ನೆಗಳನ್ನಿಟ್ಟು ಕನ್ನಡ ಮನಸ್ಸನ್ನು ಅವರು ನಿರ್ವಚಿಸುತ್ತಾರೆ. ಕನ್ನಡ ಮನಸ್ಸು ಹೇಗೆ ಧರ್ಮ ದ್ವೀಪಗಳನ್ನ ದಾಟುತ್ತಾ ಮನುಷ್ಯ ಸಹಜ ಹಾದಿಗಳನ್ನು ಹುಡುಕುತ್ತಾ ಬಂದಿದೆ ಎನ್ನುವುದನ್ನು ಹಳೆಗನ್ನಡ ಕವಿಗಳ ಕಾವ್ಯಗಳನ್ನು ಇಟ್ಟುಕೊಂಡು ಚರ್ಚಿಸುತ್ತಾರೆ. ತತ್ವಪದಕಾರರಲ್ಲಿ ಅನೇಕ ಮುಸ್ಲಿಮರು ಇದ್ದುದರಿಂದ ಅದನ್ನು 'ಕೋಮು ಸಾಮರಸ್ಯ'ಕ್ಕೆ ತಳಕು ಹಾಕುವುದನ್ನು ನಿರಾಕರಿಸುವ ಬರಗೂರರು, ಆ ಕಲ್ಪನೆಗೂ ತತ್ವಪದಕಾರರ ಪ್ರತಿಪಾದನೆಗೂ ಸಂಬಂಧವಿಲ್ಲ ಎನ್ನುತ್ತಾರೆ. ಕೋಮುನೆಲೆಗಳನ್ನು ಮೀರಿದ ಮನಸ್ಸಿನವರು ಎಂದು ಅವರನ್ನು ಗುರುತಿಸುತ್ತಾರೆ. ಒಂದು ರೀತಿ, ಕನ್ನಡ ಮನಸ್ಸನ್ನು ಅರ್ಥಮಾಡಿಕೊಳ್ಳುವ ಹೆಸರಿನಲ್ಲಿ ಕನ್ನಡ ಕಾವ್ಯ ಹಾದು ಬಂದ ದಾರಿಗಳನ್ನು ಅವರು ಅವಲೋಕಿಸುತ್ತಾರೆ.ಕನ್ನಡದ ದುರ್ಯೋಧನ ಮನಸ್ಸನ್ನು ಅವರು ಗುರುತಿಸುತ್ತಾರೆ. ಭಾಷೆ ಮತ್ತು ತಂತ್ರಜ್ಞಾನ, ಪ್ರಾಥಮಿಕ ಶಿಕ್ಷಣ-ಭಾಷೆ ಮತ್ತು ಮಾಧ್ಯಮ, ಆಡಳಿತದಲ್ಲಿ ಕನ್ನಡ-ನಿಯಮಗಳ ನಡೆ, ಉದ್ಯಮ-ಉದ್ಯೋಗ ಮತ್ತು ಕನ್ನಡ, ಗಡಿನಾಡು ಎಂಬ ಗರಡಿ ಮನೆ...ವರ್ತಮಾನದ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಹೇಳುವ ಮಹತ್ವದ ಬರಹಗಳು ಈ ಕೃತಿಯಲ್ಲಿವೆ.

ಕನ್ನಡ ಸಾಹಿತ್ಯ ಪರಿಷತ್ ಹೊರತಂದಿರುವ ಕೃತಿಯ ಮುಖಬೆಲೆ 150 ರೂಪಾಯಿ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News