ತ್ವರಿತಗೊಂಡಿರುವ ಸೇನಾಪಡೆಗಳ ಕೇಸರೀಕರಣ

Update: 2017-05-15 18:17 GMT

ಭಾಗ-1

ಅಲ್ಪಸಂಖ್ಯಾತರನ್ನು ಬಗ್ಗುಬಡಿದು ಅವರನ್ನು ದ್ವಿತೀಯ ದರ್ಜೆಯ ಪ್ರಜೆಗಳಾಗಿಸುವ ಹುನ್ನಾರದ ಭಾಗವಾಗಿ ಸೇನಾಪಡೆಗಳನ್ನು ಕೇಸರೀಕರಣಗೊಳಿಸಲಾಗುತ್ತಿದೆ. ವಾಜಪೇಯಿ ಸರಕಾರದ ಅವಧಿಯಲ್ಲಿ ಅದರ ಅನುಷ್ಠಾನದ ವೇಗ ಭಾರೀ ಹೆಚ್ಚಳ ಕಂಡಿತ್ತು. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಂತೂ ಈ ಪ್ರಕ್ರಿಯೆ ಹಿಂದೆಂದಿಗಿಂತ ಹೆಚ್ಚು ತ್ವರಿತಗತಿಯಲ್ಲಿ ಸಾಗುತ್ತಿದೆ.

ಸೇನಾಪಡೆಗಳ ಕೇಸರೀಕರಣ ಆರೆಸ್ಸೆಸ್‌ನ ರಹಸ್ಯ ಕಾರ್ಯಸೂಚಿಯ ಒಂದು ಭಾಗವಾಗಿದ್ದು ಆ ನಿಟ್ಟಿನಲ್ಲಿ ಅದು ಬಹಳ ಹಿಂದಿನಿಂದಲೂ ಕಾರ್ಯಪ್ರವೃತ್ತವಾಗಿದೆ. ಅಲ್ಪಸಂಖ್ಯಾತರನ್ನು ಬಗ್ಗುಬಡಿದು ಅವರನ್ನು ದ್ವಿತೀಯ ದರ್ಜೆಯ ಪ್ರಜೆಗಳಾಗಿಸುವ ಹುನ್ನಾರದ ಭಾಗವಾಗಿ ಸೇನಾಪಡೆಗಳನ್ನು ಕೇಸರೀಕರಣಗೊಳಿಸಲಾಗುತ್ತಿದೆ. ವಾಜಪೇಯಿ ಸರಕಾರದ ಅವಧಿಯಲ್ಲಿ ಅದರ ಅನುಷ್ಠಾನದ ವೇಗ ಭಾರೀ ಹೆಚ್ಚಳ ಕಂಡಿತ್ತು. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಂತೂ ಈ ಪ್ರಕ್ರಿಯೆ ಹಿಂದೆಂದಿಗಿಂತ ಹೆಚ್ಚು ತ್ವರಿತಗತಿಯಲ್ಲಿ ಸಾಗುತ್ತಿದೆ. ಸೇನಾಪಡೆಗಳು ಕೇಸರೀಕರಣಗೊಂಡರೆ ಅಲ್ಪಸಂಖ್ಯಾತರ ಪಾಲಿಗೆ ಅವರ ಕೊನೆಯ ಆಸರೆಯೂ ಇಲ್ಲದಂತಾಗಲಿದೆ. ಏಕೆಂದರೆ ಎಲ್ಲರಿಗೂ ತಿಳಿದಿರುವ ಹಾಗೆ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ಪೊಲೀಸರ ದಾಖಲೆ ತೀರ ಕೆಟ್ಟದಾಗಿದೆ. ಸೇನಾಪಡೆಗಳ ಕೇಸರೀಕರಣ ತ್ವರಿತಗತಿಯಲ್ಲಿ ಮುಂದುವರಿದಿರುವುದಕ್ಕೆ ಹಲವು ನಿದರ್ಶನಗಳನ್ನು ಕೊಡಬಹುದು.

ಸಂವಿಧಾನ ವಿರೋಧಿ ಕಾರ್ಯಕ್ರಮದಲ್ಲಿ ಸೇನಾಧಿಕಾರಿಗಳು

ಮೊನ್ನೆ ಮೇ 2ರಂದು ದಿಲ್ಲಿಯಲ್ಲೊಂದು ಸರಕಾರಿ ಕಾರ್ಯಕ್ರಮ ಜರಗಿತು. ಇಂತಹ ನೂರಾರು ಸರಕಾರಿ ಕಾರ್ಯಕ್ರಮಗಳು ಪ್ರತಿನಿತ್ಯ ನಡೆಯುತ್ತಲೇ ಇರುವಾಗ ಇದರಲ್ಲೇನು ವಿಶೇಷ ಎಂಬ ಪ್ರಶ್ನೆ ಸಹಜವೆ ಆಗಿದೆ. ಅದೇನೆಂದು ನೋಡೋಣ. ವಿಷಯ ಏನೆಂದರೆ ಅದೊಂದು ಭಾರತೀಯ ಸೈನಿಕರನ್ನು ಗೌರವಿಸುವ ಕಾರ್ಯಕ್ರಮವಾಗಿತ್ತು. ಸಭೆಯಲ್ಲಿ ಭೂಸೇನೆಯ ಉಪಮುಖ್ಯಸ್ಥ ಲೆ ಜ ಸರತ್ ಪಾಂಡೆ, ನೌಕಾಸೇನೆಯ ರಿ ಆ ಕ್ರಿಷನ್ ಪಾಂಡೆ, ವಾಯುಸೇನೆಯ ಏ ಮಾ ಎಚ್.ಎನ್. ಭಾಗವತ್, ರಕ್ಷಣಾ ಖಾತೆಯ ಉಪಸಚಿವ ಸುಭಾಸ್ ಭಾಮ್ರೆ, ಆರೆಸ್ಸೆಸ್‌ನ ಮಾಜಿ ಪ್ರಚಾರಕನೂ ಹಾಲಿ ರಾಜಕಾರಣಿಯೂ ಆಗಿರುವ ತರುಣ್ ವಿಜಯ್ ಮುಂತಾದವರು ಉಪಸ್ಥಿತರಿದ್ದರು. ಅಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರಿಂದ ‘ವಿದ್ಯಾ ವೀರತಾ ಅಭಿಯಾನ’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆದರೆ ನಿಜವಾಗಿ ವಿದ್ಯೆ ಅಥವಾ ಜ್ಞಾನದೊಂದಿಗೆ ಪ್ರಧಾನವಾಗಿ ಬೆಳೆಯಬೇಕಿರುವುದು ವಿನಯವೇ ಹೊರತು ಶೌರ್ಯ ಅಲ್ಲ. ಇಲ್ಲಿ ವಿದ್ಯೆಯನ್ನು ವೀರತೆ ಅರ್ಥಾತ್ ಶೌರ್ಯದೊಂದಿಗೆ ಜೋಡಿಸಿರುವುದರ ಹಿಂದೆ ಒಂದು ದುರುದ್ದೇಶವಿರುವಂತೆ ತೋರುತ್ತದೆ. ಏಕೆಂದರೆ ಹಿಂದೂ ಮಕ್ಕಳಲ್ಲಿ ಇದೇ ವಿದ್ಯೆ, ಶೌರ್ಯಗಳನ್ನು ಬೆಳೆಸುವುದಕ್ಕೋಸ್ಕರ ಸಂಘ ಪರಿವಾರ ಕನಿಷ್ಠ ಎರಡು ಕಡೆಗಳಲ್ಲಿ ವಿಶಿಷ್ಟ ಶಿಕ್ಷಣಸಂಸ್ಥೆಗಳನ್ನು ನಡೆಸುತ್ತಿದೆ. ಭೋನ್ಸಾಲಾ ಮಿಲಿಟರಿ ಶಾಲೆ ಎಂಬ ಹೆಸರಿನ ಈ ಸಂಸ್ಥೆಗಳು ಮಹಾರಾಷ್ಟ್ರದ ನಾಗಪುರ ಮತ್ತು ನಾಸಿಕಗಳಲ್ಲಿವೆ. ಇವೆರಡನ್ನೂ ಸ್ಥಾಪಿಸಿದ ಡಾ ಬಿ.ಎಸ್. ಮೂಂಜೆ ಆರೆಸ್ಸೆಸ್‌ನ ಸಂಸ್ಥಾಪಕರಲ್ಲೊಬ್ಬರು. ಮೂಂಜೆಯ ಅಚ್ಚುಮೆಚ್ಚಿನ ಉಲ್ಲೇಖವೆಂದರೆ ಎವಾಲ್ಡ್ ಬನ್ಸೆ ಎಂಬ ಜರ್ಮನ್ ಪ್ರೊಫೆಸರ್ ಬರೆದ ‘ಮಿಲಿಟರಿ ವಿಜ್ಞಾನ’ ಪುಸ್ತಕದ ಸಾಲುಗಳು: ‘‘ಮರಣಶಯ್ಯೆಯಲ್ಲಿರುವ ಯೋಧನೊಬ್ಬನಿಗೆ ತನ್ನ ರಕ್ತ ತನ್ನ ರಾಷ್ಟ್ರದೇವತೆಗಾಗಿ ಹರಿದುಹೋಗುತ್ತಿದೆಯೆಂದು ಗೊತ್ತಿದ್ದಾಗ ಆತ ಹೆಚ್ಚು ನಿಶ್ಚಿಂತನಾಗಿ ಸಾಯುತ್ತಾನೆ. ಹೀಗಾಗಿ ದೇಶದ ಮನದಲ್ಲಿ ಚಿಕ್ಕಂದಿನಿಂದಲೇ ಯುದ್ಧದ ಯೋಚನೆಯನ್ನು ತುಂಬಿ, ಅದು ರೂಢಿಗತವಾಗುವ ರೀತಿಯಲ್ಲಿ ಅದನ್ನು ಸಜ್ಜುಗೊಳಿಸಬೇಕು.’’ ಮುಂದೆ ಬ್ರಿಟನ್, ಫ್ರಾನ್ಸ್, ಇಟೆಲಿ, ಜರ್ಮನಿಗಳಿಗೆ ಭೇಟಿ ನೀಡಿದ ಮೂಂಜೆ, ಅಲ್ಲಿನ ಮಿಲಿಟರಿ ಶಾಲೆಗಳ ಕಾರ್ಯನಿರ್ವಹಣೆಯನ್ನು ಅಭ್ಯಸಿಸಿದರು. ಸ್ವದೇಶಕ್ಕೆ ಮರಳಿದ ಬಳಿಕ 1937ರಲ್ಲಿ ಮಹಾರಾಷ್ಟ್ರದ ನಾಸಿಕದಲ್ಲಿ ಹಿಂದೂಗಳಿಗಾಗಿ ಭೋನ್ಸಾಲಾ ಮಿಲಿಟರಿ ಅಕಾಡಮಿಯನ್ನು ಪ್ರಾರಂಭಿಸಿದರು. ಕೆಲವು ವರ್ಷಗಳ ನಂತರ ಇದರ ಶಾಖೆಯೊಂದನ್ನು ನಾಗಪುರದಲ್ಲಿ ತೆರೆಯಲಾಯಿತು. 5ನೆ ತರಗತಿಯಿಂದ ಆರಂಭವಾಗುವ ಈ ಶಾಲೆಗಳಿಗೆ ಒಂಬತ್ತುವರೆಯಿಂದ ಹತ್ತುವರೆ ವರ್ಷ ಪ್ರಾಯದ ಬಾಲಕರನ್ನು ಸೇರಿಸಿಕೊಳ್ಳಲಾಗುತ್ತದೆ. ಗಮನಾರ್ಹವಾಗಿ ಈ ಶಾಲೆಗಳಲ್ಲಿ ಅನೇಕ ನಿವೃತ್ತ ಸೇನಾಧಿಕಾರಿಗಳನ್ನು ತರಬೇತುದಾರರಾಗಿ ನೇಮಿಸಲಾಗಿದೆ. ಶಾಲೆಯ ಉದ್ದೇಶಿತ ಗುರಿಗಳಿಗೂ ಆರೆಸ್ಸೆಸ್‌ನ ಗುರಿಗಳಿಗೂ ಹೆಚ್ಚು ವ್ಯತ್ಯಾಸವಿಲ್ಲ:

*ಹಿಂದೂಗಳಲ್ಲಿ ಮಿಲಿಟರಿ ಪ್ರವೃತ್ತಿಯನ್ನು ಪುನರುಜ್ಜೀವಿತಗೊಳಿಸುವುದು

* ಹಿಂದೂ ಯುವಜನರಲ್ಲಿ ತಾಯ್ನಡಿನ ರಕ್ಷಣೆಯ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ಅಗತ್ಯವಿರುವ ಸಾಮರ್ಥ್ಯವನ್ನು ಬೆಳೆಸುವುದು

* ಸನಾತನ ಧರ್ಮದ ಬಗ್ಗೆ ಶಿಕ್ಷಣ ನೀಡುವುದು

* ವಿಜ್ಞಾನ, ಸ್ವರಕ್ಷಣೆ ಹಾಗೂ ರಾಷ್ಟ್ರರಕ್ಷಣೆಯ ಕಲೆಗಳಲ್ಲಿ ತರಬೇತಿ ಒದಗಿಸುವುದು

ಇವತ್ತಿನ ಈ ‘ವಿದ್ಯಾ ವೀರತಾ ಅಭಿಯಾನ’ದ ಮುಖ್ಯ ಉದ್ದೇಶ. ಭೋನ್ಸಾಲಾ ಮಿಲಿಟರಿ ಶಾಲೆಗಳಿಗೆ ಹೆಚ್ಚೆಚ್ಚು ಹಿಂದೂ ಮಕ್ಕಳನ್ನು ಸೇರಿಸುವ ಮೂಲಕ ಮೇಲೆ ಉಲ್ಲೇಖಿಸಲಾದ ಗುರಿಗಳನ್ನು ಆದಷ್ಟು ಶೀಘ್ರದಲ್ಲಿ ಸಾಧಿಸುವುದಾಗಿದೆ ಎಂಬುದರಲ್ಲಿ ಸಂಶಯವಿಲ್ಲ.

ಸೇನಾಧಿಕಾರಿಗಳಿಂದ ಆರೆಸ್ಸೆಸ್‌ನ ಭಾರತಮಾತೆಗೆ ಚರಣವಂದನೆ

ಲೆ ಜ ಸರತ್ ಪಾಂಡೆ, ರಿ ಆ ಕ್ರಿಷನ್ ಪಾಂಡೆ, ಏ ಮಾ ಭಾಗವತ್ ಮೊದಲಾದವರು ಇದೇ ವಿದ್ಯಾ ವೀರತಾ ಅಭಿಯಾನ ಸಮಾರಂಭದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭಾರತಮಾತೆಗೆ ಚರಣವಂದನೆ ಎಂಬ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದಾರೆ. ಇದೊಂದು ತೀರ ಆಕ್ಷೇಪಣೀಯ ಘಟನೆಯಾಗಿದೆ. ಇವರು ಯಾವ ಭಾರತಮಾತೆಯ ಕಾಲಿಗೆ ಅಡ್ಡಬಿದ್ದರೋ ಆಕೆ ಓರ್ವ ಸಾಮಾನ್ಯ ಭಾರತಮಾತೆಯೂ ಅಲ್ಲ, ಹಿಂದೂ ಧರ್ಮದ ದೇವಿಯೂ ಅಲ್ಲ, ಧಾರ್ಮಿಕ ವ್ಯಕ್ತಿಯೂ ಅಲ್ಲ. ಒಂದು ಸಿಂಹಕ್ಕೆ ಒರಗಿಕೊಂಡು ಕೈಯಲ್ಲಿ ಕೇಸರಿ ಧ್ವಜ ಹಿಡಿದುಕೊಂಡಿರುವ ಆಕೆ ಅಸಲಿಗೆ ಆರೆಸ್ಸೆಸ್‌ನ ಪೇಟೆಂಟ್ ಭಾರತಮಾತೆ ಆಗಿದ್ದಳು. ಚಿತ್ರದ ಹಿನ್ನೆಲೆಯಲ್ಲಿದ್ದುದು ಆರೆಸ್ಸೆಸ್‌ನ ಅಖಂಡ ಭಾರತದ ಭೂಪಟ. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಅಖಂಡ ಭಾರತದ ಗಡಿಗಳು ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿರುವ ಗಡಿಗಳನ್ನು ಮೀರಿ ನೆರೆಕರೆಯ ಭೂಭಾಗಗಳನ್ನೂ ಒಳಗೊಳ್ಳುತ್ತವೆ! ಆರೆಸ್ಸೆಸ್ ಈ ಚಿತ್ರವನ್ನು ತನ್ನ ಹಿಂದುತ್ವ ಸಿದ್ಧಾಂತದ ಭೂಭಾಗ ವಿಸ್ತರಣಾ ನೀತಿಯ ಭಾಗವಾಗಿ ಅಳವಡಿಸಿಕೊಂಡಿದೆ. ಇದರ ಹಿಂದೆ ಹಲವು ದೂ(ದು)ರಾಲೋಚನೆಗಳಿವೆ. ಒಂದು, ಮುಸ್ಲಿಮರು ಅಖಂಡ ಭಾರತವನ್ನು ಒಡೆದು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳನ್ನು ರಚಿಸಿಕೊಂಡು ಅನ್ಯಾಯ ಮಾಡಿದ್ದಾರೆ ಎಂಬ ವಿಚಾರವನ್ನು ತನ್ನ ಅನುಯಾಯಿಗಳಲ್ಲಿ ಬಿತ್ತುವುದು. ಆ ಮೂಲಕ ಅವರ ಮನಸ್ಸಿನಲ್ಲಿ ಪಾಕ್ ವಿರೋಧಿ ಕಿಚ್ಚು ಸದಾ ಉರಿಯುತ್ತಿರುವಂತೆ ನೋಡಿಕೊಳ್ಳುವುದು. ಎರಡು, ಅವರೆಲ್ಲರೂ ಈ ಅಖಂಡ ಭಾರತದ ಕನಸನ್ನು ನನಸು ಮಾಡುವ ದಿಕ್ಕಿನಲ್ಲಿ ಶ್ರಮಿಸುವಂತೆ ಕರೆಕೊಡುವುದು. ಆರೆಸ್ಸೆಸ್ ಪ್ರಕಾರ ಹಿಂದೂಗಳು ತಮ್ಮ ಯೋಗ್ಯತೆಯನ್ನು ತೋರಿಸಬೇಕಿರುವುದು ಭಾರತಮಾತೆಯ ಅಖಂಡತೆಯನ್ನು ಮರಳಿ ಪಡೆಯುವ ಮೂಲಕವಂತೆ.

ವಂದೇ ಮಾತರಂ ವೇಳೆ ಸೇನಾಧಿಕಾರಿಗಳ ಉಪಸ್ಥಿತಿ

ಮೇ 2ರ ಕಾರ್ಯಕ್ರಮದಲ್ಲಿ ನಡೆದ ಇನ್ನಷ್ಟು ಆತಂಕಕಾರಿ ವಿಷಯವೆಂದರೆ ಚರಣ ವಂದನೆಯ ಬಳಿಕ ಸಮಗ್ರ ವಂದೇ ಮಾತರಂ ಹಾಡನ್ನು ಹಾಡಲಾಗಿದೆ (ಟೆಲಿಗ್ರಾಫ್ ವರದಿ). ಈ ಹಾಡು ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಬರೆದಿರುವ ‘ಆನಂದಮಠ’ ಪುಸ್ತಕದಲ್ಲಿ ಬರುತ್ತದೆ. ಮುಸ್ಲಿಮರನ್ನು ಖಳನಾಯಕರಂತೆ ಬಿಂಬಿಸುವ ‘ಆನಂದಮಠ’ದಲ್ಲಿ ಅವರ ಜನಾಂಗ ಹತ್ಯೆಯನ್ನು ಸಂಭ್ರಮದಿಂದ ಆಚರಿಸುವ ವಿವರಗಳಿವೆ. ಅದರಲ್ಲಿ ಸನ್ಯಾಸಿಗಳು ವಂದೇ ಮಾತರಂ ಹಾಡಿ ಮಾತೃಭೂಮಿಯಿಂದ ಮ್ಲೇಚ್ಛರನ್ನು ನಿರ್ಮೂಲನ ಮಾಡಲು ಶಕ್ತಿಯನ್ನು ಕರುಣಿಸುವಂತೆ ದುರ್ಗೆಯಲ್ಲಿ ಪ್ರಾರ್ಥಿಸುತ್ತಾರೆ. ಅವರು ತಮ್ಮ ಗುರಿ ಸಾಧನೆಗೆ ಬ್ರಿಟಿಷರ ಸಹಕಾರ ಪಡೆಯಲೂ ಹಿಂದೆಮುಂದೆ ನೋಡುವುದಿಲ್ಲ. ಮುಂದೆ ಸಂಘ ಪರಿವಾರ ಇದೇ ವಂದೇ ಮಾತರಂಅನ್ನು ಸ್ವತಂತ್ರ ಭಾರತದ ರಾಷ್ಟ್ರಗೀತೆಯಾಗಿಸಲು ಭೂಮ್ಯಾಕಾಶ ಒಂದು ಮಾಡಿತ್ತಾದರೂ ಅಂದಿನ ಮುತ್ಸದ್ದಿಗಳ ದೃಢ ನಿಲುವಿನಿಂದಾಗಿ ಜನಗಣಮನವನ್ನೆ ರಾಷ್ಟ್ರಗೀತೆಯಾಗಿ ಅಳವಡಿಸಿಕೊಳ್ಳಲಾಯಿತು. ವಂದೇ ಮಾತರಂನ ಮೊದಲೆರಡು ಚರಣಗಳಲ್ಲಿ ಯಾವುದೇ ದೇವರ ಉಲ್ಲೇಖವಿರದ ಕಾರಣ ಅಷ್ಟನ್ನು ಮಾತ್ರ ರಾಷ್ಟ್ರಗಾನವಾಗಿ ಒಪ್ಪಿಕೊಳ್ಳಲಾಗಿದೆ. ಹೀಗಿದ್ದರೂ ವಿದ್ಯಾ ವೀರತಾ ಅಭಿಯಾನದ ವೇಳೆ ಸಂವಿಧಾನದ ಜಾತ್ಯತೀತತೆಯ ಆಶಯವನ್ನು ಧಿಕ್ಕರಿಸಿ ಇಡೀ ಹಾಡನ್ನು ಹಾಡಿರುವುದು ಮತ್ತು ಇದರಲ್ಲಿ ಸರಕಾರಿ ಅಧಿಕಾರಿಗಳು, ಮಂತ್ರಿಗಳು, ಸೇನಾಪಡೆಗಳ ಹಿರಿಯ ಅಧಿಕಾರಿಗಳಂಥವರು ಪಾಲ್ಗೊಂಡಿರುವುದು ಅತ್ಯಂತ ಆತಂಕಕಾರಿ ಹಾಗೂ ಅಪಾಯಕಾರಿ ಬೆಳವಣಿಗೆ. ಇದರ ಅಂತಿಮ ಪರಿಣಾಮ ಏನಾಗಲಿದೆ ಎಂದು ಊಹಿಸಲೂ ಭಯವಾಗುತ್ತಿದೆ.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News

ಜಗದಗಲ
ಜಗ ದಗಲ